Thursday, January 4, 2018

ಐಸಲೇ ಕುಮಾರವ್ಯಾಸ !! - ೧೦೯ -



ಐಸಲೇ ಕುಮಾರವ್ಯಾಸ !!                  -  ೧೦೯  -
ಕರ್ಣ -


‘ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಅಳವಿಯಲಿ,
ಕಳವಿನ ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ.,
ಸಾಣೆಗೊಂಡಲಗಿವನು ಸಮರಕೆ ಹೂಣಿಗನು
ರಿಪುಬಲದ ಹಾಣಾಹಾಣಿಕಾರನು
ಕರ್ಣನಳುಕುವವನಲ್ಲ ನಿನಗೆಂದ..,

(ಹಿಂಗು-ನಾಶವಾಗು; ಅಳವಿ- ಪರಾಕ್ರಮ;ಕೇಣ-ತಂತ್ರ; ಹೂಣಿಗ- ಪರಾಕ್ರಮಿ; ಹಾಣಾಹಾಣಿ-ಧೂಳೀಪಟ)

ಕರ್ಣಪರ್ವದಲ್ಲಿ ನಡೆಯುವ ಒಂದು ಸ್ವಾರಸ್ಯಕರ ಪ್ರಸಂಗ ಹೀಗಿದೆ

ಕರ್ಣ ಕೌರವರ ದಳಪತಿ.ಒಂದು ದಿನದ ಯುದ್ಧದಲ್ಲಿ.ಧರ್ಮರಾಯನಿಗೂ ಕರ್ಣನಿಗೂ ಮುಖಾಮುಖಿಯಾಗುತ್ತದೆ.ಯುಧಿಷ್ಠಿರನನ್ನು ಕರ್ಣ ಭೀಕರವಾಗಿ ಘಾಸಿಗೊಳಿಸಿದ. ಭೀಮ ಪ್ರವೇಶಿಸಿ ಕರ್ಣನನ್ನು ಎದುರಿಸಿದಾಗ ಗಾಯಗೊಂಡ ಯುಧಿಷ್ಠಿರ ಪಾಳಯಕ್ಕೆ ಮರಳಬೇಕಾಯಿತು. ಭೀಮನಿಗೆ ಯುದ್ಧದ ಹೊಣೆ ವಹಿಸಿ ,ಆತಂಕಗೊಂಡ ಅರ್ಜುನ ವಿಚಾರಿಸಲು ಕೃಷ್ಣನೊಡನೆ ತಾನೂ ಪಾಳಯಕ್ಕೆ ಮರಳಿದ.

 ನೋವಿನಿಂದ ಹತಾಶೆಗೊಳಗಾಗಿದ್ದ ಧರ್ಮರಾಯ ಕರ್ಣನ ಪರಾಕ್ರಮವನ್ನು ಶ್ಲಾಘಿಸುತ್ತಲೇ ಅರ್ಜುನನನ್ನು ತೀವ್ರವಾಗಿ ನಿಂದಿಸಿದ.ಕರ್ಣನನ್ನು ಕೊಂದು ಬಂದೆಯೇನು? ಆ ಶಕ್ತಿ ನಿನಗೆಲ್ಲಿದೆ? ನಿನ್ನದು ಬರಿಯ ಮಾತು. ಅವನು ನಿನಗೆ ಸೊಪ್ಪು ಹಾಕುವವನಲ್ಲ.

‘ಜಾಣತನದಿಂದ ಕಾದುತ್ತ ಸುಲಭವಾಗಿ ಕೊಲ್ಲಬಹುದಾದ ದ್ರೋಣನಂತಲ್ಲ ; ಕದ್ದು ಮುಚ್ಚಿ ವಿನಂತಿಸಿ, ಹೊಗಳಿ ತೊಲಗಿಸಬಹುದಾದ ಭೀಷ್ಮನೂ ಅಲ್ಲ. ಇವನು ಸಾಣೆ ಹಿಡಿದ ಕತ್ತಿಯಂತೆ ತೀಕ್ಷ್ಣ!
ಸಮರದಲ್ಲಿ ಮಹಾ ಬಲಶಾಲಿ, ನಮ್ಮ ಬಲವನ್ನು ಧೂಳೀಪಟ ಮಾಡ ಬಲ್ಲವ; ನಿನಗೆ ಅಳುಕುವವನಲ್ಲ!’

ಹತಾಶೆಯ ತೀವ್ರತೆಯಲ್ಲಿ ಭೀಷ್ಮ ದ್ರೋಣರನ್ನು ತಾವು ಪರಿಹರಿಸಿದ ಬಗೆಗೂ ವ್ಯಂಗ್ಯವಾಡುತ್ತಾನೆ.ಶತ್ರುವೆಂಬುದನ್ನೂ ಮರೆತು ಕರ್ಣನ ಸಾಮರ್ಥ್ಯವನ್ನೂ ಕೊಂಡಾಡುತ್ತಾನೆ. ಅರ್ಜುನನನ್ನೂ ಹೀನೈಸುತ್ತಾನೆ.

ವ್ಯಂಗ್ಯಕ್ಕೆ ಕವಿ ಬಳಸಿರುವ ಭಾಷೆ ಎಷ್ಟು ಹರಿತವಾಗಿದೆ! ಅರ್ಜುನನಿಗೆ ಕೋಪ ಬರುವುದರಲ್ಲಿ ಏನಾಶ್ಚರ್ಯ?

ಕುಮಾರವ್ಯಾಸ ಪ್ರತಿಷ್ಠಾನ
//೨೦೧೮   

No comments:

Post a Comment