Tuesday, February 28, 2017



ಐಸಲೇ ಕುಮಾರವ್ಯಾಸ!                           -೭೬-

ಆದಿ ೧೪-

ದ್ರೌಪದಿಯ ಸ್ವಯಂವರ ಕುಮಾರವ್ಯಾಸನ ಪ್ರತಿಭೆ, ಕವಿತಾಶಕ್ತಿ,ಶಬ್ದಶಕ್ತಿ ಇವಕ್ಕೆ ಅತ್ಯಂತ ಹೇರಳ ಅಭಿವ್ಯಕ್ತಿ ದೊರೆತ ಭಾಗ. ಅಷ್ಟೇ ಅಲ್ಲ ಕವಿ ಮೂಲ ಭಾರತದ ಸಾಮಗ್ರಿಯನ್ನು ತನ್ನ ಕವಿತಾ ವಿಲಾಸ  ಸ್ವಾತಂತ್ರ್ಯ ಹಾಗೂ ಅನುಭವಗಳ ಮೇಳದಿಂದ ಅದ್ಭುತವಾಗಿ ವಿಸ್ತರಿಸಿದ್ದಾನೆ. ಹಾಗಾಗಿ ತುಂಬಾ ಸ್ವಾರಸ್ಯಕರವಾದ, ಆತ್ಮೀಯವಾದ ಕಾವ್ಯಭಾಗ ಇದು.

ಇಡೀ ಪಾಂಚಾಲ ನಗರದಲ್ಲಿ ವಿದ್ಯುತ್ ಸಂಚಾರ! ಭೂಮಂಡಲದ ರಾಜರುಗಳು ಒಬ್ಬೊಬ್ಬರಾಗಿ ಬಂದು ಸೇರಿದ್ದಾರೆ. ಪಾಂಡವರು ಬ್ರಾಹ್ಮಣರ ವೇಷದಲ್ಲಿ! ಬಂದ ಎಲ್ಲಾ ರಾಜರಿಗೂ ರಾಜಭವನದ ಬಿಡಾರಗಳು. ಪಾಂಡವರು ಒಂದು ಕುಲಾಲ ಭವನದಲ್ಲಿ( ಮಡಿಕೆ ಮಾಡುವ ಮನೆ)!

ಊರಿಗೆ ಊರೇ ಅಲಂಕೃತವಾಗಿದೆ.ರಾಜರಷ್ಟೇ ಅಲ್ಲ; ಕವಿಗಳು, ಗಮಕಿಗಳು,ಯಾಜ್ಞಿಕರು, ವಿವಾಹೋತ್ಸವ ವಿಲೋಕನ ಕೌತುಕಿಗಳು ( ಮದುವೆ ನೋಡಬಂದ ಕುತೂಹಲಿಗಳು) ಅಸಂಖ್ಯಾತಮಂದಿ .ಆಗಸದಲ್ಲಿ ದೇವತೆಗಳ ಸಮೂಹ! ಅಷ್ಟು ಸಂಭ್ರಮದ ವಾತಾವರಣ!

ಭುವನ ಸುಂದರಿ ಎನಿಸಿದ್ದ, ವಿಶೇಷವಾಗಿ ಮನ್ಮಥನ ಮದದಾನೆಯಂತಿದ್ದ ದ್ರೌಪದಿಯನ್ನು ಅವಳ ಸಖಿಯರ ಹಾವಭಾವಗಳನ್ನು, ಸ್ವಯಂವರ ಮಂದಿರದ ವೈಭವವನ್ನು ಓದಿಯೇ ಸವಿಯಬೇಕು.

ಶೌರ್ಯ, ಪರಾಕ್ರಮ, ಸೌಂದರ್ಯಗಳಿಗೆ ಹೆಸರು ಮಾಡಿದ್ದ ರಾಜರುಗಳ ಎದುರು ದ್ರೌಪದಿ ಪರಿಚಯಿಸಿಕೊಳ್ಳುತ್ತಾ, ಅವರ ವಿವರಗಳನ್ನು ಕೇಳುತ್ತಾ ಒಮ್ಮೆ ಹಾದು ಹೋಗುತ್ತಾಳೆ. ದ್ರೌಪದಿ ಎದುರಿಗೆ ಬಂದಾಗ  ಸೌಂದರ್ಯಕ್ಕೆ ಮಾರುಹೋಗಿ ಮೈ ಮರೆತು ತಲ್ಲಣಗೊಂಡ ರಾಯರುಗಳ ಸ್ಥಿತಿ ಹೇಗಿತ್ತು?


