Wednesday, October 26, 2016

ಐಸಲೇ ಕುಮಾರವ್ಯಾಸ!! -೪೬-

ವಿರಾಟ ಪ ೭-೫೧

ವಿರಾಟನ ಗೋವುಗಳನ್ನು ಕೌರವರು ಅಪರಿಸಿದ್ದರು, ಅರ್ಜುನ ಬಿಡಿಸಿ ತೆರಳಿಸಿದ್ದು ಕಥೆ. ಅವುಗಳಿಗಾಗಿ ಒಂದು ಮಹಾ ಯುದ್ಧವೇ ನಡೆದುಹೋಯಿತು!

ಆದರೆ ಗೋವುಗಳಿಗೆ ಇದಾವುದರ ಪರಿವೆಯೂ ಇಲ್ಲದ ತಮ್ಮದೇ ಮುಗ್ಧ ಲೋಕ! ಮಹಾ ಕವಿ ಕುಮಾರವ್ಯಾಸ 'ತಿರುಗಿ ಕೆಂದೂಳಿಡುತ ತುರುಗಳು ಪುರಕೆ ಹಾಯ್ದವು '(ಕೆಂಪು ಧೂಳೆಬ್ಬಿಸುತ್ತಾ ನಗರದ ಕಡೆಗೆ ಹೋದವು) ಎನ್ನುತ್ತಾನೆ.

ಅಷ್ಟಕ್ಕೇ ನಿಲ್ಲುವುದಿಲ್ಲ, ಆ ಗೋ ಲೋಕದ ಚಟುವಟಿಕೆಯ ಒಂದು ಕಿರು ಚಿತ್ರವನ್ನು ಸಹಾ ಕೊಡುತ್ತಾನೆ! ಹೇಗಿತ್ತು ಆ ಚಿತ್ರ?

'ಕೆಲವು ಕಡೆಗಂದಿಗಳು
ಬಾಲದ ಬಳಿಗೆ ಮೂಗಿಟ್ಟು
ಅಡಿಗಡಿಗೆ ಮನ ನಲಿದು,
ಮೋರೆಯನೆತ್ತಿ ಸುಕ್ಕಿಸಿ,
ಮತ್ತೆ ಹರಿಹರಿದು,
ಮಲೆತು ಕಾಲಲಿ ನೆಲನ ಕೆರೆದು,
ಅವ್ವಳಿಸಿ ಮತ್ತೊಂದಿದಿರುವರೆ
ಬಲುಸಲಗ ಈಡಿರಿದಾಡುತಿದ್ದುದು ಹಿಂಡು ಹಿಂಡಿನಲಿ'

'ಕೆಲವು ತುಂಟ ಕಡಸುಗಳು( ಇನ್ನೂ ಕರು ಹಾಕದ ಯುವ ಪ್ರಾಯದ್ದು) ಹಸುಗಳ  ಬಾಲವಸ್ನ್ನು ಮೂಸುವುದು, ಮುಖವನ್ನು ಮೇಲೆತ್ತಿ ,ಮೊರೆಯನ್ನು ಕಿವುಚಿ ಖುಷಿಗೊಂಡು ಹಿಗ್ಗುತ್ತಿದ್ದವಂತೆ. ಮತ್ತೆ ಕೆಲವು ಅಲ್ಲಿಂದ ಇಲ್ಲಿಗೆ ಅಡ್ಡಾಡುತ್ತಾ, ಮದದಿಂದ ನೆಲವನ್ನು ಕಾಲಿನಿಂದ ಕೆರೆಯುತ್ತಾ, ಎದುರಿಗೆ ಬಂದ ಮತ್ತೊಂದು ಸಲಗವನ್ನು ಕೋಡಿನಿಂದ ತಿವಿದಾಡುತ್ತಾ ಕಾದುತ್ತಿದ್ದವು. ಇದು ಅಪಾರವಾದ ವಿರಾಟನ ಗೊಸಂಪತ್ತಿನ ಹಿಂಡುಗಳಲ್ಲಿ ನಡೆಯತ್ತಿದ್ದ ವಿದ್ಯಮಾನ!

ಯಾರಾದರೂ ಅಪಹರಿಸಲಿ, ಯಾರಾದರೂ ಮರಳಿಸಲಿ ಅವುಗಳ ಆನಂದ ಅವಕ್ಕೆ!

ಹಸುಗಳ ಹಿಂಡನ್ನು ನೋಡಿದವರಿಗೆ ಈ ದೃಶ್ಯದ ವರ್ಣನೆ ಎಷ್ಟು ಸಹಜ ,ಸೂಕ್ಷ್ಮವಾಗಿದೆ ಎಂದು ತಿಳಿಯುತ್ತದೆ.

ಕೇವಲ ಭಾರತದ ಕಥೆಯಷ್ಟೇ ಅಲ್ಲ. ಕುಮಾರವ್ಯಾಸ, ಬದುಕಿನ ಒಂದೊಂದು ಸೂಕ್ಷ್ಮವನ್ನೂ ಗಮನಿಸಿ ಬೆರಗಾಗುವಂತೆ ವರ್ಣಿಸಬಲ್ಲವ!

ಕುಮಾರವ್ಯಾಸ ಪ್ರತಿಷ್ಠಾನ

೨೬/೧೦/೨೦೧೬
#

Tuesday, October 25, 2016

ಐಸಲೇ ಕುಮಾರವ್ಯಾಸ!! -೪೫-

ವಿರಾಟ ಪ ೭-೪೦

ಯುದ್ಧಕ್ಕೆ ಬಂದವನು ಅರ್ಜುನ ಎಂಬ ಅಂಶ ಬಲವಾಗುತ್ತಲೇ ಕೌರವರ ತಂತ್ರ ಬದಲಾಯಿತು!

ದುರ್ಯೋಧನ ಮತ್ತು ಕೆಲವರು ಗೋವುಗಳೊಂದಿಗೆ ಹಸ್ತಿನಾಪುರಕ್ಕೆ ಪ್ರಯಾಣ ಮಾಡುವುದು, ದ್ರೋಣ, ಭೀಷ್ಮ, ಕರ್ಣ ಮೊದಲಾದ ವೀರರು ಅರ್ಜುನನನ್ನು ತಡೆದು ಕಾದುವುದು. ಸರಿ, ದುರ್ಯೋಧನ ಗೋ ಸಂಪತ್ತಿನೊಂದಿಗೆ ಹೊರಟದ್ದನ್ನು ಅರ್ಜುನ ನೋಡಿ ಉತ್ತರನ ಸಾರಥ್ಯದಲ್ಲಿ ಬೆನ್ನಟ್ಟಿದ.

ದಶಕಗಳ ಕಾಲ ಯುದ್ಧ ಮಾಡದೆ ಇದ್ದ ಅರ್ಜುನನಿಗೆ ದೊಡ್ಡ ಅವಕಾಶ!. ಉತ್ತರನ ಮೂಲಕ ತಾವು ಬನ್ನಿಯ ಮರದಲ್ಲಿ ಅಡಗಿಸಿಟ್ಟಿದ್ದ ಮಹಾ ಅಸ್ತ್ರಗಳನ್ನು ಪಡೆದದ್ದಾಗಿತ್ತು. ಶತ್ರುಸೇನೆ ತಲ್ಲಣಿಸುವಂತಹ ರೀತಿಯಲ್ಲಿ ಬಾಣ ಪ್ರಯೋಗದ ಆರಂಭ!

ಮಹಾಭಾರತದಲ್ಲಿ ಎಷ್ಟೊಂದು ಜನ ಮಹಾರಥರಿದ್ದರೂ ಅರ್ಜುನನ ಬಿಲ್ಗಾರಿಕೆಯೇ ಭಿನ್ನವಾದದ್ದು.ಅವನ ನೈಪುಣ್ಯ, ದಿಟ್ಟತನ ,ನಿಖರವಾದ ಗುರಿ ಇವಕ್ಕೆ ಎಣೆಯಿಲ್ಲ. ಆನೆ, ಕುದುರೆ, ಪದಾತಿಗಳ ಹೆಣಗಳ ರಾಶಿ , ನೆತ್ತರ ಹೊಳೆ ಇವು  ಒತ್ತಟ್ಟಿಗಿರಲಿ; ಅವಿರತವಾದ ಬಾಣಪ್ರಯೋಗದ ಪರಿಣಾಮವನ್ನು ಕುಮಾರವ್ಯಾಸ ವರ್ಣಿಸುವ ರೀತಿ ಅದ್ಭುತವಾಗಿದೆ ನೋಡಿ;

'ಮುಂದೆ ಕವಿದಂಬುಗಳು ಸುಭಟರ ಕೊಂದು ಬಿದ್ದವು,
ಮತ್ತೆ ಬಳಿಯಲಿ ಬಂದವಕೆ ಗುರಿಯಿಲ್ಲ
ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇಡೆಂದು
ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳು
ಎಲೆ ಜನಮೇಜಯ ಕ್ಷಿತಿಪ ..,'

ಪಾರ್ಥ ಸರಣಿ ಸರಣಿಯಾಗಿ ಬಾಣ ಬಿಡುತ್ತಿದ್ದನಷ್ಟೇ?

