Thursday, February 16, 2017



ಐಸಲೇ ಕುಮಾರವ್ಯಾಸ!                           -೭೩-
ಅರಣ್ಯ -೪೨


ಊರ್ವಶಿ ಮನುಷ್ಯಲೋಕದ ಸಂಬಂಧಗಳನ್ನು ತಿರಸ್ಕರಿಸಿ ಹೇಳಿದಳು; ‘ದೇವಲೋಕದಲ್ಲಿ ಎಲ್ಲರೂ ಬಯಸುವುದು ಸುಖವನ್ನು.ಅನಗತ್ಯವಾದ ಸಂಬಂಧಗಳನ್ನು ಬೆರೆಸಬೇಡ. ಚೆನ್ನಾಗಿ ಯೋಚಿಸು.’ ಅರ್ಜುನ ಹೇಳಿದಇದು ಮನುಷ್ಯ ಶರೀರ.ಅದರ ಧರ್ಮದಂತೆ ನಡೆಯುವುದೇ ಸರಿ. ಸತ್ತ ನಂತರ ದೇವಲೋಕಕ್ಕೆ ಬಂದರೆ ಆ ಮಾತು ಬೇರೆ. ತಾನಿನ್ನೂ ಮಾನವ, ಹಾಗಾಗಿ ತಪ್ಪಿ ನಡೆಯಲಾರೆ.’

ಊರ್ವಶಿಯ ಕ್ರೋಧ ಮೀರಿತು.’ಇಲ್ಲಿ ಧರ್ಮದ ಮಾತಾಡುತ್ತಿರುವೆ. ಒಬ್ಬಳನ್ನು ಐದು ಜನ ವಿವಾಹವಾಗಿದ್ದೀರಿ?ಅದು ಧರ್ಮವೋ?’

ಅದು ತಾಯಿಯ ಆಜ್ಞೆಯಂತೆ ನಡೆದದ್ದು. ಶರೀರ ವ್ಯಾಮೋಹದಿಂದಲ್ಲ.’

ಇದೂ ಸಹಾ ನಿನ್ನ ತಂದೆ ದೇವೇಂದ್ರನ ಆಜ್ಞೆಯೇ, ಹಾಗಾಗಿಯೇ ನಾನು ಬಂದದ್ದು

ಬಂದದ್ದು ತಪ್ಪಿಲ್ಲ, ತಾಯಿ ಮಕ್ಕಳನ್ನು ನೋಡಲು ಯಾವ ಅಡೆ ತಡೆ?’

ತನ್ನ ಅಪೇಕ್ಷೆಯನ್ನು ತಿರಸ್ಕರಿಸಿದ್ದು ಊರ್ವಶಿಗೆ ನುಂಗಲಾರದ ತುತ್ತು.ಸಾಲದ್ದಕ್ಕೆ ದೇವಲೋಕದ ಸುಂದರಿ ತನ್ನನ್ನು ಯಾರಾದರೂ ಯಾವುದೇ ಕಾರಣಕ್ಕೆ ತಿರಸ್ಕರಿಸುವುದನ್ನ ಕಾಣಳು, ಹೇಗೆ ಅರಗಿಸಿಕೊಂಡಾಳು? ಆಪ್ರತಿಮ ಸುಂದರಿಯನ್ನ ಅಗಾಧ ಕೋಪ ಆವರಿಸಿತು!

ಕೋಪದಿಂದ ಅವಳ ಸುಮನೋಹರವಾದ ರೂಪ ಬದಲಾದದ್ದನ್ನು ಕುಮಾರವ್ಯಾಸ ವರ್ಣಿಸುತ್ತಾನೆಃ

ರಾಹು ತುಡುಕಿದ ಶಶಿಯೋ,
ಮೇಣ್ ರೌದ್ರಾಹಿ ಮಸ್ತಕ ಮಾಣಿಕವೋ
ಕಡುಗಾಹಿನಮೃತವೋ, ಕುಪಿತ ಸಿಂಹದ ಗುಹೆಯ ಮೃಗಮದವೋ,
ಲೋಹ ಧಾರೆಯ ಮಧುವೋ,
ಕಳಿತ ಹಲಾಹಲದ ಕಜ್ಜಾಯವೆನಿಸಿತು,
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ..,’

