Wednesday, June 28, 2017

ಐಸಲೇ ಕುಮಾರವ್ಯಾಸ! -೯೪-



ಐಸಲೇ ಕುಮಾರವ್ಯಾಸ!                           -೯೪-
ಆದಿ ಪ ೨೦-೬೩

ಉರಿಯ ಗಂಟಲನೊದೆದು ಫಣಿ ಮಿಕ್ಕುರವಣಿಸೆ,
ಹಾ,ಹಾ,ಧನಂಜಯ,ಹರಿವುತಿದೆ ಹಾವೊಂದು
ಹೋದುದು ಬಾಯ ತುತ್ತೆನಗೆ..,
ತರಿಸಿಕೊಡು, ಶರವೇಢೆಯನು ವಿಸ್ತರಿಸು ವಹಿಲದೊಳು
ಎನಲು ವೈಶ್ವಾನರನ ಮಾತಿಗೆ ನಗುತ ಕೊಂಡನು ವಿಜಯ ಗಾಂಢಿವವ..,’

ಖಾಂಡವ ದಹನ ನಡೆಯುತ್ತಿದೆ. ಅಗ್ನಿ ಇಡೀ ಕಾಡನ್ನು ಭಕ್ಷಿಸುತ್ತಿದ್ದಾನೆ. ಅಗ್ನಿಯ ಆಹಾರ ಯಾವುದೂ ತಪ್ಪ್ಪಿಹೋಗದಂತೆ ಕೃಷ್ಣಾರ್ಜುನರು ಕಾವಲಾಗಿದ್ದಾರೆ.ಒಂದು ನಾಟಕೀಯ ಬೆಳವಣಿಗೆ ನಡೆಯಿತು!
ಅಗ್ನಿಯ ಕೆನ್ನಾಲಿಗೆಗೆ ಎಲ್ಲಾ ಪ್ರಾಣಿಗಳೂ ಸಿಕ್ಕಿ ಆಹುತಿಯಾಗುತ್ತಿದ್ದರೆ ಉರಿಯುತ್ತಿರುವ ಮೈಯೊಂದಿಗೆ ಅಶ್ವಸೇನ ಎಂಬ ಸರ್ಪ ತಪ್ಪಿಸಿಕೊಳ್ಳಲು ಆಗಸಕ್ಕೆ ಚಿಮ್ಮಿತು! ಅಗ್ನಿ ಅರ್ಜುನನನ್ನು ಕೂಗಿ ಕರೆದ; ಅರ್ಜುನಾ, ಅದೋ ನೋಡು, ಒಂದು ಹಾವು ನನ್ನ ಬಾಯಿಂದ ತಪ್ಪಿಸಿಕೊಂಡು ಹಾರುತ್ತಿದೆ! ನನ್ನ ಬಾಯಿಗೆ ಬಂದ ತುತ್ತು ಹಾರಿ ಹೋಗುವುದೆಂದರೇನು? ನಿನ್ನ ಬಾಣ ಪ್ರಯೋಗದಿಂದ ಆ ತುತ್ತು ಕೈ ತಪ್ಪಿ ಹೋಗದಂತೆ ಮಾಡು

ಎಂಥಾ ಸೂಕ್ಷ್ಮ ದೃಷ್ಟಿ !ಅಗ್ನಿಯ ಆಗ್ರಹವನ್ನು ಕಂಡ ಅರ್ಜುನ ನಗುತ್ತಾ ಧನುಸ್ಸಿಗೆ ಬಾಣವನ್ನು ಹೂಡಿದ! ಆ ಸರ್ಪದ ಕೊರಳನ್ನು ಕತ್ತರಿಸಿದ.ಆದರೆ ಆಶ್ಚರ್ಯ,ಕತ್ತರಿಸಿದ ಮೈ ಕಾಡಿನ ಬೆಂಕಿಯಲ್ಲಿ ಬಿದ್ದರೆ ತಲೆ ಜೀವದೊಂದಿಗೆ ಹಾರಿಹೋಯಿತು.ಅಷ್ಟೇ ಅಲ್ಲ, ಅರ್ಜುನನಿಗೆ ಕೂಗಿ ಹೇಳಿತು, ಅರ್ಜುನಾ ತಪ್ಪು ಮಾಡಿದೆ! ಮರೆಯಬೇಡ,ನನ್ನ ಕಾರಣದಿಂದಲೇ ನಿನಗೂ ಮರಣ! ಅನಂತರ ಕರ್ಣನ ಬತ್ತಳಿಕೆಯಲ್ಲಿ ಅಸ್ತ್ರವಾಗಿ ಸೇರಿದ ಕಥೆ ನಮಗೆ ತಿಳಿದಿದೆ. ಮಾತುಗಾರಿಕೆಯ ಸೊಗಸು ನೋಡಿ

