Wednesday, August 31, 2016

ಐಸಲೇ ಕುಮಾರವ್ಯಾಸ!! -೧೮-

ಆದಿ ಪ ೩-೧೮

ಕರ್ಣ ಜನನ ಪ್ರಸಂಗದ ಒಂದು ಪದ್ಯವನ್ನು ನೋಡೋಣ:

ದೂರ್ವಾಸ ಮುನಿಯ ಸೇವೆ ಮಾಡಿದ ಕುಂತಿಗೆ ಐದು ಪರಮ ರಹಸ್ಯವಾದ ಮಂತ್ರಗಳನ್ನು ಋಷಿ ಉಪದದೇಶಿಸಿದ್ದಾರೆ. ನೀನು ಯಾವ ದೇವತೆಯನ್ನು ನೆನೆದು ಈ ಮಂತ್ರವನ್ನು ಜಪಿಸುವೆಯೋ ಆ ದೇವನಿಂದ ನಿನಗೆ ಮಗನು ಜನಿಸುತ್ತಾನೆ! ಇನ್ನೂ ಬಾಲ್ಯಾವಸ್ಥೆಯನ್ನು ದಾಟಿರದ ಕುಂತಿಗೆ ಇಂಥದೊಂದು ಮಹತ್ವದ ಕೊಡುಗೆ ಸಿಕ್ಕಿದೆ!

ಬಾಲಕಿಗೆ ಇನ್ನೂ ಆಟೋಟಗಳ ಆಸಕ್ತಿ ಮುಗಿದಿಲ್ಲ. ಅದಕ್ಕೇ ಈ ಮಂತ್ರದ ಪರೀಕ್ಷೆ ಮಾಡೋಣ ಅನ್ನಿಸಿತು.'ಕವಿ ಹೇಳುತ್ತಾನೆ, 'ಮಗುವು ತನದಲಿ ಬೊಂಬೆಯಾಟಕೆ ಮಗುವನೇ ತಹೆನೆಂದು' ಗಂಗಾ ತೀರಕ್ಕೆ ಬಂದು ಸೂರ್ಯನನ್ನು ಧ್ಯಾನಿಸಿ ಮಂತ್ರ ವನ್ನು ಉಚ್ಚರಿಸಿದಳು! ಆಗ ಘಟಿಸಿದ ಅದ್ಭುತವನ್ನು ಕುಮಾರವ್ಯಾಸನ ಮಾತಿನಲ್ಲೇ ಕೇಳಬೇಕು ಮತ್ತು ಅರಿಯಬೇಕು.

" ಅರಸ ಕೇಳ್,
ಮುನಿಯಿತ್ತ ಮಂತ್ರಾಕ್ಷರದ ಕರಹಕೆ ತಳುವಿದರೆ,
ದಿನಕರನ ತೇಜವ ಕೊಂಬನೆ?
ದೂರ್ವಾಸ ವಿಗಡನಲಾ!
ಧರೆಗೆ ಬಂದನು ಸೂರ್ಯನು
ಆತನ ಕಿರಣ ಲಹರಿಯ ಹೊಯ್ಲಿನಲಿ
ಸರಸ ಮುಖಿ ಬೆಚ್ಚಿದಳು
ಬಿಜಯಂಗೈಯಿ ನೀನೆನುತ"

