Friday, August 31, 2018

ಐಸಲೇ ಕುಮಾರವ್ಯಾಸ !! - ೧೨೬ -


ಐಸಲೇ ಕುಮಾರವ್ಯಾಸ !!                  -  ೧೨೬  -
ಉದ್ಯೋಗ -೨೧

ಯಮಜ ನಿನಗೊಳ್ಳಿದನು, ಪಾರ್ಥನ ಮಮತೆ ನಿನ್ನಲಿ ಹಿರಿದು
ಭೀಮನ ತಮದ ನುಡಿ ಹಿಂಗಿದವು
ನಕುಲನು ನಿನ್ನೊಳೆರಡರಿಯ..,
ತಮತಮಗೆ ತಮ್ಮೈವರೂ ನಿನ್ನಯ
ವಿಮಲ ವಚನವ ಹಾರಿಹರು
ಉಭ್ರಮಿತತನವನು ಮಾಡದಿರು ಸೋದರರ ಸಲಹೆಂದ..,’

ಸಂಧಿ ಅಥವಾ ಸಂಧಾನ ಎಂದರೆ ಪರಸ್ಪರ ಅಭಿಪ್ರಾಯ ವಿನಿಮಯ.ಒಮ್ಮತಕ್ಕೆ ಬರುವ ಯತ್ನ.ಎದುರಿನ ವ್ಯಕ್ತಿಗೆ ಸಹಾ ಅವಕಾಶ.ಸಾಮ, ದಾನ, ಭೇದ ತಂತ್ರಗಳ ಪ್ರಯೋಗ. ಪಾಂಡವರ ಪ್ರತಿನಿಧಿಯಾದ ಹರಿ ಈ ಎಲ್ಲಾ ಮಾರ್ಗಗಳನ್ನೂ ದುರ್ಯೋಧನನಿಗೆ ತೆರೆದಿಡುತ್ತಾನೆ.ಎಲ್ಲ ಅವಕಾಶಗಳನ್ನೂ ಮುಕ್ತವಾಗಿಡುತ್ತಾನೆ. ಎಲ್ಲ ವ್ಯರ್ಥವಾದಮೇಲೆ ತಾನೇ ದಂಡ ಅಥವಾ ಯುದ್ಧ? ಜನಸಾಮಾನ್ಯರ ಆಡುಮಾತಿನಲ್ಲೇ ಇರುವ ಹರಿಯ ಸಲಹೆಯಲ್ಲಿ ವಿವೇಕ ಮತ್ತು ತಂತ್ರ ಎರಡೂ ಇವೆಃ 

‘ದುರ್ಯೋಧನಾ, ಧರ್ಮರಾಯ ನಿನಗೆ ಒಳ್ಳೆಯವನೇ ತಾನೆ?ಪಾರ್ಥನ ಮೇಲೂ ನಿನಗೆ ಮಮತೆ ಇದ್ದೇಇದೆ. ಇನ್ನು ಭೀಮ!(ನಿನ್ನ ಸಮಸ್ಯೆ). ಅವನ  ದುಡುಕಿನ, ಒರಟು ಮಾತುಗಳು ಸಹಾ ಈಗಿಲ್ಲ.ನಕುಲನೋ ನಿನ್ನಲ್ಲಿ ಎರಡರಿಯದ ಮುಗ್ಧ. ಒಟ್ಟಾರೆ ಐದು ಜನರೂ ನಿನ್ನಿಂದ ಒಳ್ಳೆಯ ನಿರ್ಧಾರವನ್ನು ಅಪೇಕ್ಷಿಸಿ ನನ್ನನ್ನು ಕಳಿಸಿದ್ದಾರೆ. ನೀನು ಉದ್ರಿಕ್ತನಾಗಿ ಮಾತಾಡಬೇಡ. ಅವರು ಸಹಾ ನಿನ್ನ ತಮ್ಮಂದಿರು ತಾನೇ? ಅವರನ್ನು ರಕ್ಷಿಸಬೇಕಾದವನು ನೀನು .ಅವರನ್ನೂ ಬಾಳಿಸು’

ತಾನು ಪಕ್ಷ ವಹಿಸಿ ಬಂದಿರುವ ಪಾಂಡವರ ಪರವಾಗಿ ವಸ್ತುಸ್ಥಿತಿಯನ್ನು ನಿರೂಪಿಸಿ ದುರ್ಯೋಧನನಿಗೆ ತಿಳಿಯ ಹೇಳುತ್ತಿರುವ ರೀತಿ ಇದು. ಸಾಮೋಪಾಯ. ದುರ್ಯೋಧನನಿಗೆ ಎಲ್ಲರ ಮೇಲೂ ದ್ವೇಷವೇನಿಲ್ಲವಲ್ಲ. ನಾಲ್ವರ ಮೇಲೆ ಇರಬಹುದಾದ ಮಮತೆಯನ್ನು ಒರೆಗೆ ಹಚ್ಚುತ್ತಿದ್ದಾನೆ. ದುರ್ಯೋಧನ ಬಗ್ಗಿದರೆ ತಪ್ಪೇನು?

