Friday, May 12, 2017

ಐಸಲೇ ಕುಮಾರವ್ಯಾಸ! -೮೮-



ಐಸಲೇ ಕುಮಾರವ್ಯಾಸ!                           -೮೮-

ಆದಿ ಪ ೧೭-೮

ದ್ರೌಪದಿಯನ್ನು ವರಿಸಿದ ನಂತರ ಆದ ಕಲಹ,ಯುದ್ಧ ಇವುಗಳಿಂದ ಹಂತಹಂತವಾಗಿ ಪಾಂಡವರು ಪುನಃ ಅನಾವರಣಗೊಂಡು ಹಸ್ತಿನಾಪುರಕ್ಕೆ ನಡೆದರು.

ಪಾಂಡವರ ಹಿರಿಯ ಬಾಂಧವ ಶ್ರೀಕೃಷ್ಣ (ಮಹಾಭಾರತದಲ್ಲಿ ಮೊದಲ ಬಾರಿಗೆ) ಬಂದು ಪಾಂಡವರನ್ನು
ಕಂಡಾಗ ಕುಂತಿಯ ಸಂತಸ ಹೇಳತೀರದು.ಸಾಕ್ಷಾತ್ ನಾರಾಯಣ! ತನ್ನ ತವರಿನ ಕಡೆಯ ಪ್ರಭಾವೀ ಪುರುಷ! ಎಲ್ಲರಿಗೂ ಭರವಸೆಯ ದಿಕ್ಕಾಗಬಲ್ಲವನು! ಮಕ್ಕಳೆಲ್ಲರನ್ನೂ ಕರೆದು ಇಗೋ ನಿಮ್ಮ ಮುಂದಿನ ಆಸರೆ ಎಂದು ‘ಐವರನು ಕೈ ನೆಗಹಿ ಕಮಲೋದರನ ಕೈಯಲಿ ಕೊಟ್ಟಳಾ ಕುಂತಿ’ (ಐವರ ಕೈಯನ್ನೂ ಹಿಡಿದು ಹರಿಯ ಕೈಯಲ್ಲಿರಿಸಿದಳು). ಅಷ್ಟೇ ಅಲ್ಲ ಅತಿ ನಮ್ರಳಾಗಿ ಹೇಳಿದಳು;


‘ಉರಿಯೊಳುಳಿದೆವು,ನಿಮ್ಮ ಚರಣ ಸ್ಮರಣ ಬಲದಲಿ
ವಿಪಿನಾಂತರದೊಳಗೆ ತೊಳಲಿದೆವು
ಹೊರೆದೆವು ಸಾಯದೊಡಲುಗಳ
ಬರಬರಲು ತತ್ಸರ್ವ ದುಃಖೋತ್ತರ ನಿವಾರಣ
ದ್ರುಪದ ಕನ್ಯಾವರಣ,ನಿನ್ನೀಯಂಘ್ರಿ ದರುಶನ ಎಂದಳಾಕುಂತಿ’

‘ಅರಗಿನ ಮನೆಯ ಬೆಂಕಿಯಿಂದ ಹೇಗೋ ನಿನ್ನಪಾದ ಸ್ಮರಣೆಯ ಬಲದಿಂದ ಪಾರಾದೆವು. ಅನಂತರ ಕಾಡಿನಲ್ಲಿ ತೊಳಲಿದೆವು. ಸಾಯದೆ ಹೇಗೋ ಈ ಶರೀರವನ್ನು ಕಾಪಾಡಿಕೊಂಡೆವು. ಈ ಎಲ್ಲಾ ದುಃಖಗಳನ್ನೂ ದೂರಮಾಡುವಂಥಾ ಎರಡು ಮಹದಾನಂದದ ಸಂಗತಿಗಳು ಘಟಿಸಿವೆ. ಒಂದು ದ್ರೌಪದಿ ಸೊಸೆಯಾಗಿ ದೊರೆತದ್ದು. ಎರಡನೆಯದು ನಿನ್ನ ಪಾದ ದರ್ಶನ ದೊರೆತದ್ದು’

ಎಲ್ಲಾ ಕಠಿಣ ಸ್ಥಿತಿಯಲ್ಲೂ ಹರಿಯ ನಾಮವೇ ಬೆಂಗಾವಲಾಗಿದ್ದುದು, ಎಲ್ಲಾ ಕಷ್ಟದ ತೆರೆ ಹರಿದು ಮಂಗಳಕರ ಸ್ಥಿತಿ  ಮರಳುವ ಜೀವನದ ವಾಸ್ತವ,ಎಲ್ಲಕ್ಕಿಂತ ಮಿಗಿಲಾಗಿ ನೈಜ ಪ್ರೀತಿಯ ಆಶ್ರಯವಿಲ್ಲದ ಪಾಂಡವರಿಗೆ ಹರಿ ರಕ್ಷಕನಾಗಿ ದೊರೆಯುವ ಈ ಸಂದರ್ಭವನ್ನು ಕವಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ.ಭಾಷೆಯ ಗಾಂಭೀರ್ಯ ಸಹಾ ಅದ್ಭುತವಾಗಿದೆ.

ನಿನ್ನ ಮಕ್ಕಳೈವರೂ ಶರೀರ;ನಾನು ಅಂತರ್ನಿಹಿತವಾದ ಪ್ರಾಣ ಎನ್ನುವ ಆಶ್ವಾಸನೆಯನ್ನು ಸಹಾ ಶ್ರೀಹರಿ ಕೊಡುವ ಸಂದರ್ಭ ಇದೇ!

ಕುಮಾರವ್ಯಾಸ ಪ್ರತಿಷ್ಠಾನ
೧೦/೦೫/೨೦೧೭