Monday, October 10, 2016

ಐಸಲೇ ಕುಮಾರವ್ಯಾಸ!!

ಉದ್ಯೋ ಪ ೩-೮  -೪೦-

ಕುಮಾರವ್ಯಾಸನ ಪದ್ಯಗಳು ಕರ್ನಾಟಕದ ಜನರ ನಾಲಿಗೆಯಲ್ಲಿ ಎಷ್ಟು ಹಾಸು ಹೊಕ್ಕಾಗಿದ್ದವೆಂದರೆ ದಿನ ನಿತ್ಯದ ಮಾತುಗಳಲ್ಲಿ ಅವನ ಪದ್ಯದ ತುಣುಕುಗಳು ನುಸುಳಿ ಬರುತ್ತಿದ್ದವು.

ಅಂಥ ಸಾವಿರಾರು ಶಕ್ತಿಯುತವಾದ ನುಡಿಗಟ್ಟನ್ನು ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಸೃಷ್ಟಿಸಿದ್ದಾನೆ.

ಕೆಲವು ವೇಳೆ ತಮಾಷೆಗಾಗಿ ಬಳಕೆಯಾದರೆ ಕೆಲವೊಮ್ಮೆ ಪಾಂಡಿತ್ಯಕ್ಕೆ, ಕೆಲವೊಮ್ಮೆ ಗಾದೆ ಮಾತಾಗಿ, ಲೋಕೋಕ್ತಿಯಾಗಿ .

ಈ ಕಾವ್ಯವನ್ನು ಓದುವುದು , ಓದಿಸಿ ಕೇಳುವುದು ಕಡಿಮೆಯಾದಂತೆ ಅಂಥ ಮಾತುಗಳು ಜನರ ನಾಲಿಗೆಯಲ್ಲಿ ಕಡಿಮೆಯಾದವು. ಅವನ ಶಬ್ದ ಸಂಪತ್ತಿನ ಉಪಯೋಗ ಪಡೆಯದ ನಾವು ಮಾತುಗಾರಿಕೆಯಲ್ಲಿ ಬಡವರಾದೆವು ಎಂದರೆ ತಪ್ಪಲ್ಲ.

'ರಾಯ ಹೇಳೆಂದ ಭೂಪ ಕೇಳೆಂದ..'

ಈ ಮಾತೇ ಅತ್ಯಂತ  ಜನಜನಿತವಾದದ್ದು.. ಸ್ವಂತ ಬುದ್ಧಿ ಉಪಯೋಗಿಸದೆ ಬೇರೆಯವರು  ಹೇಳಿದ್ದನ್ನಷ್ಟೇ ಕೇಳಿ ಮಾಡುವವರಿಗೆ ಈ ಮಾತು ತಮಾಷೆಯ  ಗಾದೆಯಂತೆ ಬಳಕೆಯಲ್ಲಿತ್ತು. ಇದು ಕುಮಾರವ್ಯಾಸನ ಕಾವ್ಯ ಓದುವವರಿಗೆ ಚಿರ ಪರಿಚಿತ. ಅನೇಕೆ ಪದ್ಯಗಳು ರಾಯ ಕೇಳೆಂದ.., ಭೂಪ ಕೇಳೆಂದ.. ಎಂದೇ ಅನ್ತ್ಯವಾಗುತ್ತವೆ. ಇದು ಗಾದೆ ಮಾತಿನಂತೆ ಬಳಕೆಯಾಗಬೇಕೆಂದರೆ ಕುಮಾರವ್ಯಾಸ ಭಾರತ ಜನಪದದಲ್ಲಿ ಅದೆಷ್ಟು ಬೆರೆತಿತ್ತು!

ನಿತ್ಯ ಜೀವನದಲ್ಲಿ ಗಾದೆಯಂತೆ  ಬಳಕೆಯಾಗುತ್ತಿದ್ದ ಕವಿಯ ಇನ್ನೂ ಕೆಲವು ಸುಂದರ ಸಾಲುಗಳನ್ನು ನೋಡೋಣವೇ?

