Thursday, September 29, 2016

ಐಸಲೇ ಕುಮಾರವ್ಯಾಸ!!

ವಿರಾಟ ಪ ೪-೧೪

'ಹೋರಿ ಕಳೆವುದು ದುರಿತ ರಾಶಿಯ..,'

ಮಹಾಭಾರತದ ಪಠಣ,ಶ್ರವಣ ಇವು ಪಾಪ ರಾಶಿಯನ್ನು ಹೋರಾಡಿ ಕಳೆಯುತ್ತವೆ ಎಂದಿದ್ದಾನೆ ಕವಿ. ಅದಿರಲಿ.

ಮಳೆ ಇಲ್ಲದ ದಿನಗಳಲ್ಲಿ ನಮ್ಮ ನಾಡಿನಲ್ಲಿ ವಿರಾಟ ಪರ್ವವನ್ನು ಓದಿಸಿ ಕೇಳುವ ಪದ್ಧತಿಯಿತ್ತು.ಉತ್ತರ ಭಾರತದಲ್ಲಿ ತುಳಸಿ ರಾಮಾಯಣದ ಸುಂದರಕಾಂಡದ ಪರಾಯಣ ಪದ್ಧತಿ ಕಷ್ಟದ ದಿನಗಳಲ್ಲಿ ಈಗಲೂ ಇದೆ. ಅದು ನಂಬುಗೆಯ ವಿಷಯ.

ವಿರಾಟ ಪರ್ವಕ್ಕೂ ಮಳೆ ಬರುವುದಕ್ಕೂ ಸಂಬಂಧ ಏನು? ಯಾಕೆ ವಿರಾಟ ಪರ್ವಕ್ಕೆ ಮಾತ್ರ ಈ ಮಹತ್ವ? ಎಲ್ಲೂ ಕಾರಣ ಸಿಗುವುದಿಲ್ಲ. ಆದರೆ ಕುಮಾರವ್ಯಾಸನಲ್ಲಿ ಪರೋಕ್ಷವಾಗಿ ಇದರ ಸುಳುಹನ್ನು ಕಾಣುತ್ತೇವೆ.

ಗಂಧರ್ವರಿಂದ ಕೀಚಕ ವಧೆಯ ಸುದ್ದಿಯನ್ನು ಕೇಳಿದ ದುರ್ಯೋಧನ ಚಕಿತನಾಗಿ ನಿರ್ಣಯಿಸಿದ;.'ಅವಳು ದುರುಪದಿ ಖಳನ ಕೊಂದವ ಭೀಮ ಗಂದರ್ವ!'

ಕೂಡಲೇ ಎಲ್ಲ ಹಿರಿಕಿರಿಯರ ಸಭೆ ಕರೆದ. ಅವಧಿ ಮುಗಿಯುವ ಮೊದಲು ಪಾಂಡವರನ್ನು ಪತ್ತೆ ಮಾಡಿ ಪುನಃ ಅರಣ್ಯಕ್ಕೆ ಅಟ್ಟುವ ಹುನ್ನಾರ! ಭೀಷ್ಮ, ದ್ರೋಣ, ಕರ್ಣ ಎಲ್ಲರೂ ಬಂದರು.ಅವರೆದುರು ತನ್ನ ವಾದ ಮಂಡಿಸಿದ.ಕೀಚಕನನ್ನು ಕೊಲ್ಲುವ ಸಾಮರ್ಥ್ಯ ಸಮಬಲರಾದ ಭೀಮ,ಶಲ್ಯ ಬಲರಾಮರಿಗೆ ಮಾತ್ರ! ಅಂದಮೇಲೆ ಇದು ವಿರಾಟನಗರದಲ್ಲಿ ಅಡಗಿರುವ ಭೀಮನೇ ಸರಿ!

ಭೀಷ್ಮ, ದ್ರೋಣ, ಕರ್ಣ ಇವರೂ ದುರ್ಯೋಧನನ ವಾದವನ್ನು ಒಪ್ಪಿದರು.ಯಾವ ಆಧಾರದಿಂದ? ಭೀಷ್ಮರು ಹೇಳುತ್ತಾರೆ 'ಮಾತು ಹೋಲುವೆಯಹುದು' (ಹೋಲಿಕೆ ಸರಿಯಾಗಿದೆ).ಯಾಕೆಂದರೆ ಧರ್ಮರಾಯನಿದ್ದ ನಾಡಿನಲ್ಲಿ ಬರಕ್ಕೆ ಆಸ್ಪದವಿಲ್ಲ, ಬೆಳೆಗಳು ಹುಲುಸಾಗುತ್ತವೆ.ಒಣಗಿದ ಕಾಡು, ಸುಳ್ಳು,ಕೊಲೆ ಪಾತಕಾದಿಗಳು ಇರುವುದಿಲ್ಲ.ಸೊಂಪಿನ ನಾಡು,ಲಕ್ಷ್ಮಿಯ ಬೀಡು ಪಾಂಡವರಿದ್ದ ನೆಲೆ.

ದ್ರೋಣರ ಅಭಿಪ್ರಾಯ ಕೇಳಿ:

'ಅತ್ತ ಹಿಮಗಿರಿ ಮೇಲೆ,
ಭಾವಿಸಲಿತ್ತ ಮೂರು ಸಮುದ್ರ
ಗಡಿಯಿಂದಿತ್ತ ನಾನಾ ದೇಶವೆಂಬಿವು
ಬರದ ಬೇಗೆಯಲಿ ಹೊತ್ತಿ ಹೊಗೆದವು
ಮಧ್ಯ ದೇಶದಲುತ್ತಮದ ಸಿರಿ,ಫಲದ ಬೆಳಸುಗಳ ಒತ್ತೆ,
ಇದು ಪಾಂಡವರ ಚಾವಡಿ ಎಂದನಾ ದ್ರೋಣ'

ಮೇಲೆ ಹಿಮಾಲಯ;ಮೂರೂದಿಕ್ಕಿನಲ್ಲಿ ಸಮುದ್ರ. ಈ ನಡುವಿನ ಎಲ್ಲಾ ದೇಶಗಳು ಬರದ ಬೇಗೆಯಲ್ಲಿರುವಾಗ ಮಧ್ಯ ದೇಶದಲ್ಲಿ(ವಿರಾಟ ರಾಜ್ಯ) ಒಳ್ಳೆಯ ಮಳೆ, ಬೆಲೆ ಸಿರಿ ಸಂಪದ! ಇದು ಪಾಂಡವರ ಚಾವಡಿಯೇ ಸರಿ. ಅನುಮಾನವಿಲ್ಲ.

ಕರ್ಣನೂ ಹೇಳಿದ;' ಅಲ್ಲಿ ಪಾಂಡದವರಿಹರು ಸಂಶಯವಿಲ್ಲ; ದೇಶದ ಸೊಂಪು ಸಿರಿ ಮತ್ತೆಲ್ಲೂ ಹಿರಿದಿಲ್ಲ; ನಿಶ್ಚಯ'

ಪಾಂಡವರ ಧರ್ಮನಿಷ್ಠೆ, ಅದರಿಂದ ಮಳೆ,ಬೆಳೆ' ಹುಲುಸಾದ ಫಸಲು ,ಶತ್ರುಗಳಿಂದಲೂ ಪ್ರಶಂಸೆಗೆ ಪಾತ್ರವಾದರೆ, ಧರ್ಮರಾಯನ ಗೋಪ್ರೀತಿ, ಕರುಗಳು ಹಾಲು ಕುಡಿಯದೆ ನೀರನ್ನೂ ಸಹ ಸೇವಿಸದ ನಡೆ ಎಲ್ಲರಿಗೂ ತಿಳಿದದ್ದೇ. ಅದರಿಂದಲೇ ಗೋವುಗಳನ್ನು ಅಪಹರಿಸಿದರೆ ಪಾಂಡವರು ಸುಮ್ಮನೇ ಕೂರಲಾರರು ಎಂಬುದು ದುರ್ಯೋಧನನ ಲೆಕ್ಕಾಚಾರ!

ತಮ್ಮ ಅಜ್ಞಾತ ಇರವಿನಿಂದ ವಿರಾಟ ದೇಶವನ್ನು ಸುಭಿಕ್ಷವನ್ನಾಗಿಸಿದ ಪಾಂಡವರ ಒಂದು ವರ್ಷದ ಚರಿತದ ಪಠಣ,
ನಮ್ಮ ಪರಿಸರದಲ್ಲೂ ಮಳೆ, ಬೆಳೆ, ಸಮೃದ್ಧಿ ನೀಡಲಾರದೆ? ಎಂಬ ಹಿತವಾದ ಸಾತ್ವಿಕ ನಂಬುಗೆ ವಿರಾಟ ಪರ್ವದ ಪಾರಾಯಣದ ಹಿಂದಿನ ಪ್ರೇರಣೆ ಇರಬಹುದಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೨೮/೯/೨೦೧೬
#

Wednesday, September 28, 2016

ಐಸಲೇ ಕುಮಾರವ್ಯಾಸ!! -೩೪-

ವಿರಾಟ ಪ ೫-೨೦

' ಕುಣಿಸಿ ನಗನೇ?......'

ಕಾವ್ಯದ ಆರಂಭದಲ್ಲಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾ 'ಕುಣಿಸಿ ನಗನೇ ಕವಿ ಕುಮಾರವ್ಯಾಸ ಉಳಿದವರ' ಎಂದಿದ್ದಾನೆ. ಅದು ಆತ್ಮ ಪ್ರಶಂಸೆಗಾಗಿ ಅಲ್ಲ; ಆತ್ಮ ವಿಶ್ವಾಸದಿಂದ. ಕಾವ್ಯದ ಒಳಗೆ ಕುಮಾರವ್ಯಾಸ ಕುಣಿಸಿ ನಗಿಸುವ, ಹಿತವಾದ ಹಾಸ್ಯ-ವ್ಯಂಗ್ಯದಿಂದ 'ಐಸಲೇ' ಎನಿಸುವ ಹಲವು ಪ್ರಸಂಗಗಳಿವೆ.ಅದರಲ್ಲಿ ಇದೂ ಒಂದು!

'ಆರೊಡನೆ ಕಾದುವೆನು?
ಕೆಲಬರು ಹಾರುವರು
ಕೆಲರಂತಕನ ನೆರೆಯೂರವರು
ಕೆಲರಧಮ ಕುಲದಲಿ ಜನಿಸಿ ಬಂದವರು
ವೀರರೆಂಬವರಿವರು ಮೇಣಿನ್ನಾರ ಹೆಸರುಂಟು?
ಅವರೊಳೆಂದು ಕುಮಾರ
ನೆಣಗೊಬ್ಬಿನಲಿ ನುಡಿದನು
ಹೆಂಗಳಿದಿರಿನಲಿ'

ಪಾಂಡವರನ್ನು ಅಜ್ಞಾತ ವಾಸದ ಅವಧಿಯೊಳಗೇ ಪತ್ತೆಮಾಡುವ ಉದ್ದೇಶದಿಂದ ಕೌರವರ ಸೇನೆ ವಿರಾಟನ ಗೋವುಗಳನ್ನು ಅಪಹರಿಸಿದೆ. ಯುದ್ಧಕ್ಕೆ ಹೋಗದೆ ಅರಮನೆಯಲ್ಲಿ ಉಳಿದಿದ್ದು ಓಲಗ  ನಡೆಸುತ್ತಿರುವ ವೀರ ಉತ್ತರನಿಗೆ ದೂತರು ಸುದ್ದಿ ಮುಟ್ಟಿಸುತ್ತಾರೆ.