ಕುಮಾರವ್ಯಾಸ ಪ್ರತಿಷ್ಠಾನ                                         ೨೮/೬/೨೦೧೭

Monday, June 26, 2017

ಐಸಲೇ ಕುಮಾರವ್ಯಾಸ! -೯೩-



ಐಸಲೇ ಕುಮಾರವ್ಯಾಸ!                           -೯೩-
ಆದಿ ಪ ೨೦-೬೧

ಹೆಡೆಯ ಮಣಿಗಳ ಕಂಡು
ಸೂಸಿದ ಕಿಡಿಗಳಹಹಾ ಎನುತ ಶಿರಗಳ ಕೊಡಹಿ
ಮರುಗಿದರುರಗಿಯರು ಮರಿಗಳಿಗೆ ಮೈ ಚಾಚಿ
ಕಡುಹೊಗೆಯ ಕೇಸುರಿಯ ಕಿಡಿಗಳ ಗಡಣದಲಿ
ಕೌರೆದ್ದು ಮೈಗಳ ಕೊಡಹಿ ಬಿಸುಸುಯ್ಯುತ್ತ
ಮುಗ್ಗಿದವಹಿಗಳುರಿಯೊಳಗೆ..,’

(ಉರಗಿಯರು-ಸರ್ಪಿಣಿಯರು; ಅಹಿ- ಸರ್ಪ; ಕೌರೆದ್ದು-ಶಾಖದಿಂದ ತಲ್ಲಣಿಸು)

ಖಾಂಡವವನ್ನು ಆವರಿಸಿದ ಅಗ್ನಿ ಹುತ್ತಗಳ ಒಳಗೂ ಪ್ರವೇಶಿಸಿ ತನ್ನ ನಾಲಿಗೆಗಳನ್ನು ಚಾಚಿದನಷ್ಟೆ? ಬಿಲಗಳ ಒಳಗೂ ಕಪ್ಪಾದ ಹೊಗೆ, ಬೆಂಕಿಯ ಕಿಡಿಗಳು ವ್ಯಾಪಿಸಿದವು.

ಕವಿ ಹುತ್ತಗಳೊಳಗಿದ್ದ ಸರ್ಪಸಂಸಾರಗಳಲ್ಲಿ ಬೆಂಕಿಯಿಂದ ಉಂಟಾದ ಕೋಲಾಹಲವನ್ನು ಸೂಕ್ಷ್ಮವಾಗಿ ಗಮನಿಸಿ ಚಿತ್ರಿಸುತ್ತಾನೆ;

