Wednesday, October 18, 2017

ಐಸಲೇ ಕುಮಾರವ್ಯಾಸ! -೧೦೩-



ಐಸಲೇ ಕುಮಾರವ್ಯಾಸ!                           -೧೦೩-
ಭೀಷ್ಮ ಪ  ೬-೩೯

ಭೀಷ್ಮನ ವರ್ತನೆ ಅವನ ಅನುಭವೀ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಪಕ್ವವಾದದ್ದು. ಶ್ರೀಕೃಷ್ಣನ ಕ್ರೋಧಕ್ಕೆ ಪ್ರತಿಯಾಗಿ ಕ್ರೋಧವೂ ಇಲ್ಲ. ಪರಮಾತ್ಮಸೆಂಬ ಭಯವೂ ಇಲ್ಲ. ಕೋಪಗೊಂಡ ತಂದೆಯ ಎದುರು ತಮಾಷೆ ಮಾಡುವ ಮಗನ ಹಾಗೆ! ಅವನ ಮಾತಿನಲ್ಲಿರುವ ಸರಳತೆ ಹಾಗೂ ಗಾಂಭೀರ್ಯ ಎರಡೂ ಮೇಳೈಸಿದ ಭಾವ ನೋಡಿ;

ದೇವ, ನಿಮ್ಮಯ ಖಾತಿ ಪರ್ಯಂತಾವು ಲಕ್ಷ್ಯವೇ?
ಜೀಯ, ನೊರಜಿನ ದೇವಗಿರಿಯಂತರವೆ? ಸಂಭಾವನೆಯೆ ನನ್ನೊಡನೆ?
ದೇವ ಮುನಿಗಳ ನಗೆಯ ನೋಡದೆ
ಇದಾವುದುಚಿತವ ಮಾಡಿದಿರಿ?
ಮಹಿಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ’

‘ದೇವಾ, ನಿನಗೆ ಕೋಪ ತರಿಸುವಷ್ಟು ನಾನು ದೊಡ್ಡವನೇನು? ನೊರಜಿಗೆ (ನುಸಿ; ಸಣ್ಣ ಕೀಟ)ಸಮನಾದ ನಾನೆಲ್ಲಿ? ಮೇರು ಪರ್ವತವಾದ ನೀನೆಲ್ಲಿ?  ನನ್ನೊಂದಿಗೆ ಇಷ್ಟು ದೊಡ್ಡ ವರ್ತನೆಯೆ?ನಿನ್ನ ಪರಮಾತ್ಮ ಸ್ವರೂಪವನ್ನು ಅರಿತಿರುವ ದೇವತೆಗಳು, ಮುನಿಗಳು ಈ ನಿನ್ನ ವ್ಯವಹಾರವನ್ನು ನೋಡಿ ನಗಲಾರರೇನು? ನಿನ್ನ ವರ್ತನೆ ಉಚಿತವೇನು? ನಿನ್ನ ಮಹಿಮೆಯನ್ನೂ ಮರೆತು ನಡೆತ್ತಿರುವುದನ್ನು ನೋಡಿ ನನಗೆ ನಗೆ ಬರುತ್ತಿದೆ ಕೃಷ್ಣಾ’

 ಭಕ್ತನಾದ ಭೀಷ್ಮ ಹರಿಗೆ ಅವನ ಮಹಿಮೆಯನ್ನು ಸೂಕ್ಷ್ಮವಾಗಿ ನೆನಪು ಮಾಡಿಕೊಡುತ್ತಿದ್ದಾನೆ.ತನ್ನ ಅರಾಧ್ಯ ದೈವ ಹರಿಗೆ ಅಪಚಾರವಾಗುವುದು ಅವನಿಗೆ ಬೇಡ. ತನ್ನ ಮೇಲೆ ಹರಿ ಹರಿಹಾಯ್ದು ಬರುವುದು ಅವನಿಗೆ ಬೇಸರವಿಲ್ಲ. ಆದರೆ ಹರಿಯ ಮಹಿಮೆ ಮಾಸುವುದು ಇಷ್ಟವಿಲ್ಲ. ಅಂಥಾ ನೈಜ ಭಕ್ತಿ;ಅವ್ಯಾಜ ಪ್ರೇಮ!
ಸಂದರ್ಭದ ಗಾಂಭೀರ್ಯವನ್ನು ಹಗುರಗೊಳಿಸುವ ಭೀಷ್ಮನ ಮಾತುಗಳು ‘ಅತ್ಯುನ್ನತಿಯೊಳಮರ ಸಿಂದೂದ್ಭವಂ,’ ಎಂಬ ಪಂಪನ ಹೊಗಳಿಕೆಯನ್ನು ಸಮರ್ಥಿಸುತ್ತವೆ