ಗೋವುಗಳನ್ನು ಅಪಹರಿಸಿದ ಕೌರವರನ್ನು ಯಾವ ವೀರನಿಗೂ ಕಡಿಮೆಯಿಲ್ಲದಂತೆ  ತಿರಸ್ಕಾರದಿಂದ ಹಂಗಿಸುತ್ತ ತನ್ನ ಸುರಕ್ಷಿತ ಓಲಗದಲ್ಲಿ ಬಡಬಡಿಸುವ ರೀತಿಯನ್ನು ನೋಡಿ:

. ಕೌರವ ತನ್ನನ್ನು ಯಾರೆಂದು ತಿಳಿದಿದ್ದಾನೆ? ಬಡ ಯುಧಿಷ್ಠಿರನೆಂದು ಬಗೆದನೇ?  ಯಮನ ಮೀಸೆಯನ್ನು ಮುಟ್ಟುವ ಸಾಹಸವೇ ದುರ್ಯೋಧನನಿಗೆ?ಭೈರವನ ದವಡೆಯನ್ನು ಅಲುಗಿಸಿದನೆ? ಕೇಸರಿಯನ್ನು ಕೆಣಕಿದನೇನು? ಒಟ್ಟಿನಲ್ಲಿ ಕೌರವ ಯಾರದೋ ಮಾತು ಕೇಳಿ ತನ್ನನ್ನು ಕೆಣಕಿ ಮರುಳಾದ!

ಅಷ್ಟಕ್ಕೇ ನಿಲ್ಲಿಸಿದನೆ? ಕೌರವ ವೀರರನ್ನು ತನ್ನ ಸಮಕ್ಕೆ ತೂಗಿ ನೋಡಿದ!

'ನಾನು ಯಾರೊಡನೆ ಕಾದಾಡಲಿ? ಸಮಬಲರು ಯಾರಾದರೂ ಇದ್ದಾರೆಯೇ? ಇಲ್ಲ. ಕೆಲವರು ಹಾರುವರು (ಬ್ರಾಹ್ಮಣರು-ದ್ರೋಣ,ಕೃಪ,ಅಶ್ವತ್ಥಾಮ ಇತ್ಯಾದಿ)ಅವರೊಡನೆ ಏನು ಕಾದುವುದು? ಕೆಲವರು ಈಗಾಗಲೇ ಯಮಪುರಿಯ  ಹತ್ತಿರದ ಊರಿನಲ್ಲಿದ್ದಾರೆ!( ಭೀಷ್ಮ ಮೊದಲಾದ ವೃದ್ಧರು) ಅವರನ್ನು ಕೊಲ್ಲುವುದು ಅತಿಶಯವೇ? ಕೆಲವರು ಹೀನ ಕುಲದಲ್ಲಿ ಹುಟ್ಟಿದವರು ((ಕರ್ಣ ಮೊದಲಾದವರು)
ದುರ್ಯೋಧನನ ಕಡೆಯ ವೀರರ ಪಟ್ಟಿ ಇಷ್ಟೇ! ಇನ್ಯಾರಿದ್ದಾರೆ ಹೇಳಿ ? ಇಂಥವರನ್ನು ಕೂಡಿಕೊಂಡು ತನ್ನನ್ನು ಎದುರಿಸಲು ಬಂದ ದುರ್ಯೋಧನ ಮೂರ್ಖನಲ್ಲದೆ  ಮತ್ತ್ಯಾರು?'
ಕುಮಾರವ್ಯಾಸ ಒಂದು ಮಾತನ್ನೂ ಸೇರಿಸುತ್ತಾನೆ; ಸುಕುಮಾರನಾದ ಉತ್ತರಕುಮಾರ  ನೆಣಗೊಬ್ಬಿನಲ್ಲಿ(ಹೆಚ್ಚಿದ ಕೊಬ್ಬು!) ನುಡಿದನಂತೆ,ಎಲ್ಲಿ? ಹೆಂಗಳೆಯರ ಎದುರಿನಲ್ಲಿ!

'ಹಾರುವರು,ಅಂತಕನ ನೆರೆಯೂರವರು' ಕವಿಯ ಟಂಕಸಾಲೆಯಲ್ಲಿ ವಿಶೇಷವಾಗಿ ಮುದ್ರಿತವಾದ ನಾಣ್ಯಗಳು!

ಕುಮಾರವ್ಯಾಸ ಪ್ರತಿಷ್ಠಾನ
೨೭/೯/೨೦೧೬

#

Saturday, September 24, 2016

ಐಸಲೇ ಕುಮಾರವ್ಯಾಸ!! -೩೩-

ದ್ರೋಣ ಪ ೬-೬೧

'ಅರಸುಗಳಿಗಿದು ವೀರ..,'

ಒಂದು ದಿನದ ಯುದ್ಧದಲ್ಲಿ ಇಡೀ ಕೌರವ ಸೇನೆಯ ಮಹಾರಥರು ಕಂಗೆಟ್ಟು ಹೋಗುವಂತೆ ಮಾಡಿದ ಅಭಿಮನ್ಯುವನ್ನು ಮಣಿಸಲು ದ್ರೋಣರಾದಿಯಾಗಿ ಎಲ್ಲರೂ ಅಧರ್ಮಯುದ್ಧವನ್ನು ಆಶ್ರಯಿಸಬೇಕಾಗುತ್ತದೆ
.
'ರೂಪುದೋರದೆ ಬಂದು' ಕರ್ಣ ಮೊದಲು  ಬಿಲ್ಲನ್ನು ಕತ್ತರಿಸುತ್ತಾನೆ. ಅನಂತರ ಕತ್ತಿಯಿಂದ, ಅದು ಮುರಿದ ಮೇಲೆ ಗದೆಯಿಂದ  ಹೋರಾಡುವ ಅಭಿಮನ್ಯುವಿನ ಕೈಗಳನ್ನು ಕತ್ತರಿಸುತ್ತಾನೆ; ಇಂಥಾ ಸ್ಥಿತಿಯಲ್ಲಿ ಎಲ್ಲಾ ಮಹಾರಾಥರೂ ಅವನ ಮೇಲೆ ಮುಗಿ ಬೀಳುತ್ತಾರೆ.

ಮುಂಗೈಗೆ ರಥದ ಗಾಲಿಯೊಂದನ್ನು ಸೇರಿಸಿಕೊಂಡು ಎಲ್ಲರಮೇಲೆ ಎರಗಿ ಹೋದ ಕುಮಾರನನ್ನು ದುಶ್ಶಾಸನನ ಮಗ ಕತ್ತಿಯಿಂದ ತಿವಿದು ಕೊಲ್ಲುತ್ತಾನೆ ಅಲ್ಲದೆ ಸಾಯುವಾಗ ಸಹ ಛಲ ಬಿಡದೆ ದುಶ್ಶಾಸನನ ಮಗನನ್ನೂ  ಬಲಿ ತೆಗೆದುಕೊಂಡು ಭೂಮಿಗೆ ಒರಗುತ್ತಾನೆ.

ಕವಿ ಹೇಳುತ್ತಾನೆ,ಅಡವಿಯಲ್ಲಿ ಹೊತ್ತಿದ ಕಿಚ್ಚು ಎಲ್ಲವನ್ನೂ ದಹಿಸಿ ತಗ್ಗುತ್ತದೆಯಲ್ಲ?ಹಾಗೆ; ಮೋಡಗಳನ್ನ ತರಗೆಲೆಯಂತೆ ಅಟ್ಟಾಡಿಸಿದ ಸುಂಟರಗಾಳಿ ತಗ್ಗಿದ ಹಾಗೆ, 'ಸುರಪಾಲ ತನಯನ ತನಯ ಅಸ್ತಮಿಸಿದನು ರಣದೊಳಗೆ!'

ಕವಿಗಷ್ಟೇ ಅಲ್ಲ ನಮಗೂ ಅನ್ನಿಸುತ್ತದೆ; 'ಹಲವು ಗಜಗಳು ಸಿಂಹ ಶಿಶುವನು ಗೆಲಿದಂತಾಯ್ತು'.

ರಣಾಂಗಣದಲ್ಲಿ ಅಂತಿಮವಾಗಿ ನೆಲಕ್ಕೊರಗಿದ ಅಭಿಮನ್ಯುವಿಗೆ ಕುಮಾರವ್ಯಾಸ ಪದ್ಯದ ಮೂಲಕ ಕೊಡುವ ಪರಮವೀರ ಪ್ರಶಸ್ತಿಯನ್ನು ನೋಡಿ;

'ತೋಳ ತಲೆದಿಂಬಿನಲಿ,
ಕೈದುಗಳೋಳಿಗಳ ಹಾಸಿನಲಿ,
ತನ್ನಯ ಕಾಲ ದೆಸೆಯಲಿ ಕೆಡೆದ ಕೌರವತನಯ ನೂರ್ವರಲಿ,
ಬಾಲಕನು ಬಳಲಿದನು,
ಸಮರದ ಲೀಲೆಯಲಿ ಕುಣಿಕುಣಿದು
ಆಳುಗಳ ದೇವನು ಮಹಾಹವದೊಳಗೆ ಪವಡಿಸಿದ"

ಅಭಿಮನ್ಯು ಗತಿಸಿದ ಎನ್ನಲು ಕುಮಾರವ್ಯಾಸನಿಗೆ ಬಾಯಿ ಬರುತ್ತಿಲ್ಲ. ದಿನವೆಲ್ಲಾ  ಕುಣಿದು ದಣಿದ ಮಗುವೊಂದು ಮಲಗಿದ ಹಾಗೆ ಪವಡಿಸಿದ್ದಾನಂತೆ!
ತೋಳನ್ನೇ ತಲೆದಿಂಬು ಮಾಡಿಕೊಂಡು,ಆಯುಧಗಳ ಹಾಸಿಗೆಯ ಮೇಲೆ ವೀರರಲ್ಲಿ  ಮೊದಲಿಗ  ಪವಡಿಸಿದ್ದಾನೆ. ಅಪ್ರತಿಮ ಹೋರಾಟಕ್ಕೆ ಅವನಿಗೆ ದೊರೆತ ಪ್ರಶಸ್ತಿಯ ದ್ಯೋತಕ  ಅವನ ಕಾಲ ಬಳಿ  ಇದೆ. ಏನದು? ಸತ್ತು ಬಿದ್ದಿರುವ ದುರ್ಯೋಧನನ ನೂರು ಜನ ಮಕ್ಕಳು!

ಕುಮಾರವ್ಯಾಸಸಾಗರದ ಮುತ್ತುಗಳಲ್ಲೊಂದು!