'ಮುಂದೆ ಹೋದ ಬಾಣ ಗುರಿಯಲ್ಲಿದ್ದ ಯೋಧನನ್ನು ತಪ್ಪದೇ ಕೊಂದು ಕೆಡವುತ್ತಿತ್ತು. ಅದರ ಹಿಂದೆ ಬಂದ ಬಾಣಕ್ಕೆಯಾವುದೇ ಗುರಿ ಸಿಗದೆ ವ್ಯರ್ಥವಾಗುತ್ತಿತ್ತು. ಹಾಗಾಗಿ ಬಾಣಗಳು ಪಾರ್ಥನನ್ನು ಬೇಡಿಕೊಳ್ಳುತ್ತಿದ್ದವಂತೆ! ಅಯ್ಯಾ ಪಾರ್ಥ, ಒಂದು ಗುರಿಗೆ ಎರಡೆರಡು ಬಾಣಗಳನ್ನು ದಯಮಾಡಿ ತೊಡಬೇಡ. ನಾವು ಮಂತ್ರಾಸ್ತ್ರಗಳು, ಗುರಿಯನ್ನು ಸಾಧಿಸದೆ ವ್ಯರ್ಥವಾಗುವುದು ಶೋಭೆಯಲ್ಲ.'

ತುಸು ಉತ್ಪ್ರೇಕ್ಷೆ ಅನಿಸಿದರೂ ಆ ಕಾಲದ ಧನುರ್ವಿದ್ಯೆಯಲ್ಲಿ ನಿಸ್ಸೀಮನಾದ ಅರ್ಜುನನ ರಣಕೌಶಲವನ್ನು ಬೇರೆ ಹೇಗೆ ಹೇಳಲು ಸಾಧ್ಯ?

ಕುಮಾರವ್ಯಾಸ ಪ್ರತಿಷ್ಠಾನ

೨೫/೧೦/೨೦೧೨
#



Sunday, October 23, 2016

ಐಸಲೇ ಕುಮಾರವ್ಯಾಸ!! -೪೪-

ವಿರಾಟ ಪ ೭-೨೨

ದ್ರೋಣಾಚಾರ್ಯರನ್ನು ರೇಗಿಸುತ್ತಾ ಕರ್ಣ ಬ್ರಾಹ್ಮಣರ ನಡೆ-ನುಡಿಯನ್ನು ವಿಡಂಬಿಸಿದ್ದನ್ನು ನೋಡಿದೆವು.

ತಂದೆಯ ಪರವಾಗಿ ತಿರುಗಿಬಿದ್ದ ಅಶ್ವತ್ಥಾಮ ಸುಮ್ಮನಿದ್ದಾನೆಯೇ?' ನಗುವೆ ವಿಪ್ರರ, ಆವ ರಾಯರ ಮಗನು ಹೇಳಾ. '( ವಿಪ್ರರನ್ನು ಆಡಿಕೊಳ್ಳುವ ನೀನು ಯಾವ ರಾಜನ ಮಗ ಹೇಳು?)' ನೀನಾರು ಇದರೊಳಗೆ ಕೊಂಬವನೋ ಕೊಡುವವನೋ?' (ಕೊಡುವ ಜಾತಿಗೆ ಸೇರಿದ ರಾಜನೂ ಅಲ್ಲ, ಕೊಳ್ಳುವ ಬ್ರಾಹ್ಮಣನೂ ಅಲ್ಲ) ಹೀಗೆ ವಿವಾದದ ಆರಂಭ!

ದುರ್ಯೋಧನನ ಸಮಸ್ಯಯೇ ಬೇರೆ. ಬಂದಿರುವವನು ಪಾರ್ಥನೇ ಆಗಿದ್ದರೆ ಇನ್ನೂ ಮುಗಿಯದ ಅಜ್ಞಾತವಾಸದ ಅವಧಿಯ ನೆಪದಲ್ಲಿ ಪುನಃ ಪಾಂಡವರನ್ನು ಕಾಡಿಗಟ್ಟುವ ಯೋಜನೆ ಅವನದು. ಭೀಷ್ಮರ ಬಳಿ ಹೋಗಿ ನಿವೇದಿಸಿದ. ತಾತಾ, ಅಜ್ಞಾತವಾಸದ ಅವಧಿ ಇನ್ನೂ ಸವೆದಿಲ್ಲ;  ನನ್ನಲ್ಲಿ ಲೆಕ್ಕವಿದೆ ಎಂದ.

ಹಿರಿಯರಾದ ಭೀಷ್ಮರ ಮನಸ್ಸಿನಲ್ಲಿ ಈ ಲೆಕ್ಕಾಚಾರಗಳೆಲ್ಲ ನಡೆಯದೇ ಇರುತ್ತದೆಯೇ?. ಅವರು ಸ್ಪಷ್ಟವಾಗಿ ಅನುಭವಿಯಾಗಿ ದುರ್ಯೋಧನನಿಗೆ ಹೇಳುವ ಮಾತುಗಳನ್ನು ಕುಮಾರವ್ಯಾಸ ಕಡೆದಿರುವುದನ್ನು ನೋಡಿ:

'ಮಗನೇ ಕೇಳ್,
ಈರೈದು ವರ್ಷಕೆ ಮಿಗುವವು ಎರಡೇ ಮಾಸ,
ಮಾಸಾದಿಗಳನವರು ಅನುಭವಿಸಿದರು
ಹದಿಮೂರು ವತ್ಸರವ,
ಮಿಗುವವಧಿ ಬುಧರರಿಯೆ
ನಿನ್ನಿನ ಹಗಲು ನಿನ್ನದು
ಪಾಂಡು ತನಯರು ಹೊಗುವಡೆ
ಇಂದಿನ ದಿವಸವವರದು
ಕಂದ ಕೇಳೆಂದ...'

'ಮಗೂ, ದುರ್ಯೋಧನ, ಹತ್ತು ವರ್ಷಕ್ಕೆ ಎರಡು ಅಧಿಕ ಮಾಸಗಳು ಸಹಾ ಬರುತ್ತವೆ. ವರ್ಷಕ್ಕೆ ಹನ್ನೆರಡು ಮಾಸದಂತೆ ಅವರ ವನವಾಸ,ಅಜ್ಞಾತವಾಸದ ಅವಧಿಯನ್ನು ಅವರು ಪೂರ್ಣಗೊಳಿಸಿದ್ದಾರೆ. ಆ ಲೆಕ್ಕದಂತೆ ನಿನ್ನೆಯ ದಿನದ ಹಗಲು ನಿನ್ನದಾಗಿತ್ತು. ಆದರೆ ಇಂದಿನ ಹಗಲು ಪಾಂಡವರ ಸ್ವಂತದ್ದು. ನೀನು ಪ್ರಶ್ನಿಸುವ ಹಾಗಿಲ್ಲ.'

