Tuesday, February 28, 2017



ಐಸಲೇ ಕುಮಾರವ್ಯಾಸ!                           -೭೬-

ಆದಿ ೧೪-

ದ್ರೌಪದಿಯ ಸ್ವಯಂವರ ಕುಮಾರವ್ಯಾಸನ ಪ್ರತಿಭೆ, ಕವಿತಾಶಕ್ತಿ,ಶಬ್ದಶಕ್ತಿ ಇವಕ್ಕೆ ಅತ್ಯಂತ ಹೇರಳ ಅಭಿವ್ಯಕ್ತಿ ದೊರೆತ ಭಾಗ. ಅಷ್ಟೇ ಅಲ್ಲ ಕವಿ ಮೂಲ ಭಾರತದ ಸಾಮಗ್ರಿಯನ್ನು ತನ್ನ ಕವಿತಾ ವಿಲಾಸ  ಸ್ವಾತಂತ್ರ್ಯ ಹಾಗೂ ಅನುಭವಗಳ ಮೇಳದಿಂದ ಅದ್ಭುತವಾಗಿ ವಿಸ್ತರಿಸಿದ್ದಾನೆ. ಹಾಗಾಗಿ ತುಂಬಾ ಸ್ವಾರಸ್ಯಕರವಾದ, ಆತ್ಮೀಯವಾದ ಕಾವ್ಯಭಾಗ ಇದು.

ಇಡೀ ಪಾಂಚಾಲ ನಗರದಲ್ಲಿ ವಿದ್ಯುತ್ ಸಂಚಾರ! ಭೂಮಂಡಲದ ರಾಜರುಗಳು ಒಬ್ಬೊಬ್ಬರಾಗಿ ಬಂದು ಸೇರಿದ್ದಾರೆ. ಪಾಂಡವರು ಬ್ರಾಹ್ಮಣರ ವೇಷದಲ್ಲಿ! ಬಂದ ಎಲ್ಲಾ ರಾಜರಿಗೂ ರಾಜಭವನದ ಬಿಡಾರಗಳು. ಪಾಂಡವರು ಒಂದು ಕುಲಾಲ ಭವನದಲ್ಲಿ( ಮಡಿಕೆ ಮಾಡುವ ಮನೆ)!

ಊರಿಗೆ ಊರೇ ಅಲಂಕೃತವಾಗಿದೆ.ರಾಜರಷ್ಟೇ ಅಲ್ಲ; ಕವಿಗಳು, ಗಮಕಿಗಳು,ಯಾಜ್ಞಿಕರು, ವಿವಾಹೋತ್ಸವ ವಿಲೋಕನ ಕೌತುಕಿಗಳು ( ಮದುವೆ ನೋಡಬಂದ ಕುತೂಹಲಿಗಳು) ಅಸಂಖ್ಯಾತಮಂದಿ .ಆಗಸದಲ್ಲಿ ದೇವತೆಗಳ ಸಮೂಹ! ಅಷ್ಟು ಸಂಭ್ರಮದ ವಾತಾವರಣ!

ಭುವನ ಸುಂದರಿ ಎನಿಸಿದ್ದ, ವಿಶೇಷವಾಗಿ ಮನ್ಮಥನ ಮದದಾನೆಯಂತಿದ್ದ ದ್ರೌಪದಿಯನ್ನು ಅವಳ ಸಖಿಯರ ಹಾವಭಾವಗಳನ್ನು, ಸ್ವಯಂವರ ಮಂದಿರದ ವೈಭವವನ್ನು ಓದಿಯೇ ಸವಿಯಬೇಕು.

