Friday, December 15, 2017

ಐಸಲೇ ಕುಮಾರವ್ಯಾಸ !! - ೧೦೭ -





ಐಸಲೇ ಕುಮಾರವ್ಯಾಸ !!                  -  ೧೦೭  -

ಭೀಷ್ಮ ಪ ೬-೪೫
‘ಕಳುಹಿ ಕಳೆವುದು ಖಾತಿಯನು,
ನೀನುಳುಹಿ ಕೊಂಬುದು ತೇಜವನು
ದಿಟ ಕೊಲುವ ಮನವೇ? ಬಿಸುಡು ಚಕ್ರವನೆನ್ನ ಕಾಯದಲಿ
ಅಳುಕಿ ರೋಮವು ಹರಿದುದಾದೊಡೆ
ಬಳಿಕ ನಾ ಡಿಂಗರಿಗನಲ್ಲ
ಈ ಕಳಕಳಕೆ ನಾನಂಜುವೆನೇ ದೇವ ಮರಳೆಂದ..’
( ಖಾತಿ- ಕೋಪ; ಉಳುಹು-ಉಳಿಸಿಕೋ; ಕಾಯ-ಶರೀರ; ಡಿಂಗರಿಗ- ದಾಸ,ಭಕ್ತ; ಕಳಕಳ-ಗಲಭೆ)
‘ ಶ್ರೀಹರಿ! ದಯಮಾಡಿ ಕೋಪವನ್ನು ನೂಕು. ನಿನ್ನ ತೇಜಸ್ಸು, ಘನತೆಯನ್ನು ಕಾಪಾಡಿಕೊ. ಹಾಗೊಮ್ಮೆ ನಿನಗೆ ನನ್ನನ್ನು ಕೊಲ್ಲಲೇಬೇಕೆಂಬ ಮನಸ್ಸಿದೆಯೇನು? ಚಕ್ರವನ್ನು ಪ್ರಯೋಗಿಸಿಯೇ ಬಿಡು. ಅದೂ ಆಗಿಹೋಗಲಿ. ಚಕ್ರಪ್ರಯೋಗದಿಂದ ನನ್ನ ಶರೀರದ ಒಂದು ರೋಮ ತುಂಡಾದರೂ ಸರಿ, ನಾನು ನಿನ್ನ ದಾಸನಲ್ಲವೆಂದೇ ಅರ್ಥ! ಪ್ರಯೋಗಿಸು, ಈ ಅಬ್ಬರಕ್ಕೆಲ್ಲಾ ನಾನುಹೆದರುವವನಲ್ಲ..,’
ಅನೇಕ ವಿಧ್ವಾಂಸರು ಮೆಚ್ಚಿಕೊಂಡ ಪದ್ಯ ಇದು.
ಭೀಷ್ಮನಿಗೂ ಶ್ರೀಕೃಷ್ಣನಿಗೂ ಭಯಂಕರ ಯಧ್ಧವಾಗಬಹುದೇನೋ ಎಂದು ಎಲ್ಲರೂ ಭಾವಿಸಿ ಭಯಗೊಂಡರೆ, ಇಡೀ ಸನ್ನಿವೇಶವನ್ನು ನಾಟಕೀಯವಾಗಿ ಪರಿವರ್ತಿಸುವ ಭೀಷ್ಮನ ಮಾತುಗಳು ಅತ್ಯಂತ ಮನೋಜ್ಞ! ಈಗ ಯುಧ್ಧ ಹರಿಗೂ ಅವನ ನಾಮಕ್ಕೂ.
ನಿನ್ನ ನಾಮವನ್ನು ಜಪಿಸಿದ್ದು, ಅರಾಧಿಸಿದ್ದು ವ್ಯರ್ಥ ಎಂದು ಸಿದ್ಧವಾಗುವುದಾದರೆ ಆಗಲಿ. ಶರೀರಕ್ಕೆ ತೊಂದರೆಯಾಗುವುದಿರಲಿ, ಒಂದು ರೋಮಕ್ಕೆ ಆಘಾತವಾದರೂ ಸರಿ ನಾನು ಭಕ್ತನಲ್ಲ.ಅಂಥ ಆತ್ಮವಿಶ್ವಾಸ, ಭಕ್ತಿಯಲ್ಲಿರುವ ಭರವಸೆ!
ಹರಿಗೂ ಇಬ್ಬಂದಿತನ .ಒಂದೆಡೆ ಆತ್ಮಗೌರವ ಮತ್ತೊಂದೆಡೆ ಭೀಷ್ಮ ಹಾಕಿರುವ ಪ್ರೇಮಾಭಕ್ತಿಯ ಸವಾಲು.ಕೋಪದ ಮೂಲವನ್ನೇ ಭೀಷ್ಮ ತನ್ನ ಭಕ್ತಿಯ ಬಲದಿಂದ ಅಲುಗಾಡಿಸಿಬಿಟ್ಟ. ಕಠೋರವಾದ ಸವಾಲಿನ ನಂತರವೂ ತನ್ನ ಆರಾಧ್ಯದೈವದ ಘನತೆಗೆ ಧಕ್ಕೆ ತರದಂತೆ ಕಡೆಯಲ್ಲೊಂದು  ನಮ್ರವಾದ ಬೇಡಿಕೆ ಸಹಾ. ‘ದೇವ ದಯಮಾಡಿ ಮರಳಿ ಹೋಗು’
ಇದು ಕುಮಾರವ್ಯಾಸನ ಭಾಷೆಯ ಪಕ್ವತೆ; ಸಿದ್ಧಿ.

