Monday, March 27, 2017



ಐಸಲೇ ಕುಮಾರವ್ಯಾಸ!                           -೮೩-
ಆದಿ ಪ ೧೫-೧೦


‘ ಏನು ಸಿದ್ಧಿಯುಪಾಧ್ಯರೆದ್ದಿರಿ? ಇದೇನು ಧನುವಿಂಗಲ್ಲಲೇ?
ತಾನೇನು ಮನದಂಘವಣೆ? ಬಯಸಿದಿರೇ ನಿತಂಬಿನಿಯ?
ವೈನತೇಯನ ವಿಘಡಿಸಿದ ವಿಷವೇನು ಸದರವೋ ಹಾವಡಿಗರಿಗೆ?
ಇದೇನು ನಿಮ್ಮುತ್ಸಾಹ? ಎಂದುದು ದೂರ್ತ ವಟುನಿಕರ..’

ಘೋಷಣೆಯನ್ನು ಕೇಳಿದ ಯುಧಿಷ್ಠಿರ ಅರ್ಜುನನಿಗೆ ಸನ್ನೆ ಮಾಡಿದ. ಅರ್ಜುನ ಮೆಲ್ಲನೆ ಎದ್ದ!

ಕ್ಷತ್ರಿಯರನ್ನು ಕಂಗೆಡಿಸಿದ ಧನುಸ್ಸನ್ನು ಪರೀಕ್ಷಿಸಲು ಓರ್ವ ಬ್ರಾಹ್ಮಣ ಮುಂದಾಗಬಹುದೆ? ಒಂದೊಂದು ಗುಂಪಿನಲ್ಲಿಯೂ ಬಗೆಬಗೆಯ ಪ್ರತಿಕ್ರಿಯೆ! ಮೇಲಿನದು ಬ್ರಾಹ್ಮಣರ ವಟುಗಳದ್ದು;

‘ಏನಿದು ಗುರುಗಳೇ?, ತಾವು ಎದ್ದಿರಿ? ಧನುವಿಗಾಗಿ ಅಲ್ಲ ತಾನೆ? ಏನು ನಿಮ್ಮ ಅಪೇಕ್ಷೆ? ಸುಂದರಿಯಾದ ಹೆಣ್ಣನ್ನು ನೀವೂ ಬಯಸಿದಿರೇನು?
ಗರುಡನನ್ನೇ ಕಂಗೆಡಿಸಿದ ಸರ್ಪದ ವಿಷ ಹಾವಾಡಿಗರಿಗೆ ಸದರವೇನು? ಇದೆಂಥಾ ಉತ್ಸಾಹ ನಿಮ್ಮದು? ಬಯಸುವುದಕ್ಕೂ ಒಂದು ಮಿತಿ ಇರಬೇಕಲ್ಲವೆ?’


ಎಲ್ಲಾ ಸಮೂಹದಲ್ಲೂ ಕಾಲೆಳೆಯುವವರು ಇರುತ್ತಾರಲ್ಲವೆ? ಅರ್ಜುನನನ್ನು ಬ್ರಾಹ್ಮಣ ವಟುಗಳು ವಿಡಂಬಿಸದೇ ಇರುತ್ತಾರೆಯೆ? ಅತ್ಯಂತ ಸಹಜವಾಗಿ ಆಡುಮಾತುಗಳಲ್ಲಿ ಕುಮಾರವ್ಯಾಸ ಅದನ್ನು ಹಿಡಿದಿಟ್ಟಿದ್ದಾನೆ.’ವೈನತೇಯನ ವಿಘಡಿಸಿದ ವಿಷ…’ ಕವಿಯ ಸಶಕ್ತ ಅಭಿವ್ಯಕ್ತಿಗೆ, ರೂಪಕ ಶಕ್ತಿಗೆ ಒಂದು ಉತ್ತಮ ನಿದರ್ಶನ.ಕ್ಷತ್ರಿಯರನ್ನು ತಲ್ಲಣಗೊಳಿಸಿದ ಧನುಸ್ಸು ನಿಮಗೆ ಅಗ್ಗವಾಗಿ ಹೋಯಿತೇನು?

 ಮತ್ತೊಮ್ಮೆ ಓದಿ ನೋಡಿ ಕವಿಯ ಮಾತಿನ ಶಕ್ತಿ ಹೇಗಿದೆ!


ಕುಮಾರವ್ಯಾಸಪ್ರತಿಷ್ಠಾನ
೨೭/೩/೨೦೧೭

No comments:

Post a Comment