Tuesday, March 21, 2017

ಐಸಲೇ ಕುಮಾರವ್ಯಾಸ! -೮೨



ಐಸಲೇ ಕುಮಾರವ್ಯಾಸ!                           -೮೨-
ಆದಿ ಪ ೧೪-೩೦


ಜರಾಸಂಧ-ಶಿಶುಪಾಲರು ಸೋತು ಹಿಂದಿರುಗಿದ ಮೇಲೆ ಶಲ್ಯ ಬಂದ. ಶಲ್ಯ, ಪಾಂಡವರ ಸೋದರಮಾವ ಹಾಗೂ ಸತ್ವದಲ್ಲಿ ಭೀಮ, ದುರ್ಯೋಧನರಿಗೆ ಸಮಬಲ ಎಂದು ಖ್ಯಾತನಾದವ. ಬಿಲ್ಲಿಗೆ ಹೆದೆಯೇರಿಸುವ ಯತ್ನದಲ್ಲಿ ನೆಲದ ಮೇಲೆ ಬಿದ್ದು ನಗೆಪಾಟಲಾದ.

ತಾನು ಸಾಧಿಸಿ ತನ್ನ ರಾಯನಿಗೆ ಅಂಗನೆಯ ಪಾಣಿಗ್ರಹಣ ಮಾಡಿಸುತ್ತೇನೆಂದು ನಿರ್ಧರಿಸಿ ಕರ್ಣ ಬಂದ.ಬಹು ಶ್ರಮದಿಂದ ಧನುವನ್ನು ಹಿಡಿದ.ಹಗ್ಗವನ್ನು ತೊಡಿಸುವಲ್ಲಿ  ಯಶಸ್ವಿಯಾಗದೆ ಮೌನವಾಗಿ ಹಿಂದಿರುಗಿದ.

ಇದೇನಿದು ಧನುಸ್ಸೋ ಗಂಧದ ಮರವನ್ನು ಸುತ್ತಿಕೊಂಡ ಸರ್ಪವೋ? ಎಲ್ಲರನ್ನೂ ಭಂಗಪಡಿಸುತ್ತಿದೆ! ಉಳಿದ ಅರಸರು (ದುರ್ಯೋಧನಾದಿಯಾಗಿ) ಯತ್ನಿಸಲು ಹೆದರಿದರು!

ಮುಂದಿನ ನಾಟಕೀಯತೆಯನ್ನು ನೋಡಿ;

 ರಾಜರುಗಳ ಅಸಹಾಯಕತೆಯನ್ನು ನೋಡಿ ಬಲರಾಮ ನಗುತ್ತಾ ಮೇಲೆದ್ದ. ‘ ಈ ಧನುಸ್ಸನ್ನು ಮುರಿದು ದ್ರೌಪದಿಯ ಮುಂದಲೆ ಹಿಡಿದು ಎಳೆದು ತರುತ್ತೇನೆ, ಕೃಷ್ಣಾ, ನೋಡುತ್ತಿರು’

ಕೃಷ್ಣ ಹೇಳಿದ; ಅಣ್ಣಾ ಏನಿದು ಅಪಚಾರ?ನಮಗೆ ಕುಂತೀದೇವಿ ಅತ್ತೆ,ಪಾಂಡವರು ಮೈದುನರು.ಅವರ ಪತ್ನಿ ನಮಗೆ ತಂಗಿ. ಪಾಂಡವರೇ ಇವಳಿಗೆ ರಮಣರೆಂಬುದು ಸಿದ್ಧವಿರುವಾಗ ಇದೇನು ನಿಮ್ಮ ನಿರ್ಧಾರ?’

ಬಲರಾಮ ನಗುತ್ತಾ ಹೇಳಿದ ‘ತಮ್ಮಾ, ಇನ್ನೆಲ್ಲಿಯ ಪಾಂಡವರು? ಅರಗಿನ ಮನೆಯಲ್ಲಿ ಬೆಂದು ಹೋದದ್ದನ್ನು ಮರೆತು ಇನ್ನೂ ಅವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವೆಯಲ್ಲ!’


