Wednesday, April 26, 2017

ಐಸಲೇ ಕುಮಾರವ್ಯಾಸ! -೮೭-



ಐಸಲೇ ಕುಮಾರವ್ಯಾಸ!                           --
ಆದಿ ಪ ೧೫-


ಅರಸರಿಂದ ಅಸಾಧ್ಯವಾದದ್ದನ್ನು ಒಬ್ಬ ಬ್ರಾಹ್ಮಣ ಸಾಧಿಸಿ ದ್ರೌಪದಿಯನ್ನು ವರಿಸಿದ್ದು ಕ್ಷತ್ರಿಯರಿಗೆ ನುಂಗಲಾರದ ತುತ್ತಾಯಿತು. ಆ ಅಸಮಾಧಾನ ಮೊದಲು ಪ್ರಕಟವಾದದ್ದು ಅಭಿಮಾನಿಯಾದ ದುರ್ಯೋಧನನ ಮೂಲಕ.

ನೆರೆದಿದ್ದ ಎಲ್ಲಾ ವೀರರುಗಳನ್ನೂ ಕೋಪದಿಂದ ಹಂಗಿಸುತ್ತಾ ಅವನು ಕೂಗಾಡಿದ ರೀತಿಯನ್ನು ಕುಮಾರವ್ಯಾಸನ ಮಾತಿನಲ್ಲೇ ಕೇಳಿಃ

‘ಹಳೆಯ ಹುಲು ಧನುವಿದನು ಹಾರುವ ಸೆಳೆದ ಗಡ,
ಕೌಳಿಕದ ಯಂತ್ರವ ಗೆಲಿದ ಗಡ,
ಗರುವಾಯಿಗೆಡಿಸಿದ ಗಡ ಮಹೀಶ್ವರರ
ನಳಿನ ಮುಖಿ ಹಾಯ್ಕಿದಳು ಗಡ ತಿರುಕುಳಿಯ ಕೊರಳಲಿ
ದಂಡೆಯನು
ನೀವೊಲಿದು ಮದುವೆಯ ಮಾಡಿಯೆಂದನು ಬೈದು ಭೂಮಿಪರ..
ನಿಮ್ಮಯ ಹೆಂಡಿರನು ಬಳುವಳಿಯ ಕೊಡಿ ಹಾರುವನ ಹೆಂಡತಿಗೆ..’

(ಕೌಳಿಕ-ಮೋಸ; ಗರುವಾಯಿಗೆಡಿಸು-ಭಂಗಿಸು;ತಿರುಕುಳಿ-ಭಿಕ್ಷುಕ; ಗಡ- ಅಲ್ಲವೇ? )


‘ಹಳೆಯ ಹುಲ್ಲುಕಡ್ಡಿಯ ಧನುಸ್ಸೊಂದನ್ನು ಈ ಹಾರುವ ಸೆಳೆದನಂತೆ! ಯಾರೂ ಗೆಲ್ಲಲಾರದ ಈ ಮೋಸದ ಯಂತ್ರವನ್ನು  ಗೆದ್ದನಂತೆ ! ಕ್ಷತ್ರಿಯ ರಾಜರೆಲ್ಲರ ಅಭಿಮಾನವನ್ನು ಭಂಗಿಸಿದನಂತೆ! ರಾಜಕುಮಾರಿ ಈ ಭಿಕ್ಷುಕನ ಕೊರಳಿಗೆ ಮಾಲೆ ಹಾಕುವುದಂತೆ! ಎಂಥಾ ಮೂರ್ಖತನ,ಮೋಸ! ನಾಚಿಕೆಯಿಲ್ಲದ ನೀವೆಲ್ಲ ಸೇರಿ ಮದುವೆಯಲ್ಲಿ ಭಾಗಿಯಾಗಿ ಅಷ್ಟೇ ಅಲ್ಲ, ನಿಮ್ಮ ನಿಮ್ಮ ಹೆಂಡತಿಯರನ್ನು ಈ ಹಾರುವನ ಹೆಂಡತಿಗೆ ಬಳುವಳಿಯಾಗಿ ಕೊಟ್ಟು ಕೈ ಮುಗಿಯಿರಿ..’

