Saturday, September 15, 2018

ಐಸಲೇ ಕುಮಾರವ್ಯಾಸ !! - ೧೨೮ -


ಐಸಲೇ ಕುಮಾರವ್ಯಾಸ !!                  -  ೧೨೮  -
ಉದ್ಯೋಗ -೪೧

ಎರಡು ಬಲವನು ಮಸೆದು ಕೊಲಿಸುವ
ಭರವೆ ಯಾದವನದು,ನಿಧಾನಿಸಲು
ಅರಿ ನಮಗೆ ಮುರವೈರಿಯಲ್ಲದೆ ಪಾಂಡುನಂದನರೆ?
ತರಿಸಿ ಹುರಿ ನೇಣುಗಳ
ಈತನ ಕರವೆರಡನೊಡೆ ಬಿಗಿದಡೆ
ಅವದಿರು ಕೆರಳಿ ಮಾಡುವುದಾವುದೆಂದನು ಕೌರವರ ರಾಯ..,’

ಶ್ರೀಹರಿ ಸಂಧಿಯ ಪ್ರಸ್ತಾಪ ನಡೆಸುತ್ತಿರುವಾಗಲೇ ದುರ್ಯೋಧನನಿಗೆ ದುರಾಲೋಚನೆ ಬಂತು. ಆಪ್ತರೊಂದಿಗೆ ಸಮಾಲೋಚನೆ ನಡೆಸಿದ. ಬೆಳವಣಿಗೆಗಳಿಗೆ ನೇರ ಹೊಣೆ ಶ್ರೀಕೃಷ್ಣನೇ ಸರಿ.
ಪಾಂಡವರಿಗೆ ಇಷ್ಟು ಧೈರ್ಯಎಲ್ಲಿಂದಬರಬೇಕು?

ಎರಡೂ ಕಡೆಯವರನ್ನು ಎತ್ತಿ ಕಟ್ಟಿ ಯುದ್ಧ ಮಾಡಿಸಿ ಎಲ್ಲರನ್ನೂಕೊಲ್ಲಿಸುವ ಹುನ್ನಾರ ಈಕೃಷ್ಣನದು ( ಯಾದವನದು ಎಂಬ ಏಕ ವಚನದ ಪ್ರಯೋಗ ಗಮನಿಸಿ).ಸರಿಯಾಗಿ ಯೋಚಿಸಿದರೆ ನಮಗೆ ಶತ್ರು ಮುರವೈರಿಯೇ ವಿನಾ ಪಾಂಡವರಲ್ಲ.
ಹಗ್ಗ,ಹುರಿಗಳನ್ನು ತರಿಸಿ, ಇವನ ಎರಡೂ ಕೈಗಳನ್ನು ಬಿಗಿಯಿರಿ. ಆಮೇಲೆ ಪಾಂಡವರು ಕೆರಳಿ ಅದೇನು ಮಾಡುತ್ತಾರೋ ನೋಡೋಣಎಂದು ಸಲಹೆ ನೀಡಿದ ಗುಪ್ತವಾಗಿ.

ಶ್ರೀಹರಿಯ ಸಂಧಿಯ ಮಾತುಗಳು ಭೀಷ್ಮ,ದ್ರೋಣಾದಿ ಹಿರಿಯರ ಮನಸ್ಸಿಗೆ ಹೌದು ಅನ್ನಿಸಿದವು.ಧೃತರಾಷ್ಟ್ರ, ಗಾಂಧಾರಿ,ವಿದುರ ಮುಂತಾದ ಹಿರಿಯರು ಸಹಾ ಹರಿಯ ಮಾತಿಗೆ ದನಿಗೂಡಿಸಲಾರಂಭಿಸಿದರು.ಸಂದರ್ಭ ಕೈತಪ್ಪುವ ಸೂಚನೆ ಕಂಡ ದುರ್ಯೋಧನನಿಗೆ ರಾವಣನಿಗೆ ಬಂದ ದುರಾಲೋಚನೆಯೇ ಬಂತು! ಅದು, ರಾಯಭಾರಿಯಾಗಿ ಬಂದಿರುವ ಹರಿಯನ್ನು ಬಂಧಿಸುವುದು!

ಇದರಿಂದ ಹರಿಯ ಉಪಟಳವನ್ನು ತಗ್ಗಿಸಿದಂತಾಗುತ್ತದೆ! ಪಾಂಡವರಲ್ಲಿ ಆತಂಕ, ಭಯದ ಅಲೆಯನ್ನು ಮೂಡಿಸಿದಂತಾಗುತ್ತದೆ! ಹಾಗೂ ತನ್ನ ಪದವಿಯ ಶಕ್ತಿಯನ್ನೂ ತೋರಿಸಿದಂತಾಗುತ್ತದೆ!
ಶ್ರೀಕೃಷ್ಣನನ್ನೇ ಬಂಧಿಸಿದನೆಂದು ತಿಳಿದರೆ ಧರ್ಮರಾಯ ಎಚ್ಚರಿಕೆ ವಹಿಸುತ್ತಾನೆ. ಎಚ್ಚರಿಕೆಯ ಸಂದೇಶವನ್ನೂ ಸಹಾ ರವಾನಿಸಿದಂತಾಗುತ್ತದೆ!