ಕುಮಾರವ್ಯಾಸ ಪ್ರತಿಷ್ಠಾನ
೨೫/೯/೨೦೧೬
#


Monday, September 19, 2016

ಐಸಲೇಕುಮಾರವ್ಯಾಸ!! -೩೨-

ದ್ರೋಣ ಪ ೬-೩೧

'ವಿದ್ಯಾ ಪರಿಣತರಲಂಕಾರ..,'

ಅಭಿಮನ್ಯು ಯುದ್ಧ ಪ್ರಸಂಗದಲ್ಲಿ ಉತ್ತಮ ಕಾವ್ಯ ಮಡುಗಟ್ಟಿ ನಿಂತಿದೆ .ಇನ್ನೆರಡು ಪದ್ಯಗಳನ್ನು ಸವಿಯದೆ ಇರುವುದು ಸಾಧ್ಯವೇ ಇಲ್ಲ.ಅದರಲ್ಲಿ ಒಂದು ಇದು:

'ದಳವು ದಳವುಳವಾಯ್ತು
ಕೇಸರದೊಳಗೆ ವಿಸಟಂಬರಿದು
ಕರ್ಣಿಕೆಯೊಳಗೆ ರಿಂಗಣಗುಣಿದು
ಸಂಗರಜಯದ ಮಡುವಿನಲಿ ಸಲೆ ಸೊಗಸಿ
ತನಿ ಸೊಕ್ಕಿ ಪಟದುಳಿದು
ಸೌಭದ್ರೇಯ ಭೃಂಗನ
ಬಿಲುದನಿಯ ಭರವಂಜಿಸಿತು
ಜಯ ಯುವತಿ ವಿರಹಿಗಳ'

ಈ ಪದ್ಯದಲ್ಲಿ ಕವಿ ಪದ್ಮ ವ್ಯೂಹಕ್ಕೂ,ಪದ್ಮಕ್ಕೂ(ತಾವರೆ) ಸಮತ್ವ ಕಲ್ಪಿಸಿದ್ದಾನೆ.ಅಭಿಮನ್ಯುವನ್ನು ಒಂದು ಉನ್ಮತ್ತ, ಪ್ರಬಲ ದುಂಬಿಗೆ  ಹೋಲಿಸಿ ರೂಪಕವನ್ನು ನಿರ್ಮಾಣ ಮಾಡಿದ್ದಾನೆ! 'ಸೌಭದ್ರೇಯ ಭೃಂಗ' ಅಂದರೆ ಸುಭದ್ರೆಯ ಮಗನೆಂಬ ದುಂಬಿ'( ಬಲಶಾಲಿಯಾದ ದುಂಬಿ ಎಂಬ ಸೂಚನೆ ಸಹಾ)

ಅರಳಿದ ಕಮಲಕ್ಕೆ ಜಯದ ಮಕರಂದಕ್ಕಾಗಿ ದಾಳಿಮಾಡಿದ ಈ ಉತ್ಸಾಹ ಭರಿತ ದುಂಬಿ ಮೊದಲು ದಳಗಳನ್ನು ಸೂರೆ ಮಾಡಿತು; ಅನಂತರ ಹೂವಿನ ಕೇಸರಕ್ಕೆ ನುಗ್ಗಿ  ಮನಸೋ ಇಚ್ಛೆ ಹರಿದಾಡಿತು; ಕರ್ಣಿಕೆಯನ್ನು ಪ್ರವೇಶಿಸಿ ರುದ್ರನರ್ತನ ಮಾಡಿತು; ಹೂವಿನ ಮದ್ಯದ ಮಡುವಿನಲ್ಲಿ ಮಕರಂದವನ್ನು ಹೀರಿ, ಉನ್ಮತ್ತ ಸ್ಥಿತಿಗೇರಿ, ತೊತ್ತಳ ತುಳಿಯಿತು'

ದಳ,ಕೇಸರ, ಕರ್ಣಿಕೆ, ಈ ಅಂಗಗಳು ಪದ್ಮಕ್ಕೂ,ಪದ್ಮವ್ಯೂಹಕ್ಕೂ ಒಪ್ಪುವಂಥವು.

ದುಂಬಿಯ ಧ್ವನಿಯ ಗುಂಜಾರವ ವಿರಹಿಗಳಿಗೆ ಪೀಡೆ ಎನಿಸಿದ ಹಾಗೆ,ಅಭಿಮನ್ಯುವಿನ ಬಿಲ್ಲಿನ ದನಿ ವಿಜಯಶ್ರೀಯ ವಿರಹಿಗಳಾದ ವೀರರನ್ನು ನಡುಗಿಸಿತು!

ದ್ರೋಣಾಚಾರ್ಯರ ಪದ್ಮವ್ಯೂಹದ ರಚನೆ ಈ ಬಾಲಕನಿಂದ ಜರ್ಝರಿತವಾದದ್ದನ್ನು ಕವಿ ತನ್ನ ರೂಪಕ ಶಕ್ತಿಯಿಂದ  ಅದ್ಭುತವಾಗಿ ಚಿತ್ರಿಸಿದ್ದಾನೆ.

ಕುಮಾರವ್ಯಾಸನಿಗೆ 'ರೂಪಕ ಸಾಮ್ರಾಜ್ಯದ ಚಕ್ರವರ್ತಿ' ಎನ್ನುತ್ತಾರೆ ವಿಧ್ವಾಂಸರು. ಅವನ ಸುಂದರ ರೂಪಕಗಳಲ್ಲಿ ಇದು ಸಹಾ ಒಂದು ಎನ್ನಲಡ್ಡಿಯಿಲ್ಲ!

Sunday, September 18, 2016

ಐಸಲೇ ಕುಮಾರವ್ಯಾಸ!! -೩೧-

ದ್ರೋಣ ಪ ೬-೨೫

'ಅರಸುಗಳಿಗಿದು ವೀರ..,'

ಅಭಿಮನ್ಯುವಿನ ಪರಾಕ್ರಮ ಹೆಚ್ಚುತ್ತಾ ಹೋಗುತ್ತದೆ!

ಮಹಾರಥರನ್ನು ಮೂದಲಿಸಿ ಕೆರಳಿಸುತ್ತಾನೆ. ಕೆರಳಿದವರು ಮೇಲೇರಿ ಬಂದರೆ ಮೈಮರೆಯುವಂತೆ ಘಾತಿಸುತ್ತಾನೆ!

ಅಷ್ಟೇ ಅಲ್ಲ,ಅನೇಕ ವೀರರು, ಅಣ್ಣನನ್ನು ಕಾಪಾಡಬಂದ ಶಲ್ಯನ ತಮ್ಮ,ಶಲ್ಯನ ಮಗ, ಕರ್ಣನ ಮಗ, ಲಕ್ಷಣಕುಮಾರನಾದಿಯಾಗಿ ದುರ್ಯೋಧನನ ನೂರು ಮಕ್ಕಳು,ಅಭಿಮನ್ಯುವಿನ ಬಾಣಗಳಿಗೆ ಆಹುತಿಯಾಗುತ್ತಾರೆ!

ದ್ರೋಣ,ಕರ್ಣರಾದಿಯಾಗಿ ಮಹಾರಥರು ಒಟ್ಟಾಗಿ ಅಭಿಮನ್ಯುವಿನ ಮೇಲೆ ಬಿದ್ದರೂ ಘಾಸಿಗೊಂಡು ಸರಿಯಬೇಕಾಗುತ್ತದೆ.
ಆದರೆ ಮತ್ತೊಂದು ಬದಿಯಲ್ಲಿ ಕುಮಾರನ ಪರಾಕ್ರಮವನ್ನು ಹೊಗಳುತ್ತಾ ತನ್ನ ಕಡೆಯ ವೀರರನ್ನು ಅಣಕಿಸುತ್ತಾ ಸ್ವತಃ ದುರ್ಯೋಧನನೇ ನಿಂತಿದ್ದಾನೆ!

ಮಹಾರಥರ ಉಭಯ ಸಂಕಟವನ್ನು, ಅವರ ಗೊಣಗಾಟವನ್ನು ಕುಮಾರವ್ಯಾಸ ತಿಳಿ ಹಾಸ್ಯದೊಂದಿಗೆ ಸಮರ್ಥವಾಗಿ ಹಿಡಿದಿಟ್ಟಿದ್ದಾನೆ ಈ ಪದ್ಯದಲ್ಲಿ;

'ಇದಿರೊಳೀಶನ ಭಾಳ ನಯನದ ಕದವು ತೆಗೆದಿದೆ,
ಹಿಂದೆ ಮರಳುವೊಡಿದೆ ಕೃತಾಂತನ ಕೊಂತ,
ಅರಸನ ಮೂದಲೆಯ ವಚನ
ಅದಟು ಕೊಳ್ಳದು,
ರಾಜಸೇವೆಯ ಪದವಿ ಪಾತಕ ಫಲವೆನುತ
ನೂಕಿದರು ರಥವನು ಹಳಿವು ದರ್ಪದ ಹೇವ ಮಾರಿಗಳು'

'ಅಯ್ಯೋ! ಎದುರಿಗೆ ಮಹಾರುದ್ರನ  ಹಣೆಯ ಕಣ್ಣಿನ ಬಾಗಿಲು ತೆರೆದಿದೆ( ಅಭಿಮನ್ಯುವಿನ ಬಾಣಗಳ ಆಘಾತ!), ಹಿಂದಕ್ಕೆ ತೊಲಗಿ ರಣಾಂಗಣದಿಂದ ಓಡಿ ಜೀವ ಉಳಿಸಿಕೊಳ್ಳೋಣ ಎಂದರೆಸ್ವತಃ ಯಮನೇ ದಂಡ ಹಿಡಿದು ನಿಂತ ಹಾಗೆ ದುರ್ಯೋಧನ ನಿಂತು ಮೂದಲಿಸುತ್ತಿದ್ದಾನೆ!
ಹೋರಾಡಲು ಶಕ್ತಿ ಸಾಲುತ್ತಿಲ್ಲ; ಛೀ.., ರಾಜರ ಸೇವೆ ಮಾಡುವ ಕರ್ಮ  ಪೂರ್ವ ಜನ್ಮದ ಯಾವುದೋ ಪಾಪದ ಫಲ; ಎಂದು ಶಪಿಸುತ್ತಾ ವಿಧಿಯಿಲ್ಲದೇ ರಥಗಳನ್ನು ಅಭಿಮನ್ಯುವಿಗೆ ಎದುರಾಗಿ ನೂಕಿದರು. ಯಾರು? ಅಪಕೀರ್ತಿ,ದರ್ಪ, ನಾಚಿಕೆ ಇವುಗಳನ್ನು ಅರಸನಿಗೆ ಮಾರಿಕೊಂಡ ಮಹಾರಥರು!'

ಒಂದೊಂದು ಭಾವಕ್ಕೂ ಕವಿ ಬಳಸುವ ಕನ್ನಡ ಶಬ್ದಗಳನ್ನು  ಗಮನಿಸಿ, ನಮ್ಮ ಭಾಷೆ ಎಷ್ಟು ಸಮರ್ಥವಾದದ್ದು ಅನ್ನುವುದು ಗೊತ್ತಾಗುತ್ತದೆ.
ಇಂಥಾ ಸಾಹಿತ್ಯದಿಂದ ತಾನೇ ಭಾಷೆಗೂ ಶ್ರೇಷ್ಠತೆ?

