Tuesday, January 31, 2017



ಐಸಲೇ ಕುಮಾರವ್ಯಾಸ!                           --
ಅರಣ್ಯ ಪ ೮-೧೩

ವನವಾಸದ ಅವಧಿಯಲ್ಲಿ ಹರನನ್ನು ತಪಸ್ಸಿನಿಂದ ಮೆಚ್ಚಿಸಿ ಪಾಶುಪತಾಸ್ತ್ರವನ್ನು ಅರ್ಜುನ ಪಡೆದ. ನಂತರ ಇಂದ್ರಾದಿ ಎಲ್ಲಾ ದಿಕ್ಪಾಲಕರೂ ಬಂದು ಅರ್ಜುನನನ್ನು ಅಭಿನಂದಿಸಿದರು.

ಇಂದ್ರ ಮಗನನ್ನು ಹರಸಿ ಹೇಳಿದ, ‘ತಪಸ್ಸಿನಿಂದ ದೇಹವನ್ನು ದಂಡಿಸಿದ್ದೀಯೆ. ಸಾರಥಿಯಾದ ಮಾತಲಿಯನ್ನು ರಥಸಹಿತ ಕಳಿಸುತ್ತೇನೆ. ಕೆಲದಿನ ಅಮರಾವತಿಯಲ್ಲಿ ವಿಶ್ರಮಿಸು’.ಅರ್ಜುನ ಒಪ್ಪಿದ.

ಅಮರಾವತಿಗೆ ಆಗಮಿಸಿದ  ಮಗ ಅರ್ಜುನನನ್ನು ಇಂದ್ರ ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು ಗಾನ, ನರ್ತನಾದಿಗಳನ್ನು ಏರ್ಪಡಿಸಿದ. ನರ್ತಿಸುತ್ತಿದ್ದ ದೇವಸುಂದರಿ ಊರ್ವಶಿಯನ್ನು ಅರ್ಜುನ ಎವೆಯಿಕ್ಕದೆ ನೋಡುತ್ತಿದ್ದುದನ್ನು ಇಂದ್ರ ಗಮನಿಸಿ, ಊರ್ವಶಿಗೆ ಸಂದೇಶ ಕಳಿಸಿದ.

ಅತ್ಯಂತ ಸುಂದರನಾದ ಅರ್ಜುನನನ್ನು ಊರ್ವಶಿ ಮೋಹಿಸಿದ್ದಳು ಕೂಡ.ಇಂದ್ರನ ಆಣತಿ ಸಿಕ್ಕಿದಮೇಲೆ ಮಾತೇನು? ಕವಿ ಹೇಳುತ್ತಾನೆ ‘ನಾರಾಯಣನ ಮೈದುನನ ಬರೆದಳು ಚಿತ್ತ ಭಿತ್ತಿಯಲಿ (ಮನಸ್ಸಿನಲ್ಲೇ ಅರ್ಜುನನನ್ನು ಮೋಹಿಸಿದಳು)

ಸಾಲಂಕೃತಳಾಗಿ ಅರ್ಜುನನಿದ್ದ ಅರಮನೆಗೆ ಬಂದ ಊರ್ವಶಿಯನ್ನು ಕವಿ ವರ್ಣಿಸುತ್ತಾನೆ

ಬಂದಳೂರ್ವಶಿ,
ಬಳ್ಳಿ ಮಿಂಚಿನ ಮಂದಿಯಲಿ ಮುರಿದಿಳಿವ
ಮರಿಮುಗಿಲಂದದಲಿ,
ದಂಡಿಗೆಯನಿಳಿದಳು ರಾಜ ಭವನದಲಿ,
ಮುಂದೆ ಪಾಯವಧಾರು ಸತಿಯರ ಸಂದಣಿಯ
ಸಿಂಜಾರವದ ಸೊಗಸಿಂದ ಶಬ್ದ ಬ್ರಹ್ಮ ಸೋತುದು ಸೊರಹಲೇನೆಂದ..’