ಸೂರ್ಯ ಕ್ಷಣ ಮಾತ್ರವೂ ನಿಧಾನಿಸಲಿಲ್ಲ; ಓಡಿ ಬಂದ! ಯಾರೋ ಪುಟ್ಟ ಬಾಲಕಿ ಮಂತ್ರಪ್ರಯೋಗ ಮಾಡುತ್ತಿದ್ದಾಳೆ ಎಂದು ಉದಾಸೀನ ಮಾಡದೆ ಪ್ರತ್ಯಕ್ಷನಾದ! ಸೂರ್ಯನ ಅಸಹಾಯಕತೆ ಏನು ಗೊತ್ತೆ? ಆ ಋಷಿಯ ಮಂತ್ರ ತನ್ನನ್ನು ಕರೆಯುತ್ತಿದೆ! ಆ ಮಂತ್ರದ ಕರೆಗೆ ತಾನೇನಾದರೂ ನಿಧಾನಿಸಿದರೆ(ತಳುವಿದರೆ), ತಾನು ಜಗತ್ತಿಗೆಲ್ಲಾ ಬೆಳಕನ್ನು ಕೊಡುವ ಮಹಾ ತೇಜಸ್ವಿ ಸೂರ್ಯ ಎಂದು ಆ ದೂರ್ವಾಸ ಋಷಿ ಲೆಕ್ಕಿಸುತ್ತಾನೇನು? ಖಂಡಿತಾ ಇಲ್ಲ, ಆ ದೂರ್ವಾಸ ಮಹಾ ಪ್ರಚಂಡ, ಯಾರನ್ನು ಏನು ಬೇಕಾದರೂ ಮಾಡಬಲ್ಲ.
'ಮಂತ್ರಬದ್ಧಾ ಹಿ ವೈ ದೇವಾಃ' ಎನ್ನುವ ಮಾತಿದೆ.ಅಂದರೆ ದೇವತೆಗಳು ಎಷ್ಟೇ ಶಕ್ತಿಶಾಲಿಗಳಾದರೂ ಮಂತ್ರಕ್ಕೆ ಬದ್ಧರು.ಅದನ್ನು ಮೀರಲಾರರು.
ಹಾಗೆಯೇ ವಿಶೇಷ ಅಕ್ಷರ ಶಕ್ತಿಗಳನ್ನು ಗುರ್ತಿಸಿ ಮಂತ್ರಗಳನ್ನು ಸೃಷ್ಟಿಸಿ, ಅವನ್ನು ಉಪಾಸನೆ,ಯಜ್ಞ, ಮುಂತಾದ ಅನೇಕ ಪ್ರಕ್ರಿಯೆಗಳಿಂದ ಪ್ರಯೋಗಕ್ಕೆ ಸಿದ್ಧಪಡಿಸುತಿದ್ದ ಮಂತ್ರ ದ್ರಷ್ಟಾರರು ದೇವತೆಗಳನ್ನು ಸಹಾ ಅಳುಕಿಸಬಲ್ಲರಾಗಿದ್ದರು ಎಂಬ ಉಲ್ಲೇಖವೂ ಇದೆ.

ದಿನಕರನ ತೇಜವ ಕೊಂಬನೆ? ಎಂಬ ಉದ್ಗಾರದಲ್ಲಿ ಜಗತ್ತಿಗೆ ಬೆಳಕು ಬೀರುವ ಸೂರ್ಯನಿಗೂ ಇರುವ ದೂರ್ವಾಸನ ಭಯವನ್ನು ಕುಮಾರವ್ಯಾಸ ಸಮರ್ಥವಾಗಿ ಹೇಳಿದ್ದಾನೆ.ಇದು ಕುಮಾರವ್ಯಾಸನ ವಿಶೇಷ  ಭಾಷಾ ಶೈಲಿ ಕೂಡ.

ಸೂರ್ಯನ ಕಿರಣಗಳ ಪ್ರಖರ ಕಾಂತಿಯನ್ನು ನೋಡಲು ಸಾಧ್ಯವಾಗದೆ ಕುಂತಿ ಬೆಚ್ಚಿ ಕೂಗಿಕೊಂಡಳಂತೆ, ಬೇಡ,ಬೇಡ, ನಾನು ನೋಡಲಾರೆ,ನೀನು ಮರಳಿಹೋಗು, ಎಂದು.

ಆಮೇಲೆ ನಡೆದದ್ದು ನಮಗೆಲ್ಲಾ ಗೊತ್ತಿರುವ ಕರ್ಣನ ಜನನ.'ತರಣಿ ಬಿಂಬದ ಮರಿಯೋ ( ಮರಿ ಸೂರ್ಯನೋ),ಕೌಸ್ತುಭ ವರಮಣಿಯ ಖಂಡದ ಕಣಿಯೋ (ಕೌಸ್ತುಭ ರತ್ನದ ತುಣುಕೋ),ಮರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು( ಮನುಷ್ಯರ ಮಗುವಂತೂ ಅಲ್ಲ ಮಾಯಾ ಬಾಲಕನಿರಬೇಕು) ಅನ್ನುವಷ್ಟು ಸುಂದರ ವಾಗಿದ್ದ , ಕೈ ಕಾಲುಗಳನ್ನು ಬಡಿಯುತ್ತಾ ಮರಳ ರಾಶಿಯನ್ನು ಕೆದರುತ್ತಿದ್ದ ಶಿಶು ಕರ್ಣ.

ಒಂದು ಕಾಲದಲ್ಲಿ ಯುದ್ಧ ವಿದ್ಯೆಯಿಂದ ಹಿಡಿದು ಯಜ್ಞ ಯಾಗಾದಿ ಎಲ್ಲ ಕರ್ಮಗಳಲ್ಲಿ ಬಳಕೆಯಾಗುತ್ತಿದ್ದ ಮಂತ್ರಗಳ ಬಗ್ಗೆ ಏನೋ ಒಂದು ಗಂಭೀರ ಚಿಂತನೆ ಮೂಡುವಂತೆ ಮಾಡುತ್ತದಲ್ಲವೇಈ ಪದ್ಯ?