'ಅಷ್ಟೇ ಅಲ್ಲ ಸಮುದ್ರ ಎಲ್ಲೇ ಮೀರಿದರೂ, ಭೂಭಾರವನ್ನು ಹೊತ್ತಿರುವ ದಿಕ್ಕರಿಗಳು ತಮ್ಮ ಹೊರೆಯನ್ನು ಇಳಿಸಿದರೂ, ಬೆಟ್ಟಗಳು ನಡೆದಾಡಿದರೂ ಸರಿ, ಯುಧಿಷ್ಠಿರ ಸತ್ಯಭಾಷೆಯನ್ನು ಮೀರುವವನಲ್ಲ ತಿಳಿದುಕೋ,'

ವರ್ಷಕ್ಕೆಹನ್ನೆರಡು ತಿಂಗಳಿನ ಲೆಕ್ಕದಲ್ಲಿ ಪಾಂಡವರ ಅವಧಿ ಕಳೆದಿತ್ತು. ಆದರೆ ವನವಾಸಕ್ಕೆ ಹೊರಟ ತಿಥಿಯನ್ನು ಪರಿಗಣಿಸಿದರೆ ಹದಿಮೂರು ವರ್ಷ ಇನ್ನೂ ಮುಗಿದಿರಲಿಕ್ಕಿಲ್ಲ. ಅಧಿಕ ಮಾಸ ನಾಲ್ಕು ವರ್ಷಕ್ಕೊಮ್ಮೆ ಬರುವುದು ಎಲ್ಲರಿಗೂ ಗೊತ್ತು. ಆ ವರ್ಷ ಕಳೆಯಲು ಹದಿಮೂರು ತಿಂಗಳು ಬೇಕಾಗುತ್ತದೆ. ಈ ತಾಂತ್ರಿಕ ಅಂಶವನ್ನು ಭೀಷ್ಮರು ತಿಳಿಸಿ ಅವಧಿ ಪೂರೈಸಿದ್ದನ್ನು ಸಮರ್ಥಿಸುತ್ತಾರೆ.

ಮನೆಯ ಹಿರಿಯರಿಗೆ ಮಕ್ಕಳು, ಮೊಮ್ಮೊಕ್ಕಳಲ್ಲಿರುವ ಕಳಕಳಿ, ಅವರಿಗಾಗಿ ಮರುಗುವ , ನೋಯುವ ಮನೋಭಾವ ವೃದ್ಧರಾದ ಭೀಷ್ಮರಿಗೆ ಒಂದೊಂದು ದಿನನ ಲೆಕ್ಕವನ್ನೂ ಕರಾರುವಾಕ್ಕಾಗಿ ಮನಸ್ಸಿನಲ್ಲೇ ಎಣಿಸುವಂತೆ ಮಾಡಿದ್ದೀತು!

'ನಿನ್ನಿನ ಹಗಲು ನಿನ್ನದು, ಇಂದಿನ ದಿವಸ ಅವರದು... ' ಕವಿ ವ್ಯಾವಹಾರಿಕ ಭಾಷೆಯನ್ನೂ ಹೇಗೆ ಉತ್ತಮ ಕಾವ್ಯ ಮಾಡಬಲ್ಲ ಎಂಬುದರ ನಿದರ್ಶನ!

ಕುಮಾರವ್ಯಾಸ ಪ್ರತಿಷ್ಠಾನ
೨೨/೧೦/೨೦೧೬
#












Thursday, October 20, 2016

ಐಸಲೇ ಕುಮಾರವ್ಯಾಸ!! -೪೩-

ವಿರಾಟ ಪ ೭-೧೨

ಸಂಭಾಷಣೆಗಳಲ್ಲಿ ಕುಮಾರವ್ಯಾಸ ಬಳಸುವ ಮಾತುಗಾರಿಕೆಯನ್ನು ನೋಡಿಯೇ ಆನಂದಿಸಬೇಕು. ವಿಜಯನಗರದ ಆಳ್ವಿಕೆಯ ಅವಧಿಯಲ್ಲಿ ಸಾರ್ವಭೌಮ ಎನಿಸಿದ್ದ ಕನ್ನಡದ ಸಿರಿತನ, ಶಕ್ತಿ, ಶಬ್ದ ಸಂಪತ್ತು, ಜನಪದೀಯತೆ ಇವೆಲ್ಲದರ ಹಬ್ಬ ನೋಡಲು ಸಿಗುತ್ತದೆ. ಕನ್ನಡದಲ್ಲಿ ಎಷ್ಟುಪರಿಣಾಮಕಾರಿ ಪ್ರಯೋಗಗಳಿದ್ದವೆಂದು ಹೆಮ್ಮೆಯಾಗುತ್ತದೆ.

ಅರ್ಜುನ ಗಂಡುಡುಗೆ ಧರಿಸಿ  ಯುದ್ಧಕ್ಕೆ ಅಣಿಯಾದಾಗ ಜಗತ್ತೇ ನಡುಗುವಂಥಾ ಧ್ವನಿ ಮೂಡಿದ್ದನ್ನು ನೋಡಿದೆವು. ಕೌರವರ ಪಾಳೆಯದಲ್ಲಿ ಜಿಜ್ಞಾಸೆ ಆರಂಭವಾಯಿತು. ಅವನು ಪಾರ್ಥನೇ ಸರಿ!

ಇಂಥಾ ಅದ್ಭುತ ರವ, ಮೇಲೆ ಮೇಲೆ ಕಾಣುತ್ತಿರುವ ಅಪಶಕುನ ಪಾರ್ಥನನ್ನೇ ಸೂಚಿಸುತ್ತಿದೆ, ಇವತ್ತು ನಮಗೆ(ಕೌರವರಿಗೆ) ಆಪತ್ತು ಖಂಡಿತಾ ಎಂದು ದ್ರೋಣ. ನೀವು ಯಾವಾಗಲೂ ಅರ್ಜುನನನ್ನು ಹೊಗಳುವಿರಿ ,ಅದು ನಿಮ್ಮ ದೌರ್ಬಲ್ಯ ನಾನೇನೂ ಅರ್ಜುನನಿಗಿಂತಾ ಕಡಿಮೆಯಲ್ಲ ಎಂದು ಕರ್ಣ. ಸರಿ, ವಾದ ವಿವಾದದ ಆರಂಭ!

' ನರನ ತೆತ್ತಿಗರಹಿರಿ, ತತ್ತರೆ ಪುರದೊಳಗೆ ಕೌರವನವರು, ದುಶ್ಚರಿತರು,ಎರಡಿಟ್ಟಿಹಿರಿ, ಖೂಳರು...' ( ಅರ್ಜುನನಿಗೆ ಮಾರಿಕೊಂಡಿದ್ದೀರಿ, ನೆಪಕ್ಕೆ ಕೌರವನವರು,ಇಬ್ಬಗೆಯ ನೀತಿ ನಿಮ್ಮದು,ಹೀನ ಜನ)ಎಂದು ಕರ್ಣ ;

'ಬಾಗಿಸಿದ ಬಿಲ್ಲಿನಲಿ ರಾಯರ ಮೂಗ ಕೊಯ್ದನು ಮದುವೆಯಲಿ, ನೀನೀಗಲೊದರುವೆ ( ಸ್ವಯಂವರದಲ್ಲಿ ಬಿಲ್ಲು ಬಾಗಿಸಿ ಮಹಾರಥರ ಮೂಗು ಕೊಯ್ದವ ಪಾರ್ಥ, ಸಾಮಾನ್ಯನಲ್ಲ , ನೀನು ಸುಮ್ಮನೆ  ಹೊಗಳಿಕೊಳ್ಳುವವ' ಎಂದು ದ್ರೋಣ;

ಬಿರುನುಡಿಗಳು ಸಹಜವಾಗಿ  ಅವರ ಜಾತಿನಿಂದನೆಯತ್ತ ತಿರುಗುತ್ತವೆ. ಕರ್ಣ ಹೇಳುವ ಮಾತು ನೋಡಿ:

'ಹಣೆಗೆ ಮಟ್ಟಿಯ ಬಡಿದು
ದರ್ಬೆಯ ಹಣಿದು ಬೆರಳಲಿ ಸೆಕ್ಕಿ,
ಧೋತ್ರದ ದಣಿಬವನು ನಿರಿವಿಡಿದು,
ಮಹಳದ ಮನೆಯ ಚೌಕಿಯಲಿ,
ಮಣೆಗೆ ಮಂಡಿಸಿ ಕುಳ್ಳಿತು ಉಂಬ
ಔತಣದ ವಿದ್ಯೆಯ  ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ'

"ಹಣೆಯಲ್ಲಿ ವಿಭೂತಿಯ ಪಟ್ಟೆ ಬಳಿದುಕೊಂಡು,ದರ್ಬೆಯನ್ನು ಬೆರಳಲ್ಲಿ ಸಿಕ್ಕಿಸಿಕೊಂಡು, ಧೋತ್ರದ ನೆರಿಗೆಯನ್ನು ಹರಡಿಕೊಂಡು ಅರಮನೆಯ ಅಂಗಳದಲ್ಲಿ ಮಣೆಯ ಮೇಲೆ ಕುಳಿತು ಉಣ್ಣುವ ಔತಣದ ವಿದ್ಯೆಯಲ್ಲಿ ನೀವು ನಿಪುಣರು , ನಿಮಗೆ ರಣವಿದ್ಯೆ ಎಲ್ಲಿ ಗೊತ್ತು?"