(ಮರಿಮುಗಿಲು- ಪುಟ್ಟ ಮೋಡ; ದಂಡಿಗೆ- ಪಲ್ಲಕ್ಕಿ;  ಪಾಯವಧಾರು-ನಡೆಮುಡಿ ಹಾಸುವ ಸಖಿಯರು; ಸಂದಣಿ-ಸಮೂಹ; ಸಿಂಜಾರವ-ಗೆಜ್ಜೆಯ ಶಬ್ದ)

ಫಳಫಳನೆ ಮಿಂಚುತ್ತಿರುವ ಮಿಂಚಿನ ಗೊಂಚಲುಗಳನ್ನು ಧರಿಸಿದ ಪುಟ್ಟ ಮೋಡವೊಂದು ಆಗಸದಿಂದ ಇಳಿಯುವಂತೆ ಊರ್ವಶಿ ಪಲ್ಲಕ್ಕಿಯಿಂದ ಇಳಿದಳು. ಅವಳ ಮುಂದೆ ‘ಪಾಯವಧಾರು’ ಎಂದು (ರಾಜರೇ ಮೊದಲಾದ ಪ್ರಮುಖ ವ್ಯಕ್ತಿಗಳಿಗೆ ಸಲ್ಲಿಸುವ ಗೌರವದ ಸೇವೆ) ಸೂಚಿಸುವ ಹೆಂಗಳೆಯರ ನೂಪುರದ ಧ್ವನಿಯಿಂದ ಶಬ್ದಬ್ರಹ್ಮವೇ ಸೋತು ಹೋಯಿತು. ನಾನು ಒಣ ಶಬ್ದದಿಂದ ಏನು ಹೇಳಲಿ?

ದೇವಲೋಕದ ಪರಮಸುಂದರಿ ಊರ್ವಶಿ.ಮಿಂಚುವ ಆಭರಣಗಳು!ವಿಶೇಷವಾದ ಅಲಂಕಾರ ಬೇರೆ.ಪಲ್ಲಕ್ಕಿಯಿಂದ ಇಳಿದವಳಿಗೆ ಹೋಲಿಕೆ ಮಿಂಚುಗಳಿಂದ ತುಂಬಿದ ಮರಿಮುಗಿಲು.

ಅವಳಿಗೆ ಸೇವೆ ಮಾಡುವ ದಾಸಿಯರ ಲೆಕ್ಕವಿಲ್ಲ. ಅವರ ಕಾಲ್ಗೆಜ್ಜೆಯ ಧ್ವನಿ ಶಬ್ದಬ್ರಹ್ಮನನ್ನು ಸೋಲಿಸಿತೆಂದ ಮೇಲೆ?.ಊರ್ವಶಿಯ ಆಗಮನದ ಭವ್ಯತೆಯನ್ನು ಒಂದೇ ಪದ್ಯದಲ್ಲಿ ಸುಂದರವಾಗಿ ಕಟ್ಟಿ ಕೊಡುತ್ತಾನೆ ಕವಿ!

ಗಮನಿಸಿ,ದೇವಸುಂದರಿಯನ್ನು ವರ್ಣಿಸುತ್ತಿರುವ ಭಾಷೆ ಬಹುತೇಕ ದೇಸೀ ಕನ್ನಡ! ಎಲ್ಲಕ್ಕೂ ಸಂಸ್ಕೃತ ಬೇಕೆಂದಿಲ್ಲ. ಭಾಷೆಯನ್ನು ದುಡಿಸಬಲ್ಲ ಸಮರ್ಥ ಕವಿಗೆ ಇದು ಸಾಧ್ಯ.

ಕುಮಾರವ್ಯಾಸ ಪ್ರತಿಷ್ಠಾನ
೩೧/೧/೨೧೦೭

Tuesday, January 24, 2017



ಐಸಲೇ ಕುಮಾರವ್ಯಾಸ!     -೭೦-

ಉದ್ಯೋ -೪೩

ಸೈನ್ಯಸಹಾಯವನ್ನು ಶ್ರೀಕೃಷ್ಣನಿಂದ ಪಡೆದ ದುರ್ಯೋಧನ ಸಮಾಧಾನಗೊಂಡು ಕೃತವರ್ಮ, ಬಲರಾಮ ಇವರನ್ನು ಭೆಟ್ಟಿಯಾಗಿ ಯಾದವ ಸೈನ್ಯದೊಂದಿಗೆ ಹಿಂದಿರುಗಿದ.

