Monday, March 12, 2018

ಐಸಲೇ ಕುಮಾರವ್ಯಾಸ !! - ೧೧೭ -



ಐಸಲೇ ಕುಮಾರವ್ಯಾಸ !!                  -  ೧೧  -
ಉದ್ಯೋಗ ಪ ೯-೫೪

‘ಕ್ಷೀರ ವಾರಿಧಿ ಶಯನ ಬಂದನು
ವಾರಿಜೋದರ ಕೃಷ್ಣ ಬಂದನು
ಧಾರುಣಿಯ ಹೊರೆಯಿಳಿಸಲೋಸುಗ ಮನುಜ ವೇಷದಲಿ
ಭೂರಿ ದನುಜರನೊರೆಸಿ ಕೌರವ ವಾರಿಧಿಯ
ಮುಕ್ಕುಳಿಸಲೋಸುಗ ಭೋರನೈತರುತಿರ್ದನು
ಅಂಧ ನೃಪಾಲನರಮನೆಗೆ..,’

ರಥದಲ್ಲಿ ಕೌರವನ ಅರಮನೆಗೆ ಹೊರಟ ಶ್ರೀಕೃಷ್ಣನ ಬರವು ಒಂದು ಅದ್ಭುತ ನೋಟ. ರಥವನ್ನು ಏರುವಾಗ ಅಲ್ಲಿ ಸೇರಿದ್ದ ಹಲವು ರಾಜರು ಕೈ ಹಿಡಿದು ಸಹಕರಿಸುವುದೇನು? ಬಿರುದನ್ನು ಹೊಗಳುವುದೇನು? ರಥದ ಹಿಂದೆ ಗುಂಪಾಗಿ ಬಂದ ಮುನಿಗಳ ಸಮೂಹದ ಆಧ್ಯಾತ್ಮಿಕ ಚೆಲುವೇನು?

ಆಗಸದಲ್ಲಿ ದೇವತೆಗಳು ನೆರೆದು ನೋಡುತ್ತಿರುವಾಗ ಹಸ್ತಿನಾಪುರದ ಜನ ಸುಮ್ಮನಿದ್ದಾರೆಯೆ? ಹರಿಯ ರಥ ಸಾಗಿದ ಪಾವನವಾದ ದಾರಿಯಲ್ಲಿ ತಾವೂ ಸಾಗಿದರು. ನೈಜ ರಥೋತ್ಸವ!

ಕವಿ ಹಾಡುತ್ತಾನೆಃ

ಕ್ಷೀರ ಸಾಗರದಲ್ಲಿ ಮಲಗುವ ನಾರಾಯಣ ಬಂದ, ಕಮಲವನ್ನು ನಾಭಿಯಲ್ಲಿ ಪಡೆದು ಅದರಲ್ಲಿ ಬ್ರಹ್ಮನನ್ನು ಧರಿಸಿರುವವ; ಅಷ್ಟೇ ಅಲ್ಲ, ಭೂಮಿಯ ಹೊರೆಯನ್ನು ಇಳಿಸಲೋಸುಗವೇ ತಾನು ಮನುಷ್ಯ ವೇಷದಲ್ಲಿ ಬಂದವನು, ಭಯಂಕರ ರಾಕ್ಷಸರನ್ನೆಲ್ಲಾ ತನ್ನ ಅವತಾರದ ಅವಧಿಯಲ್ಲಿ ಸಂಹಾರ ಮಾಡಿಯಾಗಿದೆ. ಇನ್ನುಳಿದದ್ದು ಕೌರವ ಸಮುದ್ರ! ಅದನ್ನು ಮುಕ್ಕುಳಿಸುವ ಸಲುವಾಗಿ ಧಾವಿಸುತ್ತಿದ್ದಾನೆ!

ಬಂದ; ಬಂದ ಎಂಬ ಪುನರುಕ್ತಿಯಲ್ಲಿ ಭಕ್ತಿಯ ಸ್ರೋತವನ್ನೇ ಹರಿಸಿದ್ದಾನೆ ಕವಿ. ಅಂಥ ಸಾಕ್ಷಾತ್ ನಾರಾಯಣ ಬರುತ್ತಿರುವುದಾದರೂ ಎಲ್ಲಿಗೆ? ‘ಅಂಧ ನೃಪಾಲನರಮನೆಗೆ..,’ 

ಇಲ್ಲಿರುವ ವ್ಯಂಗ್ಯ ವನ್ನು ಗಮನಿಸಿ. ಭಗವಂತನ ಮಹಿಮೆಗೆ ಕುರುಡಾಗಿರುವವರು ನೆಲೆಸಿರುವ ಅರಮನೆ ಅದು.ಎಷ್ಟು ಜನರಿಗೆ ಹರಿಯನ್ನು ‘ಕಾಣುವ’ ಭಾಗ್ಯ,ಯೋಗ್ಯತೆ,ಬಯಕೆ ಇದೆಯೋ ಗೊತ್ತಿಲ್ಲ ಇಡೀ ಅರಮನೆ ಅಂಧ ನೃಪಾಲನದು!

ಕುಮಾರವ್ಯಾಸ ಪ್ರತಿಷ್ಠಾನ
೧೨/೩/೨೦೧೮

No comments:

Post a Comment