ಕುಮಾರವ್ಯಾಸ ಪ್ರತಿಷ್ಠಾನ
೧೬/೦೯/೨೦೧೬
#







Thursday, September 15, 2016

ಐಸಲೇ ಕುಮಾರವ್ಯಾಸ!! -೩೦-

'ಅರಸುಗಳಿಗಿದು ವೀರ..'

ದ್ರೋಣ ಪ ೫-೨೨

ಅಭಿಮನ್ಯು ಶೀಘ್ರಯೋಧಿ! ಅಂದರೆ ತೀವ್ರ ಆಕ್ರಮಣಕಾರಿ ಯೋಧ!

ಪದ್ಮವ್ಯೂಹವನ್ನು ಎದುರಿಸಲು ಬಂದವರ್ಯಾರುಎಂದು ಕೌರವ ಸೇನೆಯ ನಾಯಕರು ತಿಳಿಯುವಷ್ಟರಲ್ಲೇ ಅವನು ವ್ಯೂಹದ ಬಾಗಿಲ ಕಾವಲಿನ ವೀರರನ್ನು ಸದೆದು ದಾರಿಮಾಡಿಕೊಂಡು  ಒಳಗೆ ನುಗ್ಗಿ ಆಗಿತ್ತು! ಅವನ ವೇಗವನ್ನು ಅರಿಯಲು, ಅರಗಿಸಿಕೊಳ್ಳಲು ಕೌರವರಿಗೆ ಕೊನೆಯವರೆಗೂ ಸಾಧ್ಯವಾಗಲಿಲ್ಲ ಎಂದರೂ ತಪ್ಪಿಲ್ಲ.

ಪದ್ಮವ್ಯೂಹ ಕಮಲದ ಆಕೃತಿಯನ್ನೇ ಹೋಲುವ ರಚನೆ. ಹೇಗೆ ತಾವರೆಯಲ್ಲಿ ಮೊದಲು ದಳಗಳು ಒಂದರ ಹಿಂದೆ  ಒಂದು, ಅನಂತರ ಕೇಸರ, ಅನಂತರ ಕರ್ಣಿಕೆ, ಅನಂತರ ' ಮಧುವಿರುವ ಕೇಂದ್ರ ಇದ್ದ ಹಾಗೆ ; ಮೊದಲು ಅಶ್ವಪಡೆ,ಅದರ ಹಿಂದೆ ಆನೆಗಳು, ಅದಕ್ಕೆ ಒತ್ತಾಗಿ ರಥ ಪಡೆ, ಅದಕ್ಕೆ ತಾಗಿ ರಣಧೀರರು!

ಅಭಿಮನ್ಯುವಿನ ರಣತಾಂಡವವನ್ನುಓದಿಯೇ ಅನುಭವಿಸಬೇಕು.

ಅವನ ಲಾಗು ವೇಗವನ್ನು ತಡೆಯಲಾಗದೆ ಕೌರವಸೇನೆಯಲ್ಲಿ ಅಲ್ಲೋಲ ಕಲ್ಲೋಲವಾಯಿತು. 'ಕದಳೀವನಕ್ಕೆ ಮದದಾನೆ ಹೊಕ್ಕಂದದಲಿ';ನುಗ್ಗಿದ. 'ಕೊಚ್ಚಿದನು ಕೌರವ ಚತುರ್ಬಲವ'. ಕೆಲವರು ರಥದಿಂದ ಧುಮುಕಿ ಓಡಿದರು;ಕುದುರೆಯಿಂದ ಇಳಿದು ಕೈ ಮುಗಿದು ನನ್ನನ್ನು ಉಳಿಸು ಎಂದು ಬೇಡಿದರು; ದಳದ ಭಾಗದ ವೀರರು ಉಸಿರನ್ನು ತೊರೆದರು,ಕೇಸರಾಕೃತಿಯಲ್ಲಿದ್ದ ವೀರರು 'ಪಥಿಕರಾದರು ಗಗನ ಮಾರ್ಗದಲಿ( ಆಗಸದಲ್ಲಿ ಪ್ರಯಾಣ ಮಾಡಿದರು-ಸ್ವರ್ಗಕ್ಕೆ!); 'ಕರ್ಣಿಕೆ'ಯ ಭಾಗದ ದೊರೆಗಳು ಎಲ್ಲಿ ನುಸುಳಿದರೋ ಗೊತ್ತೇ ಆಗಲಿಲ್ಲ; ಒಟ್ಟಿನಲ್ಲಿ ಕವಿ ಹೇಳುತ್ತಾನೆ, ಅಭಿಮನ್ಯುವಿನ ಆಕ್ರಮಣಕ್ಕೆ ದ್ರೋಣರ ಹೆಮ್ಮೆಯ ತಂತ್ರ ವಿಫಲವಾಗಿ 'ಜರಿದುದಬ್ಜವ್ಯೂಹ' (ಪದ್ಮವ್ಯೂಹ ಕುಸಿಯಿತು)

ಅವನನ್ನು ಎದುರಿಸಿದ ಮಹಾರಥರ ಪಾಡು? ಕುಮಾರವ್ಯಾಸ ಹೇಳುತ್ತಾನೆ ಕೇಳಿ;

'ಗನ್ನದಲಿ ಗುರು ಜಾರಿದನು,
ಕೃಪ ಮುನ್ನವೇ ಹಿಂಗಿದನು,
ಕರ್ಣನನಿನ್ನು ಕಂಡವರ್ಯಾರು?
ಮೂರ್ಛೆಗೆ ಮೂರು ಬಾರಿಯಿದು,
ಬೆನ್ನ ತೆತ್ತರು ಬಿರುದರಾತಗೆ,
ಕೆನ್ನೆಯೆಡೆಗೆ ಉಗಿದಂಬು ಸಹಿತವೆ
ನಿನ್ನ ಮಗ ಅರನೆಲೆಗೆ ಸರಿದನು
ಭೂಪ ಕೇಳೆಂದ'

'ಉಪಾಯವಾಗಿ ದಳಪತಿಯಾದ  ದ್ರೋಣಾಚಾರ್ಯರು ಅವನೆದುರಿನಿಂದ ಜಾರಿಕೊಂಡರು; ಮಹಾ ಪರಾಕ್ರಮಿ ಕೃಪಾಚಾರ್ಯರೋ? ಅವರು ದ್ರೋಣರಿಗಿಂತ ಮೊದಲೇ ಪಲಾಯನ ಮಾಡಿ ಆಗಿತ್ತು! ಕರ್ಣನನ್ನು ಯಾರಾದರೂ ಕಂಡಿರೇನು? ಇಗೋ ಇಲ್ಲಿ! ಮೂರನೆಯ ಬಾರಿ ಮೂರ್ಛೆಯಿಂದ ಇದೀಗ ಎಚ್ಚರಗೊಂಡ! ಪಾಪ, ಯುದ್ಧ ಭಯಂಕರರೆಂಬ ಬಿರುದು ಹೊತ್ತ ವೀರರೆಲ್ಲ ಅಭಿಮನ್ಯುವಿಗೆ ಬೆನ್ನು ತೋರಿಸಿದರು!

ಅರಸ ದುರ್ಯೋಧನ? ಅಲ್ಲಿ ನೋಡಿ, ಕೆನ್ನೆಗೆ ಚುಚ್ಚಿಕೊಂಡಿರುವ ಬಾಣವನ್ನೂ ಲೆಕ್ಕಿಸದೆ 'ಅರನೆಲೆಯ'(ರಾಜನಿಗಾಗಿ ಇರುವ ಸಂರಕ್ಷಿತ ಸ್ಥಳ) ಕಡೆಗೆ ಓಡುತ್ತಿದ್ದಾನೆ!'

ಒಂದೇ ಪದ್ಯ ಸಾಕಲ್ಲವೇ? ಅಭಿಮನ್ಯುವಿನ ಯುದ್ಧ ಸಾಮರ್ಥ್ಯ ಹಾಗೂ ಕುಮಾರವ್ಯಾಸನ ಕಥನ ಸಾಮರ್ಥ್ಯಕ್ಕೆ?

ಕುಮಾರವ್ಯಾಸ ಪ್ರತಿಷ್ಠಾನ

೧೫/೦೯/೨೦೧೬

#

Wednesday, September 14, 2016

ಐಸಲೇ ಕುಮಾರವ್ಯಾಸ!! -೨೯-

'ವಿದ್ಯಾ ಪರಿಣತರಲಂಕಾರ..,'

ದ್ರೋಣ ಪ ೫-೫೮

ಪಾಂಡವರ ಅನುಮತಿ ಸಿಕ್ಕೊಡನೆಯೇ ಅಭಿಮನ್ಯುವಿನ ರಥ ಪಾಳಯದಿಂದ ಯುದ್ಧರಂಗಕ್ಕೆ ಚಿಮ್ಮಿತು!

ರಥದ ರಭಸ ಹೇಗಿತ್ತೆಂದರೆ ಒಂದು ಇಡೀ ಪದ್ಯದಲ್ಲಿ ಅದು ಎಬ್ಬಿಸಿದ ಧೂಳನ್ನು ಕವಿ ವರ್ಣಿಸುತ್ತಾನೆ. ಅದೂ ವಿಶಿಷ್ಟ ರೀತಿಯಲ್ಲಿ!

' ಸುರನದಿಗೆ ಶಿವನಾಯ್ತು,
ಮಕರಾಕರಕೆ ಕಳಶಜನಾಯ್ತು,
ತರಣಿಗೆ ಅರಿ ವಿಧುಂತುದನಾಯ್ತು
ರಥಪದ ತಳಿತ ಧೂಳಿಯಲಿ,
ಅರರೆ!
ಸತ್ವ ರಜಸ್ ತಮಂಗಳೋಳ್
ಎರಡು ಗುಣವಡಗಿದವು
ರಜೋಗುಣದುರುಳೆಯಾದುದು ಲೋಕ ಎನೆ
ಘಾಡಿಸಿತು ಪದಧೂಳಿ'

ಸಾಮಾನ್ಯ ವಿಚಾರವನ್ನೂ ಚಮತ್ಕಾರಿಕವಾಗಿ ಹೇಳಬಲ್ಲ ಕುಮಾರವ್ಯಾಸ ಇಂಥ ಅದ್ಭುತ ರಭಸವನ್ನು ಬಿಟ್ಟಾನೆಯೇ? ತುಸು ಉತ್ಪ್ರೇಕ್ಷೆ ಎನಿಸಿದರೂ ಮನೋಹರವಾಗಿರುವ ಈ ಹೋಲಿಕೆಯನ್ನು ಅರ್ಥೈಸಿಕೊಳ್ಳೋಣ!