ಕುಮಾರವ್ಯಾಸ ಪ್ರತಿಷ್ಠಾನ                                             ೩೧/೮/೨೦೧೮

Friday, August 17, 2018

ಐಸಲೇ ಕುಮಾರವ್ಯಾಸ !! - ೧೨೫ -


ಐಸಲೇ ಕುಮಾರವ್ಯಾಸ !!                  -  ೧೨೫  -
ಉದ್ಯೋಗ ಪ ೯-೧೭


‘ಮಾವ ಮೊದಲು ಸಹಾಯ,
ಮಧ್ಯದೊಳಾ ವಿರಾಟನ ಸಖ್ಯ,ಕಡೆಯಲಿ ನೀವು
ಮಮ ಪ್ರಾಣಾಹಿಯೆಂಬಿರಿ ನಿಮ್ಮ ಪಾಂಡವರ..,
ನಾವು ಕಡೆಯಲಿ ಹೊರಗು
ನಮಗಿನ್ನಾವ ಭೂಪರ ಸಖ್ಯವಿದ್ದುದು?
ದೇವ ನಾಚಿಸಬೇಡ, ಸಂಧಿಯ ಮಾತ ಮರೆಯೆಂದ’ 

ಉದ್ಯೋಗಪರ್ವದ ಮಹತ್ವ  ಅಲ್ಲಿ ಬರುವ ರಾಜನೀತಿಯ ವಿಚಾರಗಳು, ಚರ್ಚೆ, ಪರಾಮರ್ಶೆಗಳು. ನುರಿತ ಜ್ಞಾನಿಗಳಾದ ಶ್ರೀಕೃಷ್ಣ, ಭೀಷ್ಮ, ವಿದುರ,ಮುಂತಾದವರು ಮಾತನಾಡುವಾಗ ಅವರ ಚಿಂತನೆಗಳು ಅದಕ್ಕೆ ಅನುಗುಣವಾದ ಭಾಷೆ, ನುಡಿಗಟ್ಟುಗಳು ಚಿತ್ತಾಕರ್ಷಕ. ಒಂದೊಂದು ಮಾತುಗಳೂ ಆಣಿಮುತ್ತಿನಂತೆ. ಕುಮಾರವ್ಯಾಸನ ವಾಕ್ಶಕ್ತಿಯ ಸಂಪತ್ತನ್ನು,ಸಂಯಮವನ್ನುಇಲ್ಲಿ ಕಾಣುತ್ತೇವೆ.

ಸಂಧಿಯನ್ನು ನಿರಾಕರಿಸುತ್ತಾ ದುರ್ಯೋಧನ ಒಡ್ಡುವ ಆಕ್ಷೇಪಣೆಯನ್ನು ನೋಡಿಃ

‘ ಪಾಂಡವರಿಗೆ ಮೊದಲಿನಿಂದ ಮಾವ ವಿರಾಟನ ಸಹಾಯ ಇದ್ದೇ ಇದೆ. ಈಗ ವಿರಾಟನಗರದಲ್ಲಿ ಒಂದು ವರ್ಷ ಕಳೆದು ಬಂದಿದ್ದಾರೆ ಅಲ್ಲದೆ ಬೀಗರಾಗಿರುವುದರಿಂದ ಮತ್ತೊಂದು ದೊಡ್ಡ ಆಸರೆ ಸಿಕ್ಕಿದೆ. ಮತ್ತೆ ನೀನು? ಮಮಪ್ರಾಣಾಹಿ ಪಾಂಡವಾಃ ( ಪಾಂಡವರು ನನ್ನ ಪ್ರಾಣ) ಎಂದು ಘೋಷಣೆ ಮಾಡಿದ್ದೀಯ.
ನನಗೆ ಯಾವ ರಾಜರ ಸಹಾಯ ಇದೆ? ನಾನು ಹೊರಗಿನವನಾದೆ. ಪಾಂಡವರಿಗೆ ನೆಲೆಯಿಲ್ಲ, ರಾಜ್ಯವಿಲ್ಲ ಎಂದು ಏನೇನೋ ಹೇಳಿ ನನ್ನನ್ನು ನಾಚುವಂತೆ ಮಾಡ ಬೇಡ. ನಿಜವಾಗಿ ನಾನು ಅಸಹಾಯಕ; ಸಂಧಿಯ ಮಾತನ್ನು ಮರೆತು ಹೊರಡು..,’

ಇದು ದುರ್ಯೋಧನನ ತಾರ್ಕಿಕ ಸಮಜಾಯಿಶಿ. ಒಂದು ನೆಪ’

ಕುಮಾರವ್ಯಾಸ ಪ್ರತಿಷ್ಠಾನ                                                 ೧೬/೮/೨೦೧೮