ಶೌರ್ಯ, ಪರಾಕ್ರಮ, ಸೌಂದರ್ಯಗಳಿಗೆ ಹೆಸರು ಮಾಡಿದ್ದ ರಾಜರುಗಳ ಎದುರು ದ್ರೌಪದಿ ಪರಿಚಯಿಸಿಕೊಳ್ಳುತ್ತಾ, ಅವರ ವಿವರಗಳನ್ನು ಕೇಳುತ್ತಾ ಒಮ್ಮೆ ಹಾದು ಹೋಗುತ್ತಾಳೆ. ದ್ರೌಪದಿ ಎದುರಿಗೆ ಬಂದಾಗ  ಸೌಂದರ್ಯಕ್ಕೆ ಮಾರುಹೋಗಿ ಮೈ ಮರೆತು ತಲ್ಲಣಗೊಂಡ ರಾಯರುಗಳ ಸ್ಥಿತಿ ಹೇಗಿತ್ತು?


ಕೆಲರು ಮಧುರಾಪಾಂಗದಲಿ,
ಕಂಗಳ ಮರೀಚಿಯ ಬೆಳಗಿನಲಿ ಕೆಲರು,
ಎಳನಗೆಯ ಮಿಂಚಿನಲಿ,ಸಖಿಯರ ಮೇಳವಾತಿನಲಿ,
ಲಲನೆ ನೋಡಿದಳೆಂದು,
ಸೊಗಸಿನಲಿ ಒಲಿವ ಸಖಿಯರಿಗೆಂದಳೆಂದು,
ಒಳಗೊಳಗೆ ಬೆರೆತರು,
ಬಯಲು ಮಧುವಿನ ಬಾಯ ಸವಿಗಳಲಿ..’

(ಮರೀಚಿ- ಕಿರಣಗಳು;ಮೇಳವಾತು-ಆಪ್ತವಚನ;)

‘ಕೆಲವರಿಗೆ ಅವಳ ಮೈಮಾಟವೇ ಸಾಕಾಯಿತು,ಕೆಲವರಿಗೆ ಅವಳ ಕಣ್ಣಿನ ನೋಟ! ಪರಿಚಯಿಸುವಾಗ ಅವಳು ಮಂದಹಾಸ ಬೀರಿದರೆ ಸಾಕು, ತಮ್ಮೆದುರು ಸಖಿಯರಿಗೆ ಏನಾದರೂ ಹೇಳಿದಳೆಂದರೆ ತಮ್ಮನ್ನು ಒಪ್ಪಿಯೇಬಿಟ್ಟಳೆಂದು ಹಿಗ್ಗುತ್ತಿದ್ದರು. ತನ್ನನ್ನು ನೋಡಿದಳಲ್ಲವೇ? ವರಿಸುವ ಮನಸ್ಸಿದೆ.ತನ್ನೆದುರು ಸಖಿಯರಿಗೆ ಏನೋ ಹೇಳಿದಳಲ್ಲವೆ? ಖಂಡಿತಾ ಸಮ್ಮತಿ ಸೂಚಿಸಿರಬೇಕು! ಹೀಗೆ, ಒಳಗೊಳಗೇ ಭ್ರಮಿಸಿ ಅವಳೊಂದಿಗೆ ಬೆರೆತರಂತೆ!.ಆಕಾಶದ ಜೇನಿಗೆ ಬಾಯಿಬಿಟ್ಟು ಚಪ್ಪರಿಸಿದ ಹಾಗೆ!

ರಾಜರುಗಳ ಗತ್ತು, ಆತಂಕ, ನಿರೀಕ್ಷೆ  ಮೇರೆಮೀರಿದ ಆತ್ಮವಿಶ್ವಾಸ ಇವುಗಳನ್ನು ಒಂದೇ ಪದ್ಯದಲ್ಲಿ ಕವಿ ಹೇಗೆ ಹಿಡಿದಿಟ್ಟಿದ್ದಾನೆ!

ನಿರಾಶೆಯೆಂದರೆ, ಯಾರನ್ನೂ ವರಿಸದೆ ದ್ರೌಪದಿಯ ದಂಡಿಗೆ (ಪಲ್ಲಕ್ಕಿ) ಮರಳಿತು!

ಕುಮಾರವ್ಯಾಸ ಪ್ರತಿಷ್ಠಾನ

೨೮/೨/೨೦೧೭

No comments:

Post a Comment