ಕುಮಾರವ್ಯಾಸ ತನ್ನ ಬ್ರಾಹ್ಮಣಜಾತಿಯನ್ನೂ ಲಘು ಹಾಸ್ಯದಿಂದ ವಿಡಂಬಿಸಿಕೊಳ್ಳುವಲ್ಲಿ ಹಿಂದೆ ಬೀಳುವುದಿಲ್ಲ. ಎಲ್ಲಾ ಕಡೆ ಬ್ರಾಹ್ಮಣರ ಭೋಜನಪದ್ಧತಿಯನ್ನು ತಾನೇ ಲೇವಡಿ ಮಾಡುವುದು?

ಮಹಾಭಾರತದ ಕಾಲಕ್ಕಿಂತಾ ಕುಮಾರವ್ಯಾಸನ ಕಾಲದ ಸಾಮಾಜಿಕ ಸ್ಥಿತಿಯ ಸೊಗಡು ಕಾಣುತ್ತಲ್ಲವೇ?. ನಮಗೆ ಖುಷಿ ಕೊಡುವುದು ಕವಿಯ ಮಾತುಗಾರಿಕೆ.

ಕುಮಾರವ್ಯಾಸ ಪ್ರತಿಷ್ಠಾನ

೨೦/೧೦/೨೦೧೬

#




Monday, October 17, 2016

ಐಸಲೇ ಕುಮಾರವ್ಯಾಸ!! -೪೨-

ವಿರಾಟ ಪ ೬-೬೩

ಕ್ರೀಡೆಯಲ್ಲಿ ನಿಸ್ಸೀಮನಾದವನಿಗೆ ಆಟ ನೋಡುತ್ತಾ ಸುಮ್ಮನಿರುವುದು ಕಷ್ಟ. ಕಲೆಯಲ್ಲಿ ನಿಪುಣನಾದವನಿಗೆ ಕಲಾಪ್ರದರ್ಶನ ನಡೆಯುವಾಗ ಇಡೀ ಶರೀರ ಪಾಲ್ಗೊಳ್ಳಲು ಹಾತೊರೆಯುವುದು ಸಹಜ. ಅಂದಿನ ಯುಗದ ಪರಮವೀರ ಅರ್ಜುನನಿಗೆ ಯುದ್ಧದ ಅವಕಾಶ ಇರುವಾಗ ಸುಮ್ಮನೆ ನೋಡುತ್ತಾ ಸಾರಥಿಯಾಗಿರುವುದು ಸಾಧ್ಯವೇ?

ಉತ್ತರನನ್ನು ಸಾರಥಿಯಾಗಲು  ಹೇಗೋ ಒಪ್ಪಿಸಿ ತಾನೆ ಯುದ್ಧ ಮಾಡಲು ಪರಮ ಉತ್ಸಾಹದಿಂದ ಸಿದ್ಧನಾದ. ತನ್ನ ನಿಜವಾದ ರೂಪವನ್ನೂ ಉತ್ತರನಿಗೆ ತಿಳಿಸಿದ. ಶಿಖಂಡಿತನದ ಸೂಚಕವಾದ ತನ್ನ ಕೈ ಬಳೆಗಳನ್ನು ಕೌರವರ ಗಂಟಲ ಬಳೆಯನ್ನು ಮುರಿದ ಹಾಗೆ ಲಟಲಟ ಮುರಿದ. ಮಲ್ಲರಿಗೆ ಉಚಿತವಾದ ವೀರಗಾಸೆ ಹಾಕಿ,ತಲೆಗೂದಲನ್ನು ಹೆಂಗಸಿನ ಜಡೆಯಿಂದ ಪುರುಷರಿಗೆ ಉಚಿತವಾಗಿ ಮಾರ್ಪಡಿಸಿಕೊಂಡ. ತಿಲಕ ಹಾಕಿಕೊಂಡ. ಕಠಾರಿಯನ್ನು ಸೊಂಟಕ್ಕೆ ಬಿಗಿದ, ಕವಿ ಹೇಳುತ್ತಾನೆ; 'ಗಂಡಂದವನು ಕೈಕೊಂಡ'.

ಪಾರ್ಥ ಸಿದ್ಧನಾಗಿ ಗರ್ಜಿಸಿ ಧನುಸ್ಸಿನ ಹೆದೆಯನ್ನೊಮ್ಮೆ ಭಾರೀ ಶಬ್ದದೊಂದಿಗೆ ಮೀಟಿ ತನ್ನ ಶಂಖವನ್ನು ಊದಿದನೋ ಇಲ್ಲವೋ, ದಿಕ್ಕುಗೆಡಿಸುವ ಭಯಂಕರವಾದ ಶಬ್ದ ಜಾಲ ಹರಡಿತು!

'ತುರಗ ಘರ್ಜನೆ,
ರಥದ ಚೀತ್ಕ್ರುತಿ,
ವರ ಧನುಷ್ಟಂಕಾರ, ಕಪಿಯಬ್ಬರಣೆ
ಪಾರ್ಥನ ಬೊಬ್ಬೆ, ನಿಷ್ಠುರ ದೇವದತ್ತರವ
ಅರರೆ  ಹೊದರೆದ್ದವು
ಗಿರಿವ್ರಜ ಬಿರಿಯೆ
ಜಲನಿಧಿ ಝರಿಯೆ
ತಾರಕೆ ಸುರಿಯೆ,
ಸುರಕುಲ ಪರಿಯೆ
ಭೀತಿಯ ಸಹಿತ ಬಲ ಹರಿಯೆ'
ಕುದುರೆಗಳ ಕೆನೆತ, ರಥಚಕ್ರಗಳ ಚಿರಿಚಿರಿ ,ಧನುಸ್ಸಿನ ಝೇಂಕಾರ,ಧ್ವಜದ ಹನುಮಂತನ ಮೊರೆತ, ಪಾರ್ಥನ ಸಿಂಹನಾದ ಜತೆಗೆ ಶಂಖನಾದ ಈ ಭೋರ್ಗರೆವ ಶಬ್ದಕ್ಕೆ ಗಿರಿಗಳು ಅದುರಿದವು, ಸಮುದ್ರ ಹಿಂಜರಿಯಿತು, ಉಲ್ಕೆಗಳು ಸುರಿದವು , ಆಗಸದಲ್ಲಿ ದೇವತೆಗಳು ಸಹಾ ಬೆಚ್ಚಿ ಚದುರಿದರು, ಅಗಾಧವಾದ ಶತ್ರುಸೇನೆ ಸಹಾ ಹಿಮ್ಮೆಟ್ಟಿತು.

ಈ ಮಹಾ ರಣನಾದದ ಮತ್ತೊಬ್ಬ ಫಲಾನುಭವಿ ಉತ್ತರನ ಪಾಡು?

ತಲೆಗೆ ಸಿಡಿಲು ಹೊಡೆದವನಂತೆ ಮೂರ್ಛೆ ಹೋದ! ಅರ್ಜುನನೇ ಅವನಿಗೆ ಸೆರಗಿನಲ್ಲಿ ಗಾಳಿ ಬೀಸಿ, ರಥದಲ್ಲಿ ಕೂರಿಸಿ ಹೇಳಿದ, 'ಖೇಡನಾಗದಿರು,ಅಂಜದಿರು, ಅಂಜದಿರು, ಅದುಭುತ ಧ್ವನಿ ಮಾಡೆನು'( 'ಹೆದರಬೇಡ, ಮತ್ತೊಮ್ಮೆ ಇಷ್ಟು ಜೋರಾಗಿ ಶಬ್ದವಾಗದಂತೆ ನೋಡಿಕೊಳ್ಳುತ್ತೇನೆ')

ಮಹಾರಥನಿಗೂ, ಸಾಮಾನ್ಯ ಯೋಧನಿಗೂ ಯುದ್ಧದ ಅನುಭವಗಳಲ್ಲಿರುವ ಅಂತರ, ಅರ್ಜುನನ ಉತ್ಸಾಹ, ರಣಪಕ್ವತೆ,ಇವುಗಳ ಮೇಲೆ ಕುಮಾರವ್ಯಾಸ ಬೆಳಕು ಚೆಲ್ಲುತ್ತಾನೆ.