ಸಮಗ್ರ ಸ್ವಯಂವರದ ವ್ಯವಸ್ಥೆಯನ್ನೇ ಮೋಸವೆಂದು ಆರ್ಭಟಿಸುವ ದುರ್ಯೋಧನನ ಬೆಂಕಿಯ ಉಂಡೆಯಂಥಾ ಮಾತುಗಳನ್ನು ಕೇಳಿ ಉಳಿದ ಅರಸರಲ್ಲಿ ರೋಷ ಉಕ್ಕಿದ್ದು ಸಹಜವೇ.
ಪದ್ಯದಲ್ಲಿ ಕವಿ ಪ್ರಕಟಿಸಿದ ತೀವ್ರ ವ್ಯಂಗ್ಯ, ಮೊನೆಚು ಮಾತುಗಳಿಗಿರುವ ಶಕ್ತಿ, ಒಂದು ಕ್ಷಣ ‘ಐಸಲೇ ಕುಮಾರವ್ಯಾಸ!’ ಎನ್ನಿಸುವಂತಿವೆ.


ಕುಮಾರವ್ಯಾಸ ಪ್ರತಿಷ್ಠಾನ
೨೬/೪/೨೦೧೭

Saturday, April 22, 2017

ಐಸಲೇ ಕುಮಾರವ್ಯಾಸ! -೮೬-



ಐಸಲೇ ಕುಮಾರವ್ಯಾಸ!                           --
ಆದಿ ಪ ೧೫-

 ಬ್ರಾಹ್ಮಣರ ಜಯಘೋಷದೊಂದಿಗೆ ನಾಚುತ್ತಾ ಅರ್ಜುನನ ಕೊರಳಿಗೆ ದ್ರೌಪದಿ ಮಾಲೆಯನ್ನು ಹಾಕಿದಳು!
ವಧು, ಸಕಲ ಆಭರಣಗಳಿಂದ ಶೋಭಿತೆಯಾದ ರಾಜಕುಮಾರಿ .ವರನೋ? ಸಾಧಾರಣ ಬ್ರಾಹ್ಮಣ ಯುವಕ! ಕವಿ ಆ ಚಿತ್ರವನ್ನು ಕಟ್ಟಿಕೊಡುತ್ತಾನೆ

‘ಕೊರಳ ಹೂವಿನ ದಂಡೆಯಲಿ
ನಿಜಕರದ ಭಾರಿಯ ಧನುವಿನಲಿ,
ತನು ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ
ವರನ ಪರಿ ಹೊಸತಾಯ್ತು
ಹೊತ್ತನು ಹರನ ಹಗೆ ಹಾರುವಿಕೆಯನು
ನಮ್ಮರಸಿ ನೆರೆ ಹಾರುವತಿ
ಎಂದರು ನಗುತ ಚಪಲೆಯರು..’

ವರ ಹೊಸ ರೀತಿಯವ. ಕೊರಳಲ್ಲಿ ದ್ರೌಪದಿ ತೊಡಿಸಿದ ಹೂವಿನ ಮಾಲೆ ಇದೆ. ಕೈಯಲ್ಲಿ ಗೆಲುವಿಗೆ ಕಾರಣವಾದ ಭಾರಿ ಧನುಸ್ಸಿದೆ. ಕೆಲಬಲದಲ್ಲಿ ತುಂಬುಗಣ್ಣಿನ, ತನುವಿನಲ್ಲಿ ಸುಗಂಧ ಸೂಸುವ ಚೆಲುವೆಯರು (ದ್ರೌಪದಿಯ ಸಖಿಯರು) ಮೆಚ್ಚುಗೆ ಕುತೂಹಲದಿಂದ ಸುತ್ತುವರಿದಿದ್ದಾರೆ.
 ಅವರೆಲ್ಲರ ಆಕರ್ಷಣೆಯ ಕೇಂದ್ರ ಈ ಬ್ರಾಹ್ಮಣ ವರ! ನೊಡಿದಷ್ಟೂ ತೃಪ್ತಿಯಿಲ್ಲ.ಏನಿದು? ನಮ್ಮೊಡತಿ ದ್ರೌಪದಿ ಹಾರುವತಿಯಾಗಿ ಹೋದಳೇನು? ಎಂದು ಸಂಭ್ರಮಿಸುತ್ತಿದ್ದಾರೆ. ಅವನು ಅರ್ಜುನ ಎಂದು ಯಾರಿಗೂ ತಿಳಿದಿಲ್ಲವಲ್ಲ.
 
