Friday, March 31, 2017

ಐಸಲೇ ಕುಮಾರವ್ಯಾಸ! -೮೪-



ಐಸಲೇ ಕುಮಾರವ್ಯಾಸ!                           --
ಆದಿ ಪ ೧೫-
 ಸಭಿಕರ ಪ್ರತಿಕ್ರಿಯೆ ಅಷ್ಟಕ್ಕೇ ನಿಲ್ಲಲಿಲ್ಲ!

ಕುಮಾರವ್ಯಾಸ ವಿನೋದವಾಗಿ,ವಿವರವಾಗಿ ಚಿತ್ರಿಸುತ್ತಾನೆ.ಕೆಲವರು ಹೋಗಲೇಬೇಡ ಎಂದು ಜರಿದರು. ಕೆಲವರು ಅವನ ಹಣೆಬರಹ, ಅನುಭವಿಸಲಿ ಎಂದರು.ಕೆಲವರು ಬ್ರಾಹ್ಮಣರ ಸಭೆಗೆ ಅವಮರ್ಯಾದೆ ಎಂದರು.ಕೆಲವರು ತಪ್ಪೇನು? ಪ್ರಯತ್ನಿಸಲಿ ಎಂದರೆ ಕೆಲವು ಸೂಕ್ಷ್ಮಗ್ರಾಹಿಗಳು ಅವನ ಆಕಾರ ನೋಡಿರಿ ,ಮುಖದ ತೇಜಸ್ಸು ನೋಡಿದರೆ ಜಯಶಾಲಿಯಾಗುವುದು ಖಚಿತ ಎಂದರು.

ಒಂದೆಡೆ ಅಪಮಾನ ಮತ್ತೊಂದೆಡೆ ಅಹಂಕಾರದಿಂದ ಕುದಿಯುತ್ತಿದ್ದ ಅರಸರು,ಈ ಒಣ ಹಾರುವ ಬಿಲ್ಲನ್ನು ಎತ್ತುತ್ತಾನೋ? ಅದೇನು ಕೃಷ್ಣಾಜಿನವೆ? ಸಾಲಿಗ್ರಾಮವೆ?ದರ್ಭೆಯ ಗಂಟೇ?ನೆನೆದ ಎಳ್ಳಿನ ಕಾಳೇ?( ಬ್ರಾಹ್ಮಣರು ಪೂಜಾದಿ ಕರ್ಮಗಳಲ್ಲಿ ಬಳಸುವ ವಸ್ತುಗಳು) ದ್ರೌಪದಿಯ ಸೌಭಾಗ್ಯ ಎಷ್ಟು ಘನವಾಗಿದೆ! ಎಂದು ತಮ್ಮತಮ್ಮಲ್ಲೇ ಆಡಿಕೊಂಡರು.

ನಡೆದು ಬರುತ್ತಿರುವ ಈ ಬ್ರಾಹ್ಮಣ ವೀರನನ್ನು ಕವಿ ವರ್ಣಿಸುವುದನ್ನು ನೋಡಿ;

‘ತೊಟ್ಟ ಹೊಸ ಯಜ್ಞೋಪವೀತದ,
ಮಟ್ಟಿ ನೊಸಲಲಿ,ಕುಶೆಯ ಕರಡಿಗೆ ಕಟ್ಟಿಯಿರುಕಿದ ಕಕ್ಷೆ,
ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ಅಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ
ಮೆಲ್ಲನೈತಂದ’

ಹೊಸ ಜನಿವಾರ ಹಾಕಿದ್ದಾನೆ.ಹಣೆಯಲ್ಲಿ ವಿಭೂತಿ ರಾರಾಜಿಸುತ್ತಿದೆ.ದರ್ಭೆಯ ಗಂಟು ಕಂಕುಳಲ್ಲಿಯೇ ಇದೆ.ಬೆರಳಲ್ಲಿ ದರ್ಭೆಯ ಪವಿತ್ರ ಇದೆ! ಶುಭ್ರವಾದ ಕಚ್ಚೆ ಪಂಚೆ ತುಸು ಸಡಿಲಾಗಿದೆ.ಅದನ್ನು ಸರಿಮಾಡಿಕೊಳ್ಳುತ್ತಾ ,ಜನರ ನಗೆಯನ್ನು ನೋಡುತ್ತ, ಅಂಜುತ್ತ ಅಂಜುತ್ತಲೇ ಈ ನಾಟಕಕಾರ ನಡೆದು ಬಂದ!

ಸಾಧಾರಣ ವಿಪ್ರನಂತೆ ಅರ್ಜುನ ಜನರಿಗೆ ಮೋಜನ್ನೂ ನೀಡುತ್ತಿದ್ದಾನೆ.ಇಡೀ ಸಭೆ ಹಾಸ್ಯರಸದಲ್ಲಿ ಮುಳುಗಿಹೋಗಿದೆ.

ಕುಮಾರವ್ಯಾಸ ಪ್ರತಿಷ್ಠಾನ
೩೧/೩/೨೦೧೭

No comments:

Post a Comment