ಕುಮಾರವ್ಯಾಸ ಪ್ರತಿಷ್ಠಾನ
೧೮/೧೦/೨೦೧೭

Tuesday, October 10, 2017

ಐಸಲೇ ಕುಮಾರವ್ಯಾಸ! -೧೦೨



ಐಸಲೇ ಕುಮಾರವ್ಯಾಸ!                           -೧೦೨
ಭೀಷ್ಮ ಪ ೬-೩೭

ಭೀಷ್ಮನನ್ನು ಕೊಲ್ಲಲು ಚಕ್ರ ಹಿಡಿದು ನುಗ್ಗಿದ ಹರಿಯನ್ನು ಯಾರು ಎದುರಿಸ ಬೇಕು? ಯಾರು ಸಮಾಧಾನ ಮಾಡಬೇಕು? ಅವನ ಕೋಪದೆದುರು ನಿಲ್ಲುವ ಧೈರ್ಯ,ಸಾಮರ್ಥ್ಯ ಯಾರಿಗಿದೆ?

ನರಸಿಂಹನ ಕೋಪವನ್ನು ತಿದ್ದಲು ಪ್ರಹ್ಲಾದನೇ ಬರಬೇಕಾದಂತೆ, ಆ ಹೊಣೆಗಾರಿಕೆ ಭೀಷ್ಮನಿಗೇ ಬಂತು.ಅವನೆದುರಿಗೆ ಎರಡು ಆಯ್ಕೆಗಳು. ಹರಿಯನ್ನು ಪರಾಕ್ರಮದಿಂದ ಎದುರಿಸುವುದು ಒಂದು.ತನ್ನಲ್ಲಿರುವ ಪ್ರೇಮದಿಂದ ಭಕ್ತಿಯಿಂದ ಎದುರಿಸುವುದು ಇನ್ನೊಂದು.ಎರಡರಲ್ಲೂ ಸಮರ್ಥನೇ!
ಅತ್ಯಂತ ಅನುಭವಿಯಾದ, ಪ್ರಾಜ್ಞನಾದ ಭೀಷ್ಮ ಎರಡನೆಯ ಆಯ್ಕೆ ಮಾಡಿಕೊಂಡ. ಯುದ್ಧದ ಕ್ರೋಧ, ಆವೇಶದಿಂದ ನಿರಾಯಾಸವಾಗಿ ಭಕ್ತಿಯ ಮಡಿಲಿಗೆ ಜಾರಿಕೊಂಡ!


ಹರಿ ಮುಕುಂದ ಮುಕುಂದ ಲಕ್ಷ್ಮೀವರ ನೃಕೇಸರಿ ಎನುತ
ಚಾಪವ ಶರವನವನಿಗೆ ಬಿಸುಟು
ಮೈಯಿಕ್ಕಿದನು ಕಲಿ ಭೀಷ್ಮ
ಕರಯುಗವ ಮುರಿದೆದ್ದು, ಮುರಹರ ಸರಿಜಾಂಭಕ ರಾಮ ರಕ್ಷಿಸು
ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ..,’


