Saturday, March 17, 2018

ಐಸಲೇ ಕುಮಾರವ್ಯಾಸ !! - ೧೧೮ -



ಐಸಲೇ ಕುಮಾರವ್ಯಾಸ !!                  -  ೧೧೮  -
ಉದ್ಯೋಗಪ -೨೭

ನೋಡಿರೈ ಪಾಂಡವರು ಪಾತಕರು ಆಡಿದಾಟವ?
ಆಡಿದೊಡೆ ಈನಾಡೊಳಗದು ಸಲುವುದು,
ಅವನಿಯೊಳಧಿಕ ಲೇಸೆನಿಸಿ
ರೂಢಿಯೊಳಗಾಚಾರವಡಗಿತು,
ಜೋಡೆಯಲಿ ಜನಿಸಿದರನೀ ಬೀಡಾಡಿ ಕೂಡಿದ
ನೆಂದು ಹೊಯಿದನು ರವಿಸುತನ ಕರವ..,

ಕೌರವ, ಹರಿ ಬರುತ್ತಾನೆಂದು ವೈಭವೋಪೇತ ವ್ಯವಸ್ಥೆ ಮಾಡಿದ್ದ. ಅಲ್ಲಿಗೆ ಬರದೆ ವಿದುರನ ಮನೆಗೆ ಹೋದ ಶ್ರೀಹರಿ ವೈಭವಕ್ಕಿಂತಾ ಪ್ರೇಮಕ್ಕೆ ಶರಣಾಗುವವನೆಂಬುದನ್ನು ನಿರೂಪಿಸಿದ!
ದುರ್ಯೋಧನನಿಗೆ ವಿದುರನ ಕೈಲಿ ಸಂದೇಶ ಹೋಯಿತುಃಶ್ರೀ ಕೃಷ್ಣ  ಬರಲು ಸಮಯ ಕೋರಿದ್ದಾನೆ

ಗಾಯಗೊಂಡಿದ್ದ ದುರ್ಯೋಧನ ಹೇಳಿದಇಂದು ಅವಕಾಶವಿಲ್ಲ; ನಾಳೆ ಕಾಣಿಸಿಕೊಂಬೆವು., ಇನ್ನೇತಕ್ಕೆ ಬಂದಿರುತ್ತಾನೆ? ಶತ್ರುಗಳನ್ನು ಪಾಲಿಸಲು ತಾನೆ? ನಾಳೆ ಬರುವಂತೆ ತಿಳಿಸು ಎಂದ.
ಅಷ್ಟೇ ಅಲ್ಲ; ತನ್ನ ಅಹಂಕಾರವನ್ನು, ದೌಷ್ಟ್ಯವನ್ನು ಮಾತು, ಕೃತಿಯ ಮೂಲಕ ಹೇಗೆ ಹೊರಹಾಕುತ್ತಾನೆ ನೋಡಿ; ಎಲ್ಲಾ ಸಭಿಕರನ್ನೂ ಉದ್ದೇಶಿಸಿ ಹೇಳಿದಃ

ನೋಡಿದಿರಾ ಪಾಪಿ ಪಾಂಡವರು ಆಡಿದ ನಾಟಕವನ್ನ? ಅವರು ನಾಟಕ ಮಾಡಿದರೂ ಸಹಾ ಅದು ಉತ್ತಮ ನಡೆಯೆಂದೇ ಭೂಮಿಯಲ್ಲಿ ಪ್ರಚಲಿತವಾಗುತ್ತದೆಯಲ್ಲವೆ? ಏನು ಮಾಡುವುದು? ಪ್ರಪಂಚದಲ್ಲಿ ಸದಾಚಾರಗಳೇ ನಶಿಸಿ ಹೋದವು! ಅನಾಚಾರದಿಂದ ಹುಟ್ಟಿದ ಪಾಂಡವರ ಜತೆಗೆ ಬೀಡಾಡಿ ಕೃಷ್ಣ ಸೇರಿಕೊಂಡ; ಜತೆ ಸರಿಯಾಗಿದೆ ಅಲ್ಲವೆ? ಎಂದು ನಗುತ್ತಾ ಕರ್ಣನ ಕೈ ಮೇಲೆ ಕೈಹಾಕಿ ತಟ್ಟಿದ..,’

ದುರ್ಯೋಧನನ ದುಷ್ಟತನದ ಒಂದು ಮಗ್ಗುಲನ್ನು ನಮಗೆ ಪರಿಚಯಿಸುತ್ತಿದ್ದಾನೆ ಕವಿ.
 ಬರಲು ಸಮಯ ಕೋರಿದ ಶ್ರೀ ಕೃಷ್ಣನಿಗೆ ನಾಳೆ ಬರುವಂತೆ ಆದೇಶ. ಪಾಡವರು ಆಚಾರ ಹೀನರು. ಜಗತ್ತೇ ಅಚಾರಹೀನರ ಪರವಾಗಿದೆ. ಅಂಥವರ ಜತೆ ಕುಟಿಲನಾದ, ಬೀಡಾಡಿಯಾದ(ಶ್ರೀಕೃಷ್ಣನಿಗೆ ಅವನು ನೀಡಿದ ಗುಣವಾಚಕ ನೋಡಿ!)ಈ ಹರಿಯ ಸೇರುವೆ! ಅವರೇನು ಮಾಡಬಲ್ಲರೆಂಬ ತಿರಸ್ಕಾರ; ಕರ್ಣನ ಕೈ ಮೇಲೆ ಕೈ ಹೊಡೆದು ಅಟ್ಟಹಾಸ ಮಾಡಿ ನಗುವುದು ಬೇರೆ! ( ಗೆಳೆಯರ ಕೈ ಮೇಲೆ ಕೈ ಹೊಡೆದು ನಗುತ್ತಾ ಆನಂದಿಸುವುದು ಇವತ್ತಿನದಲ್ಲ, ಕುಮಾರವ್ಯಾಸನ ಕಾಲದಲ್ಲೇ ಇತ್ತು!)