ಶ್ರೀಕೃಷ್ಣ ಅರ್ಜುನನನ್ನು ಗೇಲಿ ಮಾಡುತ್ತಾ ಕೇಳಿದ ‘ಕತ್ತಿಯನ್ನು ಎಸೆದು ಕೇವಲ ಒರೆಯನ್ನು ಹಿಡಿದವನ ಹಾಗೆ ನೀನು ಸೈನ್ಯವನ್ನು ಬಿಟ್ಟು ‘ಕಾದದ ಕಟ್ಟದ’ ನನ್ನನ್ನು ಬಯಸಿ ತಪ್ಪು ಮಾಡಿದೆ. ನಿನ್ನ ಮೂರ್ಖತನದ ಆಯ್ಕೆಯನ್ನು ನಿನ್ನ ಸೋದರರು ಒಪ್ಪಿಯಾರೆ?’ ಅರ್ಜುನ ನಗುತ್ತಾ ಹೇಳಿದ; ‘ಕೃಷ್ಣಾ, ನಿನ್ನ ಮಾತಿನ ಇಂದ್ರಜಾಲ ನನ್ನ ಬಳಿಯೆ? ನಿನ್ನ ಗರಡಿಯಲ್ಲಿ ನುರಿತವನು ನಾನು. ನನ್ನ ಸೋದರರ ಆಯ್ಕೆ ಬೇರೆಯಾಗಲು ಹೇಗೆ ಸಾಧ್ಯ?’

‘ಅದೇನೋ ಸರಿ’ ಶ್ರೀಕೃಷ್ಣ ಕೇಳಿದ, ‘ ಈಗ ಮುಖ್ಯ ಸಮಸ್ಯೆ,ನನ್ನ ಪಾತ್ರವೇನು?

 ಕುಮಾರವ್ಯಾಸನ ಬಹಳ ಪ್ರಸಿದ್ಧವಾದ ಸಂಭಾಷಣೆಯ ಪದ್ಯಃ

ನಾವು ಬರಿಗೈಯವರು
ಬರಲೆಮಗಾವುದಲ್ಲಿಯ ಕೆಲಸ?
ಉಂಡುಂಡಾವು ಕುಳ್ಳಿಹರಲ್ಲ,
ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿಲ್ಲ ಆವು ಬಲ್ಲೆವು
ಬಂದು ಮಾಡುವುದೇನು ಹೇಳೆಂದ..,’

(ಹಂಗು-ಹೊರೆ,ಋಣ; ಲವ- ಸ್ವಲ್ಪ; )

‘ಅರ್ಜುನಾ, ನಾನು ಬರಿಕೈಯವನು (ಶಸ್ತ್ರ ಹಿಡಿದು ಹೋರಾಡುವವನಲ್ಲ), ನನಗೆ ಅಲ್ಲಿ ಕೆಲಸವಾದರೂ ಏನು ಹೇಳು? ನೀವೆಲ್ಲರೂ ಭಯಂಕರವಾದ ಮಹಾಯುದ್ಧದಲ್ಲಿ ಮುಳುಗಿರುವಾಗ ನಾನು ಉಂಡುಂಡು ಕುಳಿತಿರುವುದು ಸರಿಯಲ್ಲ; ನಾನು ನಿಮಗೆ ಹೊರೆಯಾಗುವುದೂ ಇಷ್ಟವಿಲ್ಲ. ನೀವೆಲ್ಲರೂ ನಾನು ದೇವರು ಎಂದು ಭಾವಿಸಿದ್ದೀರಿ ಆದರೆ ನನಗೆ ಗೊತ್ತು, ನನ್ನಲ್ಲಿ ಯಾವ ದೈವತ್ವವೂ ಇಲ್ಲ. ಹೇಳು, ನಾನು ಬಂದು ಮಾಡುವುದಾದರೂ ಏನು?

ಬರಿಕೈ ಅತಿಥಿಗೆ ಯಾವ ಮನ್ನಣೆ, ಗೌರವ ಇರುವುದಿಲ್ಲ. ಅದು ಲೋಕ ರೂಢಿ. ಅದೂ ಯುದ್ಧ ನಡೆಯುವ ಕಡೆ ಹೊರೆಯಾಗಿರುವುದೆ?

ಶ್ರೀಕೃಷ್ಣನ ಲೋಕಸಹಜವಾದ ಧಾಟಿಯ ಮಾತಿನಲ್ಲಿ ನಿರಹಂಕಾರ, ಗಾಂಭೀರ್ಯವೂ  ಇದೆ ತುಸು ಪರಿಹಾಸ್ಯದ ಎಳೆಯೂ ಇದೆ. ನಮ್ಮ ನಿಮ್ಮ ಜೀವನದಲ್ಲಿ ಯಾರಾದರೂ ಹಿರಿಯರು ಆಡುವ ಹಿತನುಡಿಯಂತೆ ಆತ್ಮೀಯವಾಗಿದೆಯಲ್ಲವೆ?