ಕುಮಾರವ್ಯಾಸ ಪ್ರತಿಷ್ಠಾನ
೧೪/೧೨/೨೦೧೭



೧೪/೧೨/೨೦೧೭

Friday, November 24, 2017

ಐಸಲೇ ಕುಮಾರವ್ಯಾಸ! -೧೦೫-




ಐಸಲೇ ಕುಮಾರವ್ಯಾಸ!                           -೧೦೫-
(ಭೀಷ್ಮ ಪ ೬-೪೦)

ರೋಮ ರೋಮದೊಳಖಿಳ ಭುವನ ಸ್ತೋಮ ನಲಿದಾಡುವುದು ಗಡ,
ನಿಸ್ಸೀಮತನ ಗಡ,
ನಾವು ವೈರಿಗಳೆಂದು ಕೋಪಿಸುವ ಈ ಮರುಳುತನವೆತ್ತ?
ಈ ರಣತಾಮಸಿಕೆ ತಾನೆತ್ತಣದು?
ರಘುರಾಮ ರಕ್ಷಿಸು, ಬಯಲಿನಾಡಂಬರವಿದೇನೆಂದ..,’

ಭೀಷ್ಮನ ಬಾಯಲ್ಲಿ ಕುಮಾರವ್ಯಾಸ ಆಡಿಸಿರುವ ಮಾತುಗಳು ಭಕ್ತಿ ಸಾಹಿತ್ಯದಲ್ಲಿ ಸಂಚಲನವುಂಟು ಮಾಡುವಂಥಾ ಸ್ತುತಿವಾಕ್ಯಗಳಾಗಿವೆ

‘ಶ್ರೀಕೃಷ್ಣಾ, ನಿನ್ನ ಒಂದೊಂದು ರೋಮದಲ್ಲೂ ಈ ಬ್ರಹ್ಮಾಂಡ ಅಡಗಿದೆ ಎನ್ನುವುದು, ನೀನು ಎಣೆಯಿಲ್ಲದ ಮಹಾಪುರುಷ ಎನ್ನುವುದು ಜ್ಞಾನಿಗಳಿಗೆಲ್ಲಾ ತಿಳಿದ ವಿಷಯ.ಆದರೆ ನನ್ನನ್ನು ವೈರಿಯೆಂದು ಕೋಪಿಸಿ ಸಂಹಾರ ಮಾಡಲು ಬರುತ್ತಿರುವ ಈ ಹುಚ್ಚಾಟ ಏಕೆ?
ಯುಧ್ಧ ಭೂಮಿಯಲ್ಲಿ ಸತತವಾಗಿ ಸಾರಥ್ಯ ಮಾಡುತ್ತಿರುವ ನಿನಗೆ ಯುಧ್ಧದ ಮಂಕು  ಬಡಿಯಿತೋ ಹೇಗೆ?ಈ ಬಯಲಾಡಂಬರ ಏತಕ್ಕಾಗಿ?’

ಭೀಷ್ಮನ ಆಳವಾದ ಭಕ್ತಿಯ ಮಜಲುಗಳು ಕೃಷ್ಣನೆದುರು ಆಡುವ ಮಾತುಗಳಿಂದ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಭಕ್ತನಾದ ನಾನು ವೈರಿಯಾಗುವುದು ಹೇಗೆ? ಆಯುಧ ಹಿಡಿದು ನೀನು ನುಗ್ಗಿ ಬರುವುದು ತಾಮಸಿಕೆಯಲ್ಲದೆಮತ್ತೇನು? ನೀನು ನನ್ನನ್ನು ಕೊಲ್ಲಬಲ್ಲೆಯ? ನಾನು ನಿನ್ನಿಂದ ಹತನಾಗುವ ಚಾರಿತ್ರ್ಯದವನೇನು?.ಕಂಸ, ಶಿಶುಪಾಲ ಇವರೂ ನಾನೂ ಒಂದೇ ಏನು?ಇದು ಕೇವಲ ಬಯಲಿನ ಆಡಂಬರ ಎನ್ನುವ ಮಾತಿನಲ್ಲಿರುವ ಆತ್ಮವಿಶ್ವಾಸ ನೋಡಿ!

ಭಕ್ತನನ್ನು ಕೊಲ್ಲುವಷ್ಟು ರೋಷ, ನಿರ್ದಾಕ್ಷಿಣ್ಯ ಭಗವಂತನಿಗೆ ಎಲ್ಲಿಂದ ಬರಬೇಕು? ಇಂಥಾ ಸವಾಲನ್ನು ಕೇವಲ ಅಂತರಂಗ ಭಕ್ತರು ಮಾತ್ರ ಹಾಕುವುದು ಸಾಧ್ಯ

ಕುಮಾರವ್ಯಾಸ ಪ್ರತಿಷ್ಠಾನ
೨೪/೧೧/೨೦೧೭