ಕೆಲರು ಮಧುರಾಪಾಂಗದಲಿ,
ಕಂಗಳ ಮರೀಚಿಯ ಬೆಳಗಿನಲಿ ಕೆಲರು,
ಎಳನಗೆಯ ಮಿಂಚಿನಲಿ,ಸಖಿಯರ ಮೇಳವಾತಿನಲಿ,
ಲಲನೆ ನೋಡಿದಳೆಂದು,
ಸೊಗಸಿನಲಿ ಒಲಿವ ಸಖಿಯರಿಗೆಂದಳೆಂದು,
ಒಳಗೊಳಗೆ ಬೆರೆತರು,
ಬಯಲು ಮಧುವಿನ ಬಾಯ ಸವಿಗಳಲಿ..’

(ಮರೀಚಿ- ಕಿರಣಗಳು;ಮೇಳವಾತು-ಆಪ್ತವಚನ;)

‘ಕೆಲವರಿಗೆ ಅವಳ ಮೈಮಾಟವೇ ಸಾಕಾಯಿತು,ಕೆಲವರಿಗೆ ಅವಳ ಕಣ್ಣಿನ ನೋಟ! ಪರಿಚಯಿಸುವಾಗ ಅವಳು ಮಂದಹಾಸ ಬೀರಿದರೆ ಸಾಕು, ತಮ್ಮೆದುರು ಸಖಿಯರಿಗೆ ಏನಾದರೂ ಹೇಳಿದಳೆಂದರೆ ತಮ್ಮನ್ನು ಒಪ್ಪಿಯೇಬಿಟ್ಟಳೆಂದು ಹಿಗ್ಗುತ್ತಿದ್ದರು. ತನ್ನನ್ನು ನೋಡಿದಳಲ್ಲವೇ? ವರಿಸುವ ಮನಸ್ಸಿದೆ.ತನ್ನೆದುರು ಸಖಿಯರಿಗೆ ಏನೋ ಹೇಳಿದಳಲ್ಲವೆ? ಖಂಡಿತಾ ಸಮ್ಮತಿ ಸೂಚಿಸಿರಬೇಕು! ಹೀಗೆ, ಒಳಗೊಳಗೇ ಭ್ರಮಿಸಿ ಅವಳೊಂದಿಗೆ ಬೆರೆತರಂತೆ!.ಆಕಾಶದ ಜೇನಿಗೆ ಬಾಯಿಬಿಟ್ಟು ಚಪ್ಪರಿಸಿದ ಹಾಗೆ!

ರಾಜರುಗಳ ಗತ್ತು, ಆತಂಕ, ನಿರೀಕ್ಷೆ  ಮೇರೆಮೀರಿದ ಆತ್ಮವಿಶ್ವಾಸ ಇವುಗಳನ್ನು ಒಂದೇ ಪದ್ಯದಲ್ಲಿ ಕವಿ ಹೇಗೆ ಹಿಡಿದಿಟ್ಟಿದ್ದಾನೆ!

ನಿರಾಶೆಯೆಂದರೆ, ಯಾರನ್ನೂ ವರಿಸದೆ ದ್ರೌಪದಿಯ ದಂಡಿಗೆ (ಪಲ್ಲಕ್ಕಿ) ಮರಳಿತು!

ಕುಮಾರವ್ಯಾಸ ಪ್ರತಿಷ್ಠಾನ

೨೮/೨/೨೦೧೭

Saturday, February 25, 2017



ಐಸಲೇ ಕುಮಾರವ್ಯಾಸ!                           --
ಅರ ಪ ೮-೫೩


ಊರ್ವಶಿಯಿಂದ ನಪುಂಸಕತ್ವದ ಶಾಪ ಪಡೆದ ಅರ್ಜುನನಿಗೆ ಅಪಮಾನವೊಂದು ಕಡೆ, ಅನುಮಾನವೊಂದುಕಡೆ.ಧರ್ಮ ಹೇಳಿದಂತೆ ನಡೆದದ್ದಕ್ಕೆ ಇಂಥಾ ಶಿಕ್ಷೆಯೆ?

ಅನೇಕ ವೇಳೆ ನಮಗೊದಗಿದ ಅನಾನುಕೂಲಗಳನ್ನು ನಾವು ಶಿಕ್ಷೆಯೆಂದೇ ಪರಿಗಣಿಸುತ್ತೇವೆ. ಇದು ಸಹಜ.ಆದರೆ ವಿಶಾಲ ದೃಷ್ಟಿಯಿಂದ ಅದು ನಮಗೆ ಲಾಭವನ್ನೇ ತರಬಹುದು!