ಕುಮಾರವ್ಯಾಸ ಪ್ರತಿಷ್ಠಾನ

೨೮/೦೮/೨೦೧೬

#




Saturday, August 27, 2016

ಐಸಲೇ ಕುಮಾರವ್ಯಾಸ!! ೫
ಅರಣ್ಯಪರ್ವ ೨೩-೧೫
ಕುಮಾರವ್ಯಾಸನ ಅದ್ಭುತ ಕವಿತಾ ಶಕ್ತಿಯ ದ್ಯೋತಕ ಈ ಸರೋವರದ ವರ್ಣನೆ:
ದಟ್ಟ ಕಾಡಿನ ನಡುವೆ ಇರುವ ಸುಂದರವಾದ ಸರೋವರವನ್ನು ಕವಿ ಹೇಗೆ ವರ್ಣಿಸಬಹುದು? ತಂಗಾಳಿ, ಶುಭ್ರ ನೀರು, ತಾವರೆ,ದುಂಬಿಗಳ ಕಲರವ, ಮೇಲೆ ಹಾರುವ ಹಕ್ಕಿಗಳು ಇತ್ಯಾದಿ ಇತ್ಯಾದಿ., ಆದರೆ ಈ ಸರೋವರವನ್ನು ಕುಮಾರವ್ಯಾಸ ವಿಚಿತ್ರವಾದ ಹೋಲಿಕೆ
ಯೊಡನೆ ವರ್ಣಿಸಿ ಒಂದು ರೀತಿಯ ನಿಗೂಢತೆಯನ್ನು ಸೃಷ್ಟಿಸುತ್ತಾನೆ. ಓದಿನೋಡಿ:
'ಇರವಿನಲಿ ರಚನೆಯಲಿ
ಮಧುರೋತ್ತರವ ನೆರೆ ಬೀರುತ್ತ
ಅಂತಃಕರಣದಲಿ ಕತ್ತರಿಸಿಕೊಂಡಿಹ ಕುಜನರಂದದಲಿ
ಪರಿಮಳದ ಪಸರದಲಿ
ಶೈತ್ಯೋತ್ಕರುಷದಲಿ ಲೇಸೆನಿಸಿ
ಕುಡಿದೊಡೆ ಹರಣವನೆ ಹಿಂಗಿಸುವ
ಸರಸಿಯ ವಾರಿ ಚೆಲ್ವಾಯ್ತು '
ಮೇಲ್ನೋಟಕ್ಕೆ ಮಧುರವಾಗಿ ಕಾಣುತ್ತ , ಮಧುರವಾದ ಮಾತುಗಳನ್ನಾಡುತ್ತ ಇದ್ದರೂ ಅಂತಃಕರಣದಲ್ಲಿ ಕೃತ್ರಿಮವಾಗಿರುವ ದುಷ್ಟ ವ್ಯಕ್ತಿ ಗಳ ಹಾಗೆ ಈ ಸರೋವರ ಇದೆಯಂತೆ ! .ಅದರಿಂದ ಬರುವ ಪರಿಮಳ ಮನೋಹರವಾಗಿದೆ.ನೀರು ಸಹ ಅತ್ಯಂತ ತಂಪಾಗಿ ಆಪ್ಯಾಯಮಾನವಾಗಿದೆ.ಸರೋವರವೂ ತುಂಬಾ ಚೆಲುವಾಗಿದೆ.ಹಾಗಿದ್ದರೆ ಏಕೆ ಕುಜನರ ಹೋಲಿಕೆ ಎನ್ನುತ್ತೀರಾ? ಒಂದು ವಿಶೇಷವೂಇದೆ. ನೀರು ಕುಡಿದವರ ಪ್ರಾಣಹೋಗುತ್ತದೆ ಅಷ್ಟೇ.
ಗೊತ್ತಾಯಿತಲ್ಲ? ಇದು ಯಕ್ಷ ಪ್ರಶ್ನೆಗಾಗಿಒಡ್ಡಿದ ಸರೋವರ. ನೀರು ಕುಡಿದ ನಾಲ್ವರು ಪಾಂಡವ ಸಹೋದರರು ಸಾಯುತ್ತಾರೆ.ಅನಂತರ ಬಂದ ಧರ್ಮರಾಯ ತನ್ನ ಉತ್ತರದಿಂದ ಯಕ್ಷರೂಪಿ ಯಮನನ್ನು ಮೆಚ್ಚಿಸಿ ಸಹೋದರರನ್ನು ಮರಳಿ ಬದುಕಿಸುತ್ತಾನೆ. ಇರಲಿ.
ಸರೋವರದ ರಚನೆ,ಕೃತ್ರಿಮತೆ ಇವ ಕ್ಕೆ ಅನುರೂಪವಾದ ಹೋಲಿಕೆ ಹಾಗೂ ಬಳಸಿದ ಭಾಷೆಯ ಸತ್ವ ಮತೊಮ್ಮೆ ಮಗದೊಮ್ಮೆ ಚಿಂತಿಸುವಂತಿದೆ ಅಲ್ಲವೇ?
ಕುಮಾರವ್ಯಾಸ ಪ್ರತಿಷ್ಠಾನ
೦೯/೦೮/೧೯೧೬

