Thursday, March 2, 2017

Aisale kumaravyasa ಐಸಲೇ ಕುಮಾರವ್ಯಾಸ -77



ಐಸಲೇ ಕುಮಾರವ್ಯಾಸ!                           -೭೭-
ಆದಿ ೩-೬೭

ದ್ರೌಪದಿ ತಮ್ಮ ಮುಂದೆ ಬಂದಾಗ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ರಾಜರು, ಯಾರನ್ನೂ ಲೆಕ್ಕಿಸದೆ, ವರಿಸದೆ ದ್ರೌಪದಿ ಹಿಂದಿರುಗಿದಾಗ ಆಘಾತಕ್ಕೊಳಗಾದರು.ತಾವು ತಿರಸ್ಕೃತರಾದದ್ದನ್ನು ಅವರಿಗೆ ನಂಬಲೂ ಆಗಲಿಲ್ಲ,ಸ್ವೀಕರಿಸಲೂ ಆಗಲಿಲ್ಲ!

ತಮ್ಮ ತಮ್ಮ ಸಿಂಹಾಸನದಲ್ಲಿ ಕೂತು ಸೇವಕರು ಮಡಿಸಿಕೊಡುತ್ತಿದ್ದ ತಾಂಬೂಲವನ್ನು ಒಂದರಮೇಲೊಂದರಂತೆ ಜಗಿಯುತ್ತಾ ದರ್ಪದಿಂದ ಬೀಗುತ್ತಿದ್ದವರನ್ನು ಹಠಾತ್ತನೆ ಖಿನ್ನತೆ ಆವರಿಸಿತು.
ಅವರ ಸ್ಥಿತಿಯನ್ನು ಕವಿಯ ಮಾತಿನಲ್ಲೇ ಕೇಳೋಣ;


‘ಮಡಿಸಿದೆಲೆ ಬೆರಳೊಳಗೆ
ಬಾಯೊಳಗಡಸಿದೆಲೆ ಬಾಯೊಳಗೆ
ಸಚಿವರ ನುಡಿಯ ಕೇಳರು,
ಸುಳಿವ ಕಾಣರು ಲೋಚನಾಗ್ರದಲಿ,
ಕಡುಮುಳಿದ ಕಂದರ್ಪಶರವವಗಡಿಸಿ
ಕೈಗಳ ನೋಡಿ,  ನೃಪರೆವೆ ಮಿಡುಕದಿರ್ದರು
ಬೆರಳ ಮೂಗಿನ ಹೊತ್ತ ದುಗುಡದಲಿ..,’

(ಅಡಸಿದ- ಇಟ್ಟುಕೊಂಡ;ಕಡುಮುಳಿದ-ಸಿಟ್ಟಾದ;ಕಂದರ್ಪ- ಮನ್ಮಥ; ಅವಗಡಿಸು- ಭಂಗಿಸು;)

‘ಮಡಿಸಿ ಕೈಯಲ್ಲಿ ಇಟ್ಟುಕೊಂಡ ಎಲೆ ಕೈಯಲ್ಲೇ ಇದೆ; ಬಾಯಲ್ಲಿ ಇಟ್ಟ ಎಲೆ ಅಲ್ಲೇ ಇದೆ,ಅಗಿಯಲಾರರು.ತಮ್ಮ ಹಿಂದೆ ನಿಂತು ಸೂಚನೆ ಕೊಡುತ್ತಿರುವ ಮಂತ್ರಿಗಳ ಮಾತು ಕಿವಿಗೆ ಕೇಳುತ್ತಿಲ್ಲ,ಕಣ್ಣು ತೆರೆದೇ ಇದೆ ಆದರೆ ಏನೂ ಕಾಣುತ್ತಿಲ್ಲ. ಒಂದುಕಡೆ ,ಮನ್ಮಥನ ಬಾಣ ತಾಗಿ ದಿಕ್ಕುಗೆಡಿಸಿದೆ;ಮತ್ತೊಂದು ಕಡೆ ನಿರಾಶೆ ಕಂಗೆಡಿಸಿದೆ.ಮೂಗಿನ ಮೇಲೆ ಬೆರಳಿಟ್ಟು,ವ್ಯಾಕುಲರಾಗಿ ಎವೆ ಮಿಡುಕದೆ ಕುಳಿತಿದ್ದಾರೆ!’


ತಮ್ಮ ಪರಾಕ್ರಮ, ಐಶ್ವರ್ಯ,ಒಡೆತನ, ಸೌಂದರ್ಯಕ್ಕೆ ದ್ರೌಪದಿ ಒಲಿಯುವಳೆಂದು ನಿರೀಕ್ಷಿಸಿದ್ದ ರಾಜರುಗಳ ತಲ್ಲಣ,ನಿರಾಶೆಯನ್ನು ಕವಿ ಅವರ ಹಾವ ಭಾವ ವರ್ಣಿಸುತ್ತಲೇ ವ್ಯಕ್ತಪಡಿಸಿದ್ದಾನೆ.ದ್ರೌಪದಿಯಂಥ ರೂಪಸಿಯನ್ನು ನೋಡಿ ಪರವಶವಾದದ್ದು ಒಂದು ಕಡೆ, ಅವಳು ಮೆಚ್ಚದೇ ಮರಳಿದ ದುಗುಡ ಮತ್ತೊಂದು ಕಡೆ. ಎಲ್ಲಾ ಸೇರಿ ಶೂನ್ಯ ದೃಷ್ಟಿಯಿಂದ ಮಂಕಾಗಿ ಕುಳಿತರು.

ಎಲ್ಲಾ ವೈಭವವಿದ್ದೂ ಬಯಸಿದ್ದು ಸಿಗದಾದ ನಿರಾಶೆಯ ಭಾವ ಕವಿದ ಅರಸರ ಅಸಹಾಯಕ ಚಿತ್ರವನ್ನೇ ಬರೆದಿದ್ದಾನೆ ಕುಮಾರವ್ಯಾಸ. ಹೌದಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೨/೩/೨೧೦೭






No comments:

Post a Comment