'ರಥದ ರಭಸಕ್ಕೆ ಎದ್ದ ಧೂಳು ಸುರನದಿಯಾದ ಗಂಗೆಯನ್ನು ಮುಚ್ಚಿಹಾಕಿ ಶಿವನಂತೆ ರಾರಾಜಿಸಿತು!( ಶಿವ ಗಂಗೆಯನ್ನು ಜಟೆಯಲ್ಲಿ ಬಂಧಿಸಲಿಲ್ಲವೇ?); ಮಕರಾಕರವಾದ ಸಮುದ್ರವನ್ನು  ಅಗಸ್ತ್ಯ ಋಷಿಯಂತೆ ಆಪೋಶನ ತೆಗೆದು ಕೊಂಡಿತು! (ಮುಚ್ಚಿ ಹಾಕಿತು) ; ಸೂರ್ಯನಿಗೆ ರಾಹುವಾಯಿತು !( ಸೂರ್ಯನನ್ನು ಸಹಾ ಕಾಣದಂತೆ ನುಂಗಿ ಹಾಕಿತು);
ಅರರೆ! ( ಕುಮಾರವ್ಯಾಸನ ಉದ್ಗಾರ!) ಸತ್ವ, ರಜಸ್ಸು,ತಮಸ್ಸು ಎಂಬ ಮೂರು ಗುಣಗಳು ಲೋಕದಲ್ಲಿವೆ ಎಂದು ತಿಳಿದಿದ್ದೇವೆ ತಾನೇ? ಆದರಿಲ್ಲಿ ಸತ್ವ,ತಮ ಮರೆಯಾಗಿ ಕೇವಲ ರಜೋಗುಣವೊಂದರಿಂದಲೇ ಲೋಕವೆಲ್ಲಾ ತುಂಬಿ ಹೋಗಿದೆ ಏನಾಶ್ಚರ್ಯ!'

'ರಜ' ಶಬ್ದ ರಜೋಗುಣ ಮತ್ತು ಧೂಳು ಎರಡು ಅರ್ಥದಲ್ಲೂ ಬಳಕೆಯಾಗುತ್ತದೆ. ಇಲ್ಲಿ ತುಂಬಿರುವುದು ಧೂಳು. ಈ ಎರಡೂ ಅರ್ಥ ಸಾಧ್ಯತೆಯನ್ನು  ಚಮತ್ಕಾರಿಕವಾಗಿ ಬಳಸಿ ,ಲೋಕವೆಲ್ಲಾ ರಜೋಗುಣಮಯವಾಯ್ತು ಎಂದು ನುಡಿಯುತ್ತಾನೆ ಕವಿ!

ಪದ್ಯದ ಮೊದಲರ್ಧ ಒಂದು ರೀತಿಯ ಸೊಗಸು; ಉತ್ತರಾರ್ಧ ಮತ್ತೊಂದು ಸೊಗಸು!

ಕುಮಾರವ್ಯಾಸ ಪ್ರತಿಷ್ಠಾನ

೧೩/೯/೨೦೧೬
#





Monday, September 12, 2016

ಐಸಲೇ ಕುಮಾರವ್ಯಾಸ!! - ೨೮-

'ಅರಸುಗಳಿಗಿದು ವೀರ..,'

ದ್ರೋಣಪ ೫-೫೬

ಅಭಿಮನ್ಯುವಿನ ಸಾರಥಿಗೆ ಒಂದು ಸಣ್ಣ ಸಂದೇಹ!

'ಕುಮಾರ, ಕೊರಳಿನ ಶಕ್ತಿಯನ್ನು ತಿಳಿಯದೆ ಬೆಟ್ಟವನ್ನು ಹೊರಲು ಮುಂದಾಗಬಹುದೇ? ಕರ್ಣ, ಕೃಪ, ದ್ರೋಣ ,ಜಯದ್ರಥ ಇವರೆಲ್ಲ ಹರಕುಮಾರನಾದ ಷಣ್ಮುಖನನ್ನೂ ಮೀರಿಸುವಂಥವರು; ನೀನು ಗೆಲ್ಲುವುದು ಸಾಧ್ಯವೇ?' ಎಂದ.

ಅಭಿಮನ್ಯುವಿನ ಅತ್ಮವಿಶ್ವಾಸಭರಿತ ಉತ್ತರ ಈ ಅದ್ಭುತ ಸಾಲುಗಳಲ್ಲಿ;

'ಬವರವಾದರೆ ಹರನ ವದನಕೆ ಬೆವರ ತಹೆನು,
ಅವಗಡಿಸಿದರೆ ವಾಸವನ ಸದೆವೆನು,
ಹೊಕ್ಕಡೆ ಅಹುದೆನಿಸುವೇನು ಭಾರ್ಗವನ,
ಜವನ ಜವಗೆಡಿಸುವೆನು,
ಸಾಕಿನ್ನು  ಅವರಿವರಲೇನು?
ಅರ್ಜುನನು ಮಾಧವನು ಮುನಿದಡೆ ಗೆಲುವೆನು
ಅಂಜದೆ ರಥವ ಹರಿಸೆಂದ'

ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು ಎಂದು ಪ್ರಾರಂಭಿಸಿದ ಅಭಿಮನ್ಯು,ಯುದ್ಧ ವಿದ್ಯೆಯಲ್ಲಿ ಅಪ್ರತಿಮರೆನಿಸಿದವರ ಜತೆ ತನ್ನನ್ನು ಹೋಲಿಸಿಕೊಳ್ಳುತ್ತಾನೆ!
' ಪರಶಿವನ ಜತೆ ಯುದ್ಧ ಮಾಡಬೇಕಾಗಿ ಬಂದರೆ ಅವನ ಮುಖದಲ್ಲಿ ಬೆವರ ತರಿಸುತ್ತೇನೆ; ಇಂದ್ರ (ತನ್ನ ತಾತ!) ನನ್ನು ಸದೆಯಬಲ್ಲೆ; ಪರಶುರಾಮ ಎದುರಿಸಿ ನಿಂತರೆ ಅವನೂ ಹೌದು ಎನ್ನಬೇಕು; ಹಾಗೆ ಕಾದುತ್ತೇನೆ; ಮೃತ್ಯು ದೇವತೆಯಾದ ಯಮ? ಅವನು ದಿಕ್ಕು ತಪ್ಪುವಂತೆ ಮಾಡುತ್ತೇನೆ; ಅವರಿವರ ಮಾತು ಬಿಡು; ಸಾಕ್ಷಾತ್ ಮಾವನಾದ ಕೃಷ್ಣನಾಗಲಿ, ಅಥವಾ ತಂದೆಯಾದ ಅರ್ಜುನನೇ ಮುನಿದು ಎದುರಾದರೆ ಗೆಲ್ಲುವ ಸಾಮರ್ಥ್ಯಇದೆ; ನೀನು ಹೆದರದೆ ರಥವನ್ನು ನಡೆಸು'

ಎಂಥ ಆತ್ಮ ವಿಶ್ವಾಸ! ಎಚ್ಚರಿಕೆಯ ಆತ್ಮವಿಶ್ವಾಸ!

ಅವನು ಉದಾಹರಿಸಿದ ಒಬ್ಬೊಬ್ಬರೂ ಯುದ್ಧದಲ್ಲಿ , ಪರಾಕ್ರಮದಲ್ಲಿ ಮುಕುಟಪ್ರಾಯರಾದವರು. ಹರ ಯುದ್ಧಭಯಂಕರ! ಅವನನ್ನು ಗೆಲ್ಲುವ ಮಾತಾಡುವುದಿಲ್ಲ; ಬೆವರು ತರಿಸುತ್ತೇನೆ ಎನ್ನುತ್ತಾನೆ! ಇಂದ್ರ ಯಮರನ್ನು ಗೆಲ್ಲಬಲ್ಲೆ ಎನ್ನುತ್ತಾನೆ.ಪರಶುರಾಮನೋ? ಅವನ ಕೈಲಿ ಭೇಷ್ ಅನ್ನಿಸಿಕೊಳ್ಳಬಲ್ಲೆ. ಮತ್ತೂ ಧೈರ್ಯದ  ಮಾತೆಂದರೆ, ಅರ್ಜುನ ಮಾಧವರೂ ಯುದ್ಧದಲ್ಲಿ ನನ್ನನ್ನು ಗೆಲ್ಲಲಾರರು!

ಇದು ಬರೀ ಸ್ವ-ಪ್ರಶಂಸೆಯ ಮಾತಾಗಿ ಉಳಿಯದೆ ನಿಜವಾಗುವುದನ್ನು ಮುಂದೆ ಕಾಣುತ್ತೇವೆ.

'ಕುಮಾರ ವ್ಯಾಸನು ಹಾಡಿದನೆಂದರೆ ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು' ಎಂದು ಕುವೆಂಪು ಹೇಳಿರುವುದು ಇಂಥಾ ಮಾತುಗಾರಿಕೆಯನ್ನು ನೋಡಿಯೇ!

ಕುಮಾರವ್ಯಾಸ ಪ್ರತಿಷ್ಠಾನ

೧೨/೯/೨೦೧೬

#


Sunday, September 11, 2016

ಐಸಲೇ ಕುಮಾರವ್ಯಾಸ!! -೨೭-

'ಅರಸುಗಳಿಗಿದು ವೀರ..,'
ದ್ರೋಣ ಪ ೫=೫೧

ಯುದ್ಧಕ್ಕೆ ಅಭಿಮನ್ಯುವಿನ ಪ್ರವೇಶವಾದ ಕೂಡಲೇ ಕುಮಾರವ್ಯಾಸನ ಲೇಖನಿ ಸೂಕ್ಷ್ಮ ಮತ್ತು ಹರಿತವಾಗುತ್ತಾ ಹೋಗುತ್ತದೆ!
ದ್ವಾಪರದ ಯುದ್ಧದ ಮಿಂಚಿನ ಸಂಚಾರವಾಗುತ್ತದೆ!

ಪದ್ಮವ್ಯೂಹ ಭಯಂಕರ; ಎದುರಿಗಿರುವ ವೀರರು 'ಇಂದುಧರ( ಶಿವ) ಅಡಹಾಯ್ದರೆ ಹಿಂದೆಮುಂದೆನಿಸುವ ' ಅದಟರು! ಸಮರವಿದು ಸಾಮಾನ್ಯವಲ್ಲ ಎಂದು ಧರ್ಮರಾಯ ಎಷ್ಟು ಸಂತೈಸಿದರೂ ಅಭಿಮನ್ಯು ಕದಲಲಿಲ್ಲ.'ಅವನಿಯನು ಗೆಲದೇ ಮಹಾರಥರೆನಿಪ ನಾಯಕರ  ಅವನಿಯೊಳಗೊರಗಿಸದೆ ಬಿಟ್ಟರೆ ದಿವಿಜಪತಿ ತನಯಂಗೆ( ಇಂದ್ರನ ಮಗನಾದ ಅರ್ಜುನನಿಗೆ) ತಾ ಜನಿಸಿದವನಲ್ಲ' ಎಂದು ಪ್ರತಿಜ್ಞೆ ಯನ್ನೂಮಾಡಿದ .

ಅನಿವಾರ್ಯವಾಗಿ ಧರ್ಮರಾಯ ಒಪ್ಪಬೇಕಾಯಿತು. ಸರಿ, ಒಟ್ಟಾಗಿ ನಿಂತಿರುವ ಶತ್ರುಗಳನ್ನು' ನೀನು ಹೊಯ್ದು ಮೊದಲಲಿ ಬಿಡಿಸು, ಅನಂತರ ನಾವು ಬಂದು ನಿನ್ನನು ಕೂಡಿಕೊಂಬೆವು' ಎಂದ.