Saturday, August 13, 2016

ಐಸಲೇ ಕುಮಾರವ್ಯಾಸ!!! ೭
ಉದ್ಯೋಗ ಪರ್ವ ೮-೭
ಶ್ರೀಕೃಷ್ಣ ಹಸ್ತಿನಾವತಿಯ ಕೌರವನ ಅರಮನೆಗೆ ಪಾಂಡವರ ಪ್ರತಿನಿಧಿಯಾಗಿ ಬಂದದ್ದು ಮಹಾಭಾರತದ ಅತ್ಯಂತ ಮಹತ್ವದ ರಾಜತಾಂತ್ರಿಕ ಘಟನೆ.
ದುರ್ಯೋಧನನಿಗೆ ಸಂತೋಷವಿರಲಿಲ್ಲವಾದರೂ ಅದ್ಭುತವಾದ ವ್ಯವಸ್ಥೆಯನ್ನೇ ಮಾಡಿದ್ದ ಎಂಬುದು ತಿಳಿಯುತ್ತದೆ.ಶ್ರೀಕೃಷ್ಣ ಸಹಾ ಅಗತ್ಯವಾದ ರಾಜನಿಯಮಕ್ಕೆ(ಪ್ರೋಟೋಕಾಲ್) ಅನುಸಾರವಾಗಿಯೇ ಬಂದದ್ದರಿಂದ ದುರ್ಯೋಧನನ ಅರಮನೆಯಲ್ಲಿ ಸಭೆ, ಚರ್ಚೆ,ಭೋಜನ,ಇವುಗಳನ್ನ ನಿಯಮಾನುಸಾರ ಮಾಡಿ ಕೃಷ್ಣನ ಮನಗೆಲ್ಲುವುದು,ಅಲ್ಲದೆ ತನ್ನ ವೈಭವವನ್ನು ಪ್ರಕಟಪಡಿಸುವುದು ಅವನ ಉದ್ದೇಶವಾಗಿತ್ತು.ಆದರೆ ಈ ರಾಜತಾಂತ್ರಿಕ ವ್ಯವಸ್ಥೆಯನ್ನು ಎರಡು ಬಾರಿ ಶ್ರೀಕೃಷ್ಣ ಉದ್ದೇಶಪೂರ್ವಕವಾಗಿ ಮೀರಿ ನಡೆದು ಅಚ್ಚರಿ ಮೂಡಿಸಿದ !
ಮೊದಲನೆಯದು ಅರಮನೆಯನ್ನೇ ಪ್ರವೇಶಿಸದೆ ವಿದುರನ ಮನೆಗೆ ಹೋದದ್ದು.ಇದು ಭೇಟಿಯ ಆರಂಭದಲ್ಲಿ. ಎರಡನೆಯದು,ಭೇಟಿಯ ಅಂತ್ಯದಲ್ಲಿ ಕಳಿಸಲುಬಂದ ಎಲ್ಲರನ್ನೂ ಬಿಟ್ಟು ಸ್ವಲ್ಪ ದೂರ ಜತೆಗೆ ಬಾ ಎಂದು ಕರ್ಣನನ್ನು ಕರೆದು ಕೊಂಡು ಹೋದದ್ದು. ಅದನ್ನು ಅನಂತರ ಚರ್ಚಿಸೋಣ.
ತನ್ನ ಆರಾಧ್ಯ ದೈವವಾದ ಶ್ರೀಕೃಷ್ಣನನ್ನು ಅರಮನೆಯಲ್ಲಿ ಯಾವಾಗ ,ಎಲ್ಲಿ ,ಹೇಗೆ ಭೇಟಿಯಾಗಲಿ, ನನಗೆ ಸಮಯ,ದರ್ಶನ ಸಿಕ್ಕೀತೆ ಎಂದೆಲ್ಲ ವಿದುರ ಚಿಂತಿಸುತ್ತಿದ್ದಿರಬೇಕು. ಯಾಕೋ ಬಾಗಿಲ ಕಡೆ ನೋಡಿದ.ಎಂಥಾ ಅದ್ಭುತ ದೃಶ್ಯ !! ಕುಮಾರವ್ಯಾಸನ ಮಾತಿನಲ್ಲೇ ಕೇಳಿ:

'ಸಿರಿಮೊಗದ ಕಿರುಬೆಮರ
ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ
ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ
ಖರ ಮರೀಚಿಯ ಝಳಕೆ ಬಾಡಿದ
ತರುಣ ತುಳಸಿಯ ಮಾಲೆಯೊಪ್ಪುವ
ಗರುವ ದೇವನ ಬರವ ಕಂಡನು ಬಾಗಿಲಲಿ ವಿದುರ '
ತನ್ನೊಡನೆ ಬಂದಿದ್ದ ಎಲ್ಲಾ ರಾಜತಾಂತ್ರಿಕ ಪರಿವಾರವನ್ನು ತೊರೆದು ಏಕಾಂಗಿಯಾಗಿ ವಿದುರನ ಮನೆಯನ್ನು ತಾನೇ ಹುಡುಕಿ ಬಂದಿದ್ದಾನೆ!
ಶ್ರೀಕೃಷ್ಣನ ಸುಂದರ ಮುಖದಲ್ಲಿ ಬೆವರಿನ ಹನಿಗಳಿವೆ.ಹರಡಿಕೊಂಡಿರುವ ತಲೆಗೂದಲ ಮೇಲೆ , ಹಾಗು ಮೀಸೆಯ ಮೇಲೆ ಕುದುರೆಯ ಗೊರಸುಗಳಿಂದ ಹಾರಿದ ಕೆಂಪು ಧೂಳಿನ ಕಣಗಳು ಮೆತ್ತಿಕೊಂಡಿವೆ.ರಥದ ಮೇಲೆ ದೀರ್ಘ ಪ್ರಯಾಣ ಮಾಡಿ ಬಂದಿದ್ದನಲ್ಲವೇ? ಕೊರಳಿನಲ್ಲಿ ಧರಿಸಿರುವ ತನಗೆ ಪ್ರಿಯವಾದ ತುಳಸಿಯ ಮಾಲೆ ಪ್ರಖರವಾದ ಬಿಸಿಲಿನ ಝಳಕ್ಕೆ ಬಾಡಿದೆ.
ಇಂಥಾ ಮಹಾಮಹಿಮ ಯಾವುದೇ ಪೂರ್ವ ಸೂಚನೆಯಿಲ್ಲದೆ ತನ್ನ ಮನೆಯ ಬಾಗಿಲಲ್ಲಿ ಬಂದು ನಗುತ್ತಾ ನಿಂತಿದ್ದಾನೆ! ಹೇಗಾಗಬೇಡ ವಿದುರನಿಗೆ?
ವಿದುರನಿಗೆ ಮಾತ್ರವೇನು? ಭಕ್ತನಾದ ಕುಮಾರವ್ಯಾಸನಿಗೂ ಭಕ್ತಿಯ ಆವೇಶ ಉಕ್ಕುತ್ತದೆ. ಆ ಪ್ರಸಂಗದ ಸೊಗಸನ್ನು ಓದಿಯೇ ಅನುಭವಿಸಬೇಕು !
ಕುಮಾರವ್ಯಾಸ ಪ್ರತಿಷ್ಠಾನ
೧೩/೦೮/೨೦೧೬