ಅರ್ಜುನ ಹರಿಯನ್ನು ಚೆನ್ನಾಗಿ ಬಲ್ಲವ. ನಮಸ್ಕರಿಸಿ ಹೇಳಿದ; ‘ನೀನು ದೇವನಷ್ಟೇ ಅಲ್ಲ, ದೇವರ ದೇವನೊಡೆಯ, ನಾನು ಬಲ್ಲೆ.ಅದಿರಲಿ, ನೀನು ಸಾರಥಿಯಾಗಿದ್ದು ಈ ಸೇವಕನನ್ನು ಕಾಪಾಡು’

ಕುಮಾರವ್ಯಾಸ ಹೇಳುತ್ತಾನೆಃ ‘ಎನಲು ನಗುತ ಎತ್ತಿದನು, ಸಾರಥಿತನವ ಕೈಕೊಂಡನು’; ಸ್ವಲ್ಪವೂ ಅಹಂಕಾರವಿಲ್ಲದೆ ‘ಕಿರೀಟಿಯ ಮನೆಯ ಬಂಡಿಯ ಬೋವನಾದನು(ಗಾಡಿ ಹೊಡೆಯುವವ) ವೀರ ನಾರಾಯಣ’

ಕುಮಾರವ್ಯಾಸ ಪ್ರತಿಷ್ಠಾನ
೨೩/೧/೨೦೧೭

Sunday, January 22, 2017



ಐಸಲೇ ಕುಮಾರವ್ಯಾಸ! 
                          --
ಉದ್ಯೋ ಪ ೧-೩೯

ಅರ್ಜುನ ಸೈನ್ಯವನ್ನು ಕೇಳದೆ ಶ್ರೀಕೃಷ್ಣನನ್ನು ಆಯ್ಕೆ ಮಾಡಿಕೊಂಡದ್ದು ದುರ್ಯೋಧನನಿಗೆ ಸಮಾಧಾನವಾಯಿತು.

ಆದರೂ ಹೇಳಿದ; ಕೃಷ್ಣಾ, ನಿನಗೆ ಹೇಗೂ ಪಾಂಡವರ ಮೇಲೆ ಮಮತೆ, ಅದರಲ್ಲೂ ಅರ್ಜುನನಿಗೆ ತುಂಬಾ ಮರುಗುತ್ತೀಯ. ನಾನು ನಿನಗೆ ಹೊರಗಿನವನೇ! ಇರಲಿ ,ಸೈನ್ಯವನ್ನೇ ಕೊಡು. ಆದರೆ ನೆನಪಿರಲಿ ‘ನೀನು ಹೊಕ್ಕಿರಿಯಲಾಗದು’( ನೀನು ಶಸ್ತ್ರ ಹಿಡಿದು ಪಾಂಡವರ ಪರವಾಗಿ ರಣದಲ್ಲಿ ಇರಿಯುವ (ಕೊಲ್ಲುವ) ಕೆಲಸ ಮಾಡಬಾರದು.)

ಸೈನ್ಯವನ್ನೂ ಪಡೆದುಕೊಂಡು ಕೃಷ್ಣನೂ ಯುದ್ಧದಲ್ಲಿ ಭಾಗವಹಿಸದಿದ್ದಲ್ಲಿ ಪಾಂಡವರನ್ನು ಸೋಲಿಸುತ್ತೇನೆಂಬ ಎಣಿಕೆ ದುರ್ಯೋಧನನಿಗೆ.

ತಾನಾಗಿಯೇ ಆಶ್ವಾಸನೆ ಕೊಟ್ಟಾಗ್ಯೂ ದುರ್ಯೋಧನ ಪದೇ ಪದೇ ಹೇಳುತ್ತಿರುವುದು  ಶ್ರೀಕೃಷ್ಣನಿಗೆ ತುಸು ಮುಜುಗರ ಅನ್ನಿಸಿರಬೇಕು. ಬಹಳ ಮಾರ್ಮಿಕವಾದ ಮಾತುಗಳಲ್ಲಿ ದುರ್ಯೋಧನನಿಗೆ ತಿಳಿಸುತ್ತಾನೆ. ಕುಮಾರವ್ಯಾಸನ ಅತ್ಯಂತ ಮಹತ್ವಪೂರ್ಣ ಪದ್ಯಗಳಲ್ಲೊಂದು ಇದುಃ

ಹಸುಳೆತನ ಮೊದಲಾಗಿ
ಬಲು ರಕ್ಕಸರೊಡನೆ ತಲೆಯೊತ್ತಿ,
ರಣದಾಯಸವ ಸೈರಿಸಿ,
ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು
ಚಕ್ರ ಭಂಡಾರಿಸಿತು,
ಮುನ್ನಿನ ಜವ್ವನದ ಬಲ ಮುಸುಳಿತು,
ಆವುಂಡಾಡಿ ಭಟ್ಟರು ನೃಪತಿ ಕೇಳೆಂದ..’