ಹುತ್ತದೊಳಗಿದ್ದ ಸರ್ಪಿಣಿಯರು ಅಗ್ನಿಯ ಕಿಡಿಗಳನ್ನು ಕಂಡು ಎಷ್ಟುದಿಗಿಲುಗೊಂಡರು ಎಂದರೆ ಮರಿಗಳ ಹೆಡೆಯಲ್ಲಿದ್ದ ಮಣಿಗಳನ್ನು ಸಹಾ ಬೆಂಕಿಯ ಕಿಡಿಗಳಿರಬೇಕೆಂದು ಭ್ರಮಿಸಿ ಅಯ್ಯೋ! ಬೆಂಕಿಯ ಕಿಡಿ ಮರಿಗಳ ತಲೆ ಸುಟ್ಟೀತು ಎಂದು ಅಪ್ಪಿಕೊಂಡು ತಲೆಗಳನ್ನು ಕೊಡವಿದರು. ಕ್ರೂರ ಜಂತುವಾದರೂ ತಾಯ ಮಮತೆ ತಾನೆ?ತಮ್ಮ ಮೈಗಳನ್ನು ಚಾಚಿ ಮರಿಗಳನ್ನು ಬೆಂಕಿಯಿಂದ ರಕ್ಷಿಸಲು ಯತ್ನಿಸಿದವು
ಆದರೆ ದಟ್ಟವಾದ ಹೊಗೆಯಿಂದ ಆವೃತವಾದ ಅಗ್ನಿ ಬಿಟ್ಟೀತೇ? ಮೈಗಳನ್ನು ಕೊಡವುತ್ತಾ,  ನುಲಿಯುತ್ತಾ ಬಿಸುಸುಯ್ಯುತ್ತಾ ಬೆಂಕಿಯ ಉರಿಯಲ್ಲಿ ಬಿದ್ದು ದಗ್ಧವಾದವು.

ರವಿ ಕಾಣದ್ದನ್ನು ಕವಿ ಕಂಡನಂತೆ! ಕಾಡನ್ನು ದಾವಾಗ್ನಿ ನಾಶ ಮಾಡುವಾಗ ಹಾವಿನ ಬಿಲಗಳಲ್ಲಿ, ಹುತ್ತಗಳಲ್ಲಿ ಉಂಟಾದ ಪರಿಣಾಮಗಳನ್ನು ಸೂಕ್ಷ್ಮಮತಿಯಲ್ಲದ ಕವಿ ಹೇಳಲಾದೀತೇ?

ಕುಮಾರವ್ಯಾಸ ಪ್ರತಿಷ್ಠಾನ
೨೫/೦೬/೨೦೧೭

Thursday, June 22, 2017

ಐಸಲೇ ಕುಮಾರವ್ಯಾಸ! -೯೨-



ಐಸಲೇ ಕುಮಾರವ್ಯಾಸ!                           --
ಆದಿ ಪ ೨೦-


‘ಕುರುಳ ತುಂಬಿಯ ತನಿಗೆದರಿ
ಮುಖಸರಸಿಜವ ಚುಂಬಿಸಿ,ತಮಾಲದ ತುರುಬ ಹಿಡಿದು
ಅಧರ ಪ್ರವಾಳದ ರಸವನೆರೆಸವಿದು..
ಉರು ಪಯೋಧರ ಬಿಲ್ವವನು ಹೊಯ್ದೊರಸಿ,
ಕದಳಿಯ ನುಣ್ದೊಡೆಯ ನಿಟ್ಟೊರಸಿ ರಮಿಸಿತು ವನಸಿರಿಯ
ಪಿಪ್ಪಲ ದಳಾಂಗದಲಿ..’

ಖಾಂಡವ ದಹನದ ಸಂದರ್ಭದಲ್ಲಿ ಕುಮಾರವ್ಯಾಸನ ಅನನ್ಯ ಕವಿತಾಶಕ್ತಿಯ ಕುರುಹಾಗಿ ಮೂಡಿಬಂದಿರುವ ಒಂದು ವಿಶೇಷ ಪದ್ಯ ಇದು!

ಅಗ್ನಿ, ಇಡೀ ಕಾಡನ್ನು ಆವರಿಸಿ ಭೋಗಿಸುವ ರೂಪಕ ಈ ಪದ್ಯದ್ದು.ಇಲ್ಲಿ ಅಗ್ನಿ ವನಶ್ರೀಯನ್ನು ರಮಿಸುತ್ತಿದ್ದಾನೆ. ಸಾಮಾನ್ಯವಾದ ವರ್ಣನೆಯಲ್ಲಿ ದುಂಬಿಯಂತಹ ಮುಂಗುರುಳನ್ನು ತಾವರೆಯಂಥಾ ಮುಖವನ್ನು,ಕಪ್ಪಾದ ನೀಳ ಕೇಶರಾಶಿಯನ್ನು,ಚಿಗುರಿನಂಥಾ ತುಟಿಯನ್ನು,ಬಿಲ್ವ ಫಲದಂಥಾ ಪಯೋಧರಗಳನ್ನು,ಬಾಳೆಯ ಮರದಂಥಾ ನುಣ್ದೊಡೆಗಳನ್ನು ರಮಿಸಿದ ಎನ್ನುವ ರೂಪಕಗಳು ಬರುವುದು ರೂಢಿ.ಎಲ್ಲಾ ಕವಿಗಳೂ ಈ ಹೋಲಿಕೆಗಳನ್ನು ಬಳಸುತ್ತಾರೆ.

