Tuesday, August 22, 2017

ಐಸಲೇ ಕುಮಾರವ್ಯಾಸ! 95



ಐಸಲೇ ಕುಮಾರವ್ಯಾಸ!                           -೯೫-
ದ್ರೋಣ ಪ ೩೫-೧೦

ದ್ರೋಣ ಪರ್ವದಲ್ಲೊಂದು ಸ್ವಾರಸ್ಯಕರ ಪ್ರಸಂಗ!

ಶತ್ರುಗಳ ಬಾಣದ ಸತತ ದಾಳಿಯಿಂದ ಅರ್ಜುನನ ರಥದ ಕುದುರೆಗಳು ಬಳಲುತ್ತವೆ. ಚಲನೆ ನಿಧಾನವಾಗುತ್ತದೆ.ಅರ್ಜುನ ಗಮನಿಸಿ ಶ್ರೀ ಕೃಷ್ಣನಿಗೆ ಹೇಳಿದ.’ದೇವಾ, ಕುದುರೆಗಳ ಬಳಲಿಕೆಯನ್ನು ಗಮನಿಸಿದೆಯಾ? ಅವುಗಳ ಶ್ರಮವನ್ನು ಪರಿಹರಿಸದೆ ಕಾದುವುದು ಅಸಾಧ್ಯ

ನಿಜ ಅರ್ಜುನಾ, ಆದರೆ ಆಕ್ರಮಿಸುತ್ತಿರುವ ಶತ್ರುಸೈನ್ಯವನ್ನು ತಪ್ಪಿಸಿ ಅವನ್ನು ಕೊಂಡೊಯ್ಯುವುದಾದರೂ ಎಲ್ಲಿಗೆ?’
ಅರ್ಜುನ ರಥದಿಂದ ಕೆಳಗೆ ಧುಮುಕಿ ವಜ್ರಾಸ್ತ್ರ ಪ್ರಯೋಗ ಮಾಡಿ ನೆಲವನ್ನು ಸೀಳಿದ.ವರುಣ ಬಾಣದಿಂದ ನೀರನ್ನು ತುಂಬಿಸಿದ. ಬಾಣಗಳ ಚಪ್ಪರ ನಿರ್ಮಿಸಿ ಶತ್ರುಗಳು ಬರದಂತೆ ತಡೆಯೊಡ್ಡಿದ.

ಶ್ರೀಕೃಷ್ಣ ನೊಗವನ್ನು ಕಳಚಿದ್ದೇ ತಡ,ಮೈಯನ್ನು ಕೊಡವಿ ನೀರಲ್ಲಿ ಹೊಕ್ಕು ಅಳ್ಳೆ ಹಿಗ್ಗುವಷ್ಟು ನೀರನ್ನು ಮೊಗೆದು ಕುಡಿದವು.ಕೃತಜ್ಞತೆಯಿಂದ ಹರಿಯ ಮೊಗವನ್ನು ನಿಟ್ಟಿಸಿದವು.ಭಾಗವತ ಶಿರೋಮಣಿಯಾದ ಕುಮಾರವ್ಯಾಸನ ದೃಷ್ಟಿಯಲ್ಲಿ ಇದು ಎಂಥಾ ಮಹತ್ವದ ಘಟನೆ ಗೊತ್ತೇನು?

ಕರತಳದಿ ಮೈದಡವಿ ಗಾಯದ ಸರಳ ಕಿತ್ತು,
ಔಷಧಿಯ ಲೇಪವನೊರೆಸಿದನು,
ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ, ನಯನವ ತಿರುಹಿ ದೇವನ ನೋಡುತಿದ್ದವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ..,’

(ಸರಳು-ಬಾಣ; ಕಂಧರ-ಹೆಗಲು;)
ಹರಿ ತನ್ನ ಕೋಮಲವಾದ ಕೈಗಳಿಂದ ಧಣಿದಿದ್ದ ಕುದುರೆಗಳ ಮೈ ತಡವಿದ; ಗಾಯಗಳಲ್ಲಿ ಮುಳ್ಳಿನಂತೆ ಚುಚ್ಚಿಕೊಂಡಿದ್ದ ಬಾಣಗಳ ತುಂಡುಗಳನ್ನು ಕಿತ್ತು ಔಷಧಿಯ ಲೇಪವನ್ನು ಸವರಿದನಂತೆ.ಅತ್ಯಂತ ಕರುಣೆಯಿಂದ ಪ್ರೇಮದಿಂದ ಅವುಗಳ ಹೆಗಲನ್ನು ಚಪ್ಪರಿಸಿದ.ಆನದಗೊಂಡ ಕುದುರೆಗಳು ಕತ್ತೆತ್ತಿ ಕಣ್ಣನ್ನು  ತಿರುಗಿಸಿ ಮುಗ್ಧವಾಗಿ ದಿಟ್ಟಿಸುತ್ತಿದ್ದವು. ಯಾರನ್ನು? ತನ್ನ ಕೈಯಾರೆ ತಮ್ಮನ್ನು ಶುಶ್ರೂಷೆ ಮಾಡುತ್ತಿರುವ ಸಾಕ್ಷಾತ್ ಪರಮಾತ್ಮನನ್ನು!

ಕವಿ ಅಂತಿಮವಾಗಿ ತನ್ನ ನಿರ್ಣಯ ಹೇಳುತ್ತಾನೆ; ಆ ನಾಲ್ಕು ಕುದುರೆಗಳು ಮಾಡಿದ ಪುಣ್ಯ ಸನಕಾದಿ ಮುನಿಗಳಿಗೆ ಸಹಾ ಇಲ್ಲ!
 
ಋಷಿ ಮುನಿಗಳು ಭಗವಂತನ ಒಂದು ದರ್ಶನಕ್ಕಾಗಿ ಜೀವನವಿಡೀ ತಪ, ಧ್ಯಾನ, ವ್ರತಾದಿಗಳಿಂದ ಆರಾಧಿಸುತ್ತಾರೆ.ಹಂಬಲಿಸುತ್ತಾರೆ.ಅವನು ಎಷ್ಟು ಒಲಿಯುತ್ತಾನೋ ಕರುಣಿಸುತ್ತಾನೋ ಗೊತ್ತಿಲ್ಲ. ಆದರೆ ಆ ಕುದುರೆಗಳಿಗೆ? ಕಣ್ಣೆದುರು ನಿಂತಿದ್ದಾನೆ.ಸೇವೆ ಮಾಡುತ್ತಿದ್ದಾನೆ.ಈ ಸೌಭಾಗ್ಯ ಯಾರಿಗುಂಟು?

ಕುಮಾರವ್ಯಾಸ ಪ್ರತಿಷ್ಠಾನ
೨೨/೮/೨೦೧೭