ಕೃಷ್ಣನ ಕುಶಾಗ್ರ ಬುದ್ಧಿಯ ಪರಿಚಯ ಮಾಡಿಸುವ ಅವನ ಉತ್ತರವನ್ನು ನೋಡಿಃ

‘ಕ್ಷಿತಿಯೊಳವರಿಲ್ಲೆಂದು
ದ್ರುಪದನ ಸುತೆಗೆ ಪತಿ ಪರರೆಂದು
ಯಂತ್ರಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ?
ಕ್ಷಿತಿಗೆ ಪಾಂಡವರಲ್ಲದಿಲ್ಲ
ಈ ಸತಿಗೆ ಪತಿಪೆರರಿಲ್ಲ
ಕುಂತೀಸುತರನೀಗಳೆ ತೋರುವೆನು ವಸುದೇವನಾಣೆಂದ..,’


‘ಭೂಮಿಯಲ್ಲಿ ಪಾಂಡವರು ಇಲ್ಲವೇ ಇಲ್ಲವೆಂದು, ದ್ರೌಪದಿಗೆ ಬೇರೆ ಯಾರೋ ಪತಿಯೆಂದು, ಈ ಯಂತ್ರವನ್ನು ಭೇದಿಸುವವನು ನೀನೆಂದು ನಿನ್ನ ಮನಸ್ಸಿಗೆ ತೋರಿತೇನು? ಅಣ್ಣಾ, ಕೇಳು; ಭೂಮಿಯ ಒಡೆಯರು ಪಾಂಡವರಲ್ಲದೆ ಬೇರೆ ಯಾರೂ ಅಲ್ಲ; ಈ ಕನ್ಯೆಗೆ ಬೇರೆಯವ ಪತಿಯಾಗಲೂ ಸಾಧ್ಯವಿಲ್ಲ; ಸ್ವಲ್ಪ ನಿಧಾನಿಸು, ಕುಂತೀಸುತರನ್ನು ಈಗಲೇ ತೋರಿಸದಿದ್ದರೆ ನಮ್ಮ ಅಪ್ಪನ ಮೇಲಾಣೆ!’

ಬಲರಾಮನಿಗೆ ಆಘಾತ! ವಿಚಿತ್ರವಾದ ಸಂಗತಿ ಹೇಳುತ್ತಿರುವೆ? ಅದು ನಿಜವೇ ಆದಲ್ಲಿ ಅದಕ್ಕಿಂತಾ ಆನಂದದ ಸಂಗತಿ ಯಾವುದಿದೆ? ಹಾಗೇ ಆಗಲಿ ಬಿಡು’ ಎಂದು ಕುಳಿತ.

ಕುಮಾರವ್ಯಾಸ ಭಾರತದಲ್ಲಿ ಶ್ರೀಕೃಷ್ಣನ ಪ್ರವೇಶವೇ ಈ ಪ್ರಸಂಗದಲ್ಲಿ. ಹಾಗೂ ಇದೇ ಮೊದಲ ಸಂಭಾಷಣೆ. ಇಡೀ ಮಹಾಭಾರತದ ಸೂತ್ರಧಾರಿಯಾದ ಶ್ರೀಕೃಷ್ಣನ ಸ್ಪಷ್ಟವಾದ ಗ್ರಹಿಕೆ, ದೃಢವಾದ ನಿಲುವು, ಸಂದೇಶ,ಮುತ್ಸದ್ದಿತನ ಎಲ್ಲವನ್ನೂ ಈ ಒಂದೇ ಪದ್ಯ ಧ್ವನಿಸುತ್ತದೆ!


ಕುಮಾರವ್ಯಾಸ ಪ್ರತಿಷ್ಠಾನ
೨೧/೩/೨೦೧೭

No comments:

Post a Comment