'ಹಗೆಯಲಿ ಹೂಣಿ ಹೊಗದಿರು, ಮೈತೆಗೆದು ಕಾದುವುದು( ಶತ್ರುಗಳ ಮೇಲೆ ತುಂಬಾ ಆಕ್ರಾಮಕವಾಗಿ ಹೋಗ ಬೇಡ, ರಕ್ಷಣಾತ್ಮಕವಾಗಿರು) ಎಂದು ಹಿರಿಯರಂತೆ  ಎಚ್ಚರಿಸಿದ ಸಹಾ.

ಅವಕಾಶಕ್ಕಾಗಿ ಆನಂದಗೊಂಡ ಅಭಿಮನ್ಯು ಯುದ್ಧಕ್ಕೆ ಹೊರಡುವುದೇ ಒಂದು ಸೊಗಸು! ಗಂಡುಡುಗೆ ಉಟ್ಟ; ಹೊನ್ನಿನ ಕಠಾರಿಯನ್ನು ಸೊಂಟಕ್ಕೆ ಸಿಗಿಸಿದ ;ಹೊನ್ನಿನ ಉಡುಗೆ, ಹಾರ ಧರಿಸಿ 'ನಸುನಗೆ ಮೊಗದ ಸೊಂಪಿನಲಿ ' ಉತ್ಸಾಹದಿಂದ ಅನುವಾದ. ಅಗತ್ಯವಾದ ಅಸ್ತ್ರ ಶಸ್ತ್ರಗಳನ್ನು ತುಂಬಿಕೊಂಡ ,ಉತ್ತಮ ಕುದುರೆಗಳು, ಫಲಕ, ಧ್ವಜದಿಂದ ಕೂಡಿದ ರಥ ಸಿದ್ಧವಾಗಿ ನಿಂತಿತು!

ಅಭಿಮನ್ಯು ಯುದ್ಧಕ್ಕೆ ಹೊರಡುವ ಕ್ರಮ   ನೋಡಿ:

'ತುರಗ ತತಿಗಭಿನಮಿಸಿ,
ರಥವನ್ನು ತಿರುಗಿ ಬಲವಂದು, ಎರಗಿ,
ಚಾಪಕೆ ಕರವ  ನೊಸಲಲಿ ಚಾಚಿ,
ಭಾರಿಯ ಭುಜವ ಒದರಿಸುತ,
ಅರಸಗಭಿವಂದಿಸುತ
ಭೀಮನ ಹರಕೆಗಳ ಕೈಗೊಳುತ,
ನಕುಲಾದ್ಯರಿಗೆ ಪೊಡವಟ್ಟು
ಅಡರಿದನು ನವರತುನಮಯ ರಥವ'

'ರಥದ ಕುದುರೆಗಳಿಗೆ ನಮಿಸಿದ; ರಥಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿದ; ಬಿಲ್ಲನ್ನು ಕೈಯಲ್ಲಿ ಹಿಡಿದು ಹಣೆಗೊತ್ತಿಕೊಂಡ; ಭುಜವನ್ನೊಮ್ಮೆ ಉತ್ಸಾಹದಿಂದ ಒದರಿದ; ಧರ್ಮರಾಯನಿಗೆ ನಮಿಸಿದ; ಭೀಮನ ಹಲವು ಹಾರೈಕೆ, ಹಿತನುಡಿಗಳನ್ನು ಪಡೆದ; ಚಿಕ್ಕಪ್ಪಂದಿರಾದ ನಕುಲ ಸಹದೇವರಿಗೆ ಸಹಾ ನಮಸ್ಕರಿಸಿ ನವರತ್ನಮಯವಾದ ರಥವನ್ನು ಏರಿದನಂತೆ!

ಯುದ್ಧಕ್ಕೆ ಹೊರಡುವ ಸುಸಂಸ್ಕೃತಿಯ ಒಂದು ಮುಖದ ಪರಿಚಯ ಮಾಡಿಸುತ್ತಾನೆ ಕವಿ!

ಕುಮಾರವ್ಯಾಸ ಪ್ರತಿಷ್ಠಾನ
೧೧/೯/೨೦೧೬

#

Friday, September 9, 2016

ಐಸಲೇ ಕುಮಾರವ್ಯಾಸ!! ೨೬-೪೯-

ದ್ರೋಣ ಪ ೪-೩೭

'ವಿದ್ಯಾ ಪರಿಣತರಅಲಂಕಾರ..,'

ದಳಪತಿ ದ್ರೋಣರು ಪದ್ಮವ್ಯೂಹ ರಚಿಸಿ ನಿಲ್ಲಿಸಿದ್ದಾರೆ. ಮತ್ತೊಂದು ತಂತ್ರದ ಮೇರೆಗೆ ಅರ್ಜುನನನ್ನು ಸಮಸಪ್ತಕರು ಯುದ್ಧಕ್ಕೆ ಕರೆದು ದೂರ ಒಯ್ದಿದ್ದಾರೆ. ವ್ಯೂಹವನ್ನು ಭೇದಿಸುವವರಾರು?
ಧರ್ಮರಾಯ ಚಿಂತಿಸುವಾಗ ಅಭಿಮನ್ಯು ಮುಂಗೈ ಕಡಗವನ್ನು ತಿರುಗಿಸುತ್ತಾ' ದೊಡ್ಡಪ್ಪ, ತಾ ಬಲ್ಲೆ ಪದ್ಮವ್ಯೂಹ ಭೇದನವ, ಅನುವರವ (ಯುದ್ಧ) ಗೆಲುವೆನು ತನ್ನನ್ನು ಕಳಿಸು" ಎಂದು ಬೇಡುತ್ತಾನೆ.

ಪದ್ಮವ್ಯೂಹದ ಸಂಕೀರ್ಣತೆ, ಜಟಿಲತೆ ಎಂಥದು? ಧರ್ಮರಾಯನ ಮಾತಲ್ಲಿ ಕೇಳಿ;

'ಸುಳಿಯಬಹುದು ಅಂಬುಧಿಯ ನಡುವಣ ಸುಳಿಯೊಳಗೆ,
ಸಂವರ್ತಕನ ಕೊರಳೊಳು ಕುಣಿಯಲುಬಹುದು,
ಮೃತ್ಯುವಿನ ಅಣಲ ಹೊಳಲೊಳಗೆ ಹೊಳಕಬಹುದು,
ಅಹಿಪನ ಫಣಾಮಂಡಳದೊಳಗಾಡಲು ಬಹುದು
ಕಾಣೆನು ಗೆಲುವ ಹದನನು, ಮಗನೇ,
ಪದ್ಮವ್ಯೂಹದ ಒಡ್ಡಣದ'

'ಮಗನೇ,(ಅಭಿಮನ್ಯುವನ್ನು 'ಮಗನೇ' ಎಂದು ಧರ್ಮರಾಯ ಸಂಬೋಧಿಸುವುದು ಎಷ್ಟು ಆತ್ಮೀಯವಾಗಿದೆ!) ಸಮುದ್ರದ ಮಧ್ಯೆಇರುವ ಮಹಾ  ಸುಳಿಯೊಳಗೆ ಬೇಕಾದರೂ ಹೋಗಿ ಬರಬಹುದು; ಪ್ರಳಯಕಾಲದ ಅಗ್ನಿಯ ( ಸಂವರ್ತಕ) ಕೊರಳಲ್ಲಿ ಕುಣಿಯುವ ಪ್ರಯತ್ನ ಮಾಡಬಹುದು; ಮೃತ್ಯುವಿನ ಬಾಯಿಯ ಅಂಗುಳಲ್ಲಿ ನುಸಿದು ಬರಬಹುದು; ಆದಿ ಶೇಷನ ಹೆಡೆಯ ಮೇಲೆ ಆಡಲೂ ಬಹುದು; ಆದರೆ ಈ ಪದ್ಮವ್ಯೂಹವನ್ನು ಗೆಲ್ಲುವ ಸಾದ್ಯತೆ ನಾನು ಕಾಣೆ'

ಪದ್ಮವ್ಯೂಹದ ಭಯಂಕರತೆಗೆ ಇದಕ್ಕಿಂತಾ ಮಿಗಿಲಾದ ಹೋಲಿಕೆ, ವಿವರಣೆ ಸಾಧ್ಯವೇ?
(ಬಳಸಿರುವ ಕನ್ನಡ ಪದಗಳನ್ನು ಸಹಾ ಗಮನಿಸಿ)



ಕುಮಾರವ್ಯಾಸ ಪ್ರತಿಷ್ಠಾನ

೯/೯/೨೦೧೬
#



ಐಸಲೇ ಕುಮಾರವ್ಯಾಸ!! -೨೫-

ಕರ್ಣ ಪ ೨೬-೪೯

'ವಿದ್ಯಾ ಪರಿಣತರಲಂಕಾರ..'

ಕರ್ಣ ಪರ್ವ ಕುಮಾರವ್ಯಾಸ ಭಾರತದಲ್ಲಿಯೇ ಅತ್ಯಂತ ರಸವತ್ತಾದ ಭಾಗ ಎಂದು ವಿಧ್ವಾಂಸರ ಮತ.ಕವಿಯ ಪ್ರತಿಭೆಗೆ ಸಾಟಿಯಾದ ಪ್ರಸಂಗಗಳೂ ಹೇರಳವಾಗಿವೆ!

ಕರ್ಣನ ಸಾಹಸ, ಪರಾಕ್ರಮ ವಿಜಯಲಕ್ಷ್ಮಿ ಒಮ್ಮೆ ಅತ್ತ ಒಮ್ಮೆ ಇತ್ತ ತೊನೆದಾಡುವಂತೆ ಮಾಡುತ್ತದೆ. ಯುದ್ಧದ ವರದಿ ಕೇಳುತ್ತಿರುವ ಧೃತರಾಷ್ಟ್ರನಿಗೆ ಆತಂಕ. ತನ್ನ ಮಕ್ಕಳು ಗೆದ್ದರೆ? ಗೆಲುವಾಯಿತೆ? ಪ್ರಶ್ನಿಸುತ್ತಾನೆ.
ಈ ತೊನೆದಾಟದ ಬಗ್ಗೆ ನೀಡುವ ಸ್ಪಷ್ಟನೆಯಲ್ಲಿ ಕುಮಾರವ್ಯಾಸ ರೂಪಕದ ಸರಮಾಲೆಯನ್ನೇ ಹೆಣೆದಿದ್ದಾನೆ. ಅದರ ಸೊಗಸು ನೋಡಿ;

'ಅರಸ ಕೇಳಯ್,
ಜೂಜುಗಾರರ ಸಿರಿಯ ಸಡಗರ,
ಕಳಿವಗಲ ತಾವರೆಯ ನಗೆ,
ಸಜ್ಜನರ ಖಾತಿ, ನಿತಂಬಿನೀ ಸ್ನೇಹ
ಪರಮ ಯೋಗಿಯ ಲೀಲೆ
ಕೌರವರರಸನೊಡ್ಡಿನ ಜಯ
ಇದೀಸರ ಗರುಡಿಯೊಂದೇ ಶ್ರಮವ ಕೊಡುವುದು,
ಶಕ್ರ ಧನು ವೆಂದ'

'ಜನಮೇಜಯ ಕೇಳು, ಜೂಜುಕೊರರು ಜೂಜಿನಲ್ಲಿ ಹಣಬಂತೆಂದು ಹಿಗ್ಗಿ ಸಡಗರಿಸುವುದು, ಸಂಜೆಯ ಬಿಸಿಲಿಗೆ ತಾವರೆ ನಗುವಂತೆ ಕಾಣುವುದು, ಸಜ್ಜನರಿಗೆ ಬರುವ ಸಿಟ್ಟು, ವಿಲಾಸಿನೀ ಸ್ತ್ರೀಯೊಡನೆ ಇರುವ ಸ್ನೇಹ, ಪರಮ ಯೋಗಿಯಾದವನು ರಚಿಸುವ ಲೀಲೆ, ಕೌರವರ ಅರಸನ ವಿಜಯ; ಇದಿಷ್ಟರ ಅಂತಿಮ ಪರಿಣಾಮ ಒಂದೇ! ಏನೆಂದೆಯಾ? 'ಕಾಮನ ಬಿಲ್ಲಿನಂತೆ ಕ್ಷಣಭಂಗುರ!