Sunday, August 7, 2016

ಐಸಲೇ ಕುಮಾರವ್ಯಾಸ !! ೪
ಆದಿ ಪರ್ವ ೭-೩೫
ಆದಿಪರ್ವದಲ್ಲಿ ತಂದೆಯ ಮರಣಾನಂತರ ಬಡತನದಲ್ಲಿದ್ದ ದ್ರೋಣಾಚಾರ್ಯ,ಆಶ್ರಯ, ಸಹಾಯಕ್ಕಾಗಿ ತನ್ನಬಾಲ್ಯದ ಸಹಪಾಠಿಯಾಗಿದ್ದ ದ್ರುಪದನನ್ನು ಹುಡುಕಿಕೊಂಡು ಬಂದ ಸಂದರ್ಭ ತುಂಬಾ ಸ್ವಾರಸ್ಯಕರವಾಗಿದೆ. ರಾಜ್ಯಮದ, ಐಶ್ವರ್ಯಮದ ಸೇರಿ ದ್ರುಪದ ದ್ರೋಣನನ್ನು ಗುರ್ತಿಸುವುದಿಲ್ಲ ಮಾತ್ರವಲ್ಲ, ಹಂಗಿಸಿ ಅವಮಾನಿಸುತ್ತಾನೆ. ರಾಜನಿಗೂ ಒಬ್ಬ ಬಡ ಬ್ರಾಹ್ಮಣನಿಗೂ ಎಲ್ಲಿಯಗೆಳೆತನ? ಎಂದು ಪ್ರಶ್ನಿಸುತ್ತಾನೆ.ಬಡವನಾಗಿದ್ದರೂ ಮಹಾಸ್ವಾಭಿಮಾನಿಯೂ, ಧನುರ್ವಿದ್ಯೆಯ ಪ್ರಕಾಂಡ ಪರಿಣತನೂ ಆಗಿದ್ದ ದ್ರೋಣ ಇದರಿಂದ ಅಪಮಾನಿತನಾಗಿ ತುಬಿದ ಸಭೆಯಲ್ಲಿ ಎಲ್ಲರೆದುರು ಕೂಗಿ ಪ್ರತಿಜ್ಞೆ ಮಾಡುತ್ತಾನೆ.
ದ್ರೋಣನಂಥ ಪರಾಕ್ರಮಿಯ ಪ್ರತಿಜ್ಞೆಯ ವಾಕ್ಯಗಳು ಕುಮಾರವ್ಯಾಸನ ಗಂಡುಕನ್ನಡದ ಭಾಷೆಯಲ್ಲಿ ಎಷ್ಟುಶಕ್ತಿಯುತವಾಗಿಮೂಡಿಬಂದಿವೆನೋಡಿ:-
'ಎಲವೋ ನಿನ್ನಾಸ್ಥಾನ ಸಹಿತೀ ಹೊಳಲ ಸುಡುವೆನು,
ನಿನ್ನ ಸೀಳಿದು ಬಲಿಯ ಕೊಡುವೆನು ಭೂತಗಣಕೆ
ಇದಿರಲ್ಲ ನೀನೆನಗೆ
ಕಲಿತ ವಿದ್ಯೆಯ ಕೋಲ ಮಕ್ಕಳ ಕಳುಹಿ ಕಟ್ಟಿಸಿ
ವಾಮಪಾದದಿ ತಲೆಯನೊದೆವೆನು
ಮರೆಯದಿರು ನೀನೆಂದನಾ ದ್ರೋಣ'
'ಎಲೋ ದ್ರುಪದ, ಇದೋ ನನ್ನ ಪ್ರತಿಜ್ಞೆ! ನಿನ್ನ ಆಸ್ಥಾನವೂ ಸೇರಿದಂತೆ ಈ ನಗರವನ್ನು ಸುಟ್ಟು ಹಾಕುತ್ತೇನೆ. ನಿನ್ನನ್ನು ಸೀಳಿ ಭೂತಗಳಿಗೆ ಬಲಿ ಹಾಕುತ್ತೇನೆ. ನೀನು ನನಗೆ ಸಮನಲ್ಲ. ನಾನು ಬಿಲ್ಲು ವಿದ್ಯೆ ಕಲಿಸಿದ ಮಕ್ಕಳನ್ನುಕಳಿಸಿ ನಿನ್ನನ್ನು ಕಟ್ಟಿಹಾಕಿಸಿ ನನ್ನ ಎಡಗಾಲಿನಿಂದ ನಿನ್ನ ತಲೆಯನ್ನು ಒದೆಯುತ್ತೇನೆ, ತಿಳಿದುಕೋ'
ಈ ಪ್ರತಿಜ್ಞೆಯನ್ನು ಶಿಷ್ಯಮಕ್ಕಳಾದ ಅರ್ಜುನಾದಿಗಳ ಮೂಲಕ ಸಾಧಿಸುತ್ತಾನೆಸಹಾ.
ಕುಮಾರವ್ಯಾಸ ಪ್ರತಿಷ್ಠಾನ
೦೭/೦೮/೨೦೧೬

Saturday, August 6, 2016

ಐಸಲೇ ಕುಮಾರವ್ಯಾಸ!! ೩
ಸಭಾಪರ್ವ-೧-೬೨
'ಅರಸು ರಾಕ್ಷಸ
ಮಂತ್ರಿ ಎಂಬವ ಮೊರೆವ ಹುಲಿ
ಪರಿವಾರ ಹದ್ದಿನ ನೆರವಿ
ಬಡವರ ಬಿನ್ನಪವ ಇನ್ನಾರು ಕೇಳುವರು?
ಉರಿವುತಿದೆ ದೇಶ,
ನಾವಿನ್ನಿರಲು ಬಾರದೆನುತ್ತ
ಜನ ಬೇಸರದ ಬೇಗೆಯಲಿರದಲೇ
ಭೂಪಾಲ ಕೇಳೆಂದ'