ಅರ್ಜುನನಿಗೆ ಒದಗಿದ ಶಾಪವನ್ನು ಗಂಧರ್ವನಿಂದ ಅರಿತ ಇಂದ್ರ  ಮಗನನ್ನು ಸಂತೈಸುತ್ತಾ ಹೇಳಿದಃ


ಖೋಡಿಯಿಲ್ಲೆಲೆ ಮಗನೆ, ಚಿಂತಿಸಬೇಡ
ನಿಮ್ಮಜ್ಞಾತದಲಿ ನೆರೆ ಜೋಡಲಾ
ಜಾಣಾಯ್ಲ ರಿಪುಜನ ದೃಷ್ಟಿ ಶರ ಹತಿಗೆ,
ಕೂಡಿತಿದು ಪುಣ್ಯದಲಿ
ಸುರಸತಿ ಮಾಡಿದಪಕೃತಿ ನಿನ್ನ ಭಾಷೆಯ ಬೀಡ ಸಲಹಿದುದರಿಯೆ,
ನೀ ಸಾಹಿತ್ಯನಲ್ಲೆಂದ’

(ಖೋಡಿ-ತಪ್ಪು; ಜೋಡು- ಕವಚ; ಜಾಣಾಯ್ಲ- ಜಾಣರಾದ; ರಿಪು- ಶತೃ;  ಅಪಕೃತಿ- ಅಪಕಾರ; )

‘ಮಗನೇ, ಯೋಚಿಸಬೇಡ. ನಿನ್ಗೆ ದೊರೆತ ಶಾಪ ನಿಜಕ್ಕೂ ನಿನ್ನ ಪುಣ್ಯದಿಂದ ದೊರೆತ ವರವೆಂದು ತಿಳಿ.ಆಜ್ಞಾತವಾಸದಲ್ಲಿ ಶತ್ರುಗಳ ದೃಷ್ಟಿಬಾಣಗಳಿಂದ ತಪ್ಪಿಸಿಕೊಳ್ಳಲು ನಿನಗೆ ಇದು ರಕ್ಷಾ ಕವಚ. ಊರ್ವಶಿ ಮಾಡಿದ ಅಪಕಾರ ನಿನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಯ್ತು. ಈ ಘಟನೆಗಳ ಒಳ ಅರಿವು ನಿನಗಿಲ್ಲ’ ಎಂದ ಇಂದ್ರ. ಅರ್ಜುನ ತುಸು ಸಮಾಧಾನಗೊಂಡ.

ವಿವೇಕದ ಮಾತುಗಳನ್ನಾಡುವಾಗಿನ ಗಟ್ಟಿತನ, ಸಮರ್ಥವಾದ ಶಬ್ದಗಳು,ಕುಮಾರವ್ಯಾಸನಲ್ಲಿ ಗಮನಿಸಬೇಕಾದ ಅಂಶಗಳು. ‘ಅರಿಯೆ, ನೀ ಸಾಹಿತ್ಯನಲ್ಲೆಂದ (ನಿನಗೆ ಅವು ಅರ್ಥವಾಗುವುದಿಲ್ಲ ಎಂಬ ಅರ್ಥದಲ್ಲಿ) ಅಪರೂಪದ ಪ್ರಯೋಗ.

‘ಜಾಣಶತ್ರುಗಳ ದೃಷ್ಟಿ ಎಂಬ ಬಾಣಗಳಿಗೆ ಇದು ಕವಚವಾಯ್ತು’ ಎಂಬ ಪುಟ್ಟ ರೂಪಕ ಸಹಾ ಸುಂದರ!

ಕುಮಾರವ್ಯಾಸ ಪ್ರತಿಷ್ಠಾನ
೨೪/೨/೨೦೧೭

Saturday, February 18, 2017



  ಐಸಲೇ ಕುಮಾರವ್ಯಾಸ!                           -೭೪-
   ಅರಣ್ಯ -೪೩


ಕ್ರೋಧಗೊಂಡ ಊರ್ವಶಿಯನ್ನು ಕುಮಾರವ್ಯಾಸ ವಿಶೇಷವಾಗಿ ವರ್ಣಿಸಿದ್ದನ್ನು ನೋಡಿದೆವು.ಅಷ್ಟೇ ಬಿರುಸಾಗಿದೆ ಅವಳ ಮಾತುಗಳು ಹಾಗೂ ಶಾಪ. ಕೋಪದಿಂದ ಬುಸುಗುಡುತ್ತಾ ನುಡಿಯುತ್ತಾಳೆ;

ನರ ಮೃಗಾಧಮ,
ನಿಮ್ಮ ಭಾರತವರ್ಷ ಭೂಮಿಯೊಳು,
ಒಂದು ವರುಷಾಂತರ ನಪುಂಸಕನಾಗಿ ಚರಿಸು
ನಿರಂತರಾಯದಲಿ
ಹರಿಯ ಮೊರೆಯೊಗು, ಹರನ ನೀನನುಸರಿಸು
ನಿಮ್ಮಯ್ಯಂಗೆ ಹೇಳು,
ಇದು ನಿರುತ ತಪ್ಪದು ಹೋಗು,
ಎನುತ ಮೊಗದಿರುಹಿದಳು ಚಪಲೆ..,’