ವರನಾದ ಅರ್ಜುನನನ್ನು ಕವಿ ವರ್ಣಿಸುವುದು; ‘ಹೊತ್ತನು ಹರನ ಹಗೆ ಹಾರುವಿಕೆಯನು’
ಹರನ ಹಗೆ( ಶತ್ರು) ಮನ್ಮಥ.ಅವನು ಹಾರುವ (ಬ್ರಾಹ್ಮಣ)ವೇಷವನ್ನು ಹೊತ್ತು ಬಂದಂತಿದೆ. ಮೈಯೆಲ್ಲಾ ವಿಭೂತಿ, ಜಟೆ, ರುದ್ರಾಕ್ಷಿಗಳಿಂದ ಅಲಂಕೃತವಾಗಿದೆ ಜತೆಗೆ ಅಪ್ರತಿಮ ಸುಂದರನೂ ಹೌದು! ಹಾಗಾಗಿ ಹರನ ಹಗೆ( ಮನ್ಮಥ)!

‘ಹ’ ಕಾರಗಳಿಂದ ಕೂಡಿದ ಶಬ್ದಗಳು ಮಾಲೆ ಪೋಣಿಸಿದ ಹಾಗೆ ಬಂದು, ಹರನ ಹಗೆ ಹಾರುವಿಕೆಯನ್ನು ಹೊತ್ತನೇ ಎಂಬ ಆಡುಮಾತಿನ ಉದ್ಗಾರದಲ್ಲಿ ಅಂತ್ಯವಾಗುವುದು ಪದ್ಯದ ವಿಶೇಷ.

ಕುಮಾರವ್ಯಾಸ ಪ್ರತಿಷ್ಠಾನ
೨೧/೪/೨೦೧೭

Monday, April 10, 2017

ಐಸಲೇ ಕುಮಾರವ್ಯಾಸ! -೮೫-



ಐಸಲೇ ಕುಮಾರವ್ಯಾಸ!                           --

ಆದಿ ಪ ೧೫-೩

ಧನುಸ್ಸನ್ನು ಎತ್ತಬಂದ ಉಳಿದ ಅರಸರಿಗೂ ಅರ್ಜುನನಿಗೂ ಇರುವ ವ್ಯತ್ಯಾಸವೇನು?
 ಕುಮಾರವ್ಯಾಸ ಚಿತ್ರಿಸಿದ ಅರ್ಜುನನ  ಉನ್ನತ ಸಂಸ್ಕಾರದ ವಿವರ ಇಲ್ಲಿದೆ;

ಬರುವ ದಾರಿಯಲ್ಲೇ ಭೀಷ್ಮ, ದ್ರೋಣ, ಕೃಪಾಚಾರ್ಯರಿಗೆ ಮನಸ್ಸಿನಲ್ಲೇ ವಂದಿಸಿದ.ಯಾದವರ ಗುಂಪಿನಲ್ಲಿ ಕುಳಿತಿದ್ದ ಶ್ರೀಕೃಷ್ಣನನ್ನು ಕಣ್ಣಿನಲ್ಲೇ ಅಭಿವಂದಿಸಿದ.ಇಂದ್ರ, ಗಣಪ, ಷಣ್ಮುಖ, ದಿಕ್ಪಾಲಕರು, ಆದಿತ್ಯರು, ರುದ್ರ ಇವರಿಗೆ ನಮನ ಸಲ್ಲಿಸಿದ.

ಬಿಲ್ಲಿನ ಸಮೀಪಕ್ಕೆ ಬಂದವನೇ ತುದಿಯಲ್ಲಿ ಬಹ್ಮನನ್ನು, ಮಧ್ಯದಲ್ಲಿವಿಷ್ಣುವನ್ನೂ, ಮತ್ತೊಂದು ತುದಿಗೆ ಶಿವನನ್ನೂ ಆಹ್ವಾನಿಸಿದ. ಮಹಾ ರಾಜರುಗಳ ಬಿಂಕವನ್ನು ಭಂಗಿಸಿದ ಧನುಸ್ಸು ಇದೇ ಏನು? ಎಂದು ನಿರಾಯಾಸವಾಗಿ ಮೇಲಕ್ಕೆತ್ತಿ ಹೆದೆಯನ್ನು ತೊಡಿಸಿದ.ಕಿವಿಯವರೆಗೆ ತಿರುವನ್ನು ಸೆಳೆದು ತನ್ನಲ್ಲೇ ಹೇಳಿಕೊಂಡ ‘ಬಿಲ್ಲು ಮಾಗದಾದಿಗಳು ಹೆದರುವಷ್ಟು ಘನವಾದದ್ದರಂತೆ ಕಾಣುತ್ತಿಲ್ಲವಲ್ಲ! ಇರಲಿ ನನಗೆ ಹೆಸರು ಬರಲೆಂದೇ ಹಾಗೆ ಮಾಡಿರಬೇಕು’. ಐದು ಬಾಣಗಳನ್ನು ಹೂಡಿ ಕೆಳಗೆ ಹೊಳಹನ್ನು ನೋಡಿ ಗುರಿಯಿಟ್ಟ.