ಧರ್ಮರಾಯನ ಅರಮನೆಗೆ ಇದ್ದಕ್ಕಿದ್ದಂತೆ ಆಗಮಿಸಿದ ನಾರದರು ರಾಜ್ಯದ ಆಗುಹೋಗುಗಳ ಬಗ್ಗೆ ವಿಚಾರಿಸುತ್ತಾ, ನೀತಿಯನ್ನು ತಿಳಿಯಹೇಳುತ್ತಾ ಹೇಳುವ ಮಾತು ಇದು. ಆದರ್ಶವಿಲ್ಲದ ರಾಜನ ರಾಜ್ಯದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದಕ್ಕೆನಾರದರ ಬಾಯಲ್ಲಿ ಕವಿ ಅತ್ಯಂತ ಶಕ್ತಿಯುತವಾಗಿ ಹೇಳಿಸುತ್ತಾನೆ.
ಅರ್ಥ:- ರಾಜನೋ ಸಾಕ್ಷಾತ್ ರಾಕ್ಷಸನಂತೆ, ಮಂತ್ರಿಯಾವಾಗಲೂ ಘರ್ಜಿಸುವ ಹುಲಿಯ ಹಾಗೆ, ರಾಜನ ಪರಿವಾರದವರೋ ರಣಹದ್ದುಗಳಗುಂಪಿನಂತೆ , ಹಾಗಿರುವಾಗ ಬಡ ಪ್ರಜೆಗಳ ಗೋಳನ್ನು ಕೇಳುವವರ್ಯಾರು? ದೇಶ ಹತ್ತಿ ಉರಿಯುತ್ತಿದೆ ನಾವು ಇಲ್ಲಿರುವುದು ಬೇಡ ಎಂದು ನಿನ್ನ ರಾಜ್ಯದ ಜನತೆ ಬೇಸರದ ಬೆಂಕಿಯಲ್ಲಿ ಬೇಯುತ್ತಿಲ್ಲ ತಾನೇ?
ಸುಮಾರು ೬೦೦ ವರ್ಷಗಳ ಹಿಂದೆ ಕುಮಾರವ್ಯಾಸ ಬರೆದದ್ದು ಇಂದಿನ ಸಂದರ್ಭಕ್ಕೂಹಿಡಿದ ಕನ್ನಡಿಯಾಗಿರುವುದು ವಿಪರ್ಯಾಸವಲ್ಲವೇ?
#ಕುಮಾರವ್ಯಾಸ ಪ್ರತಿಷ್ಠಾನ
೦೬/೦೮/೨೦೧೬

Friday, August 5, 2016

ಐಸಲೇ ಕುಮಾರವ್ಯಾಸ!!
ಆರಂಭದ ಇನ್ನೊಂದು ಪ್ರಖ್ಯಾತ ಪದ್ಯ:
' ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನಮಗನ ತ
ಳೋದರಿಯಮಾತುಳನ ಮಾವನಂತುಳ ಭುಜಬಲದಿ
ಕಾಡಿ ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೋ ಗದುಗಿನ ವೀರ ನಾರಯಣ'