ಎಲವೋ ನರಮೃಗವೇ! ನಿಮ್ಮ ಭಾರತ ಭೂಮಿಯಲ್ಲಿ ಒಂದು ವರ್ಷ ಕಾಲ ನಿರಂತರವಾಗಿ ನಪುಂಸಕನಾಗಿ ಜೀವಿಸು,ಇದು ನನ್ನ ಶಾಪ. ಹರಿಯ ಮೊರೆಹೊಕ್ಕರೂ, ಶಿವನನ್ನು ಬೇಡಿದರೂ,ನಿನ್ನ ಅಪ್ಪ ಇಂದ್ರನಿಗೆ ಹೇಳಿದರೂ ಇದು ತಪ್ಪುವುದಿಲ್ಲಎಂದು ಬಿರುಸಾಗಿ ನುಡಿದು ಮುಖ ತಿರುಗಿಸಿ ನಡೆದಳು


ಭೂಲೋಕದಿಂದ ಬಂದು ತನಗೆ ಅವಮಾನ ಮಾಡುವ ದಾರ್ಷ್ಟ್ಯ ತೋರಿಸಿದ್ದಕ್ಕೆ ಅವಳಿಗೆ ಮಾನವ ಜಾತಿಯ ಮೇಲೇ ತಿರಸ್ಕಾರ! ‘ನರ ಮೃಗಾಧಮಎಂಬ ಉದ್ಗಾರ! ನರ ಎನ್ನುವುದೇ ದೇವಲೋಕದವರಿಗೆ ಒಂದು ಬೈಗುಳ. ಜತೆಗೆ ಮೃಗ.ನರನೆಂಬ ಮೃಗ .ಅಷ್ಟೇ ಅಲ್ಲ ಅಧಮ ಬೇರೆ! ಮೂರು ಮೂರು ತಿರಸ್ಕಾರ ಶಬ್ದಗಳು!ಅರ್ಜುನನಿಗೆ ಇಂಥಾ ಶಬ್ದವನ್ನು ಬೇರಾರೂ ಬಳಸಿರಲಾರರು!


ತನ್ನಂಥ ಹೆಣ್ಣನ್ನು ತಿರಸ್ಕರಿಸಿದವ ನಪುಂಸಕನೇ ಸರಿ, ಹಾಗಾಗಿ ನಿಜವಾಗಿಯೂ ನಪುಂಸಕನಾಗಿ ಒಂದು ವರ್ಷ ಜೀವಿಸುವ ಶಿಕ್ಷೆ!. ಜತೆಗೆ ಅರ್ಜುನ ಯಾರುಯಾರ ಮೊರೆ ಹೊಗಬಹುದು? ಅವಳಿಗೆ ಗೊತ್ತು!.ಆದ್ದರಿಂದಲೇ ಹರಿ, ಹರ, ಇಂದ್ರರು ಸಹಾಯ ಮಾಡದಂತೆ ಉಪ ನಿಬಂಧನೆ ಕೂಡಾ ಇದೆ.


ಕವಿ ಊರ್ವಶಿಯನ್ನು ಮೊಗದಿರುಹಿದಳು ಚಪಲೆಎನ್ನುತ್ತಾನೆ.ಸಿಟ್ಟಿನಿಂದ ಮುಖ ತಿರುಗಿಸಿದ್ದೂ ಹೌದು;ನೇರ ನಡೆಯ ಅರ್ಜುನನ ನೋಟವನ್ನು ಇನ್ನೂ ಎದುರಿಸಲಾರದುದೂ ಒಂದು.ಅರ್ಜುನನ ತಪ್ಪಿಲ್ಲವಾದರೂ ಅವನನ್ನು ಶಾಪಕ್ಕೆ ಗುರಿ ಮಾಡಿದ್ದು ಅವಳ ಚಪಲತೆ ತಾನೆ?

ಶಾಪದ ತೀಕ್ಷ್ಣತೆಯನ್ನು, ಊರ್ವಶಿಯ ಕೋಪದ ತೀವ್ರತೆಯನ್ನು ಕವಿ ಬಳಸುವ ಭಾಷೆ ಹೇಗೆ ಮಾರ್ದನಿಸುತ್ತಿದೆ ನೋಡಿ!

ಕುಮಾರವ್ಯಾಸ ಪ್ರತಿಷ್ಠಾನ
೧೭//೨೦೧೭