Monday, September 19, 2016

ಐಸಲೇಕುಮಾರವ್ಯಾಸ!! -೩೨-

ದ್ರೋಣ ಪ ೬-೩೧

'ವಿದ್ಯಾ ಪರಿಣತರಲಂಕಾರ..,'

ಅಭಿಮನ್ಯು ಯುದ್ಧ ಪ್ರಸಂಗದಲ್ಲಿ ಉತ್ತಮ ಕಾವ್ಯ ಮಡುಗಟ್ಟಿ ನಿಂತಿದೆ .ಇನ್ನೆರಡು ಪದ್ಯಗಳನ್ನು ಸವಿಯದೆ ಇರುವುದು ಸಾಧ್ಯವೇ ಇಲ್ಲ.ಅದರಲ್ಲಿ ಒಂದು ಇದು:

'ದಳವು ದಳವುಳವಾಯ್ತು
ಕೇಸರದೊಳಗೆ ವಿಸಟಂಬರಿದು
ಕರ್ಣಿಕೆಯೊಳಗೆ ರಿಂಗಣಗುಣಿದು
ಸಂಗರಜಯದ ಮಡುವಿನಲಿ ಸಲೆ ಸೊಗಸಿ
ತನಿ ಸೊಕ್ಕಿ ಪಟದುಳಿದು
ಸೌಭದ್ರೇಯ ಭೃಂಗನ
ಬಿಲುದನಿಯ ಭರವಂಜಿಸಿತು
ಜಯ ಯುವತಿ ವಿರಹಿಗಳ'

ಈ ಪದ್ಯದಲ್ಲಿ ಕವಿ ಪದ್ಮ ವ್ಯೂಹಕ್ಕೂ,ಪದ್ಮಕ್ಕೂ(ತಾವರೆ) ಸಮತ್ವ ಕಲ್ಪಿಸಿದ್ದಾನೆ.ಅಭಿಮನ್ಯುವನ್ನು ಒಂದು ಉನ್ಮತ್ತ, ಪ್ರಬಲ ದುಂಬಿಗೆ  ಹೋಲಿಸಿ ರೂಪಕವನ್ನು ನಿರ್ಮಾಣ ಮಾಡಿದ್ದಾನೆ! 'ಸೌಭದ್ರೇಯ ಭೃಂಗ' ಅಂದರೆ ಸುಭದ್ರೆಯ ಮಗನೆಂಬ ದುಂಬಿ'( ಬಲಶಾಲಿಯಾದ ದುಂಬಿ ಎಂಬ ಸೂಚನೆ ಸಹಾ)

ಅರಳಿದ ಕಮಲಕ್ಕೆ ಜಯದ ಮಕರಂದಕ್ಕಾಗಿ ದಾಳಿಮಾಡಿದ ಈ ಉತ್ಸಾಹ ಭರಿತ ದುಂಬಿ ಮೊದಲು ದಳಗಳನ್ನು ಸೂರೆ ಮಾಡಿತು; ಅನಂತರ ಹೂವಿನ ಕೇಸರಕ್ಕೆ ನುಗ್ಗಿ  ಮನಸೋ ಇಚ್ಛೆ ಹರಿದಾಡಿತು; ಕರ್ಣಿಕೆಯನ್ನು ಪ್ರವೇಶಿಸಿ ರುದ್ರನರ್ತನ ಮಾಡಿತು; ಹೂವಿನ ಮದ್ಯದ ಮಡುವಿನಲ್ಲಿ ಮಕರಂದವನ್ನು ಹೀರಿ, ಉನ್ಮತ್ತ ಸ್ಥಿತಿಗೇರಿ, ತೊತ್ತಳ ತುಳಿಯಿತು'

ದಳ,ಕೇಸರ, ಕರ್ಣಿಕೆ, ಈ ಅಂಗಗಳು ಪದ್ಮಕ್ಕೂ,ಪದ್ಮವ್ಯೂಹಕ್ಕೂ ಒಪ್ಪುವಂಥವು.

ದುಂಬಿಯ ಧ್ವನಿಯ ಗುಂಜಾರವ ವಿರಹಿಗಳಿಗೆ ಪೀಡೆ ಎನಿಸಿದ ಹಾಗೆ,ಅಭಿಮನ್ಯುವಿನ ಬಿಲ್ಲಿನ ದನಿ ವಿಜಯಶ್ರೀಯ ವಿರಹಿಗಳಾದ ವೀರರನ್ನು ನಡುಗಿಸಿತು!

ದ್ರೋಣಾಚಾರ್ಯರ ಪದ್ಮವ್ಯೂಹದ ರಚನೆ ಈ ಬಾಲಕನಿಂದ ಜರ್ಝರಿತವಾದದ್ದನ್ನು ಕವಿ ತನ್ನ ರೂಪಕ ಶಕ್ತಿಯಿಂದ  ಅದ್ಭುತವಾಗಿ ಚಿತ್ರಿಸಿದ್ದಾನೆ.

ಕುಮಾರವ್ಯಾಸನಿಗೆ 'ರೂಪಕ ಸಾಮ್ರಾಜ್ಯದ ಚಕ್ರವರ್ತಿ' ಎನ್ನುತ್ತಾರೆ ವಿಧ್ವಾಂಸರು. ಅವನ ಸುಂದರ ರೂಪಕಗಳಲ್ಲಿ ಇದು ಸಹಾ ಒಂದು ಎನ್ನಲಡ್ಡಿಯಿಲ್ಲ!

No comments:

Post a Comment