ಪದ್ಯದ ಉತ್ತರಾರ್ಧದಲ್ಲಿ ಬರುವ ಅನುಪ್ರಾಸಗಳು ಸಹಾ ಕವಿಯ ವಾಗ್ಝರಿಗೆ ನಿದರ್ಶನ.

ಕುಮಾರವ್ಯಾಸ ಪ್ರತಿಷ್ಠಾನ
೧೭/೧೦/೨೦೧೬









Thursday, October 13, 2016

ಐಸಲೇ ಕುಮಾರವ್ಯಾಸ !! -೪೦-

ವಿರಾಟ ಪ ೬-೨೩

ರಥದಿಂದ ಇಳಿದು ಓಡಿದ ಉತ್ತರನನ್ನು ಅರ್ಜುನ ಬೆಂಬತ್ತಿ ನಾಲ್ಕೆಂಟು ಹೆಜ್ಜೆಯೊಳಗೆ ಹಿಡಿದ.

ಉತ್ತರ ಹಲ್ಲು ಕಿರಿದು ಬೇಡಿಕೊಂಡ; 'ಸಾರಥಿ, ದಯಮಾಡಿ ಬಿಟ್ಟು ಕಳಿಸು ,ನಿನ್ನ ಬಸಿರಿನಲ್ಲಿ ಪುನಃ ಹುಟ್ಟಿದೆ ಎಂದುಕೊಳ್ಳುತ್ತೇನೆ. ಈ ಸೈನ್ಯದೆದುರು ನಾನು ಕಾದುವುದುಂಟೆ? ಅನ್ಯರಿಂದ ಕೊಲ್ಲಿಸಬೇಡ. ಬೇಕಾದರೆ ಇದೋ,ಕಠಾರಿ! ನೀನೆ ಇರಿದು ಕೊಂದುಬಿಡು'

ಅರ್ಜುನ ನಕ್ಕ.'ಅಯ್ಯೋ ಹೇಡಿ, ನಾನು ನಪುಂಸಕ ಯುದ್ಧಕ್ಕೆ ,ಸಾವಿಗೆ ಅಂಜುತ್ತಿಲ್ಲ. ನೀನು ರಾಜನ ಮಗ. ಇರಿಯಲು ಅವಕಾಶ ಒದಗಿದಾಗ ಜೀವಗಳ್ಳನಂತೆ ಓಡಲು ನಾಚಿಕೆಯಾಗುವುದಿಲ್ಲವೇ?'

ಉತ್ತರನ ಉತ್ತರ ಸಿದ್ಧ: ನೀನು ವೀರ, ನಾನೇ ನಪುಂಸಕ; ಲೋಕದ ಜೀವಗಳ್ಳರಿಗೆ ನಾನೇ ಗುರು, ಆಯಿತೇನು? ಬಿಟ್ಟು ಕಳಿಸು'

ಅರ್ಜುನ ಸಂತೈಸಿದ.' ನೋಡು, ಯುದ್ಧದಲ್ಲಿ ಹಿಮ್ಮೆಟ್ಟಿ  ಓಡಿದರೆ ಮಹಾ ಪಾತಕ. ಮುಂದಿಡುವ ಒಂದೊಂದು ಹೆಜ್ಜೆಗೂ ಅಶ್ವಮೇಧಯಾಗ ಮಾಡಿದ ಫಲ.ಸತ್ತರೆ ದೇವಲೋಕದ ಸ್ತ್ರೀಯರು ದಾಸಿಯರಾಗಿ ಸೇವೆ ಮಾಡುತ್ತಾರೆ.ಇಂದ್ರ ನೆಲಕ್ಕೆಹಾಸಿ ಸ್ವಾಗತಿಸುತ್ತಾನೆ. ವೀರಸ್ವರ್ಗ ಸಿಗುತ್ತದೆ.'

ಉತ್ತರನಿಗೆ ಯಾವುದೂ ಬೇಡ. ಫಲಾಯನವೊಂದರ ವಿನಾ,

'ಧುರದಲೋಡಿದ ಪಾತಕವ
ಭೂಸುರರು ಕಳೆದಪರು,
ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ
ಮಾಡಬಹುದೆಮಗೆ,
ಸುರರ ಸತಿಯರನೊಲ್ಲೆವು
ಎಮಗೆಮ್ಮರಮನೆಯ ನಾರಿಯರೆ ಸಾಕು,
ಎಮ್ಮರಸುತನ ಎಮಗಿಂದ್ರ ಪದವಿಯು,
ಬಿಟ್ಟು ಕಳುಹೆಂದ..,'

'ಅಪ್ಪಾ, ಬೃಹನ್ನಳೆ, ಯುದ್ಧದಲ್ಲಿ ಬೆನ್ನು ತಿರುಗಿಸಿ ಓಡಿದ್ದಕ್ಕೆ ಬಂದ ಪಾಪ ಬರಲಿ; ಅದನ್ನು ಬ್ರಾಹ್ಮಣರ ಮೂಲಕ ಕಳೆದುಕೊಳ್ಳೋಣ. ಇನ್ನು ನಿನ್ನ ಅಶ್ವಮೇಧ! ಇಂದು ನಾನು ಬದುಕಿ ಉಳಿದರೆ ಪ್ರತ್ಯಕ್ಷವಾಗಿಯೇ ಮಾಡಬಹುದು. ನೀನು ಹೇಳುವ ದೇವಲೋಕದ ಸ್ತ್ರೀಯರು ನಮಗೆ ಬೇಡವೇ ಬೇಡ. ನಮ್ಮ ಅರಮನೆಯ ನಾರಿಯರೆ ಸಾಕು. ನಮ್ಮ ಅರಸುತನವೇ ನಮಗೆ ಇಂದ್ರ ಪದವಿ ಇದ್ದ ಹಾಗೆ. ಇದಕ್ಕಿಂತಾ ಹೆಚ್ಚು ನನಗೇನೂ ಬೇಕಿಲ್ಲ ದಯಮಾಡಿ ಬಿಟ್ಟು ಕಳಿಸು'

ಉತ್ತರನ ಮೂಲಕ ಕುಮಾರವ್ಯಾಸ ಆಡಿಸುವ ಒಂದೊಂದು ಮಾತೂ ನಗೆಯುಕ್ಕಿಸುತ್ತವೆ. ಕನ್ನಡ ಸಾಹಿತ್ಯದಲ್ಲಿನ ಉತ್ತಮ ಹಾಸ್ಯದ ಶ್ರೇಷ್ಠ ಉದಾಹರಣೆ ಈ ಪ್ರಸಂಗ.

ಕುಮಾರವ್ಯಾಸ ಪ್ರತಿಷ್ಠಾನ
೧೨/೧೦/೨೦೧೬
#





'

Monday, October 10, 2016

ಐಸಲೇ ಕುಮಾರವ್ಯಾಸ!!

ಉದ್ಯೋ ಪ ೩-೮  -೪೦-

ಕುಮಾರವ್ಯಾಸನ ಪದ್ಯಗಳು ಕರ್ನಾಟಕದ ಜನರ ನಾಲಿಗೆಯಲ್ಲಿ ಎಷ್ಟು ಹಾಸು ಹೊಕ್ಕಾಗಿದ್ದವೆಂದರೆ ದಿನ ನಿತ್ಯದ ಮಾತುಗಳಲ್ಲಿ ಅವನ ಪದ್ಯದ ತುಣುಕುಗಳು ನುಸುಳಿ ಬರುತ್ತಿದ್ದವು.

ಅಂಥ ಸಾವಿರಾರು ಶಕ್ತಿಯುತವಾದ ನುಡಿಗಟ್ಟನ್ನು ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಸೃಷ್ಟಿಸಿದ್ದಾನೆ.

ಕೆಲವು ವೇಳೆ ತಮಾಷೆಗಾಗಿ ಬಳಕೆಯಾದರೆ ಕೆಲವೊಮ್ಮೆ ಪಾಂಡಿತ್ಯಕ್ಕೆ, ಕೆಲವೊಮ್ಮೆ ಗಾದೆ ಮಾತಾಗಿ, ಲೋಕೋಕ್ತಿಯಾಗಿ .

