Sunday, March 12, 2017

Aisale kumaravyasa ಐಸಲೇ ಕುಮಾರವ್ಯಾಸ -80


ಐಸಲೇ ಕುಮಾರವ್ಯಾಸ!                           -೮೦-
ಆದಿ ೧೪-೧೦

ಯುವಕರು ಯಾವಾಗಲೂ ಮುಂಚೂಣಿಯಲ್ಲಿ ತಾನೆ?ದ್ರೌಪದಿಯ ಸ್ವಯಂವರದಲ್ಲೂ ಅಷ್ಟೇ. ಉತ್ಸಾಹಿಗಳೂ, ಯುವಕರೂ,ಬಲಶಾಲಿಗಳೆನಿಸಿಕೊಂಡವರೂ ಅವಸರಿಸಿ ಬಂದು ಸೋತು ನಲುಗಿದರು.ನಮ್ಮನ್ನೇ ಈ ಧನು ಅಪಮಾನಿಸಿತು. ಇದನ್ನು ಸಾಧಿಸುವ ಧೀರ ಯಾರು ನೋಡೋಣ ಎಂದು ಮನಸ್ಸಿನಲ್ಲೆ ಉಳಿದವರ ಸೋಲನ್ನೂ ಹಾರೈಸುತ್ತಾ,ಆನಂದಿಸುತ್ತಾ ತೃಪ್ತಿಪಟ್ಟುಕೊಂಡರು.

ಈಗ ಮೇಲ್ಪಟ್ಟ ಬಿರುದರ ಸರದಿ! ಸ್ವಲ್ಪ ಹಿರಿಯ ವಯಸ್ಕರಾದರೇನು? ವೀರರಿಗೆ ಹೂಡಿದ ಪಂಥ ತಾನೇ ಇದು? ಯಾರಾದರೂ ಸಾಧಿಸಿದರೇ ತಾನೇ ಕ್ಷತ್ರಿಯರಿಗೆ ಗೌರವ? ತಪ್ಪೇನು? ದ್ರೌಪದಿ ಚೆನ್ನಾಗಿಯೇ ಸತ್ವ ಪರೀಕ್ಷೆ ಮಾಡುತ್ತಿದ್ದಾಳೆ ಭಲಾ! ಎನ್ನುತ್ತಾ ಮಗಧದ ಅರಸ ಜರಾಸಂಧ ಸಿಂಹಾಸನವನ್ನು ಇಳಿದ. ಅವನ ಚಲನೆಗೆ, ತೊಟ್ಟಿದ್ದ ಉಡುಪು ಘಲ ಘಲ ಸದ್ದು ಮಾಡಿತು.

ಬಿಲ್ಲನ್ನು ನೋಡಿ ಮುಂಗೈ ಸರಪಳಿಯನ್ನು ಮೇಲಕ್ಕೆ ತಿರುವಿ ಧನುಸ್ಸಿಗೆ ಕೈ ಹಾಕಿದ!

ಇಡೀ ಸಭೆ ಸ್ಥಬ್ದ! ಇವನು ಮಹಾ ಬಲಶಾಲಿ! ದಿಗ್ವಿಜಯ ಮಾಡಿ ಸಾವಿರಾರು ರಾಜರನ್ನು ಸೆರೆಯಲ್ಲಿಟ್ಟವನು. ಸ್ವತಃ ಶ್ರೀ ಹರಿಯಿಂದಲೂ ಇವನನ್ನು ಗೆಲ್ಲಲಾಗಿಲ್ಲ ಅಷ್ಟೆ ಅಲ್ಲ; ಇವನ ಉಪಟಳ ತಾಳಲಾರದೆ ತಾನೇ ಯಾದವರಿಗಾಗಿ ಶ್ರೀಕೃಷ್ಣ ದ್ವಾರಕೆಯನ್ನು ನಿರ್ಮಿಸಿಕೊಂಡು ನೆಲೆಸಿದ್ದು? ಇವನು ಗೆದ್ದರೆ ಆಶ್ಚರ್ಯವಿಲ್ಲ.ಇರಲಿ, ಮುಂದೇನಾಯಿತು?


ಈತ ಕುಸಿದೆತ್ತಿದಡೆ ಧನು ಮಾರಾತುದು,
ಇವನೌಕಿದಡೆ ಕಾರ್ಮುಕ ಈತನಾರೆಂದರಿಯದು,
ಇವನೌಡೆತ್ತಿ ಮೈ ಬಲಿದು ಘಾತಿಯಲಿ ಘಲ್ಲಿಸಿದಡೆ
ಆ ಧನು ಸೋತುದೆವೆಯಂತರಕೆ ತೊಲಗದು
ಧಾತುಗುಂದಿದನು, ಅಳ್ಳಿರಿದವಳ್ಳೆಗಳು ಮಾಗಧನ..,’

(ಮಾರಾತುದು- ವಿರೋಧಿಸು; ಕಾರ್ಮುಕ- ಬಿಲ್ಲು;ಔಡೆತ್ತಿ-ಹಲ್ಲುಕಚ್ಚಿ; ಘಲ್ಲಿಸು-ಎರಗು; ಅಳ್ಳೆ-ಪಕ್ಕೆ)

ಜರಾಸಂಧ ಕುಸಿದು ಎತ್ತಿದ; ಬಿಲ್ಲು ಮಲುಕಲಿಲ್ಲ. ಎಲ್ಲ ಶಕ್ತಿಯನ್ನೂ ಸೇರಿಸಿ ಸೆಳೆದ; ಬಿಲ್ಲು ಇವನನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ; ಹಲ್ಲು ಕಡಿಯುತ್ತಾ ಮೈಯನ್ನು ಸೆಟೆಸಿ ವೇಗವಾಗಿ ಎರಗಿದ; ಎಳ್ಳಷ್ಟು ಜರುಗಿತೇ ವಿನಾ ಮೇಲೆ ಬರಲಿಲ್ಲ. ಜರಾಸಂಧ ಶಕ್ತಿಗುಂದಿದ.ಪಕ್ಕೆಗಳು ನಲುಗಿಹೋದವು.’

ಮೂರು ಹಂತದಲ್ಲಿ ಕ್ರಮಕ್ರಮವಾಗಿ ಶಕ್ತಿ ಪ್ರಯೋಗ ಮಾಡಿದ.ಧನುಸ್ಸು ಮಿಸುಕಲಿಲ್ಲ.ಮಲೆತು ನಿಂತಿತು. ಮಹಾ ಬಲಶಾಲಿ ಜರಾಸಂಧನನ್ನು ಧನುಸ್ಸುಯಾರೆಂದರಿಯದು’ (ಯಾರು ಎಂದು ಲೆಕ್ಕಿಸಲೇ ಇಲ್ಲ) ಎನ್ನುತ್ತಾನೆ ಕುಮಾರವ್ಯಾಸ.

ಮತ್ತೊಬ್ಬ ಮಹಾಶಕ್ತಿಶಾಲಿಯ ಅಭಿಮಾನಭಂಗವಾಯಿತು!

ಶಬ್ದ ಶಕ್ತಿಗೆ, ಪದಪ್ರಯೋಗಕ್ಕೆ ಈ ಪದ್ಯ ಉತ್ತಮ ನಿದರ್ಶನ.

ಕುಮಾರವ್ಯಾಸ ಪ್ರತಿಷ್ಠಾನ
೨//೨೦೧೭

No comments:

Post a Comment