ಮತ್ತೊಮ್ಮೆ ಎಲ್ಲಾ ಉದಾಹರಣೆಗಳನ್ನೂ ವಿಚಾರಮಾಡಿ ನೋಡಿ. ಕ್ಷಣಿಕವಾದದ್ದು ಎಂಬುದಕ್ಕೆ ಎಷ್ಟು ಸಮರ್ಥವಾದ ವಿಷಯಗಳನ್ನು ಕಲೆ ಹಾಕಿದ್ದಾನೆ ಕವಿ! ಈ ಎಲ್ಲಾ ಕಸರತ್ತುಗಳ(ಗರುಡಿ!) ಶ್ರಮವೂ ಒಂದೇ ಅಂತೆ! , ಎಲ್ಲಾ ಹೋಲಿಕೆಗಳ ಫಲವನ್ನು ಹೇಳುವಾಗ ಅದಕ್ಕೆ ಕಾಮನಬಿಲ್ಲಿನ ಮತ್ತೊಂದು ಹೋಲಿಕೆ! ಅಪರೂಪದ ಕವಿತ್ವ ಇದು.


ಕುಮಾರವ್ಯಾಸ ಪ್ರತಿಷ್ಠಾನ

೮/೯/೨೦೧೬
#






Tuesday, September 6, 2016

ಐಸಲೇ ಕುಮಾರವ್ಯಾಸ!! -೨೪-

ಉದ್ಯೋ ಪ ೬-೧೭

'ವಿದ್ಯಾ ಪರಿಣತರಅಲಂಕಾರ'

ವನವಾಸ ,ಅಜ್ಞಾತ ವಾಸ ಮುಗಿಸಿ ಬಂದ ಪಾಂಡವರ ಪರವಾಗಿ ಸಂಧಿಗೆ ಹೊರಡುವ ಮುನ್ನ ಶ್ರೀಕೃಷ್ಣ ಎಲ್ಲರ ಅಭಿಪ್ರಾಯ ಕೇಳುತ್ತಾನೆ. ಸಂಧಿಯೋ? ಅಥವಾ ಯುಧ್ಧವೋ?

ಧರ್ಮರಾಯ ' ಸೋದರರಲ್ಲಿ ಕಲಹವೇ? ಸಂಧಿಯನ್ನು ನಿರ್ಣಯಿಸು ಪರಮಾತ್ಮಾ' ಎಂದ.ಭೀಮನೂ ದನಿಗೂಡಿಸಿದ. ಅರ್ಜುನ? ಅವನೂ ಸಂಧಿಯ ಪರವೇ! ಸಹದೇವನೊಬ್ಬ( ದಿವ್ಯ ಜ್ಞಾನಿ) ಸಂಧಿ ಬೇಡ ಯುದ್ಧವೇ ಸರಿ ಎನ್ನುತ್ತಾನೆ.. ಉಳಿದವರೆಲ್ಲರೂ ಸಂಧಿಯನ್ನೇ ಬಯಸುತ್ತಿದ್ದಾರೆ! ಶ್ರೀಕೃಷ್ಣನಿಗೆ ನಂಬಲಾಗುತ್ತಿಲ್ಲ.! ಹಾಗಾದಲ್ಲಿ ನನ್ನ ಭೂಭಾರ ನೀಗಿಸುವ ಕಾರ್ಯದ ಗತಿ?
ಭೀಮನನ್ನು ತುಸು ಕೆಣಕಿದ.ಇದೇನಿದು! ಕೊಳುಗುಳಕೆ ಪವಮಾನ ನಂದನನಳುಕಿದನು ! ಕುಂತೀಲಲನೆ ಹೆತ್ತಳು ಸುತರ ( ಭೀಮ ಸಹಾ ಯುದ್ಧಕ್ಕೆ ಅಳುಕಿದ! ಕುಂತಿ ಎಂತಹಾ ಮಕ್ಕಳನ್ನು ಹೆತ್ತಳಪ್ಪಾ, ಆಶ್ಚರ್ಯ! )ಎಂದ. ಉಪಯೋಗವಾಗಲಿಲ್ಲ.

ಶ್ರೀಕೃಷ್ಣ ಬಿಟ್ಟಾನೆಯೇ? ದೂತರಿಗೆ ಹೇಳಿದ. 'ಹೋಗಿ ದ್ರೌಪದಿಯ ಅಭಿಪ್ರಾಯ ತಿಳಿದು ಬನ್ನಿ.'

ದೂತರು ಬಂದು ಎಲ್ಲರೂ ಸಂಧಿಯನ್ನೇ ಬಯಸುತ್ತಿರುವುದನ್ನು  ದೌಪದಿಗೆ ವಿವರಿಸಿದರು. 'ನಿನ್ನ ಅಭಿಮತವನ್ನು ಶ್ರೀಹರಿಗೆ ತಿಳಿಸಬೇಕಂತೆ'ಎಂದರು.
ಸುದ್ದಿ ತಿಳಿದ ಕೂಡಲೇ ದ್ರೌಪದಿ ಗುಡುಗಿದಳು. 'ಪತಿಗಳಿಗೆ ಸಂದಿಯೇ ಪ್ರಿಯವಂತೋ?' ಪಾಪಿಗಳು ಇರಿದರೋ ಸತಿಯ' ಎಂದು ರಭಸ ದಿಂದ ಕೃಷ್ಣನ ಓಲಗಕ್ಕೆ ಬಂದಳು. ಅವಳ ಬರುವಿಕೆ ಹೇಗಿತ್ತು? ಕುಮಾರವ್ಯಾಸಹೇಳುತ್ತಾನೆ ಕೇಳಿ:

'ಭ್ರೂಲತೆಯಸುರಚಾಪದ,
ಉರು ಕೇಶಾಳಿಗಳ ಕಾರ್ಮುಗಿಲ,
ಅಪಾಂಗದ ಸಾಲ ಕುಡಿಮಿಂಚುಗಳ
ನೂಪುರ ರವದ ಮೊಳಗುಗಳ
ಆ ಲತಾಂಗಿಯ ಗಮನವೇ ಮಳೆಗಾಲದಂತಿರೆ
ದಾರ್ತರಾಷ್ಟ್ರ ಕುಲಾಳಿ ನಿಲುವುದೇ?
ಪವನಜನ ಸಂಪ್ರತಿಯ ಸೇರುವೆಗೆ'

ದ್ರೌಪದಿಯ ಆಗಮನವನ್ನು ಮಳೆಗಾಲ ಬಂದಂತೆ ಬಂದಳು ಎನ್ನುತ್ತಾನೆ ಕವಿ! ಇದೆಂಥ ಮಳೆಗಾಲ ಎಂದಿರಾ?
'ಅವಳ ಗಂಟಿಕ್ಕಿದ ಸುಂದರ ಹುಬ್ಬುಗಳೇ ಕಾಮನಬಿಲ್ಲು; ಹಾರಾಡುವ ಕೂದಲ ರಾಶಿಯೇ ಕಾರ್ಮೋಡಗಳು; ಕಣ್ಣೋಟವೇ ಕುಡಿಮಿಂಚಿನಂತೆ! ಕಾಲ್ಗೆಜ್ಜೆಯ ದನಿ ಗುಡುಗಿನ ಘರ್ಜನೆ; ಇದೆಲ್ಲದರ ಜತೆ ಮಳೆಗಾಲ ಬಂದಂತೆ ಬಂದಳು. ಈ ಮಳೆಗಾಲದ ಜತೆ ವಾಯುಪುತ್ರನಾದ ಭೀಮ ಸಹಾ ಸೇರಿದರೆ? ದಾರ್ತರಾಷ್ಟ್ರಕುಲ ಉಳಿದೀತೇ?'

ದಾರ್ತರಾಷ್ಟ್ರ ಶಬ್ದಕ್ಕೆ ಎರಡು ಅರ್ಥ. ಒಂದು ಧೃತರಾಷ್ಟ್ರನ ಮಕ್ಕಳಾದ ಕೌರವರು! ಮತ್ತೊಂದು ಹಂಸಗಳು.

ಮಳೆಗಾಲದ ತೀವ್ರತೆ ಹೆಚ್ಚಾದಾಗ ಹಂಸಗಳು ಹೆದರಿ ಮಾನಸ ಸರೋವರಕ್ಕೆ ಹಾರಿ ಹೋಗುತ್ತವಂತೆ! ದ್ರೌಪದಿಯ ಬರವು ಮಳೆಗಾಲವಾದರೆ ಎಲ್ಲಿ ದಾರ್ತರಾಷ್ಟ್ರಗಳಿಗೆ ಉಳಿಗಾಲ?

ಎರಡೂ ಅರ್ಥಗಳನ್ನು ಯಶಸ್ವಿಯಾಗಿ ಬಳಸಿದ ಒಂದು ಅಪೂರ್ವ ಕವಿತ್ವ ಇದು.

ತನ್ನ ಕಾವ್ಯವನ್ನು' ವಿದ್ಯಾ ಪರಿಣತರ ಅಲಂಕಾರ' ಎಂದು ಕರೆದುಕೊಂಡಿದ್ದಾನೆ ಕವಿ. ಪರಿಣತರು 'ಭಲೇ' ಎನ್ನಲೇಬೇಕಾದ ಇಂಥ ರೂಪಕ ಮಾಲೆಗಳು ಕೃತಿಯಲ್ಲಿ ಹೇರಳವಾಗಿವೆ.

ಕುಮಾರವ್ಯಾಸ ಪ್ರತಿಷ್ಠಾನ

೫/೯/೨೦೧೬

#

Sunday, September 4, 2016

ಐಸಲೇ ಕುಮಾರವ್ಯಾಸ!! -೨೩-

ಆದಿ ಪ ೧-೯

ಗೌರಿ ಹಬ್ಬದ ಶುಭಾಶಯಗಳು.

