Thursday, October 20, 2016

ಐಸಲೇ ಕುಮಾರವ್ಯಾಸ!! -೪೩-

ವಿರಾಟ ಪ ೭-೧೨

ಸಂಭಾಷಣೆಗಳಲ್ಲಿ ಕುಮಾರವ್ಯಾಸ ಬಳಸುವ ಮಾತುಗಾರಿಕೆಯನ್ನು ನೋಡಿಯೇ ಆನಂದಿಸಬೇಕು. ವಿಜಯನಗರದ ಆಳ್ವಿಕೆಯ ಅವಧಿಯಲ್ಲಿ ಸಾರ್ವಭೌಮ ಎನಿಸಿದ್ದ ಕನ್ನಡದ ಸಿರಿತನ, ಶಕ್ತಿ, ಶಬ್ದ ಸಂಪತ್ತು, ಜನಪದೀಯತೆ ಇವೆಲ್ಲದರ ಹಬ್ಬ ನೋಡಲು ಸಿಗುತ್ತದೆ. ಕನ್ನಡದಲ್ಲಿ ಎಷ್ಟುಪರಿಣಾಮಕಾರಿ ಪ್ರಯೋಗಗಳಿದ್ದವೆಂದು ಹೆಮ್ಮೆಯಾಗುತ್ತದೆ.

ಅರ್ಜುನ ಗಂಡುಡುಗೆ ಧರಿಸಿ  ಯುದ್ಧಕ್ಕೆ ಅಣಿಯಾದಾಗ ಜಗತ್ತೇ ನಡುಗುವಂಥಾ ಧ್ವನಿ ಮೂಡಿದ್ದನ್ನು ನೋಡಿದೆವು. ಕೌರವರ ಪಾಳೆಯದಲ್ಲಿ ಜಿಜ್ಞಾಸೆ ಆರಂಭವಾಯಿತು. ಅವನು ಪಾರ್ಥನೇ ಸರಿ!

ಇಂಥಾ ಅದ್ಭುತ ರವ, ಮೇಲೆ ಮೇಲೆ ಕಾಣುತ್ತಿರುವ ಅಪಶಕುನ ಪಾರ್ಥನನ್ನೇ ಸೂಚಿಸುತ್ತಿದೆ, ಇವತ್ತು ನಮಗೆ(ಕೌರವರಿಗೆ) ಆಪತ್ತು ಖಂಡಿತಾ ಎಂದು ದ್ರೋಣ. ನೀವು ಯಾವಾಗಲೂ ಅರ್ಜುನನನ್ನು ಹೊಗಳುವಿರಿ ,ಅದು ನಿಮ್ಮ ದೌರ್ಬಲ್ಯ ನಾನೇನೂ ಅರ್ಜುನನಿಗಿಂತಾ ಕಡಿಮೆಯಲ್ಲ ಎಂದು ಕರ್ಣ. ಸರಿ, ವಾದ ವಿವಾದದ ಆರಂಭ!

' ನರನ ತೆತ್ತಿಗರಹಿರಿ, ತತ್ತರೆ ಪುರದೊಳಗೆ ಕೌರವನವರು, ದುಶ್ಚರಿತರು,ಎರಡಿಟ್ಟಿಹಿರಿ, ಖೂಳರು...' ( ಅರ್ಜುನನಿಗೆ ಮಾರಿಕೊಂಡಿದ್ದೀರಿ, ನೆಪಕ್ಕೆ ಕೌರವನವರು,ಇಬ್ಬಗೆಯ ನೀತಿ ನಿಮ್ಮದು,ಹೀನ ಜನ)ಎಂದು ಕರ್ಣ ;

'ಬಾಗಿಸಿದ ಬಿಲ್ಲಿನಲಿ ರಾಯರ ಮೂಗ ಕೊಯ್ದನು ಮದುವೆಯಲಿ, ನೀನೀಗಲೊದರುವೆ ( ಸ್ವಯಂವರದಲ್ಲಿ ಬಿಲ್ಲು ಬಾಗಿಸಿ ಮಹಾರಥರ ಮೂಗು ಕೊಯ್ದವ ಪಾರ್ಥ, ಸಾಮಾನ್ಯನಲ್ಲ , ನೀನು ಸುಮ್ಮನೆ  ಹೊಗಳಿಕೊಳ್ಳುವವ' ಎಂದು ದ್ರೋಣ;

ಬಿರುನುಡಿಗಳು ಸಹಜವಾಗಿ  ಅವರ ಜಾತಿನಿಂದನೆಯತ್ತ ತಿರುಗುತ್ತವೆ. ಕರ್ಣ ಹೇಳುವ ಮಾತು ನೋಡಿ:

'ಹಣೆಗೆ ಮಟ್ಟಿಯ ಬಡಿದು
ದರ್ಬೆಯ ಹಣಿದು ಬೆರಳಲಿ ಸೆಕ್ಕಿ,
ಧೋತ್ರದ ದಣಿಬವನು ನಿರಿವಿಡಿದು,
ಮಹಳದ ಮನೆಯ ಚೌಕಿಯಲಿ,
ಮಣೆಗೆ ಮಂಡಿಸಿ ಕುಳ್ಳಿತು ಉಂಬ
ಔತಣದ ವಿದ್ಯೆಯ  ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ'

"ಹಣೆಯಲ್ಲಿ ವಿಭೂತಿಯ ಪಟ್ಟೆ ಬಳಿದುಕೊಂಡು,ದರ್ಬೆಯನ್ನು ಬೆರಳಲ್ಲಿ ಸಿಕ್ಕಿಸಿಕೊಂಡು, ಧೋತ್ರದ ನೆರಿಗೆಯನ್ನು ಹರಡಿಕೊಂಡು ಅರಮನೆಯ ಅಂಗಳದಲ್ಲಿ ಮಣೆಯ ಮೇಲೆ ಕುಳಿತು ಉಣ್ಣುವ ಔತಣದ ವಿದ್ಯೆಯಲ್ಲಿ ನೀವು ನಿಪುಣರು , ನಿಮಗೆ ರಣವಿದ್ಯೆ ಎಲ್ಲಿ ಗೊತ್ತು?"

ಕುಮಾರವ್ಯಾಸ ತನ್ನ ಬ್ರಾಹ್ಮಣಜಾತಿಯನ್ನೂ ಲಘು ಹಾಸ್ಯದಿಂದ ವಿಡಂಬಿಸಿಕೊಳ್ಳುವಲ್ಲಿ ಹಿಂದೆ ಬೀಳುವುದಿಲ್ಲ. ಎಲ್ಲಾ ಕಡೆ ಬ್ರಾಹ್ಮಣರ ಭೋಜನಪದ್ಧತಿಯನ್ನು ತಾನೇ ಲೇವಡಿ ಮಾಡುವುದು?

ಮಹಾಭಾರತದ ಕಾಲಕ್ಕಿಂತಾ ಕುಮಾರವ್ಯಾಸನ ಕಾಲದ ಸಾಮಾಜಿಕ ಸ್ಥಿತಿಯ ಸೊಗಡು ಕಾಣುತ್ತಲ್ಲವೇ?. ನಮಗೆ ಖುಷಿ ಕೊಡುವುದು ಕವಿಯ ಮಾತುಗಾರಿಕೆ.

ಕುಮಾರವ್ಯಾಸ ಪ್ರತಿಷ್ಠಾನ

೨೦/೧೦/೨೦೧೬

#




No comments:

Post a Comment