ಈ ಕಾವ್ಯವನ್ನು ಓದುವುದು , ಓದಿಸಿ ಕೇಳುವುದು ಕಡಿಮೆಯಾದಂತೆ ಅಂಥ ಮಾತುಗಳು ಜನರ ನಾಲಿಗೆಯಲ್ಲಿ ಕಡಿಮೆಯಾದವು. ಅವನ ಶಬ್ದ ಸಂಪತ್ತಿನ ಉಪಯೋಗ ಪಡೆಯದ ನಾವು ಮಾತುಗಾರಿಕೆಯಲ್ಲಿ ಬಡವರಾದೆವು ಎಂದರೆ ತಪ್ಪಲ್ಲ.

'ರಾಯ ಹೇಳೆಂದ ಭೂಪ ಕೇಳೆಂದ..'

ಈ ಮಾತೇ ಅತ್ಯಂತ  ಜನಜನಿತವಾದದ್ದು.. ಸ್ವಂತ ಬುದ್ಧಿ ಉಪಯೋಗಿಸದೆ ಬೇರೆಯವರು  ಹೇಳಿದ್ದನ್ನಷ್ಟೇ ಕೇಳಿ ಮಾಡುವವರಿಗೆ ಈ ಮಾತು ತಮಾಷೆಯ  ಗಾದೆಯಂತೆ ಬಳಕೆಯಲ್ಲಿತ್ತು. ಇದು ಕುಮಾರವ್ಯಾಸನ ಕಾವ್ಯ ಓದುವವರಿಗೆ ಚಿರ ಪರಿಚಿತ. ಅನೇಕೆ ಪದ್ಯಗಳು ರಾಯ ಕೇಳೆಂದ.., ಭೂಪ ಕೇಳೆಂದ.. ಎಂದೇ ಅನ್ತ್ಯವಾಗುತ್ತವೆ. ಇದು ಗಾದೆ ಮಾತಿನಂತೆ ಬಳಕೆಯಾಗಬೇಕೆಂದರೆ ಕುಮಾರವ್ಯಾಸ ಭಾರತ ಜನಪದದಲ್ಲಿ ಅದೆಷ್ಟು ಬೆರೆತಿತ್ತು!

ನಿತ್ಯ ಜೀವನದಲ್ಲಿ ಗಾದೆಯಂತೆ  ಬಳಕೆಯಾಗುತ್ತಿದ್ದ ಕವಿಯ ಇನ್ನೂ ಕೆಲವು ಸುಂದರ ಸಾಲುಗಳನ್ನು ನೋಡೋಣವೇ?

'...ನಿರ್ನಾಮರಾದರು ನಿನ್ನ ವೈರಿಗಳು' (ವಿರಾಟ ಪರ್ವದಲ್ಲಿ ದೂತರು ದುರ್ಯೋಧನನಿಗೆ )
'ಗಂಡರೋ ನೀವ್ ಭಂಡರೋ... ( ವಿರಾಟ ಪರ್ವ. ದ್ರೌಪದಿ ಭೀಮನೊಂದಿಗೆ.)
'ನಾಲುವರ ನಡುವಣ ಹಾವು ಸಾಯದು....'( ವಿರಾಟ ಪರ್ವ  ,, )
'ನೀರು ಹೊರಗಿಕ್ಕುವುದು ಮೂರೇ ಬಾರಿ...'(ವಿರಾಟ ಪರ್ವ ,, )
'ಅಣ್ಣನಾಜ್ಞೆಯ ಗೆರೆಯ ದಾಂಟಿದೆನು, ದಾಂಟಿದೆನು.., (ವಿರಾಟ ಪರ್ವ ಭೀಮ ದ್ರೌಪದಿಗೆ )
'ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು.. ( ವಿರಾಟ ಪರ್ವ ,, )
' ನಿನ್ನಾಲಯದೊಳಗೆ ಎಮಗೆ ಎಂತೂಟ ಸಂಭವಿಸುವುದು ಹೇಳೆಂದ.., ( ಉದ್ಯೋ ಪರ್ವ ಶ್ರೀಕೃಷ್ಣ ದುರ್ಯೋಧನನಿಗೆ. )

ಇಂಥವು ಸಾವಿರಾರು ಇವೆ.ಈ ಕವಿಯ ರಮಣೀಯ  ವಾಕ್ಯ  ವಿಶೇಷಗಳನ್ನು ಕಲಿಯುವ, ಕಲಿಸುವ ಮೂಲಕ ನಮ್ಮ ಮಕ್ಕಳ ಬಾಯಲ್ಲಿ ಬಳಕೆಯಾಗಬೇಕೆನ್ನುವುದು  ಎಲ್ಲರ ಅಪೇಕ್ಷೆ.

ಇಂಥ ಲೋಕೊಕ್ತಿಗಳಿಗೆ ಕಳಶವಿಟ್ಟಂತೆ ಉದ್ಯೋಗ ಪರ್ವದಲ್ಲಿ ವಿದುರ ಯುದ್ಧದ ಸಾಧ್ಯತೆಯನ್ನುಅರಿತು ಆತಂಕಗೊಳ್ಳುವ ದೃತರಾಷ್ಟ್ರನಿಗೆ ಹೇಳುವ ತೀಕ್ಷ್ಣವಾದ ಮಾತು ನೋಡಿ:

'ಹಾವು ಹಲವನು ಹಡೆದು
ಲೋಕಕೆ ಸಾವ ತಹವೊಲು
ನೂರು ಮಕ್ಕಳನಾವ ಪರಿಯಲಿ ಹಡೆದು ಕೆಡಿಸಿದೆ
ಭೂಮಿ ಭಾರಕರ,
ಭಾವಿಸಲು ಸರ್ವಜ್ಞ ಸರ್ವಗುಣಾವಲಂಬನನೊಬ್ಬ
ಅರ್ಜುನ ದೇವ ಸಾಲದೇ
ನಾಡ ನಾಯಿಗಳೇನು ಫಲವೆಂದ"

'ಹಾವು ಹಲವಾರು ಮರಿಗಳನ್ನು ಹಡೆಯುತ್ತದೆ. ಅವು ಒಂದೊಂದೂ ಕೂಡಾ ಲೋಕಕ್ಕೆ ಸಾವನ್ನೇ ತರುವ ಪ್ರಾಣಿಗಳಾಗುತ್ತವೆ ಅಷ್ಟೇ. ಅದೇ ರೀತಿ ದೃತರಾಷ್ಟ್ರ, ಭೂಮಿ ಭಾರಕರಾದ ನೂರು ಮಕ್ಕಳನ್ನು ಏನೆಂದು ಪಡೆದೆಯೋ?
ಸರ್ವಜ್ಞ, ಸರ್ವ ಗುಣ ಸಂಪನ್ನನಾದ ಅರ್ಜುನನಂಥ ಒಬ್ಬ ಮಗ ಸಾಲದೇ? ಬೀದಿನಾಯಿಗಳಂಥಾ ಮಕ್ಕಳಿಂದ ಏನು ಫಲ?

ಈ ಸರಳ ಆದರೆ ಪರಿಣಾಮಕಾರಿಯಾದ ಕುಮಾರವ್ಯಾಸನ ಮಾತಿಗೆ ವ್ಯಾಖ್ಯಾನ ಬೇಕಿಲ್ಲ ಅಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೯/೧೦/೨೦೧೬
#














Saturday, October 8, 2016

ಐಸಲೇ ಕುಮಾರವ್ಯಾಸ !! -೩೯-

ವಿರಾಟ ಪ ೬-೧೨-೧೬

ರಥವನ್ನು ನಿಲ್ಲಿಸುವಂತೆ ಉತ್ತರ ಮಾಡಿಕೊಂಡ ಮನವಿ ವ್ಯರ್ಥವಾಯಿತು. ಇದೇನಿದು? ಸೈನ್ಯವನ್ನು ನೋಡಿ ನಾನು ನಡುಗುತ್ತಿದ್ದರೆ ಈ ನಪುಂಸಕ ಲೀಲಾಜಾಲವಾಗಿ ರಥವನ್ನು ಶತ್ರುಸೈನ್ಯದೆಡೆಗೆ ನುಗ್ಗಿಸುತ್ತಿದ್ದಾನೆ!

'ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ?..ನಿನಗೆ ವಿವೇಕ ಎಳ್ಳನಿತಿಲ್ಲ ತೇಜಿಗಳ ತಿರುಹು' ಎಂದ.

ಅರ್ಜುನ ಹೇಳಿದ; ಎಲೆ ಕುಮಾರಕ, ಮೊದಲ ಚುಂಬನದೊಳಗೆ ಹಲು ಬಿದ್ದಂತೆ ಕಾಳಗದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು( ಯುದ್ಧರಂಗಕ್ಕೆ ಹೋಗುವ ಮೊದಲೇ ಸಮರ ಭೀತಿಯಿಂದ ನಡುಗುತ್ತಿರುವೆ,) ನಿನ್ನ ತಂದೆಯ ವಂಶಕ್ಕೆ ಮಸಿ ಬಳಿಯಬೇಡ'

ಉತ್ತರನಿಗೆ ಯಾವ ನೀತಿಯೂ ತಾಗುತ್ತಿಲ್ಲ.'ಎಲೋ,ನಾನು ನಿನ್ನ ಒಡೆಯ  ಆಜ್ಞೆ ಮಾಡುತ್ತಿದ್ದೇನೆ, ಇರಿಗಾರ ಸಾರಥಿ ( ಕೊಲೆಗಡುಕ), ರಥವನ್ನು ನಿಲ್ಲಿಸು'. ಅರ್ಜುನ ರಥವನ್ನು ಮತ್ತೂ ಮುಂದೂಡಿದ. ಉತ್ತರ ಮುಂದಿನ ಸಾಧನೆಗಾಗಿ ಸೆರಗು ಸರಿಪಡಿಸಿಕೊಂಡ;

'ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ...

ಮೃತ್ಯುವೋ ಸಾರಥಿಯೋ ಪಾಪಿಯ
ನೆತ್ತಣಿoದವೆ ಮಾಡಿಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ..''

'ಮೆಲ್ಲನೆ ರಥದ ಹಿಂದು ಹಿಂದಕ್ಕೆ ಬಂದು ಅರ್ಜುನನ ಕಣ್ತಪ್ಪಿಸಿ ರಥದಿಂದ ಹೊರಕ್ಕೆ ನೆಗೆದ. ಸಧ್ಯ, ಬದುಕಿದೆ, ಎಂದು ಕೆದರಿದ ತಲೆಯನ್ನೂ ಲೆಕ್ಕಿಸದೆ( ಹೇಡಿಗಳು, ಶರಣಾಗತರು ಮಾತ್ರ ಕೆದರಿದ ತಲೆಯಲ್ಲಿ ಇರುವವರು) ಬಂದ ದಿಕ್ಕಿನಲ್ಲಿ ವೇಗವಾಗಿ ಓಡತೊಡಗಿದ!
'ಇವನೇನು ಸಾರಥಿಯೋ ಅಥವಾ ಯಮನೋ? ಈ ಪಾಪಿಯನ್ನು ನಾನು ಯಾಕಾದರೂ ಸಾರಥಿಯಾಗಿ ಮಾಡಿಕೊಂಡೆನೋ ಎಂದು ಒಮ್ಮೆ ಹಿಂದಿರುಗಿ ನೋಡಿ, ಪುನಃ ಓಡಲಾರಂಭಿಸಿದ!

ಹೆದರಿದ ಪ್ರಾಣಿಗಳು ತಿರುತಿರುಗಿ ನೋಡಿಕೊಂಡು ಓಡುವ ಹಾಗೆ ಉತ್ತರಕುಮಾರ ಓಡಿ ಅರ್ಜುನನಿಗೇ ಏನು? ಶತ್ರು ಪಾಳೆಯದವರಿಗೂ ನಗೆಯುಕ್ಕಿಸಿದ.
ಹಾಸ್ಯದ ಜತೆಗೆ ಕವಿಯ ಮಾತುಗಾರಿಕೆಯ ಜಾನಪದ ಗುಣ ಸಹಾ ಮರೆಯಲಾರದ್ದು.

(*ಇಲ್ಲಿ ಉದಾಹರಿಸಿದ  ಕುಮಾರವ್ಯಾಸನ ಪದ್ಯಗಳನ್ನು ತಪ್ಪದೇ ಓದಲು ಆಗ್ರಹ.ಯಾಕೆಂದರೆ ಪುಟಗಟ್ಟಲೆ ವ್ಯಾಖ್ಯಾನ ಬರೆದರೂ ಅವನ ಪದ್ಯಗಳ ಮೂಲ ಸೊಗಸನ್ನು ಹಿಡಿದಿಡಲು ಅಸಾಧ್ಯ.)

ಕುಮಾರವ್ಯಾಸ ಪ್ರತಿಷ್ಠಾನ
೭/೧೦/೨೦೧೬
#




Tuesday, October 4, 2016

ಐಸಲೇ ಕುಮಾರವ್ಯಾಸ!! -೩೭-

ವಿರಾಟ ಪ ೬-೭

'ಕುಣಿಸಿ ನಗನೇ...,'

ಸರಿಯಾದ ಸಾರಥಿಯೊಬ್ಬ ಸಿಕ್ಕಿದರೆ ದುರ್ಯೋಧನನಿಗೆ ಸರಿಯಾದ ಪಾಠ ಕಲಿಸುತ್ತಿದ್ದೆ ಎಂದು  ಹೊಗಳಿಕೊಳ್ಳುತ್ತಿದ್ದ ಉತ್ತರನಿಗೆ ಅರ್ಜುನ ದ್ರೌಪದಿಯ ಮೂಲಕ  ಸಂದೇಶ ರವಾನಿಸುತ್ತಾನೆ. ಅರಮನೆಯಲ್ಲಿರುವ ಬೃಹನ್ನಳೆ ಹಿಂದೆ ಅರ್ಜುನನ ಸಾರಥಿಯಾಗಿದ್ದವನಂತೆ!

ಉತ್ತರ ಕೇಳಿಕೊಂಡ; 'ನೀನು ಸಾರಥಿಯಾಗಿ ಸಮರದಲಿ ಉಳುಹಬೇಹುದು, ನೀನು ಮೆಚ್ಹುವ ಹಾಗೆ ಕಾದಿ ತೋರಿಸುತ್ತೇನೆ'. ಅರ್ಜುನ ಹೇಳಿದ, ನಾವು ಭರತ ವಿದ್ಯೆಯಲ್ಲಿ (ನಾಟ್ಯ)ಪ್ರವೀಣರು ಸರಿ ,ಸಾರಥಿತನ ಮರೆತುಹೋಗಿದೆ.ಅದೂ ಅಲ್ಲದೆ ಅರಿಭಟರು ಭೀಷ್ಮಾದಿಗಳು ನಿಲಲರಿದು, ಅಂಥವರೊಂದಿಗೆ ಯುದ್ಧ ಕೊಳ್ಳೆ ಹೊಡೆದಂತಲ್ಲ'

ಉತ್ತರ ಆಶ್ವಾಸನೆ ಕೊಟ್ಟ: 'ನಾನಿರಲು ಭೀಷ್ಮಾದಿಗಳು ನಿನಗೇನ ಮಾಡಲುಬಲ್ಲರು? ಅಳುಕದೆ ನೀನು ನಿಲ್ಲು,ಸಾಕು, ಒಂದು ನಿಮಿಷಕೆ ಗೆಲುವೆನವರುಗಳ' ದ್ರೋಣ, ಕರ್ಣ ,ಗುರುಪುತ್ರ(ಅಶ್ವತ್ಥಾಮ) ನಾನರಿಯದವರಲ್ಲ 'ಎಂದ.

ಅಂತೂ ಸಾರಥಿಯಾಗಿ ಅರ್ಜುನ ರಥ ಓಡಿಸಿದ. 'ಹೊಸ ಪರಿಯ ಸಾರಥಿಯಲಾ , ನಮಗಸದಳವು ಸಂಗಾತ ಬರಲು'(ಯಾರಿವ? ಹೊಸ ಸಾರಥಿ, ನಮಗೆ ಜತೆಯಲ್ಲಿ ಸಾಗಲು ಆಗುತ್ತಿಲ್ಲ ')ಎಂದು ಚತುರಂಗ ಬಲ ಹಿಂದಕ್ಕೆ ಉಳಿಯಿತು.'ಸಮೀರನ ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು' (ಕುದುರೆಗಳು  ಗಾಳಿಯನ್ನೂ ಮೀರಿಸಿ ಶತ್ರುಸೈನ್ಯಕ್ಕೆ ಎದುರಾಗಿ ಓಡಿದವು.)

