Thursday, September 15, 2016

ಐಸಲೇ ಕುಮಾರವ್ಯಾಸ!! -೩೦-

'ಅರಸುಗಳಿಗಿದು ವೀರ..'

ದ್ರೋಣ ಪ ೫-೨೨

ಅಭಿಮನ್ಯು ಶೀಘ್ರಯೋಧಿ! ಅಂದರೆ ತೀವ್ರ ಆಕ್ರಮಣಕಾರಿ ಯೋಧ!

ಪದ್ಮವ್ಯೂಹವನ್ನು ಎದುರಿಸಲು ಬಂದವರ್ಯಾರುಎಂದು ಕೌರವ ಸೇನೆಯ ನಾಯಕರು ತಿಳಿಯುವಷ್ಟರಲ್ಲೇ ಅವನು ವ್ಯೂಹದ ಬಾಗಿಲ ಕಾವಲಿನ ವೀರರನ್ನು ಸದೆದು ದಾರಿಮಾಡಿಕೊಂಡು  ಒಳಗೆ ನುಗ್ಗಿ ಆಗಿತ್ತು! ಅವನ ವೇಗವನ್ನು ಅರಿಯಲು, ಅರಗಿಸಿಕೊಳ್ಳಲು ಕೌರವರಿಗೆ ಕೊನೆಯವರೆಗೂ ಸಾಧ್ಯವಾಗಲಿಲ್ಲ ಎಂದರೂ ತಪ್ಪಿಲ್ಲ.

ಪದ್ಮವ್ಯೂಹ ಕಮಲದ ಆಕೃತಿಯನ್ನೇ ಹೋಲುವ ರಚನೆ. ಹೇಗೆ ತಾವರೆಯಲ್ಲಿ ಮೊದಲು ದಳಗಳು ಒಂದರ ಹಿಂದೆ  ಒಂದು, ಅನಂತರ ಕೇಸರ, ಅನಂತರ ಕರ್ಣಿಕೆ, ಅನಂತರ ' ಮಧುವಿರುವ ಕೇಂದ್ರ ಇದ್ದ ಹಾಗೆ ; ಮೊದಲು ಅಶ್ವಪಡೆ,ಅದರ ಹಿಂದೆ ಆನೆಗಳು, ಅದಕ್ಕೆ ಒತ್ತಾಗಿ ರಥ ಪಡೆ, ಅದಕ್ಕೆ ತಾಗಿ ರಣಧೀರರು!

ಅಭಿಮನ್ಯುವಿನ ರಣತಾಂಡವವನ್ನುಓದಿಯೇ ಅನುಭವಿಸಬೇಕು.

ಅವನ ಲಾಗು ವೇಗವನ್ನು ತಡೆಯಲಾಗದೆ ಕೌರವಸೇನೆಯಲ್ಲಿ ಅಲ್ಲೋಲ ಕಲ್ಲೋಲವಾಯಿತು. 'ಕದಳೀವನಕ್ಕೆ ಮದದಾನೆ ಹೊಕ್ಕಂದದಲಿ';ನುಗ್ಗಿದ. 'ಕೊಚ್ಚಿದನು ಕೌರವ ಚತುರ್ಬಲವ'. ಕೆಲವರು ರಥದಿಂದ ಧುಮುಕಿ ಓಡಿದರು;ಕುದುರೆಯಿಂದ ಇಳಿದು ಕೈ ಮುಗಿದು ನನ್ನನ್ನು ಉಳಿಸು ಎಂದು ಬೇಡಿದರು; ದಳದ ಭಾಗದ ವೀರರು ಉಸಿರನ್ನು ತೊರೆದರು,ಕೇಸರಾಕೃತಿಯಲ್ಲಿದ್ದ ವೀರರು 'ಪಥಿಕರಾದರು ಗಗನ ಮಾರ್ಗದಲಿ( ಆಗಸದಲ್ಲಿ ಪ್ರಯಾಣ ಮಾಡಿದರು-ಸ್ವರ್ಗಕ್ಕೆ!); 'ಕರ್ಣಿಕೆ'ಯ ಭಾಗದ ದೊರೆಗಳು ಎಲ್ಲಿ ನುಸುಳಿದರೋ ಗೊತ್ತೇ ಆಗಲಿಲ್ಲ; ಒಟ್ಟಿನಲ್ಲಿ ಕವಿ ಹೇಳುತ್ತಾನೆ, ಅಭಿಮನ್ಯುವಿನ ಆಕ್ರಮಣಕ್ಕೆ ದ್ರೋಣರ ಹೆಮ್ಮೆಯ ತಂತ್ರ ವಿಫಲವಾಗಿ 'ಜರಿದುದಬ್ಜವ್ಯೂಹ' (ಪದ್ಮವ್ಯೂಹ ಕುಸಿಯಿತು)