'...ನಿರ್ನಾಮರಾದರು ನಿನ್ನ ವೈರಿಗಳು' (ವಿರಾಟ ಪರ್ವದಲ್ಲಿ ದೂತರು ದುರ್ಯೋಧನನಿಗೆ )
'ಗಂಡರೋ ನೀವ್ ಭಂಡರೋ... ( ವಿರಾಟ ಪರ್ವ. ದ್ರೌಪದಿ ಭೀಮನೊಂದಿಗೆ.)
'ನಾಲುವರ ನಡುವಣ ಹಾವು ಸಾಯದು....'( ವಿರಾಟ ಪರ್ವ  ,, )
'ನೀರು ಹೊರಗಿಕ್ಕುವುದು ಮೂರೇ ಬಾರಿ...'(ವಿರಾಟ ಪರ್ವ ,, )
'ಅಣ್ಣನಾಜ್ಞೆಯ ಗೆರೆಯ ದಾಂಟಿದೆನು, ದಾಂಟಿದೆನು.., (ವಿರಾಟ ಪರ್ವ ಭೀಮ ದ್ರೌಪದಿಗೆ )
'ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು.. ( ವಿರಾಟ ಪರ್ವ ,, )
' ನಿನ್ನಾಲಯದೊಳಗೆ ಎಮಗೆ ಎಂತೂಟ ಸಂಭವಿಸುವುದು ಹೇಳೆಂದ.., ( ಉದ್ಯೋ ಪರ್ವ ಶ್ರೀಕೃಷ್ಣ ದುರ್ಯೋಧನನಿಗೆ. )

ಇಂಥವು ಸಾವಿರಾರು ಇವೆ.ಈ ಕವಿಯ ರಮಣೀಯ  ವಾಕ್ಯ  ವಿಶೇಷಗಳನ್ನು ಕಲಿಯುವ, ಕಲಿಸುವ ಮೂಲಕ ನಮ್ಮ ಮಕ್ಕಳ ಬಾಯಲ್ಲಿ ಬಳಕೆಯಾಗಬೇಕೆನ್ನುವುದು  ಎಲ್ಲರ ಅಪೇಕ್ಷೆ.

ಇಂಥ ಲೋಕೊಕ್ತಿಗಳಿಗೆ ಕಳಶವಿಟ್ಟಂತೆ ಉದ್ಯೋಗ ಪರ್ವದಲ್ಲಿ ವಿದುರ ಯುದ್ಧದ ಸಾಧ್ಯತೆಯನ್ನುಅರಿತು ಆತಂಕಗೊಳ್ಳುವ ದೃತರಾಷ್ಟ್ರನಿಗೆ ಹೇಳುವ ತೀಕ್ಷ್ಣವಾದ ಮಾತು ನೋಡಿ:

'ಹಾವು ಹಲವನು ಹಡೆದು
ಲೋಕಕೆ ಸಾವ ತಹವೊಲು
ನೂರು ಮಕ್ಕಳನಾವ ಪರಿಯಲಿ ಹಡೆದು ಕೆಡಿಸಿದೆ
ಭೂಮಿ ಭಾರಕರ,
ಭಾವಿಸಲು ಸರ್ವಜ್ಞ ಸರ್ವಗುಣಾವಲಂಬನನೊಬ್ಬ
ಅರ್ಜುನ ದೇವ ಸಾಲದೇ
ನಾಡ ನಾಯಿಗಳೇನು ಫಲವೆಂದ"

'ಹಾವು ಹಲವಾರು ಮರಿಗಳನ್ನು ಹಡೆಯುತ್ತದೆ. ಅವು ಒಂದೊಂದೂ ಕೂಡಾ ಲೋಕಕ್ಕೆ ಸಾವನ್ನೇ ತರುವ ಪ್ರಾಣಿಗಳಾಗುತ್ತವೆ ಅಷ್ಟೇ. ಅದೇ ರೀತಿ ದೃತರಾಷ್ಟ್ರ, ಭೂಮಿ ಭಾರಕರಾದ ನೂರು ಮಕ್ಕಳನ್ನು ಏನೆಂದು ಪಡೆದೆಯೋ?
ಸರ್ವಜ್ಞ, ಸರ್ವ ಗುಣ ಸಂಪನ್ನನಾದ ಅರ್ಜುನನಂಥ ಒಬ್ಬ ಮಗ ಸಾಲದೇ? ಬೀದಿನಾಯಿಗಳಂಥಾ ಮಕ್ಕಳಿಂದ ಏನು ಫಲ?

ಈ ಸರಳ ಆದರೆ ಪರಿಣಾಮಕಾರಿಯಾದ ಕುಮಾರವ್ಯಾಸನ ಮಾತಿಗೆ ವ್ಯಾಖ್ಯಾನ ಬೇಕಿಲ್ಲ ಅಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೯/೧೦/೨೦೧೬
#














No comments:

Post a Comment