ಕುಮಾರವ್ಯಾಸನಿಗೆ ಶ್ರೀಕೃಷ್ಣನಷ್ಟೇ ಶಿವನೂ ಪ್ರಿಯ. ಹಾಗೆ ಗೌರಿ ಸಹಾ. ಗ್ರಂಥದ ಆರಂಭದ ದೇವಿಸ್ತುತಿಯೇ  ಸರಳ ಸುಂದರ ಭಕ್ತಿಗೀತೆಯಂತಿದೆ

' ಗಜಮುಖನ ವರಮಾತೆ ಗೌರಿಯೇ,
ತ್ರಿಜಗದರ್ಚಿತ ಚಾರು ಚರಣಾಂಬುಜೆಯೇ,
ಪಾವನ ಮೂರ್ತಿ
ಪದ್ಮಜಮುಖ್ಯ ಸುರಪೂಜ್ಯೆ,
ಭಜಕರಘಸಂವರಣೆ
ಸುಜನವ್ರಜ ಸುಸೇವಿತೆ
ಮಹಿಷಮರ್ದಿನೀ,
ಭುಜಗ ಭೂಷಣನರಸಿ
ಕೊಡು ಕಾರುಣ್ಯ ಸಂಪದವ'

(ಹೇ ಗೌರಿ, ಮೂರೂ ಲೋಕದಲ್ಲಿ ಪೂಜಿಸುವ ಪಾದ ಪದ್ಮವುಳ್ಳವಳೆ,ಬ್ರಹ್ಮಮೊದಲಾದ ದೇವತೆಗಳಿಂದ ಪೂಜಿತಳೆ,
ಭಕ್ತರ ಪಾಪಗಳನ್ನೂ ನಾಶ ಮಾಡುವವಳೇ,ಪರಶಿವನ ಮಡದಿ,ಕಾರುಣ್ಯ ಸಂಪದವನ್ನು ಕೊಡು)

ಕುಮಾರವ್ಯಾಸನ ಸ್ತುತಿಯಲ್ಲಿ, ಭಕ್ತಿಯಷ್ಟೇ ಮುಟ್ಟಿ ಮಾತಾಡಿಸುವ ಸಲುಗೆಯನ್ನುಕಾಣುತ್ತೇವೆ'

ಕಿರಾತಾರ್ಜುನ ಪ್ರಸಂಗದಲ್ಲಿ ( ಅರಣ್ಯ ಪರ್ವ ಸಂಧಿ ೬ )ಅರ್ಜುನನಿಗೆ ಅಂಜಲಿಕಾಸ್ತ್ರವನ್ನು ಕೊಡುವ ದೇವಿಯ ನುಡಿಯನ್ನು ಕೇಳಿ;

'ಕಂಜನಾಭನ ಮೈದುನನೆ ಬಾ,
ಅಂಜದಿರು, ನಿನಗೆ
ಆಂತ ರಿಪುಗಳ ಭಂಜಿಸುವ ಅಂಜನಾಸ್ತ್ರವನಿತ್ತೆ
ಮಗನೆ ಧನಂಜಯನೇ ನಿನಗೆನುತ,
ಕರುಣದಿ ಮಂಜುಳಾ ರವದಿಂದ
ತಚ್ಛಸ್ತ್ರವನು ಬೆಸಸಿದಳು'

ಸ್ತ್ರೀಯರಿಗೆ, ಸಂಬಂಧಗಳಲ್ಲಿ ಎಲ್ಲಿಲ್ಲದ ಒಲವು! ತನ್ನಣ್ಣ ನಾರಾಯಣನ ಮೈದುನ ಅರ್ಜುನ. ಆ ಪ್ರೀತಿ ಕಂಜನಾಭನ ಮೈದುನನೆ ಬಾ ಎಂಬ ಮಾತಿನಲ್ಲಿ ಅಡಕವಾಗಿದೆ!

ಮಂಜುಳಕರವಾದ ವಾಣಿಯಿಂದ ಆ ಅಸ್ತ್ರವನ್ನು ಕರೆದಳಂತೆ.ಅರ್ಜುನನಿಗೆ ಅದರ ಮಂತ್ರೋಪದೇಶವನ್ನು ಸಹಾ ಮಾಡುತ್ತಾಳೆ.ಅಷ್ಟೇ ಅಲ್ಲ, ಶಿವ ಪಾರ್ವತಿಯರಿಬ್ಬರೂ ಅರ್ಜುನನನ್ನು ಅಪ್ಪಿಕೊಂಡು,'ಗೆಲು ನೀ ಧುರದೊಳಹಿತರನೆಂದು ಹರಸಿದರಾ ಧನಂಜಯನ'

ದೇವಿ ನಮ್ಮೆಲ್ಲರನ್ನೂ ಹರಸಲಿ!

ಕುಮಾರವ್ಯಾಸ ಪ್ರತಿಷ್ಠಾನ
೪/೯/೨೦೧೬

Saturday, September 3, 2016

ಐಸಲೇ ಕುಮಾರವ್ಯಾಸ!! -೨೨-

ವಿರಾಟ ಪ ೧೦-೬೫

ವಿರಾಟನ ಅರಮನೆಯಲ್ಲಿ ಪಾಂಡವರ ಒಂದು ಕುಟುಂಬ ಮಿಲನ!

ಕುಮಾರವ್ಯಾಸ ತುಂಬಾ ಮಾನವೀಯವಾಗಿ , ಸಹಜವಾಗಿ ಚಿತ್ರಿಸಿದ್ದಾನೆ.

ಹದಿಮೂರು ವರ್ಷಗಳ ಅವಧಿ ಸವೆದು ಅಭಿಮನ್ಯುವಿನ ಮದುವೆ ನಿಶ್ಚಯವಾಗಿರುವುದರಿಂದ ಎಲ್ಲ ಬಂಧುಗಳೂ ಒಟ್ಟಿಗೆ ಸೇರಿದ್ದಾರೆ. ಪಾಂಚಾಲ ದೇಶದಿಂದ ದ್ರೌಪದಿಯ ತವರಿನವರು, ಮಕ್ಕಳು,ದ್ವಾರಕೆಯಿಂದ ಪತ್ನಿಯರ ಸಹಿತ ಶ್ರೀಕೃಷ್ಣ ,ತಂದೆ ವಾಸುದೇವ, ತಾಯಿ ದೇವಕಿ ಇತರ ಬಂಧುಗಳು, ವಿರಾಟನಗರದ ಭಾವೀ ಬೀಗರು ಅಲ್ಲಿಯೇ ಇದ್ದಾರೆ.ದೀರ್ಘ ಅವಧಿಯ ನಂತರ ಭೇಟಿ ; ಹಾಗಾಗಿ ಮಾತನಾಡಿದಷ್ಟೂ ಸಾಲದು. ಸನ್ನಿವೇಶ ತುಂಬಾ ಹೃದಯಂಗಮ!

ವಸುದೇವ ಅಳಿಯ ಅರ್ಜುನನ ಮೈದಡವಿ ಹೇಳಿದ, 'ಮಗನೆ ವನವಾಸದಲ್ಲಿ ಎಷ್ಟು ನೊಂದಿರೋ ಗೊತ್ತಿಲ್ಲ ; ಅಂತೂ ದ್ರೌಪದಿಯ ಮಾಂಗಲ್ಯ ಗಟ್ಟಿಯಾಗಿರಲಾಗಿ, ನಮ್ಮ ಪುಣ್ಯದಿಂದ ಮರಳಿ ಬಂದಿರಿ'

ಯುಧಿಷ್ಠಿರ ಹೇಳಿದ,'ಮಾವ, ನಮ್ಮೆಲ್ಲ ಯಶಸ್ಸಿಗೆ ನಿಮ್ಮ ಮಗ ಕೃಷ್ಣನೇ ಹೊಣೆ; ಹಾಗಾಗಿ ನಾವು ದೇವತೆಗಳನ್ನೂ ಮೀರಿಸುವಂತಿದ್ದೇವೆ. ನಮಗೇನೂ ಕಡಿಮೆಯಾಗದಂತೆ ಅವನೇ ನೋಡಿಕೊಂಡವ' ಎಂದ.

ವಸುದೇವ ವಯೋವೃದ್ಧ. ಯುಧಿಷ್ಠಿರ ಅಷ್ಟು ಹೇಳಿದ್ದೇ ಸಾಕು ಮುಂದುವರಿಸಿದ.' ಅಯ್ಯೋ, ಅವನ ಸ್ವಭಾವ ಏನು ಹೇಳಲಿ?ಅವನಿಗೆ ಅಪ್ಪ,ಅಮ್ಮ ,ಹೆಂಡತಿಯರು ಯಾರೂ ಬೇಡ; ನನ್ನ ಭಕ್ತರಿದ್ದರೆ ಸಾಕು,ಅವರ ಸುಖವೇ ನನ್ನ ಸುಖ ಅನ್ನುತ್ತಾನೆ,ನೀವು ನಮಗೆ ಹೊರಗಿನವರಲ್ಲ,ನಿಮಗೆ ಕರಗುವ ಮನಸ್ಸು ಅವನದು. ಅದಿರಲಿ, ತನಗಾಗದವರಿಗೂ ತನ್ನನ್ನು ತೆತ್ತುಕೊಳುವ, ಕೊಲುವ ಹಗೆಗೂ ಒಲಿವ, ಇತರರಿಗೋಸ್ಕರ  ನಾನು ಬದುಕುವೆ ಎನ್ನುತ್ತಾನೆ, ಏನು ಹೇಳುವುದು?'

ಅವತಾರ ಪುರುಷನಾದರೂ ತಂದೆಗೆ ಮಗ ತಾನೆ? ಧರ್ಮರಾಯನಿಗೆ ಹೇಳುತ್ತಾನೆ;

'ಬೊಪ್ಪನವರೇ?
ಎಮ್ಮ ದೂರದೆ ಇಪ್ಪವರು ತಾವಲ್ಲ,
ಸಾಕಿನ್ನೊಪ್ಪದಲಿ ಬಾಯೆಂದು 
ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ ತಪ್ಪಿಸಿದುದೆನಾಯ್ತು?
ಪಾರ್ಥನ ದರ್ಪದ ಅನುವೆಂತು?
ಎಂದು ಬೆಸಗೊಂಡನು ಮುರಧ್ವಂಸಿ'

'ಯುಧಿಷ್ಠಿರ, ಅಪ್ಪ ನನ್ನನ್ನು ದೂರಲು ಆರಂಭಿಸಿದರು ತಾನೇ? ಅದು ಅವರಿಗೆ ಅಭ್ಯಾಸವಾಗಿ ಹೋಗಿದೆ! ಬಿಡು, ನೀನು ಬಾ ಇಲ್ಲಿ, ಕೌರವರು ಗೋವುಗಳನ್ನು ಅಪಹರಿಸಿದ್ದರ ಬಗ್ಗೆ ಹೇಳು ಬಾ, ಅರ್ಜುನ ಅವರನ್ನು ಹೇಗೆ ಜಯಿಸಿದ ಹೇಳುಬಾ'

ಹಿರಿಯರಿರುವ ಎಲ್ಲಾ ಮನೆಗಳಲ್ಲೂ ನಡೆಯುವಂತೆಯೇ ಶ್ರೀಕೃಷ್ಣನ ಮನೆಯ ಮಾತುಕತೆಗಳೂ ಸಹಜವಾಗಿದೆಯಲ್ಲವೇ?


ಕುಮಾರವ್ಯಾಸ ಪ್ರತಿಷ್ಠಾನ

೦೨/೦೯/೨೦೧೬
#