ಆಹಾ,ನಾರಾಯಣಾ,ಹರಿ, ಮುಕುಂದ, ನರಸಿಂಹಾ ಎಂದು ಭಕ್ತಿಭಾವದಿಂದ ಉದ್ಗರಿಸುತ್ತಾ ಬಿಲ್ಲು ಬಾಣಗಳನ್ನು ಭೂಮಿಗೆ ಎಸೆದು ನುಗ್ಗಿ ಬರುತ್ತಿರುವ ಶ್ರೀಕೃಷ್ಣನಿಗೆ ಉದ್ದಕ್ಕೆ ನಮಸ್ಕರಿಸಿದ! ಕೈಮುಗಿದುಕೊಂಡು ಎದ್ದುನಿಂತು ಮುರಹರ,ಶ್ರೀರಾಮಚಂದ್ರ,  ಇದೇನಿದು? ಮಗುವಿನಲ್ಲಿ ಗುಣ-ದೋಷಗಳನ್ನು ಎಣಿಸುತ್ತಿರುವೆ ? ಸರಿಯೇನು?’

ಆಸ್ತಿಕರಿಗೆ ರೋಮಾಂಚನ ಉಂಟುಮಾಡುವ ನುಡಿ, ನಡೆ ಭೀಷ್ಮನದು! ಪರಮ ಭಕ್ತರಿಗೆ ಮಾತ್ರಾ ಸಾಧ್ಯವಾಗುವಂಥದು.ಯುದ್ಧರಂಗದ ರೌದ್ರ ಸನ್ನಿವೇಶದಿಂದ ಕ್ಷಣಾರ್ಧದಲ್ಲಿ ಮನಸ್ಸನ್ನು ಭಕ್ತಿಯ ತೆಕ್ಕೆಗೆ ಬದಲಿಸಿಕೊಳ್ಳುವುದು ಸಾಮಾನ್ಯವೆ? ಅದರಲ್ಲೂ ಕೃಷ್ಣನ ಬಿರುನುಡಿಗಳನ್ನು ಕೇಳಿದ ಮೇಲೂ!

 ಭೀಷ್ಮನ ಉದ್ಗಾರಗಳನ್ನ ನೋಡಿ, ನರಸಿಂಹಾ, ರಾಮಚಂದ್ರಾ, ಮುರಹರ, ಮುಕುಂದಾ ಇತ್ಯಾದಿಯಾಗಿ ನಾರಾಯಣನ ಅನೇಕ ನಾಮಗಳನ್ನು ಉದ್ಗರಿಸುತ್ತಿದ್ದಾನೆ.ಅಂತರಂಗದಲ್ಲೇ ಸುಪ್ತವಾಗಿದ್ದ ಭೀಷ್ಮನ ಭಕ್ತಿಯ ಕಟ್ಟೆಯೊಡೆದು ಪ್ರವಾಹದಂತೆ ಹರಿಯುತ್ತದೆ.ಭೀಷ್ಮ ಭಯಕ್ಕಿಂತಾ ಆಶ್ಚರ್ಯ ಪ್ರಕಟಪಡಿಸುತ್ತಿದ್ದಾನೆ.ನಾರಾಯಣನಾದ ನೀನೆಲ್ಲಿ,ನಿನ್ನ ಶಿಶುವಾದ ನಾನೆಲ್ಲಿ?ನನ್ನೆಡೆಗೆ ನೀನು ನುಗ್ಗಿ ಬರುವಷ್ಟು ನಾನ್ಯಾವಾಗ ದೊಡ್ಡವನಾದೆ? ಎಂಬ ಭಾವ!
  
ಇಡೀ ರಣರಂಗ ಎಲ್ಲಿ ತೀವ್ರ ಭಯ,ಆತಂಕವನ್ನು ಅನುಭವಿಸುತ್ತಾ ದಿಗಿಲುಗೊಂಡಿದೆಯೋ ಅಲ್ಲಿ ಸ್ವಲ್ಪವೂ ಅಧೀರನಾಗದೇ ಲೀಲಾಜಾಲವಾಗಿ ಭಕ್ತಿಯ ದಿಟ್ಟತನವನ್ನು ಪ್ರದರ್ಶಿಸುತ್ತಿದ್ದಾನೆ ಭೀಷ್ಮ!

