Friday, January 26, 2018

ಐಸಲೇ ಕುಮಾರವ್ಯಾಸ !! - ೧೧೪ -



ಐಸಲೇ ಕುಮಾರವ್ಯಾಸ !!                  -  ೧೧೪  -
ಕರ್ಣ ಪ೧೭-೫೨

ಹಿಂಗದಿನ್ನೂ ದ್ವಾಪರದ ಸರ್ವಾಂಗ
ದ್ವಾಪರದ ಸೀಮಾಸಂಗದಲಿ ಸಿಗುರೆದ್ದ
ಕಲಿಕೆಯ ಸೊಗಡ ಸೋಹಿನಲಿ
ಸಂಗಡಿಸಿತಧರೋತ್ತರದ ಸಮರಂಗ
ಹದನರಿದು ರಾಜ್ಯಾಸಂಗ ಸುಗತಿ ವ್ಯರ್ಥನಹೆನೇ
ಪಾರ್ಥ ಹೇಳೆಂದ..,’

(ಸೀಮಾಸಂಗ- ಪರಸ್ಪರ ತಾಗುವಿಕೆ; ಸಿಗುರು-ಮರದ ಚೂರು; ಸೊಗಡು- ವಾಸನೆ; ಸೋಹು- ಸೋಕುವಿಕೆ; ಸಂಗಡಿಸು-ಉಂಟಾಗು; ಅಧರೋತ್ತರದ- ತುಟಿಮೀರಿದ; ಸಮರಂಗ- ಯುದ್ಧ, ವಾದ;)

ಶ್ರೀಕೃಷ್ಣನ ಸಲಹೆಯಂತೆ ಅರ್ಜುನ ಯುಧಿಷ್ಠಿರನನ್ನ ನಿಂದಿಸಿದ್ದೂ ಆಯಿತು.ತನ್ನ ಗುಣಗಾನ ಮಾಡಿಕೊಂಡದ್ದೂ ಆಯಿತು. ಇವೆರಡೂ ಧರ್ಮರಾಯನನ್ನು ಘಾಸಿಗೊಳಿಸಿದವು.ಇಂಥಾ ಭಾವನೆ ಅರ್ಜುನನ ಮನಸ್ಸಿನಲ್ಲಿ ಇತ್ತು ಎಂಬ ಕಲ್ಪನೆ ಸಹಾ ಅವನಿಗೆ ಇರಲಿಲ್ಲ.ಅತ್ಯಂತ ದುಃಖಿತನಾಗಿ ತಾನು ಪುನಃ ಕಾಡಿಗೆಹೋಗುವುದಾಗಿ ನಿರ್ಧರಿಸಿಬಿಟ್ಟ; ಅಷ್ಟೇ ಅಲ್ಲ ಹೊರಡಲು ಅನುವಾದ.

ರಾಯನ ಪರೋಕ್ಷದಲಿ ರಾಜ್ಯಶ್ರೀಯ ಬೇಟವೇ?’( ಧರ್ಮರಾಯನಿಲ್ಲದಿರುವಾಗ ಇನ್ನೆಂಥಾ ರಾಜ್ಯದ ಆಶೆ?) ಎಂದು ನಕುಲ ಸಹದೇವರು ಅವನೊಡನೆ ನಡೆದರು.

ತರಣಿ ಬಿಜಯಂಗೈದರೆ ಅಬುಜದ ಸಿರಿಗೆ ಸುಮ್ಮಾನವೆ? ( ಸೂರ್ಯನಿಲ್ಲದಾಗ ತಾವರೆಗೆ ಯಾವ ಶೋಭೆ?) ಎನ್ನುತ್ತಾ ದ್ರೌಪದಿ ಹಿಂಬಾಲಿಸಿದಳು. ಹಿರಿಯ ಅರಸರು ಸಹಾ ಧರ್ಮರಾಯನ ಹಿಂದೆ ಹೊರಡಲು ಅನುವಾದರು.

ಪಾರ್ಥನ ಎದೆ ಒಡೆಯಿತು! ಶೋಕದ ಸಮುದ್ರದಲ್ಲಿ ಮುಳುಗಿ ಹೋದ. ನೇರವಾಗಿ ಅಣ್ಣನ ಹಾದಿಯಲ್ಲಿ ಬಂದು ಚರಣದಲ್ಲಿ ಹೊರಳಿದ. ‘ನೀನು ಹಿರಿಯ, ಜ್ಞಾನಿ. ನಾನು ನೀಚ. ನನ್ನ ತಪ್ಪನ್ನು ಮನ್ನಿಸಿ ಮರಳಿ ಬಾ 
 
ಇಲ್ಲ ಅರ್ಜುನ, ನೀವು ಬಾಲಕರು, ಮೇಲಾಗಿ ಇದು ದುಷ್ಕಾಲ.ಇನ್ನೂ ರಾಜ್ಯ ದಕ್ಕುವ ಮುನ್ನವೇ ಇಂಥಾ ಅಹಿತಕರ ಮಾತುಗಳನ್ನು ಕೇಳಿದೆ. ಖಂಡಿತಾ ರಾಜ್ಯದ ವಿಷ ನನಗೆ ಬೇಡ
ಯುಧಿಷ್ಠಿರನ ಮನಸ್ಸು ಅಷ್ಟಕ್ಕೇ ನಿಲ್ಲದೆ ಇಡೀ ಪ್ರಸಂಗದ ಆಳವನ್ನು ವಿಮರ್ಶಿಸಿತು. ಚಿಂತನೆಯೇ ಈ ಪದ್ಯದ ಸಾರ ಮತ್ತು ಅವನ ವ್ಯಕ್ತಿತ್ವಕ್ಕೆ, ಅನುಭವಕ್ಕೆ, ಘನತೆಗೆ ಹಿಡಿದ ಕನ್ನಡಿ.