(ಹಸುಳೆತನ-ಬಾಲ್ಯ; ಜವ್ವನ-ಯೌವನ; ಮುಸುಳಿತು-ಮಾಸಿತು)

‘ದುರ್ಯೋಧನಾ, ಮಗುವಾಗಿದ್ದಾಗಿನಿಂದಲೂ  ರಾಕ್ಶಸರೊಡನೆ ಹೋರಾಡುವುದೇ ನನ್ನ ಜೀವನವಾಗಿ ಹೋಯಿತು. ಅನೇಕಾನೇಕ  ದಾನವರನ್ನು ಕೊಂದದ್ದಾಗಿದೆ. ಅದೆಲ್ಲಾ ಈಗ ಮುಗಿದ ಅಧ್ಯಾಯ .ನಾನೂ ಸಹ ಆಯಾಸಗೊಂಡಿದ್ದೇನೆ ಅನಿಸುತ್ತಿದೆ. ಈಗ ಮಿಸುಕಾಡಲಾರೆ. ನನ್ನ ಚಕ್ರವೂ ಸಹಾ ಭಂಡಾರ(ಆಯುಧಾಗಾರ)ಸೇರಿ ಹೋಗಿದೆ. ಯೌವನದಲ್ಲಿ ಇದ್ದ ಶಕ್ತಿ ಸಹಾ ಈಗಿಲ್ಲ. ನಾನು ಉಂಡುಂಡು ಕಾಲ ಕಳೆಯುವ ಉಂಡಾಡಿಭಟ್ಟ ನಾಗಿದ್ದೇನೆ’ 


ಶ್ರೀಕೃಷ್ಣ ದ್ವಾಪರ ಕಂಡ ಮಹಾ ಯುದ್ಧವೀರ.ತಂತ್ರಜ್ಞನೂ ಹೌದು. ಪೂತನಿಯಿಂದ ಆರಂಭಿಸಿ ಶಕಟ, ಧೇನುಕ, ವತ್ಸ, ನಗ, ಹಯ, ವೃಷಭ, ಕಾಲಿಯ , ಕಾಲಯವ, ದಂತ ವಕ್ರ, ಮುರ ,ನರಕ, ಕುಂಭ,ಡಿಬಿಕ, ಹಂಸ, ಕೊನೆಗೆ ಬಾಣಾಸುರ ಹೀಗೆ ಅಸಂಖ್ಯಾತ ಬಲಶಾಲಿಗಳನ್ನು ಕೊಂದವ.ಯುದ್ಧಗಳಿಗೆ ಲೆಕ್ಕವೇ ಇಲ್ಲ! ಅದಕ್ಕೇ ದುರ್ಯೋಧನನಿಗೆ ಭಯ! ಎಷ್ಟೇ ವಯಸ್ಸಾದವನಿರಲಿ,ಅನುಭವಿ ವೀರ! ಆಯುಧ ಹಿಡಿದರೆ ಗತಿ ಏನಾದರೂ ಆಗಬಹುದು. ತಾನು ಭೀಷ್ಮರನ್ನು ನಂಬಿಲ್ಲವೆ?

ಆದರೆ ನಿವೃತ್ತ ಚಾಂಪಿಯನ್ನನಂತೆ , ವಯಸ್ಸಾದ ಗತ ಕಾಲದ ವೀರನಂತೆ ಹರಿ ತನ್ನ ಬಗ್ಗೆ ಮಾತಾಡುತ್ತಿರುವುದು ತುಂಬಾ ಸಹಜವಾಗಿದೆ. ಆತ್ಮ ಪ್ರಶಂಸೆಯಾಗಲೀ, ಕಪಟವಾಗಲೀ ಇಲ್ಲದ ಸರಳ ಸುಂದರ ಮಾತುಗಳು! ಯುದ್ಧ ಮಾಡುವ ಶಕ್ತಿಯೇ ಕುಂದಿರುವಾಗ ಹೊಕ್ಕು ಇರಿಯುವುದೇನು ಬಂತು?


ಹಾಗಾದರೆ ಸರಿ ಎಂದು ದುರ್ಯೋಧನ ತೆರಳಿದ.


ಕುಮಾರವ್ಯಾಸ ಪ್ರತಿಷ್ಠಾನ
೨೧/೧/೨೦೧೭