ಆದರೆ ಇಲ್ಲಿಯ ವಿಶೇಷ ಬೇರೆ.ಶೃಂಗಾರದಲ್ಲಿ ಯಾವ್ಯಾವುದು ಉಪಮಾನವಾಗಿ ಬರುತ್ತದೋ ಅವೇ ಇಲ್ಲಿ ವಸ್ತುಗಳಾಗಿವೆ( ಅಂದರೆ ಉಪಮೇಯ!) ಯಾವುದು ಉಪಮೇಯವೋ ಅದು ಇಲ್ಲಿ ಉಪಮಾನ.

ಅಗ್ನಿ ಒಂದೊಂದಾಗಿ ಕಾಡಿನ ಅಂಗಾಂಗಗಳನ್ನು ವ್ಯಾಪಿಸುತ್ತಾ(ರಮಿಸುತ್ತಾ!) ಹೋದ.ತಾವರೆಯಲ್ಲಿ ಅಡಗಿ ಕುಳಿತು ಮಧುವನ್ನು ಹೀರುತ್ತಿದ್ದ ದುಂಬಿಗಳನ್ನು ಆವರಿಸಿ ಕೆದರಿದ, ಅನಂತರ ನೀರಿನಲ್ಲಿದ್ದ ತಾವರೆಗಳನ್ನೂ ವ್ಯಾಪಿಸಿದ; ತಮಾಲದ (ಹೊಂಗೆಯ ಮರ; ಕಪ್ಪಾದ ಎಂಬುದು ಮತ್ತೊಂದು ಅರ್ಥ)ತುರುಬನ್ನು ಹಿಡಿದ; ಚಿಗುರುಗಳ( ತುಟಿಗಳಂಥಾ) ರಸವನ್ನು ಸವಿದ; ಬಿಲ್ವದ ಮರವನ್ನು ವ್ಯಾಪಿಸಿ ಅವುಗಳ ಫಲಗಳನ್ನೂ( ಪಯೋಧರದಂಥ) ಹೊಯ್ದು ಒರೆಸಿದ; ಬಾಳೆಯ ಮರಗಳಿಗೂ ವ್ಯಾಪಿಸಿ ಅವುಗಳ ಕಾಂಡವನ್ನು ಸೂರೆಮಾಡಿದ; ಅರಳಿಯ ಎಲೆಗಳ ಅಂಗಗಳಲ್ಲಿ ಕೇಳಿಯಾಡಿದ’

ಖಾಂಡವ ದಹನ ಕವಿಯ ದೃಷ್ಟಿಯಲ್ಲಿ ಅಗ್ನಿಯ ಸುರತ ಕೇಳಿಯಾಯಿತು ಎಂಬುದು ಒಂದು ಕಲ್ಪನೆಯಾದರೆ ದೇಹ ಸೌಂದರ್ಯದ ಹೋಲಿಕೆಗಳನ್ನೇ ಇಲ್ಲಿ ವಸ್ತುಗಳಾಗಿಸಿ ವಸ್ತುಗಳನ್ನೇ ಹೋಲಿಕೆಗಳಾಗಿ ಪಲ್ಲಟಿಸಿ ಜಾಣ್ಮೆ ಮೆರೆದಿದ್ದಾನೆ ಕವಿ.

ಕವಿಯ ಅದ್ಭುತ ರೂಪಕ ಶಕ್ತಿಯ ಮತ್ತೊಂದು ನಿದರ್ಶನ ಈ ಪದ್ಯ!

ಕುಮಾರವ್ಯಾಸ ಪ್ರತಿಷ್ಠಾನ
೨೨/೬/೨೦೧೭