Friday, March 17, 2017

Aisale kumaravyasa ಐಸಲೇ ಕುಮಾರವ್ಯಾಸ -81


ಐಸಲೇ ಕುಮಾರವ್ಯಾಸ!                           --


ಆದಿ ಪ ೧೪-


ಜರಾಸಂಧನ ಅಪಮಾನ ಅವನ ಪರಮ ಮಿತ್ರ ಚೈದ್ಯ ರಾಜ ಶಿಶುಪಾಲನನ್ನು ಕೆರಳಿಸಿತು.

ಈ ದುರುಳ ಧನಸ್ಸನ್ನು ಪೊಳ್ಳಾಗಿಸಿ ಕೇಕೆ ಹಾಕಿ ನಗುವ ಹೆಂಗಸರ ತುರುಬು ಕೊಯ್ಸುತ್ತೇನೆ ಎಂದು ಧಡಧಡಿಸಿ ಎದ್ದು ಬಂದ.

ಸಭಿಕರಲ್ಲಿ ತುಸು ನಡುಕವುಂಟಾಯಿತು. ಪೂರ್ವ ಜನ್ಮದಲ್ಲಿ ರಾವಣನಾಗಿದ್ದವನು ಇವನು. ಸಾಧಿಸಬಲ್ಲ ಶಕ್ತಿ ಇವನಲ್ಲಿದೆ. ಗೆದ್ದರೆ ದ್ರೌಪದಿಯ ಕಥೆ ಏನು?

ಶಿಶುಪಾಲ ಎಲ್ಲಾ ಶಕ್ತಿಯನ್ನೂ ಬಳಸಿ ಬಿಲ್ಲಿನ ಮೇಲೆ ಎರಗಿದ. ಕವಿ ಹೇಳುತ್ತಾನೆ ‘ಧನು.. ಮಾನಭಂಗದ ಮೊದಲ ಮನೆ’ (ಅಭಿಮಾನ ಮುರಿಯುವುದಕ್ಕೆಂದೇ ನಿರ್ಮಾಣವಾದ ಮೊದಲ ಆಯುಧ)ಎನಿಸಿತು. ಶಿಶುಪಾಲನ ಯತ್ನ ವಿಫಲವಾಗಿ ಯಥಾ ಪ್ರಕಾರ ಹೆಂಗಳೆಯರ ಕೇಕೆ, ಉಳಿದ ಅರಸರ ವ್ಯಂಗ್ಯ ಮಾತು! ಪೆಚ್ಚಾಗಿ ಹಿಂದಿರುದಿದ.

ಸೋತವರಲ್ಲಿ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುವುದು ರೂಢಿ ತಾನೆ? ಜರಾಸಂಧ ಶಿಶುಪಾಲನನ್ನು ಕರೆದು ಹೇಳಿದನಂತೆ;



‘ಕಂಡು ಮಾಗಧ ಕರೆದನು

ಈ ಧನು ಚಂಡಿ,

ಇದು ನಮಗಲ್ಲ,

ನಾವ್ ಮುಂಕೊಂಡು ತಪ್ಪಿತು,

ನೊಪ್ಪಿತಾದುದು ಭಾರಿಯಗ್ಗಳಿಕೆ,

ಭಂಡರೀ ಭೂಮಿಪರು, ದ್ರುಪದನ ಗುಂಡುದೊತ್ತಿರು

ನಗೆಯನಾನಲಿ ಮಂಡೆಯಲಿವರೆನುತ

ಹಾಯ್ದರು ತಮ್ಮ ಪಟ್ಟಣಕೆ’



(ನೊಪ್ಪಿತಾಗು- ಕಳೆದು ಹೋಗು; ಅಗ್ಗಳಿಕೆ-ಶ್ರೇಷ್ಠತೆ; ಗುಂಡುದೊತ್ತಿರು-ದಾಸರು;ಮಂಡೆ- ತಲೆ)

‘ಶಿಶುಪಾಲಾ,ನೋಡಿದೆಯಾ? ಇದು ಹಠಮಾರಿ ಮೋಸದ ಬಿಲ್ಲು ಎಂದು ಕಾಣುತ್ತದೆ. ಇವೆಲ್ಲ ನಮ್ಮಂಥವರಿಗಲ್ಲ; ಸುಮ್ಮನೆ ನಾವು ಮುಂದಾಗಿ ದುಡುಕಿ ನಮ್ಮ ಹೆಗ್ಗಳಿಕೆಯನ್ನು ಹಾಳುಮಾಡಿಕೊಂಡೆವು. ಇಷ್ಟು ಅನ್ಯಾಯವಾಗುತ್ತಿದ್ದರೂ ಸುಮ್ಮನಿರುವ ಈ ರಾಜರು ದ್ರುಪದನ ದಾಸರ ಹಾಗೆ, ಕೈಗೊಂಬೆಯ ಹಾಗೆ ವರ್ತಿಸುತ್ತಿದ್ದಾರೆ.ಅವಮಾನ ಮಾಡಿಸಿಕೊಂಡು ಹಾಳಾಗಲಿ,ನಡೆ, ನಾವು ಇಲ್ಲಿರುವುದು ಸರಿಯಲ್ಲ’

ಇಬ್ಬರೂ ಮುನಿಸು, ಅಪಮಾನ, ದುಗುಡ ಹೊತ್ತು ತಮ್ಮ ರಾಜ್ಯಕ್ಕೆ ಮರಳಿಯೇ ಬಿಟ್ಟರು.

ನಿರಾಶೆಯನ್ನು ಮುಚ್ಚಿಟ್ಟು,  ಕೋಪದ ಹುಸಿ ನೆವ ಮಾಡಿಕೊಂಡು ಚುನಾವಣೆಯಲ್ಲಿ ಸೋತ ರಾಜಕಾರಿಣಿಯಂತೆ ಸಮಝಾಯಿಷಿ ಮಾಡಿಕೊಳ್ಳುವ ವೀರರಿಬ್ಬರ ಮನಃಸ್ಥಿತಿಯನ್ನು ಸಹಜವಾಗಿ ಚಿತ್ರಿಸಿದ್ದಾನೆ.



ಕುಮಾರವ್ಯಾಸ ಪ್ರತಿಷ್ಠಾನ

೧೬/೩/೨೦೧೭









      


No comments:

Post a Comment