ಅವನನ್ನು ಎದುರಿಸಿದ ಮಹಾರಥರ ಪಾಡು? ಕುಮಾರವ್ಯಾಸ ಹೇಳುತ್ತಾನೆ ಕೇಳಿ;

'ಗನ್ನದಲಿ ಗುರು ಜಾರಿದನು,
ಕೃಪ ಮುನ್ನವೇ ಹಿಂಗಿದನು,
ಕರ್ಣನನಿನ್ನು ಕಂಡವರ್ಯಾರು?
ಮೂರ್ಛೆಗೆ ಮೂರು ಬಾರಿಯಿದು,
ಬೆನ್ನ ತೆತ್ತರು ಬಿರುದರಾತಗೆ,
ಕೆನ್ನೆಯೆಡೆಗೆ ಉಗಿದಂಬು ಸಹಿತವೆ
ನಿನ್ನ ಮಗ ಅರನೆಲೆಗೆ ಸರಿದನು
ಭೂಪ ಕೇಳೆಂದ'

'ಉಪಾಯವಾಗಿ ದಳಪತಿಯಾದ  ದ್ರೋಣಾಚಾರ್ಯರು ಅವನೆದುರಿನಿಂದ ಜಾರಿಕೊಂಡರು; ಮಹಾ ಪರಾಕ್ರಮಿ ಕೃಪಾಚಾರ್ಯರೋ? ಅವರು ದ್ರೋಣರಿಗಿಂತ ಮೊದಲೇ ಪಲಾಯನ ಮಾಡಿ ಆಗಿತ್ತು! ಕರ್ಣನನ್ನು ಯಾರಾದರೂ ಕಂಡಿರೇನು? ಇಗೋ ಇಲ್ಲಿ! ಮೂರನೆಯ ಬಾರಿ ಮೂರ್ಛೆಯಿಂದ ಇದೀಗ ಎಚ್ಚರಗೊಂಡ! ಪಾಪ, ಯುದ್ಧ ಭಯಂಕರರೆಂಬ ಬಿರುದು ಹೊತ್ತ ವೀರರೆಲ್ಲ ಅಭಿಮನ್ಯುವಿಗೆ ಬೆನ್ನು ತೋರಿಸಿದರು!

ಅರಸ ದುರ್ಯೋಧನ? ಅಲ್ಲಿ ನೋಡಿ, ಕೆನ್ನೆಗೆ ಚುಚ್ಚಿಕೊಂಡಿರುವ ಬಾಣವನ್ನೂ ಲೆಕ್ಕಿಸದೆ 'ಅರನೆಲೆಯ'(ರಾಜನಿಗಾಗಿ ಇರುವ ಸಂರಕ್ಷಿತ ಸ್ಥಳ) ಕಡೆಗೆ ಓಡುತ್ತಿದ್ದಾನೆ!'

ಒಂದೇ ಪದ್ಯ ಸಾಕಲ್ಲವೇ? ಅಭಿಮನ್ಯುವಿನ ಯುದ್ಧ ಸಾಮರ್ಥ್ಯ ಹಾಗೂ ಕುಮಾರವ್ಯಾಸನ ಕಥನ ಸಾಮರ್ಥ್ಯಕ್ಕೆ?

ಕುಮಾರವ್ಯಾಸ ಪ್ರತಿಷ್ಠಾನ

೧೫/೦೯/೨೦೧೬

#

No comments:

Post a Comment