Monday, October 17, 2016

ಐಸಲೇ ಕುಮಾರವ್ಯಾಸ!! -೪೨-

ವಿರಾಟ ಪ ೬-೬೩

ಕ್ರೀಡೆಯಲ್ಲಿ ನಿಸ್ಸೀಮನಾದವನಿಗೆ ಆಟ ನೋಡುತ್ತಾ ಸುಮ್ಮನಿರುವುದು ಕಷ್ಟ. ಕಲೆಯಲ್ಲಿ ನಿಪುಣನಾದವನಿಗೆ ಕಲಾಪ್ರದರ್ಶನ ನಡೆಯುವಾಗ ಇಡೀ ಶರೀರ ಪಾಲ್ಗೊಳ್ಳಲು ಹಾತೊರೆಯುವುದು ಸಹಜ. ಅಂದಿನ ಯುಗದ ಪರಮವೀರ ಅರ್ಜುನನಿಗೆ ಯುದ್ಧದ ಅವಕಾಶ ಇರುವಾಗ ಸುಮ್ಮನೆ ನೋಡುತ್ತಾ ಸಾರಥಿಯಾಗಿರುವುದು ಸಾಧ್ಯವೇ?

ಉತ್ತರನನ್ನು ಸಾರಥಿಯಾಗಲು  ಹೇಗೋ ಒಪ್ಪಿಸಿ ತಾನೆ ಯುದ್ಧ ಮಾಡಲು ಪರಮ ಉತ್ಸಾಹದಿಂದ ಸಿದ್ಧನಾದ. ತನ್ನ ನಿಜವಾದ ರೂಪವನ್ನೂ ಉತ್ತರನಿಗೆ ತಿಳಿಸಿದ. ಶಿಖಂಡಿತನದ ಸೂಚಕವಾದ ತನ್ನ ಕೈ ಬಳೆಗಳನ್ನು ಕೌರವರ ಗಂಟಲ ಬಳೆಯನ್ನು ಮುರಿದ ಹಾಗೆ ಲಟಲಟ ಮುರಿದ. ಮಲ್ಲರಿಗೆ ಉಚಿತವಾದ ವೀರಗಾಸೆ ಹಾಕಿ,ತಲೆಗೂದಲನ್ನು ಹೆಂಗಸಿನ ಜಡೆಯಿಂದ ಪುರುಷರಿಗೆ ಉಚಿತವಾಗಿ ಮಾರ್ಪಡಿಸಿಕೊಂಡ. ತಿಲಕ ಹಾಕಿಕೊಂಡ. ಕಠಾರಿಯನ್ನು ಸೊಂಟಕ್ಕೆ ಬಿಗಿದ, ಕವಿ ಹೇಳುತ್ತಾನೆ; 'ಗಂಡಂದವನು ಕೈಕೊಂಡ'.

ಪಾರ್ಥ ಸಿದ್ಧನಾಗಿ ಗರ್ಜಿಸಿ ಧನುಸ್ಸಿನ ಹೆದೆಯನ್ನೊಮ್ಮೆ ಭಾರೀ ಶಬ್ದದೊಂದಿಗೆ ಮೀಟಿ ತನ್ನ ಶಂಖವನ್ನು ಊದಿದನೋ ಇಲ್ಲವೋ, ದಿಕ್ಕುಗೆಡಿಸುವ ಭಯಂಕರವಾದ ಶಬ್ದ ಜಾಲ ಹರಡಿತು!

'ತುರಗ ಘರ್ಜನೆ,
ರಥದ ಚೀತ್ಕ್ರುತಿ,
ವರ ಧನುಷ್ಟಂಕಾರ, ಕಪಿಯಬ್ಬರಣೆ
ಪಾರ್ಥನ ಬೊಬ್ಬೆ, ನಿಷ್ಠುರ ದೇವದತ್ತರವ
ಅರರೆ  ಹೊದರೆದ್ದವು
ಗಿರಿವ್ರಜ ಬಿರಿಯೆ
ಜಲನಿಧಿ ಝರಿಯೆ
ತಾರಕೆ ಸುರಿಯೆ,
ಸುರಕುಲ ಪರಿಯೆ
ಭೀತಿಯ ಸಹಿತ ಬಲ ಹರಿಯೆ'
ಕುದುರೆಗಳ ಕೆನೆತ, ರಥಚಕ್ರಗಳ ಚಿರಿಚಿರಿ ,ಧನುಸ್ಸಿನ ಝೇಂಕಾರ,ಧ್ವಜದ ಹನುಮಂತನ ಮೊರೆತ, ಪಾರ್ಥನ ಸಿಂಹನಾದ ಜತೆಗೆ ಶಂಖನಾದ ಈ ಭೋರ್ಗರೆವ ಶಬ್ದಕ್ಕೆ ಗಿರಿಗಳು ಅದುರಿದವು, ಸಮುದ್ರ ಹಿಂಜರಿಯಿತು, ಉಲ್ಕೆಗಳು ಸುರಿದವು , ಆಗಸದಲ್ಲಿ ದೇವತೆಗಳು ಸಹಾ ಬೆಚ್ಚಿ ಚದುರಿದರು, ಅಗಾಧವಾದ ಶತ್ರುಸೇನೆ ಸಹಾ ಹಿಮ್ಮೆಟ್ಟಿತು.

ಈ ಮಹಾ ರಣನಾದದ ಮತ್ತೊಬ್ಬ ಫಲಾನುಭವಿ ಉತ್ತರನ ಪಾಡು?

ತಲೆಗೆ ಸಿಡಿಲು ಹೊಡೆದವನಂತೆ ಮೂರ್ಛೆ ಹೋದ! ಅರ್ಜುನನೇ ಅವನಿಗೆ ಸೆರಗಿನಲ್ಲಿ ಗಾಳಿ ಬೀಸಿ, ರಥದಲ್ಲಿ ಕೂರಿಸಿ ಹೇಳಿದ, 'ಖೇಡನಾಗದಿರು,ಅಂಜದಿರು, ಅಂಜದಿರು, ಅದುಭುತ ಧ್ವನಿ ಮಾಡೆನು'( 'ಹೆದರಬೇಡ, ಮತ್ತೊಮ್ಮೆ ಇಷ್ಟು ಜೋರಾಗಿ ಶಬ್ದವಾಗದಂತೆ ನೋಡಿಕೊಳ್ಳುತ್ತೇನೆ')

ಮಹಾರಥನಿಗೂ, ಸಾಮಾನ್ಯ ಯೋಧನಿಗೂ ಯುದ್ಧದ ಅನುಭವಗಳಲ್ಲಿರುವ ಅಂತರ, ಅರ್ಜುನನ ಉತ್ಸಾಹ, ರಣಪಕ್ವತೆ,ಇವುಗಳ ಮೇಲೆ ಕುಮಾರವ್ಯಾಸ ಬೆಳಕು ಚೆಲ್ಲುತ್ತಾನೆ.

ಪದ್ಯದ ಉತ್ತರಾರ್ಧದಲ್ಲಿ ಬರುವ ಅನುಪ್ರಾಸಗಳು ಸಹಾ ಕವಿಯ ವಾಗ್ಝರಿಗೆ ನಿದರ್ಶನ.

ಕುಮಾರವ್ಯಾಸ ಪ್ರತಿಷ್ಠಾನ
೧೭/೧೦/೨೦೧೬









No comments:

Post a Comment