Tuesday, April 4, 2017

ಐಸಲೇ ಕುಮಾರವ್ಯಾಸ! -೮೪-



ಐಸಲೇ ಕುಮಾರವ್ಯಾಸ!                           -೮೪-
ಆದಿ ಪ ೧೫-೨೧


ಅರ್ಜುನ ನಡೆದು ಬರುವಾಗ ಇಡೀ ಸಭೆಯನ್ನು ಹಾಸ್ಯರಸದಲ್ಲಿ ಮುಳುಗಿಸಿದ ಕುಮಾರವ್ಯಾಸ, ಮಹಿಳಾ ವರ್ಗದ ಪ್ರತಿಕ್ರಿಯೆಯನ್ನೂ ಮರೆಯಲಾರ.

 ಹುಬ್ಬುಗಳಲ್ಲೇ ವ್ಯಂಗ್ಯ ಸಂದೇಶಗಳು ರವಾನೆಯಾದವು.ನಗೆ,ಅಟ್ಟಹಾಸ, ವಿಡಂಬನೆ ಹೇರಳವಾಗಿತ್ತು. ದ್ರೌಪದಿಯನ್ನೂ ಬಿಡಲಿಲ್ಲ. ದ್ರೌಪದಿ ನೋಡು, ಗಡ್ಡದ ಉಪಾಧ್ಯರು ಬಂದರು! ಇನ್ನೇನು ಧನುಸ್ಸನ್ನು ಎತ್ತಿ ಮೀನಿಗೆ ಹೊಡೆದರು ಎಂದುಕೋ.ಬ್ರಾಹ್ಮಣರ ವಧುವಾದೆ. ಕಾಲ ಕಳೆಯಲು ಒಳ್ಳೆಯ ಕುಲ,ನೀನು ಪುಣ್ಯವಂತೆ!

ಈ ಎಲ್ಲಾ ಕಳಕಳಗಳ ನಡುವೆ ನಸುನಗುತ್ತಾ ಧೃತಿಗೆಡದೆ,(ಏಕಾಗ್ರತೆಗೆ ಹೆಸರಾದವನಲ್ಲವೆ?) ‘ನವ ಮದ ದ್ವಿಪ ಗತಿಯ ಗರುವಾಯಿಯಲಿ’ ( ಮದಿಸಿದ ಆನೆಯ ಗಾಂಭೀರ್ಯದಲ್ಲಿ) ಅರ್ಜುನ ನಡೆದ.

ಶ್ರೀಕೃಷ್ಣ ಬಲರಾಮನನ್ನು ತಿವಿದ. ಅಣ್ಣಾ, ನಾನು ಅಪ್ಪನಾಣೆ ಮಾಡಿ ಹೇಳಲಿಲ್ಲವೆ? ಇದೋ ನೋಡು, ಅರ್ಜುನ! ಬಲರಾಮನಿಗೆ ಆಘಾತ,ಕುತೂಹಲ.

ಸಭೆಯಲ್ಲಿ ಪಳಗಿದ ವೀರರು ಅನೇಕರಿದ್ದರು. ಚಾಂಪಿಯನ್ನರು ಮಾತ್ರವೇ ಪರಿಣತ ಆಟಗಾರನನ್ನು
ಗುರ್ತಿಸಬಲ್ಲರು ಅಲ್ಲವೆ? ಅರ್ಜುನನನ್ನು ಗುರ್ತಿಸಲಾರದವರು ಸಹಾ ಅವನ ಚರ್ಯೆಯಿಂದ ಇವನು ಅಸಾಮಾನ್ಯ ಎಂಬುದನ್ನು ಗುರ್ತಿಸಿದರಂತೆ!

ಇವನ ಗತಿ, ಮುಖ ಚೇಷ್ಟೆ,ಭಾವೋತ್ಸವ
ವಿಲಾಸ ,ಉಪೇಕ್ಷೆ, ಭರವಂಘವಣೆ,
ಗರುವಿಕೆ, ಗಮಕ,ಭಾವ,ಅಭೀತಿ,ಭುಲ್ಲವಣೆ,
ಇವನ ವಿಮಲ ಕ್ಷತ್ರ ವಿಕ್ರಮ,ಇವನ ಕೊಂಡೆಯತನ
ಇವೇ ಸಾಕು,ಇವನು ಘಾಟದ ವೀರನೆಂದರು ವೀರರರ್ಜುನನ


ಸಭೆಯಲ್ಲಿದ್ದ ವೀರರು ಮಾತಾಡಿಕೊಂಡರು!

ಅವನ ನಡೆವಳಿಕೆಯಲ್ಲಿ ಎದ್ದು ಕಾಣುವ ಆತ್ಮ ವಿಶ್ವಾಸ ನೋಡಿರಿ, ಮುಖಭಾವ,ಇದೇನು ಮಹಾ ಎನ್ನುವಂತೆ ಇರುವ ಸಹಜ ನಿಲುವು, ವಿಲಾಸ, ನಡೆ, ಗಾಂಭೀರ್ಯ,ನಿರ್ಭಯತೆ, ದೇಹರಚನೆ ಇವೇ ಸಾಲದೇನು? ಅನುಮಾನವೇ ಇಲ್ಲ, ‘ಇವನು ಘಾಟದ ವೀರ’ (ಸಮರ್ಥ ಪರಾಕ್ರಮಿ

ಸಾಮರ್ಥ್ಯವನ್ನು ಮರೆಮಾಚುವುದು ಸಾಧ್ಯವಿಲ್ಲ. ಪರಿಣತರು ಅದನ್ನು ಗ್ರಹಿಸಬಲ್ಲರು.ಅರ್ಜುನ ಬಿಲ್ಲು ಹಿಡಿಯುವ ಮೊದಲೇ ಕೆಲ ವೀರರು ಅವನಲ್ಲಿ ಅಡಕವಾಗಿದ್ದ ಪ್ರತಿಭೆಯನ್ನು  ಗಮನಿಸಿ ಗುರುತಿಸಿದರು.
ಸ್ವಾರಸ್ಯಕರ ಅಲ್ಲವೇ?

ನಿಧಾನವಾಗಿ ಈ ಅಂಶಗಳು ಜನರಿಗೆ ತೋರುತ್ತಾ ನಗೆಯ ಕಡಲಲ್ಲಿದ್ದ ಸಭೆ ಕುತೂಹಲ, ಗಾಂಭೀರ್ಯದತ್ತ ಹೊರಳಲು ಆರಂಭಿಸಿದ ಕ್ರಿಯೆಯನ್ನು ಕವಿ ಸೂಕ್ಷ್ಮವಾಗಿ ವಿವರಿಸಿದ್ದಾನೆ .

ಕುಮಾರವ್ಯಾಸ ಪ್ರತಿಷ್ಠಾನ
೨//೨೦೧೭


No comments:

Post a Comment