ಅಹಂಕಾರಿ ಕೌರವನ ನೈಜ  ಚಿತ್ರಣ!

ಕುಮಾರವ್ಯಾಸ ಪ್ರತಿಷ್ಠಾನ
೧೫//೨೦೧೮

Monday, March 12, 2018

ಐಸಲೇ ಕುಮಾರವ್ಯಾಸ !! - ೧೧೭ -



ಐಸಲೇ ಕುಮಾರವ್ಯಾಸ !!                  -  ೧೧  -
ಉದ್ಯೋಗ ಪ ೯-೫೪

‘ಕ್ಷೀರ ವಾರಿಧಿ ಶಯನ ಬಂದನು
ವಾರಿಜೋದರ ಕೃಷ್ಣ ಬಂದನು
ಧಾರುಣಿಯ ಹೊರೆಯಿಳಿಸಲೋಸುಗ ಮನುಜ ವೇಷದಲಿ
ಭೂರಿ ದನುಜರನೊರೆಸಿ ಕೌರವ ವಾರಿಧಿಯ
ಮುಕ್ಕುಳಿಸಲೋಸುಗ ಭೋರನೈತರುತಿರ್ದನು
ಅಂಧ ನೃಪಾಲನರಮನೆಗೆ..,’

ರಥದಲ್ಲಿ ಕೌರವನ ಅರಮನೆಗೆ ಹೊರಟ ಶ್ರೀಕೃಷ್ಣನ ಬರವು ಒಂದು ಅದ್ಭುತ ನೋಟ. ರಥವನ್ನು ಏರುವಾಗ ಅಲ್ಲಿ ಸೇರಿದ್ದ ಹಲವು ರಾಜರು ಕೈ ಹಿಡಿದು ಸಹಕರಿಸುವುದೇನು? ಬಿರುದನ್ನು ಹೊಗಳುವುದೇನು? ರಥದ ಹಿಂದೆ ಗುಂಪಾಗಿ ಬಂದ ಮುನಿಗಳ ಸಮೂಹದ ಆಧ್ಯಾತ್ಮಿಕ ಚೆಲುವೇನು?

ಆಗಸದಲ್ಲಿ ದೇವತೆಗಳು ನೆರೆದು ನೋಡುತ್ತಿರುವಾಗ ಹಸ್ತಿನಾಪುರದ ಜನ ಸುಮ್ಮನಿದ್ದಾರೆಯೆ? ಹರಿಯ ರಥ ಸಾಗಿದ ಪಾವನವಾದ ದಾರಿಯಲ್ಲಿ ತಾವೂ ಸಾಗಿದರು. ನೈಜ ರಥೋತ್ಸವ!

ಕವಿ ಹಾಡುತ್ತಾನೆಃ

ಕ್ಷೀರ ಸಾಗರದಲ್ಲಿ ಮಲಗುವ ನಾರಾಯಣ ಬಂದ, ಕಮಲವನ್ನು ನಾಭಿಯಲ್ಲಿ ಪಡೆದು ಅದರಲ್ಲಿ ಬ್ರಹ್ಮನನ್ನು ಧರಿಸಿರುವವ; ಅಷ್ಟೇ ಅಲ್ಲ, ಭೂಮಿಯ ಹೊರೆಯನ್ನು ಇಳಿಸಲೋಸುಗವೇ ತಾನು ಮನುಷ್ಯ ವೇಷದಲ್ಲಿ ಬಂದವನು, ಭಯಂಕರ ರಾಕ್ಷಸರನ್ನೆಲ್ಲಾ ತನ್ನ ಅವತಾರದ ಅವಧಿಯಲ್ಲಿ ಸಂಹಾರ ಮಾಡಿಯಾಗಿದೆ. ಇನ್ನುಳಿದದ್ದು ಕೌರವ ಸಮುದ್ರ! ಅದನ್ನು ಮುಕ್ಕುಳಿಸುವ ಸಲುವಾಗಿ ಧಾವಿಸುತ್ತಿದ್ದಾನೆ!

ಬಂದ; ಬಂದ ಎಂಬ ಪುನರುಕ್ತಿಯಲ್ಲಿ ಭಕ್ತಿಯ ಸ್ರೋತವನ್ನೇ ಹರಿಸಿದ್ದಾನೆ ಕವಿ. ಅಂಥ ಸಾಕ್ಷಾತ್ ನಾರಾಯಣ ಬರುತ್ತಿರುವುದಾದರೂ ಎಲ್ಲಿಗೆ? ‘ಅಂಧ ನೃಪಾಲನರಮನೆಗೆ..,’ 

ಇಲ್ಲಿರುವ ವ್ಯಂಗ್ಯ ವನ್ನು ಗಮನಿಸಿ. ಭಗವಂತನ ಮಹಿಮೆಗೆ ಕುರುಡಾಗಿರುವವರು ನೆಲೆಸಿರುವ ಅರಮನೆ ಅದು.ಎಷ್ಟು ಜನರಿಗೆ ಹರಿಯನ್ನು ‘ಕಾಣುವ’ ಭಾಗ್ಯ,ಯೋಗ್ಯತೆ,ಬಯಕೆ ಇದೆಯೋ ಗೊತ್ತಿಲ್ಲ ಇಡೀ ಅರಮನೆ ಅಂಧ ನೃಪಾಲನದು!

ಕುಮಾರವ್ಯಾಸ ಪ್ರತಿಷ್ಠಾನ
೧೨/೩/೨೦೧೮