(ರೌದ್ರಾಹಿ-ಭಯಂಕರ ಸರ್ಪ; ಮಸ್ತಕ-ತಲೆ; ಕಡುಗಾಹಿನ-ಕುದಿಯುತ್ತಿರುವ;ಮೃದಮದ-ಕಸ್ತೂರಿ; ರೂಹು-ರೂಪು)

ಕೋಪಗೊಂಡ ಊರ್ವಶಿಯಲ್ಲಿ ಎರಡೆರಡು ವಿರುದ್ಧದ ಭಾವಗಳು ವ್ಯಕ್ತವಾದವಂತೆ! ಒಂದು ಅವಳ ಅಪ್ರತಿಮ ದೈವೀ ಸೌಂದರ್ಯ.ಅದು ನೋಡಿದವರನ್ನು ಮರುಳು ಮಾಡುವಂಥದು. ಮತ್ತೊಂದು ಕ್ರೋಧ. ಎಂಥವರಿಗೂ ಭಯ ಹುಟ್ಟಿಸುತ್ತಿತ್ತು. ಅದಕ್ಕೇ ಕವಿ ಏಕಕಾಲದಲ್ಲಿ ವಿರುದ್ಧದ ಭಾವ ಕೊಡುವ ಉಪಮಾನಗಳನ್ನೇ ಆಯ್ದು  ಊರ್ವಶಿಯ ನೈಜ ಚಿತ್ರವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾನೆ!

ಹೇಗಿತ್ತು ಅವಳ ಆಗಿನ ರೂಪ?ಶಶಿಯಂತೆ ಸುಂದರವಾಗಿದೆ ಆದರೆ ಶಶಿಯನ್ನು ಕೋಪವೆಂಬ ರಾಹು ಹಿಡಿದಿದೆ.ಮಾಣಿಕ್ಯದಂತೆ ಪ್ರಕಾಶಿಸುತ್ತಿದೆ ಆದರೆ ಆ ಮಾಣಿಕ್ಯ ಕ್ರೋಧಗೊಂಡ ಸರ್ಪದ ಹೆಡೆಯಮೇಲಿದೆ! ಅಮೃತದಂತೆ ಆಪ್ಯಾಯಮಾನವಾಗಿದೆ ಆದರೆ ಅಮೃತ ಕುದಿಯುತ್ತಿದೆ! ಕಸ್ತೂರಿಯಂತೆ ಸುಗಂಧಭರಿತವಾಗಿದೆ ಆದರೆ ಆ ಕಸ್ತೂರಿ ಕೋಪಗೊಂಡು ಘರ್ಜಿಸುತ್ತಿರುವ ಸಿಂಹದ ಗುಹೆಯಲ್ಲಿದೆ! ಜೇನಿನಂತೆ ಮಧುರ, ಆದರೆ ಜೇನು ಹರಿತವಾದ ಖಡ್ಗದ ಅಂಚಿಗೆ ಸವರಿದ್ದು ಮುಟ್ಟಿದರೆ ಕೈ ಕುಯ್ಯುವಂಥದು! ಕಜ್ಜಾಯದಂತೆ ಹಿತ ಆದರೆ ಕಜ್ಜಾಯ ಪ್ರಬಲವಾದ ವಿಷದಿಂದ ಮಾಡಿದ್ದು!

ಕೋಪಗೊಂಡ ಊರ್ವಶಿಯ ರೂಪ ‘ ಸುಮನೋಹರ ಭಯಂಕರ’!(ಎರಡೂ ಭಾವಗಳ ಸಮಾಗಮ)

ಅಪರೂಪದ ಕಾವ್ಯ ರಚನೆ! ಕುಮಾರವ್ಯಾಸ ಆಜ್ಞೆ ಮಾಡಿದೊಡನೆ ಸಾಲುಸಾಲಾಗಿ ಬಂದು ನಿಲ್ಲುವ ವಿರೋಧಾಭಾಸ ಹೋಲಿಕೆಗಳ ಸರಣಿ ಆಶ್ಚರ್ಯಗೊಳಿಸುವುದಿಲ್ಲವೇ?


ಕುಮಾರವ್ಯಾಸ ಪ್ರತಿಷ್ಠಾನ
೧೫/೨/೨೦೧೭

No comments:

Post a Comment