ಅರ್ಥ:-ವೇದ ಪುರುಷನ -ಬ್ರಹ್ಮನ, ಸುತನ-ಮಗನಾದ ಮರೀಚಿಯ,ಸುತನ-ಮಗನಾದ ಪೂರ್ಣಿಮನ, ಸಹೋದರನ-ಕಶ್ಯಪನ,ಹೆಮ್ಮಗನ-ಹಿರಿಯಮಗನಾದ ಇಂದ್ರನ, ಮಗನ-ಅರ್ಜುನನ,ತಳೋದರಿಯ-ಹೆಂಡತಿಯಾದ ಸುಭದ್ರೆಯ,ಮಾತುಳನ-ಸೋದರಮಾವನಾದ ಕಂಸನ, ಮಾವನ- ಜರಾಸಂದನ,ಕಾದಿ ಗೆಲಿದನ- ಹೋರಾಡಿ ಗೆದ್ದಂಥ ಭೀಮಸೇನನ,ಅಣ್ಣನ-ಧರ್ಮರಾಯನ, ಅವ್ವೆಯ-ತಾಯಿಯಾದ ಕುಂತಿಯ , ನಾದಿನಿಯ-ಕುಂತಿಯ ನಾದಿನಿಯಾದ ದೇವಕಿಯ ..ಹೊಟ್ಟೆಯಲ್ಲಿ ಜನಿಸಿದ ಅನಾದಿ ಮೂರ್ತಿಯಾದ ನಾರಯಣ, ನಮ್ಮನ್ನು ರಕ್ಷಿಸು.
ವಿಶೇಷ : ಪುರಾಣದ ಎಲ್ಲ ಪಾತ್ರಗಳಲ್ಲೂ ಸುತ್ತಾಡಿಸಿ ಸಂಬಂಧಗಳನ್ನು ಒಗಟಿನ ರೂಪದಲ್ಲಿ ಸೇರಿಸುತ್ತಾ ಕೊನೆಗೆ ಅವನ ಪ್ರಿಯದೈವ ನಾರಾಯಣನಿಗೆ ಜೋಡಿಸಿ ನಮಿಸುವಲ್ಲಿ ಕವಿಯ ಭಾಷೆಯ ಮೇಲಿನ ಹಿಡಿತ, ತಮಾಷೆಯ ಮನೋಭಾವ,ಪಾಂಡಿತ್ಯ ಎಷ್ಟುಪ್ರಭಾವಿಯಾಗಿದೆ!
ಕನ್ನಡದಲ್ಲಿ ತುಂಬಾ ಪ್ರಖ್ಯಾತ ಒಗಟು ಇದು. ಮಕ್ಕಳಿಗೆ ಹೇಳಿಕೊಡಿ.
ಕುಮಾರವ್ಯಾಸ ಪ್ರತಿಷ್ಠಾನ
೦೫/೦೮/೧೬

Thursday, August 4, 2016

ಐಸಲೇ ಕುಮಾರವ್ಯಾಸ!!
ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿ ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳು ಒಂದು ಕಾಲದಲ್ಲಿ ಎಲ್ಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಆದರೆ ಈಗ ಓದುವವರು ಮಕ್ಕಳಿಗೆ ತಿಳಿಸಿ ಹೇಳುವವರು ಕಡಿಮೆಯಾದಂತೆ, ಭಾಷೆಯ, ಸಾಹಿತ್ಯದ ಸೊಬಗು ಮತ್ತು ಸತ್ವ ಮಕ್ಕಳಿಗೆ ಸಿಗುತ್ತಿಲ್ಲ. ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳನ್ನು ಅರಿತು ಎಲ್ಲರಿಗೂ ಹಂಚುವ ಉದ್ದೇಶ ಈ ಕಟ್ಟೆಯದು.
ನೀವೂ ಓದಿ ನಿಮ್ಮ ಆಸಕ್ತ ಗೆಳೆಯರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ.
ಬನ್ನಿ, ಮೊದಲ ಷಟ್ಪದಿ ಇದು :
'ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಲ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತಧಾಮ ಸುಧಯಾ
ನಾಮ ಆಹವ ಭೀಮ ರಘುಕುಲ
ರಾಮ ರಕ್ಷಿಸು ಒಲಿದು ಗದುಗಿನ ವೀರ ನಾರಾಯಣ '
-ಕುಮಾರವ್ಯಾಸ ಕೃಷ್ಣನ ಪರಮ ಭಕ್ತ . ಮಹಾಭಾರತದ ಆರಂಭದ ಈ ಪದ್ಯದಲ್ಲಿ ಶ್ರೀರಾಮನನ್ನು ಪ್ರಾರ್ಥಿಸಿದ ರೀತಿ, ಭಾಷೆ ಸುಂದರವಾಗಿದೆ.
-ವಿಶೇಷ:ಶ್ರೀರಾಮನ ಗುಣಗಳಾದ ಆಹವ ಭೀಮ-ಯುದ್ದ ಭಯಂಕರ, ಸುಧಯಾನಾಮ- ನಾಮ ಜಪಿಸುವವರಿಗೆ ಅಮೃತ ಸಮಾನನಾದವನು ,ಅವನೇ ಗದುಗಿನ ವೀರ ನಾರಾಯಣನೂ ಹೌದು ಮೊದಲಾದ ಪ್ರಯೋಗ ಗಮನಿಸಿ'
(ಐಸಲೇ- ಕುಮಾರವ್ಯಾಸನಿಗೆಪ್ರಿಯವಾದ ಪ್ರಯೋಗ. ಅರ್ಥ-'ಹೌದಲ್ಲವೇ' ಗೆ ಹತ್ತಿರ.)
# ಕುಮಾರವ್ಯಾಸ ಪ್ರತಿಷ್ಠಾನ
೦೪/೦೮/೧೬