ಪರಿಣಾಮ ಹೇಳಬೇಕೇ? ಗುರಿ ತಾಗಿದ್ದೇ ಅಲ್ಲೋಲ ಕಲ್ಲೋಲವಾಯಿತು. ಹೇಗೆ?

ಆಯೆನುತ ಬೊಬ್ಬಿರಿದು ವಿಪ್ರ ನಿಕಾಯ ಕುಣಿದುದು,
ಕಮಲಮುಖಿ ನಿರ್ದಾಯದಲಿ ಸೇರಿದಳು ಹಾರುವಗೆನುತ
ಹರುಷದಲಿ
ಆ ಯುವತಿ ಜನ ಜಲಧಿ ಮಸಗಿತು
ಬಾಯ ಮೌನದ ಬೆರಳ ಮೂಗಿನ ರಾಯರಿದ್ದರು
ಬಿಗಿದ ಬೆರಗಿನ ಹೊತ್ತ ದುಗುಡದಲಿ…,’

ಮೊದಲ ಪ್ರತಿಕ್ರಿಯೆ ವಿಪ್ರ ಸಮುದಾಯದಿಂದ. ಈ ಅನಿರೀಕ್ಷಿತ ಸಾಧನೆಯಿಂದ ಉನ್ಮಾದಗೊಂಡು ಹಾರಿ ಕುಣಿದರು ;ದ್ರೌಪದಿ ಹಾರುವನೊಬ್ಬನ ಸೊತ್ತಾದಳು ಎಂಬ ಹರ್ಷೋದ್ಗಾರ!

ಸೋತ ರಾಜರನ್ನು ಗೇಲಿ ಮಾಡಿ ನಗುತ್ತಿದ್ದ ಯುವತಿಯರ ಗುಂಪಿನಲ್ಲಿ ಈ ಅನಿರೀಕ್ಷಿತ ಗೆಲುವಿನ ಗದ್ದಲದ ಸಂಭ್ರಮಾಚರಣೆ!

ದಿವ್ಯ ನಿರ್ಲಕ್ಷ್ಯ, ಅಹಂಹಾರದಿಂದ ಬೀಗುತ್ತಿದ್ದ ರಾಜ ಸಮೂಹದಲ್ಲಿ ಸಂಪೂರ್ಣ ಮೌನ;ಮೂಗಿನ ಮೇಲೆ ಬೆರಳು; ಅರಗಿಸಿಕೊಳ್ಳಲಾರದ ಬೆರಗು;ಜತೆಗೆ ಒಳಗೊಳಗೇ ಅಪಮಾನದ, ನಾಚಿಕೆಯ, ಕ್ರೋಧದ ಭಾವಗಳಿಂದ ಆದ ದುಗುಡ. ಯಾವ ಕ್ಷಣದಲ್ಲಾದರೂ ಸ್ಫೋಟಿಸುವ ಜ್ವಾಲಾಮುಖಿಯ ನೀರವತೆ!
ಕಿವಿ ಗಡಚಿಕ್ಕಿದ ಕೊಂಬು ಕಹಳೆಗಳ ಯಶೋಭೇರಿ ಮೊಳಗಿದ್ದೇ ತಡ, ಕತ್ತ್ತಿ ಹಿರಿದ ಸಹಸ್ರಾರು ವೀರ ಭಟರು ರಾಜಾಜ್ಞೆಯಂತೆ ಓಡಿ ಬಂದು ಅರ್ಜುನನ ಸುತ್ತ ಕಾವಲಿಗೆ ನಿಂತರಂತೆ!

ಗೆದ್ದ ವೀರ ತಾನೆ? ಅಸಂತುಷ್ಟ ರಾಜಸಮೂಹದಲ್ಲಿ ಏನು ಬೇಕಾದರೂ ಸಂಭವಿಸಬಹುದಲ್ಲವೇ? 

ಪ್ರಸಂಗವನ್ನು ಅತ್ಯಂತ ನಾಟಕೀಯವಾಗಿ,ಸ್ವಾರಸ್ಯಕರವಾಗಿ ವಿವರಿಸಿದ್ದಾನೆ ಕವಿ.

ಕುಮಾರವ್ಯಾಸ ಪ್ರತಿಷ್ಠಾನ
೭/೪/೨೦೧೭