ಎದುರಿಗೆ ಸಾಗರದೋಪಾದಿಯಾಗಿ ನಿಂತ ಸೈನ್ಯವನ್ನು ದೂರದಿಂದಲೇ ನೋಡಿದ ಉತ್ತರನಿಗೆ ಎದೆ ನಡುಗಿತು! ಕವಿ ಹೇಳುತ್ತಾನೆ 'ವಿರಾಟನ ಮಗನಿಗೆ ದಾವಾಗ್ನಿಯಂತೆ ತೋರಿತು' ತೀರ್ಮಾನಿಸಿದ;'ಈ ಸೈನ್ಯದೊಡನೆ ಕಾದುವಾತ ಪರಶಿವ ಮಾತ್ರ.ಕೌರವನ ಬಲಕ್ಕೆ ನಮೋನ್ನಮಃ! ನಾವು ಕಾದಿ ಗೆದ್ದೆವು ಅದಾಯ್ತು ! ಸಾರಥಿಗೆ ಹೇಳುತ್ತಾನೆ:

'ಹಸಿದ ಮಾರಿಯ ಮಂದೆಯಲಿ
ಕುರಿ ನುಸುಳಿದಂತಾದೆನು ಬೃಹನ್ನಳೆ,
ಎಸಗದಿರು ತೇಜಿಗಳ,
ತಡೆ, ಚಮ್ಮಟಿಗೆಯನು ಬಿಸುಡು,
ಮಿಸುಕ ಬಾರದು,
ಪ್ರಳಯ ಕಾಲನ ಮುಸುಕನುಗಿವವನಾರು,
ಕೌರವ ಅಸಮ ಬಲನೈ
ರಥವ ಮರಳಿಚು,
ಜಾಳಿಸುವೆನೆಂದ'

"ಹಸಿದು ಬೊಬ್ಬಿಡುತ್ತಿರುವ ಮಾರಿಯರ ಮಂದೆಯ ನಡುವೆ ಒಂದು ಕುರಿ ನುಸುಳಿದರೆ ಅದರ ಕಥೆ ಏನಾದೀತು? ನನ್ನ ಕಥೆ ಹಾಗಾಗಿದೆ ಬೃಹನ್ನಳೆ, ಕುದುರೆಗಳನ್ನು ಹಿಡಿದು ನಿಲ್ಲಿಸು, ನಿನ್ನ ಚಾವಟಿಯನ್ನು ಬಿಸಾಕು. ಅಲ್ಲಾಡಿದರೆ ಕೆಟ್ಟೆ. ಮಲಗಿರುವ ಪ್ರಳಯಕಾಲನಾದ ರುದ್ರನ ಮುಸುಕನ್ನು ತೆಗೆದು ಎಬ್ಬಿಸುವುದೂ ಒಂದೇ, ಈ ಮಹಾಸೈನ್ಯದೊಂದಿಗೆ ಯುದ್ಧ ಮಾಡುವುದೂ ಒಂದೇ. ನಾನು ಏನೋ ಅಂದುಕೊಂಡಿದ್ದೆ, ಪರವಾಗಿಲ್ಲ ಕೌರವನ ತುಂಬಾ ದೊಡ್ದಸೈನ್ಯವನ್ನೇ ಹೊಂದಿದ್ದಾನೆ!
ಇರಲಿ, ರಥವನ್ನು ಹಿಂದಕ್ಕೆ ಮರಳಿಸು, ನಾನು ಪಲಾಯನ ಮಾಡುತ್ತೇನೆ."

ಮಾರಿ ಎಂದರೇ ಪ್ರಾಣಿಗಳ ಬಲಿಯನ್ನು ಬಯಸುವವಳು.ಹಸಿದ ಮಾರಿ ಇನ್ನೂ ಭಯಂಕರ. ಅಂತಹ  ಹಸಿದ ಮಾರಿಯರ ಸಮೂಹವಿದ್ದ ಹಾಗಿದೆ ಕೌರವ ಸೈನ್ಯ! ಅದರ ಮುಂದೆ  ತಾನೊಂದು ಕುರಿ ಇದ್ದಹಾಗೆ.ನುಸುಳಿದರೆ?

ಉತ್ತರಕುಮಾರನ ಭಯ, ದಿಗಿಲು, ಅಸಹಾಯಕತೆಗಳನ್ನ ಬಿಂಬಿಸಲು ತಂದಿರುವ ಮಾರಿಯರ ಉಪಮೆ ಎಷ್ಟು ಪರಿಣಾಮಕಾರಿಯಾಗಿದೆ!

ಕುಮಾರವ್ಯಾಸ ಪ್ರತಿಷ್ಠಾನ
೪/೧೦/೨೦೧೬
#







Saturday, October 1, 2016

ಐಸಲೇ ಕುಮಾರವ್ಯಾಸ -೩೬-

ವಿರಾಟ ಪ ೫-೨೨

'ಕುಣಿಸಿ ನಗನೇ...'

'ಉತ್ತರನ ಪೌರುಷ' ಎಂದೇ ಪ್ರಸಿದ್ಧವಾದ ವಿರಾಟ ಪರ್ವದ ಭಾಗದಲ್ಲಿ ಶ್ರೇಷ್ಠ ಮಾತುಗಾರನಾದ ಕುಮಾರವ್ಯಾಸನಿಗೆ ಅಗಾಧ ಅವಕಾಶ!

'ಖಳನ ಮುರಿವೆನು,
ಹಸ್ತಿನಾಪುರದೊಳಗೆ ಥಾಣಾoತರವನಿಕ್ಕುವೆ,
ತೊಲಗಿಸುವೆ ಕೌರವನ ಸೇನೆಯ
ಧೂಳಿಪಟ ಮಾಡಿ,
ಗೆಲವ ತಹೆನೆಂದು
ಉತ್ತರನು ಕೋಮಲೆಯರಿದಿರಲಿ
ಬಾಯ್ಗೆ ಬಂದುದ ಗಳಹುತಿದ್ದನು
ಬೇಕು ಬೇಡೆಂಬವರ ನಾ ಕಾಣೆ'

'ಖಳ ದುರ್ಯೋಧನನನ್ನು ಭಂಗಿಸುತ್ತೇನೆ;ಹಸ್ತಿನಾಪುರ ನನ್ನ ಅಧೀನ  ದೇಶವಾಗಲಿದೆ; ಕೌರವನ ಸೇನೆಯನ್ನು ಧೂಳೀಪಟ ಮಾಡುತ್ತೇನೆ; ನಮ್ಮ ಗೆಲುವು ನಿಶ್ಚಿತ 'ಎಂದು ಕೋಮಲವಾದ ಹೆಂಗಸರೆದುರು ಬಾಯಿಗೆ ಬಂದದ್ದನ್ನು ಒದರುತ್ತಿದ್ದ; ಕವಿ ಹೇಳುತ್ತಾನೆ- ಯಾರಿಗೆ ಬೇಕೋ, ಯಾರಿಗೆ ಬೇಡವೋ ಗೊತ್ತಿಲ್ಲ, ಅಂತೂ ಕುಮಾರನ ಸ್ವಪ್ರಶಂಸೆ ಸಾಗಿತ್ತು.

ಅಭಿಮನ್ಯುವಿನ 'ಬವರವಾದರೆ ಹರನ ವದನಕೆ ಬೆವರ ತಹೆನು' ಎಂಬ ಎಚ್ಚರಿಕೆಯ ಆತ್ಮ ವಿಶ್ವಾಸಕ್ಕೂ ಬಾಯಿಗೆ ಬಂದುದನ್ನು ಗಳಹುವ ಉತ್ತರನ ಮಾತುಗಳಿಗೂ ಇರುವ ವ್ಯತ್ಯಾಸವನ್ನು ಕುಮಾರವ್ಯಾಸ ಹೇಗೆ ತೋರಿಸಿದ್ದಾನೆ!

ಕುಮಾರವ್ಯಾಸ ಪ್ರತಿಷ್ಠಾನ
೦೧/೧೦/೨೦೧೬

#