Wednesday, March 8, 2017

Aisale kumaravyasa ಐಸಲೇ ಕುಮಾರವ್ಯಾಸ -79



ಐಸಲೇ ಕುಮಾರವ್ಯಾಸ!                           -೭೯-
ಆದಿ ೧೪-

ದ್ರೌಪದಿಯ ಸ್ವಯಂವರದಲ್ಲಿ ಮತ್ಸ್ಯ ಯಂತ್ರವನ್ನು ಭೇದಿಸಲು ಬಂದ ಅಸಂಖ್ಯಾತ ಅರಸರಲ್ಲಿ ಒಬ್ಬೊಬ್ಬರ ಸಾಧನೆಯನ್ನೂ ವಿವರಿಸಲು ಸಾಧ್ಯವೆ? ಕುಮಾರವ್ಯಾಸ ಒಟ್ಟಾರೆ ಸ್ಥಿತಿಯನ್ನು ಒಂದೇ ಪದ್ಯದಲ್ಲಿ ಮನಮುಟ್ಟುವಂತೆ ಹೇಳಿಬಿಡುತ್ತಾನೆ.ಅನೇಕ ಮಂದಿ ವೀರರು ಬಂದು ತಮ್ಮನ್ನು ಸತ್ವ ಪರೀಕ್ಷೆಗೆ ಒಡ್ಡಿಕೊಂಡರೇನೋ ಸರಿ. 

ಏನಾಯಿತು ಯತ್ನಿಸಹೋದ ಮಹೀರಮಣರ ಪರಿಸ್ಥಿತಿ? ತುಂಬಾ ಸುಂದರವಾದ ಪದ್ಯದಲ್ಲಿ ಕವಿ ವರ್ಣಿಸುತ್ತಾನೆ;

ಹಾರ ಹರಿದುದು,
ಕರ್ಣಪೂರದ ಚಾರು ಮಣಿಗಳು ಸಡಿಲಿದವು
ಪದವೀರ ನೇವುರ ನೆಗ್ಗಿದವು
ಕುಗ್ಗಿದವು ನೆನಹುಗಳು
ನಾರಿಯರ ಕೈ ಹೊಯ್ಲ ನಗೆಯ ನಿಹಾರ ಜಡಿದುದು
ಮುಸುಕುದಲೆಯ ಮಹೀರಮಣರು
ಓಸರಿಸಿ ಸಿಂಹಾಸನವ ಸಾರಿದರು


( ಕರ್ಣಪೂರ- ಕಿವಿಯ ಆಭರಣ; ನೇವುರ- ಕಾಲ್ಗೆಜ್ಜೆ; ನಿಹಾರ-ಮಂಜಿನತೆರೆ)

ಯಂತ್ರವನ್ನು ಭೇದಿಸುವ ಅತಿ ಉತ್ಸಾಹದಲ್ಲಿ,ಸೋಲೊಪ್ಪದೆ ತೊಡಗುವ ಅಭಿಮಾನದಲ್ಲಿ ಕೆಲವು ಅರಸರ ಕೊರಳ ಹಾರಗಳು ಹರಿದವು; ಕೆಲವರ ಕರ್ಣಾಭರಣದ ಮುತ್ತುಗಳು ಕಿತ್ತು ಚೆಲ್ಲಾಡಿದವು;ಕಾಲಿಗೆ ತೊಟ್ಟಿದ್ದ ಪೆಂಡೆಯಗಳು ನುಗ್ಗಾದವು; ಗೆದ್ದು ಸುಂದರಿಯನ್ನು ವರಿಸುವ ಆಶೆ ಕ್ಷೀಣಿಸಿದವು; ಸಾಲದ್ದಕ್ಕೆ ಒಬ್ಬೊಬ್ಬರು ಸೋತಾಗಲೂ ಚಪ್ಪಾಳೆ ಹೊಡೆದು ಅಣಕಿಸುತ್ತ್ತಾ ನಗುವ ಹೆಂಗಳೆಯರ ಕೇಕೆ ಇಡೀ ಮಂಟಪವನ್ನು ಅಲೆಅಲೆಯಾಗಿ ಆವರಿಸುತ್ತಿತ್ತು.ಯತ್ನಿಸಹೋಗಿ ಸೋತ ಅರಸರು ಮುಖದ ಮೇಲೆ ಮುಸುಕನ್ನು ಹಾಕಿಕೊಂಡು ನಿಧಾನವಾಗಿ ಸಿಂಹಾಸನದತ್ತ ಸರಿಯುತ್ತಿದ್ದರು

ರಾಜರ ಆಭರಣಗಳಿಗಾದ ದುಸ್ಥಿತಿ ಅವರ ಮನಸ್ಥಿತಿಗೆ ಹಿಡಿದ ಕನ್ನಡಿ. ಹೊರಜಗತ್ತಿನಲ್ಲಿ ಪರಾಕ್ರಮಕ್ಕೆ ಹೆಸರಾಗಿ ಅನೇಕ ಬಿರುದು ಗಳಿಸಿದವರು ಒಂದು ಬಿಲ್ಲನ್ನು ಎತ್ತಲಾರದೆ ಹೋದರೆಂದರೆ ಎಂಥಾ ಅಪಮಾನ! ಸೋಲು ಒಂದು ಕಡೆ; ಸೋತದ್ದಕ್ಕೆ ಎದುರಿಸಬೇಕಾದ ಮಹಿಳೆಯರ ಅಪಹಾಸ್ಯದ ನಗೆ ಮತ್ತೊಂದು ಕಡೆ.ವೀರರಿಗೆ ಇದಕ್ಕಿಂತಾ ಅಪಮಾನ ಏನು ಬೇಕು?

ಬರುವಾಗ ವಂದಿಮಾಗದರಿಂದ ಹೊಗಳಿಸಿಕೊಳ್ಳುತ್ತಾ ದರ್ಪದಿಂದ ಬಂದವರು ಮರಳುವಾಗ  ಮುಸುಕುದಲೆಯ ಮಹೀರಮಣರಾಗಿ (ಮುಸುಕು ಹಾಕಿಕೊಂಡು ) ಅಡಗಿಕೊಂಡು ಹೋಗುವ ಚಿತ್ರ ಅವರ ಕಥೆ ಹೇಳುತ್ತದೆ. ಬಿಲ್ಲು ಇಲ್ಲಿಯ ಪ್ರಧಾನ ಕೇಂದ್ರವಾಗಿಬಿಡುತ್ತದೆ ಅಷ್ಟೇ ಅಲ್ಲ; ಪರೋಕ್ಷವಾಗಿ ಈ ಯಂತ್ರವನ್ನು ಭೇದಿಸಬಲ್ಲ ವೀರನೊಬ್ಬನ ನಿರೀಕ್ಷೆ ಹುಟ್ಟಿಸುವುದರೊಂದಿಗೆ ಅವನ ಅರ್ಜುನತ್ವದ,ಶಕ್ತಿಯ, ನೈಪುಣ್ಯದ ಪರಿಚಯವನ್ನೂ ಮಾಡಿಸುತ್ತದೆ.

ಕುಮಾರವ್ಯಾಸ ಪ್ರತಿಷ್ಠಾನ
//೨೧೦೭

No comments:

Post a Comment