Friday, August 17, 2018

ಐಸಲೇ ಕುಮಾರವ್ಯಾಸ !! - ೧೨೫ -


ಐಸಲೇ ಕುಮಾರವ್ಯಾಸ !!                  -  ೧೨೫  -
ಉದ್ಯೋಗ ಪ ೯-೧೭


‘ಮಾವ ಮೊದಲು ಸಹಾಯ,
ಮಧ್ಯದೊಳಾ ವಿರಾಟನ ಸಖ್ಯ,ಕಡೆಯಲಿ ನೀವು
ಮಮ ಪ್ರಾಣಾಹಿಯೆಂಬಿರಿ ನಿಮ್ಮ ಪಾಂಡವರ..,
ನಾವು ಕಡೆಯಲಿ ಹೊರಗು
ನಮಗಿನ್ನಾವ ಭೂಪರ ಸಖ್ಯವಿದ್ದುದು?
ದೇವ ನಾಚಿಸಬೇಡ, ಸಂಧಿಯ ಮಾತ ಮರೆಯೆಂದ’ 

ಉದ್ಯೋಗಪರ್ವದ ಮಹತ್ವ  ಅಲ್ಲಿ ಬರುವ ರಾಜನೀತಿಯ ವಿಚಾರಗಳು, ಚರ್ಚೆ, ಪರಾಮರ್ಶೆಗಳು. ನುರಿತ ಜ್ಞಾನಿಗಳಾದ ಶ್ರೀಕೃಷ್ಣ, ಭೀಷ್ಮ, ವಿದುರ,ಮುಂತಾದವರು ಮಾತನಾಡುವಾಗ ಅವರ ಚಿಂತನೆಗಳು ಅದಕ್ಕೆ ಅನುಗುಣವಾದ ಭಾಷೆ, ನುಡಿಗಟ್ಟುಗಳು ಚಿತ್ತಾಕರ್ಷಕ. ಒಂದೊಂದು ಮಾತುಗಳೂ ಆಣಿಮುತ್ತಿನಂತೆ. ಕುಮಾರವ್ಯಾಸನ ವಾಕ್ಶಕ್ತಿಯ ಸಂಪತ್ತನ್ನು,ಸಂಯಮವನ್ನುಇಲ್ಲಿ ಕಾಣುತ್ತೇವೆ.

ಸಂಧಿಯನ್ನು ನಿರಾಕರಿಸುತ್ತಾ ದುರ್ಯೋಧನ ಒಡ್ಡುವ ಆಕ್ಷೇಪಣೆಯನ್ನು ನೋಡಿಃ

‘ ಪಾಂಡವರಿಗೆ ಮೊದಲಿನಿಂದ ಮಾವ ವಿರಾಟನ ಸಹಾಯ ಇದ್ದೇ ಇದೆ. ಈಗ ವಿರಾಟನಗರದಲ್ಲಿ ಒಂದು ವರ್ಷ ಕಳೆದು ಬಂದಿದ್ದಾರೆ ಅಲ್ಲದೆ ಬೀಗರಾಗಿರುವುದರಿಂದ ಮತ್ತೊಂದು ದೊಡ್ಡ ಆಸರೆ ಸಿಕ್ಕಿದೆ. ಮತ್ತೆ ನೀನು? ಮಮಪ್ರಾಣಾಹಿ ಪಾಂಡವಾಃ ( ಪಾಂಡವರು ನನ್ನ ಪ್ರಾಣ) ಎಂದು ಘೋಷಣೆ ಮಾಡಿದ್ದೀಯ.
ನನಗೆ ಯಾವ ರಾಜರ ಸಹಾಯ ಇದೆ? ನಾನು ಹೊರಗಿನವನಾದೆ. ಪಾಂಡವರಿಗೆ ನೆಲೆಯಿಲ್ಲ, ರಾಜ್ಯವಿಲ್ಲ ಎಂದು ಏನೇನೋ ಹೇಳಿ ನನ್ನನ್ನು ನಾಚುವಂತೆ ಮಾಡ ಬೇಡ. ನಿಜವಾಗಿ ನಾನು ಅಸಹಾಯಕ; ಸಂಧಿಯ ಮಾತನ್ನು ಮರೆತು ಹೊರಡು..,’

ಇದು ದುರ್ಯೋಧನನ ತಾರ್ಕಿಕ ಸಮಜಾಯಿಶಿ. ಒಂದು ನೆಪ’

ಕುಮಾರವ್ಯಾಸ ಪ್ರತಿಷ್ಠಾನ                                                 ೧೬/೮/೨೦೧೮

No comments:

Post a Comment