ಅರ್ಜುನಾ,  ದ್ವಾಪರ ಯುಗದ ಅಳಿವಿನ ಅಂಚಿನಲ್ಲಿದೆ. ಕಲಿಯುಗ ಪ್ರವೇಶ ಮಾಡುತ್ತಿದೆ. ದ್ವಾಪರ ಮುಗಿಯುವ ಮುನ್ನವೇ ಕಲಿಯುಗದ ಸೊಗಡು ಮೂಗಿಗೆ ಬಡಿಯುತ್ತಿದೆ. ಕಲಿಯುಗದ  ಆಗಮನದ ಪೂರ್ವ ಸೂಚನೆಯಂತೆ, ಎರಡು ಯುಗಗಳ   ತಿಕ್ಕಾಟದಲ್ಲಿ ಎದ್ದ ಸಿಗುರಿನಂತೆ ಧರ್ಮದ ಪರಿಧಿಯನ್ನು ಉಲ್ಲಂಘಿಸಿದ, ತುಟಿ ಮೀರಿದ ವಾದ ವಿವಾದ ನಮ್ಮಲ್ಲಿ ನಡೆದಿದೆ. ಇದನ್ನು ತಿಳಿದೂ ತಿಳಿದೂ ರಾಜ್ಯದೊಂದಿಗೆ ಸಂಬಂಧ ಕಡಿದುಕೊಳ್ಳುವ ಸದವಕಾಶವನ್ನು ನಾನು ಕಳೆದುಕೊಳ್ಳಲಾರೆ; ನನ್ನನ್ನು ಹೋಗಲು  ಬಿಡು

ಸ್ವಭಾವತಃ ತತ್ವಜ್ಞಾನಿಯಾದ ಯುಧಿಷ್ಠಿರ ಪ್ರಸಂಗದ ಅಹಿತಕರ ಬೆಳವಣಿಗೆಯಲ್ಲಿ ಕಲಿಯುಗದ ಸೊಗಡನ್ನು ಕಾಣುತ್ತಿದ್ದಾನೆ. ಯುಗಧರ್ಮದ ಪರಿಣಾಮವಾಗಿ ಮೌಲ್ಯಗಳು ನಶಿಸುವುದನ್ನು ಮನಗಂಡಿದ್ದಾನೆ.ಅಷ್ಟೇ ಅಲ್ಲ; ರಾಜ್ಯಾಧಿಕಾರದ ತ್ಯಾಗ ಒಂದುಸುಗತಿ’ (ಸದವಕಾಶ) ಎನ್ನುತ್ತಿದ್ದಾನೆ. ಮಹಾಭಾರತದ ಕಾಲದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ತೂಕದ ಮಾತುಗಳನ್ನು ಕವಿ ಅತ್ಯಂತ ಸಂಯಮದಿಂದ, ಪ್ರೌಢತೆಯಿಂದ ಆಡಿಸಿದ್ದಾನೆ.
ಹಿಂಗದ ಧರ್ಮದ ಸರ್ವಾಂಗ’, ‘ಸೀಮಾಸಂಗದ ಸಿಗುರು’ ‘ಕಲಿಕೆಯ ಸೊಗಡ ಸೋಹು’, ‘ಅಧರೋತ್ತರದ ಸಮರಂಗ’ ‘ರಾಜ್ಯಾಸಂಗ ಸುಗತಿ’, ಒಂದೊಂದೂ ಪುಟಗಟ್ಟಲೆ ವ್ಯಾಖ್ಯಾನ ಮಾಡಬಹುದಾದ ಕನ್ನಡ ಭಾಷೆಯ ಅಪೂರ್ವ ಪ್ರಯೋಗಗಳು. ಭಾಷೆಯ ಅತ್ಯಂತ ಸಮರ್ಥ ಬಳಕೆಯ ಉದಾಹರಣೆ ಇದೆಂದರೆ ತಪ್ಪಿಲ್ಲ. (ಪದ್ಯವನ್ನ ಮತ್ತೊಮ್ಮೆ ಓದಿ)  

ಅರ್ಜುನ-ಯುಧಿಷ್ಠಿರರ ಸಂವಾದಪ್ರಸಂಗದಲ್ಲಿ ಕಳಶವಿಟ್ಟಂತೆ ಬರುವ ಪದ್ಯ ಕುಮಾರವ್ಯಾಸನ ಭಾಷೆ, ಕವಿತಾ ಶಕ್ತಿ ಹಾಗೂ ಅರ್ಥನಿಗೂಢತೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ಎನ್ನಿಸಿದೆ. ಅನೇಕ ವಿದ್ವಾಂಸರಿಂದ ಪ್ರಶಂಸೆಗೊಳಗಾಗಿದೆ.

ಕುಮಾರವ್ಯಾಸ ಪ್ರತಿಷ್ಠಾನ
೨೩/೦೧/೨೦೧೮