ಎಲ್ಲ ಕಾಲದ ಹತಾಶ ರಾಜಕಾರಣದಲ್ಲೂ ಅಂಶವನ್ನು ನಾವು ಗಮನಿಸಬಹುದು.ಇಂದಿನ ರಾಜಕಾರಣವೂ ಅದಕ್ಕೆ ಹೊರತಲ್ಲ.ಇದೇ ರಾಮಾಯಣ ಮಹಾಭಾರತಗಳ ಸಾರ್ವಕಾಲಿಕ ವ್ಯಾಪ್ತಿಯ ವಿಶೇಷ ಸಹಾ.

ಕುಮಾರವ್ಯಾಸ ಪ್ರತಿಷ್ಠಾನ
೧೪/೦೯/೨೦೧೮

Wednesday, September 5, 2018

ಐಸಲೇ ಕುಮಾರವ್ಯಾಸ !! - ೧೨೭ -


ಐಸಲೇ ಕುಮಾರವ್ಯಾಸ !!                  -  ೧೨೭  -
ಉದ್ಯೋಗ ೯-೩೪


‘ ನೆಲದೊಳರ್ಧವನೀವುದಿಲ್ಲ,
ಆ ಸ್ಥಳವನೈದನು ಮುನ್ನ ಕೊಡೆನು,
ಎನ್ನಿಳೆಯ ಭಾಗವನೀಸ ಕೊಟ್ಟೊಡೆ ನಿನ್ನ ಮೇಲಾಣೆ..,
ನೆಲನ ಕಡೆಯಲಿ ಮುಳ್ಳುಮೊನೆಯುಚ್ಚಳಿಪ
ಧರಣಿಯನಿತ್ತೆನಾದೊಡೆ
ಬಳಿಕ ನೀ ನಗು ಹೋಗು, ಕದನವ ಕೊಂಡು ಬಾ ಎಂದ..,’

ಶ್ರೀಕೃಷ್ಣ ಎಷ್ಟೆಷ್ಟು ಸಾಮದ ಮಾತನ್ನಾಡಿದರೂ ಅದನ್ನು ಗಣನೆಗೆ ತಂದುಕೊಳ್ಳದ ದುರ್ಯೋಧನ ತನ್ನ ಮನದ ನಿರ್ಧಾರವನ್ನು ಸ್ಪಷ್ಟವಾಗಿ ಹೇಳುವ ಮಾತು ಇದು. 

‘ಶ್ರೀ ಹರಿ, ನೀನು ಏನೇ ಹೇಳು. ನನ್ನ ನಿರ್ಧಾರ ಇದುಃ ಅರ್ಧ ರಾಜ್ಯವನ್ನು ಕೊಡುವುದಿರಲಿ; ನೀನು ಹೇಳಿದ ಐದು ಊರುಗಳನ್ನು ಕೊಡುವುದು ಸಹಾ ಸಾಧ್ಯವಿಲ್ಲ.ಕೇಳು, ನಾನು ಆಳುತ್ತಿರುವ ರಾಜ್ಯದಲ್ಲಿ ಕಿಂಚಿತ್ ಭಾಗವನ್ನಾದರೂ ನಾನು ಕೊಟ್ಟರೆ ನಿನ್ನ ಮೇಲಾಣೆ. ಅದೂ ಬೇಡ, ಈ ಕುರುಭೂಮಿಯ ಯಾವುದೇ ತುದಿಯಲ್ಲಿ ಒಂದು ಮುಳ್ಳುಮೊನೆಯಷ್ಟು ಭೂಮಿಯನ್ನು ನಾನು ಕೊಟ್ಟದ್ದೇ ಆದರೆ ನೀನು ನಗು ಹೋಗು. ಸುಮ್ಮನೆ ಯುದ್ಧವನ್ನು ಕೊಂಡು ಬಾ’

ಅರ್ಧ ರಾಜ್ಯ ಇಲ್ಲ; ಐದು ಊರುಗಳೂ ಇಲ್ಲ; ಸ್ವಲ್ಪ ತಳವೂರಲು ನೆಲ? ಅದೂ ಇಲ್ಲ. ಪಾಂಡವರಿಗೆ ಒಂದು ಮುಳ್ಳು ಮೊನೆಯಷ್ಟು ನೆಲ ಕೊಡಲಾರೆ. ಬೇಕಿದ್ದರೆ ಯುದ್ಧಮಾಡಿ ಪಡೆಯಲಿ. ಇದು ಇಂಗಿತ.

ನೆಲವನ್ನು ಕೊಟ್ಟರೆ ನಿನ್ನ ಮೇಲೇ ಆಣೆ! ನೀನೇ ಅನಂತರ ನೋಡಿ ನಗುವಿಯಂತೆ! ದುರ್ಯೋಧನನ ದರ್ಪಕ್ಕೆ ಮಾತುಗಾರಿಕೆಗೆ ಕುಮಾರವ್ಯಾಸ ಬಳಸಿರುವ ವ್ಯಂಗ್ಯದ ಭಾಷೆ ಎಷ್ಟು ಶಕ್ತಿಯುತವಾಗಿದೆ!

ಕುಮಾರವ್ಯಾಸ ಪ್ರತಿಷ್ಠಾನ
೦೫/೦೯/೨೦೧೮