Tuesday, January 2, 2018

ಐಸಲೇ ಕುಮಾರವ್ಯಾಸ !! - ೧೦೮ -



ಐಸಲೇ ಕುಮಾರವ್ಯಾಸ !!                  -  ೧೦೮  -
ಭೀಷ್ಮ -೪೬

ನಚ್ಚಿದಾಳಿನ ಬಿನ್ನಹಕೆ ಹರಿ ಮೆಚ್ಚಿ,
ಮನದಲಿ ನಾಚಿ, ಚಕ್ರವ ಮುಚ್ಚಿದನು
ಮುರಿದನು ಕಿರೀಟಿಯ ರಥದ ಹೊರೆಗಾಗಿ
ಬೆಚ್ಚಿ ಬೆದರುವ ಸೇನೆಗಭಯವ ಹಚ್ಚಿ ಕೊಟ್ಟನು
ವೀರ ಭೀಷ್ಮನ ನಿಚ್ಚಟದ ಭಕ್ತಿಯನು ನೆನೆನೆನೆದು
ಒಲೆದ ಹರಿ ಶಿರವ..,’

(ಮುರಿ=ಹಿಂದಿರುಗು;ನಿಚ್ಚಟ-ನಿಶ್ಚಲ; ಒಲೆದ-ತಲೆದೂಗಿದ)

ಭೀಷ್ಮ ಶ್ರೀಕೃಷ್ಣನಿಗೆ ಸವಾಲು ಹಾಕಿದ್ದನ್ನು ನೋಡಿದೆವು.ನಿನ್ನ ಚಕ್ರ ಪ್ರಯೋಗದಿಂದ ನನ್ನ ಮೈಯಲ್ಲಿ ಒಂದು ರೋಮ ಹರಿದರೂ ನಾನು ನಿನ್ನ ಭಕ್ತನಾಗಿರುವುದು ಸುಳ್ಳು.ಪ್ರಯೋಗಿಸಿ ನೋಡು!

ಹರಿಗೆ ಉಭಯ ಸಂಕಟ. ಸೋಲೇ ಇಲ್ಲದ ಚಕ್ರ ಒಂದು ಕಡೆ. ಅಂತರಂಗ ಭಕ್ತನ ದೃಢ ನಿಲುವು ಮತ್ತೊಂದು ಕಡೆ. ಒಂದೆಡೆ ಸ್ವಾಭಿಮಾನ ಮತ್ತೊಂದೆಡೆ ಭಕ್ತನ ಉತ್ಕಟ ವಿಶ್ವಾಸ.ಪರಿಣಾಮ? ಭಕ್ತಿಯ ಮುಂದೆ ಭಗವಂತನಾದರೂ ಸೋತಾನು, ಭಕ್ತರ ಅಚಲ ವಿಶ್ವಾಸವನ್ನು ಹುಸಿಯಾಗಿಸಲಾರ.ಅಂತೆಯೇ ಕುಮಾರವ್ಯಾಸ ಹೇಳುತ್ತಾನೆಃ

ಆತ್ಮೀಯ ಭಕ್ತನ ಮನವಿಗೆ ಹರಿ ಮೆಚ್ಚಿದ. ಚಕ್ರವನ್ನು ಮರಳುವಂತೆ ಸೂಚಿಸಿದ. ಮನಸ್ಸಿನಲ್ಲೇ ನಾಚಿಕೊಂಡ ಸಹಾ! ಇಂಥಾ ಭಕ್ತನ ಮೇಲೆ ಹಾಯ್ದುಹೋದದ್ದು ತುಸು ಅತಿ ಅನಿಸಿರಬೇಕು?

ಮರಳಿ ಅರ್ಜುನನ ರಥಕ್ಕೆ ಬಂದ.ಹೆದರಿ ದಂಗಾಗಿದ್ದ ಸೈನ್ಯಕ್ಕೆ ಅಭಯಹಸ್ತ ತೋರಿದ. ಪರಿಸ್ಥಿತಿ ತಿಳಿಯಾಯಿತು. ದಾರಿತೋರದೆ ನಡುಗುತ್ತಾ ನಿಂತಿದ್ದಅರ್ಜುನ ದೇವನನ್ನು ಮತ್ತೆ ಮತ್ತೆ ಸಂತೈಸ ಬೇಕಾಯಿತು.

ಇಡೀ ಸನ್ನಿವೇಶದ ಸಾರ ಕಡೆಯ ಸಾಲಿನಲ್ಲಿ.ಭೀಷ್ಮನ ದೃಢವಾದ ಭಕ್ತಿ ಹರಿಯ ಮನಸ್ಸನ್ನು ಸೂರೆಗೊಂಡಿತು. ಅದನ್ನು ನೆನೆನೆನೆದು ಹರಿ ತಲೆದೂಗಿದ.

ದೊಡ್ಡ ಆಘಾತದಂತೆ ತಲೆದೋರಿದ ಬಿಕ್ಕಟ್ಟು ಭೀಷ್ಮತೋರಿದ ಜಾಣ್ಮೆ,ವಿಶ್ವಾಸ,ದೃಢತೆ
ಯಿಂದ ಕರಗಿಹೋಯಿತು,ಹೋಗುತ್ತಾ ಭೀಷ್ಮನ ಅಂತರಂಗದ ದರ್ಶನವನ್ನು ಜಗತ್ತಿಗೆ ಸಾರಿ ಹೋಯಿತು.

ಕುಮಾರವ್ಯಾಸ ಪ್ರತಿಷ್ಠಾನ
೦೧/೦೧/೨೦೧೮

No comments:

Post a Comment