Thursday, June 22, 2017

ಐಸಲೇ ಕುಮಾರವ್ಯಾಸ! -೯೨-



ಐಸಲೇ ಕುಮಾರವ್ಯಾಸ!                           --
ಆದಿ ಪ ೨೦-


‘ಕುರುಳ ತುಂಬಿಯ ತನಿಗೆದರಿ
ಮುಖಸರಸಿಜವ ಚುಂಬಿಸಿ,ತಮಾಲದ ತುರುಬ ಹಿಡಿದು
ಅಧರ ಪ್ರವಾಳದ ರಸವನೆರೆಸವಿದು..
ಉರು ಪಯೋಧರ ಬಿಲ್ವವನು ಹೊಯ್ದೊರಸಿ,
ಕದಳಿಯ ನುಣ್ದೊಡೆಯ ನಿಟ್ಟೊರಸಿ ರಮಿಸಿತು ವನಸಿರಿಯ
ಪಿಪ್ಪಲ ದಳಾಂಗದಲಿ..’

ಖಾಂಡವ ದಹನದ ಸಂದರ್ಭದಲ್ಲಿ ಕುಮಾರವ್ಯಾಸನ ಅನನ್ಯ ಕವಿತಾಶಕ್ತಿಯ ಕುರುಹಾಗಿ ಮೂಡಿಬಂದಿರುವ ಒಂದು ವಿಶೇಷ ಪದ್ಯ ಇದು!

ಅಗ್ನಿ, ಇಡೀ ಕಾಡನ್ನು ಆವರಿಸಿ ಭೋಗಿಸುವ ರೂಪಕ ಈ ಪದ್ಯದ್ದು.ಇಲ್ಲಿ ಅಗ್ನಿ ವನಶ್ರೀಯನ್ನು ರಮಿಸುತ್ತಿದ್ದಾನೆ. ಸಾಮಾನ್ಯವಾದ ವರ್ಣನೆಯಲ್ಲಿ ದುಂಬಿಯಂತಹ ಮುಂಗುರುಳನ್ನು ತಾವರೆಯಂಥಾ ಮುಖವನ್ನು,ಕಪ್ಪಾದ ನೀಳ ಕೇಶರಾಶಿಯನ್ನು,ಚಿಗುರಿನಂಥಾ ತುಟಿಯನ್ನು,ಬಿಲ್ವ ಫಲದಂಥಾ ಪಯೋಧರಗಳನ್ನು,ಬಾಳೆಯ ಮರದಂಥಾ ನುಣ್ದೊಡೆಗಳನ್ನು ರಮಿಸಿದ ಎನ್ನುವ ರೂಪಕಗಳು ಬರುವುದು ರೂಢಿ.ಎಲ್ಲಾ ಕವಿಗಳೂ ಈ ಹೋಲಿಕೆಗಳನ್ನು ಬಳಸುತ್ತಾರೆ.

ಆದರೆ ಇಲ್ಲಿಯ ವಿಶೇಷ ಬೇರೆ.ಶೃಂಗಾರದಲ್ಲಿ ಯಾವ್ಯಾವುದು ಉಪಮಾನವಾಗಿ ಬರುತ್ತದೋ ಅವೇ ಇಲ್ಲಿ ವಸ್ತುಗಳಾಗಿವೆ( ಅಂದರೆ ಉಪಮೇಯ!) ಯಾವುದು ಉಪಮೇಯವೋ ಅದು ಇಲ್ಲಿ ಉಪಮಾನ.

ಅಗ್ನಿ ಒಂದೊಂದಾಗಿ ಕಾಡಿನ ಅಂಗಾಂಗಗಳನ್ನು ವ್ಯಾಪಿಸುತ್ತಾ(ರಮಿಸುತ್ತಾ!) ಹೋದ.ತಾವರೆಯಲ್ಲಿ ಅಡಗಿ ಕುಳಿತು ಮಧುವನ್ನು ಹೀರುತ್ತಿದ್ದ ದುಂಬಿಗಳನ್ನು ಆವರಿಸಿ ಕೆದರಿದ, ಅನಂತರ ನೀರಿನಲ್ಲಿದ್ದ ತಾವರೆಗಳನ್ನೂ ವ್ಯಾಪಿಸಿದ; ತಮಾಲದ (ಹೊಂಗೆಯ ಮರ; ಕಪ್ಪಾದ ಎಂಬುದು ಮತ್ತೊಂದು ಅರ್ಥ)ತುರುಬನ್ನು ಹಿಡಿದ; ಚಿಗುರುಗಳ( ತುಟಿಗಳಂಥಾ) ರಸವನ್ನು ಸವಿದ; ಬಿಲ್ವದ ಮರವನ್ನು ವ್ಯಾಪಿಸಿ ಅವುಗಳ ಫಲಗಳನ್ನೂ( ಪಯೋಧರದಂಥ) ಹೊಯ್ದು ಒರೆಸಿದ; ಬಾಳೆಯ ಮರಗಳಿಗೂ ವ್ಯಾಪಿಸಿ ಅವುಗಳ ಕಾಂಡವನ್ನು ಸೂರೆಮಾಡಿದ; ಅರಳಿಯ ಎಲೆಗಳ ಅಂಗಗಳಲ್ಲಿ ಕೇಳಿಯಾಡಿದ’

ಖಾಂಡವ ದಹನ ಕವಿಯ ದೃಷ್ಟಿಯಲ್ಲಿ ಅಗ್ನಿಯ ಸುರತ ಕೇಳಿಯಾಯಿತು ಎಂಬುದು ಒಂದು ಕಲ್ಪನೆಯಾದರೆ ದೇಹ ಸೌಂದರ್ಯದ ಹೋಲಿಕೆಗಳನ್ನೇ ಇಲ್ಲಿ ವಸ್ತುಗಳಾಗಿಸಿ ವಸ್ತುಗಳನ್ನೇ ಹೋಲಿಕೆಗಳಾಗಿ ಪಲ್ಲಟಿಸಿ ಜಾಣ್ಮೆ ಮೆರೆದಿದ್ದಾನೆ ಕವಿ.

ಕವಿಯ ಅದ್ಭುತ ರೂಪಕ ಶಕ್ತಿಯ ಮತ್ತೊಂದು ನಿದರ್ಶನ ಈ ಪದ್ಯ!

ಕುಮಾರವ್ಯಾಸ ಪ್ರತಿಷ್ಠಾನ
೨೨/೬/೨೦೧೭

No comments:

Post a Comment