(ನಾರಾಯಣನ ಅವತಾರ ಎನ್ನಿಸಿದ ಶ್ರೀರಾಮನ ಬಗೆಗೂ ಕವಿಗೆ ಅತ್ಯಂತ ಆದರ,ಭಕ್ತಿ.ಅವಕಾಶ ದೊರೆತಲ್ಲೆಲ್ಲಾ ಶ್ರೀಕೃಷ್ಣನನ್ನುರಾಮಎಂದು ಸಂಬೋಧಿಸುವುದು ಬಲು ಮೆಚ್ಚು! ಮೊದಲ ಪದ್ಯದಲ್ಲೇ ರಾವಣಾಸುರ ಮಥನ! ಎಂದಿರುವುದನ್ನು ಗಮನಿಸಿ)

ಕುಮಾರವ್ಯಾಸ ಪ್ರತಿಷ್ಠಾನ
/೧೦/೨೦೧೭

Thursday, October 5, 2017

ಐಸಲೇ ಕುಮಾರವ್ಯಾಸ! -೧೦೧-



ಐಸಲೇ ಕುಮಾರವ್ಯಾಸ!                           -೧೦೧-
ಭೀಷ್ಮ ಪ ೬-೩೫

‘ತುಡುಕಿದನು ಚಕ್ರವನು,
ರಥದಿಂ ಪೊಡವಿಯೊಳು ಧುಮ್ಮಿಕ್ಕಿದನು,
ಹತ್ತಡವ ಹಾಯಿಕಿ ಹರಿದನು, ಒಡಬಿದ್ದವರನೊಡೆತುಳಿದು..
ಸುಡುವೆನಹಿತಾನ್ವಯವ,
ಭೀಷ್ಮನ ಕಡಿದು ಭೂತಗಣಕ್ಕೆ ಬೋನವ ಬಡಿಸುವೆನು
ನೋಡಿಲ್ಲಿ ಮೇಳವೇ ಎನುತ ಸೈವರಿದ..’

(ಪೊಡವಿ-ಭೂಮಿ; ಹತ್ತಡ-ದಾಪುಗಾಲು; ಅಹಿತಾನ್ವಯ=ಅಹಿತ-ಶತ್ರು,  ಅನ್ವಯ-ವಂಶ; ಬೋನ-ಭೋಜನ)

‘ಚಕ್ರವನ್ನು ತುಡುಕಿ ಹಿಡಿದುಕೊಂಡ ಶ್ರೀಹರಿ ಅರ್ಜುನನ ರಥದಿಂದ ಕೆಳಕ್ಕೆ ಧುಮುಕಿದ! ದಾಪುಗಾಲು ಹಾಕುತ್ತಾ ಭೀಷ್ಮನ ಕಡೆಗೆ ನುಗ್ಗಿದ! ಭಕ್ತಿಯಿಂದಲೋ, ಭಯದಿಂದಲೋ ಎದುರು ಬಿದ್ದವರನ್ನು ತುಳಿದುಕೊಂಡೇ ನುಗ್ಗಿದ. ಬಾಯಲ್ಲಿ ಒಂದೇ ಮಂತ್ರ, ಈ ದಿನ ಶತ್ರುಗಳ ವಂಶವನ್ನೇ ನಾಶ ಮಾಡಿಬಿಡುತ್ತೇನೆ; ಈ ಭೀಷ್ಮನನ್ನು ಕಡಿದು ತುಂಡುಮಾಡಿ ಭೂತಗಣಗಳಿಗೆ ಔತಣ ಮಾಡುತ್ತೇನೆ, ನನಗೆ ಸರಿಯೇನು ಅವನು?’

ಶ್ರೀಕೃಷ್ಣನ ಕೋಪ ಹೇಗಾದರೂ ತಣ್ಣಗಾಗಬಹುದು ಎಂದುಕೊಂಡವರ ಊಹೆ ತಪ್ಪಾಯಿತು! ಕೃಷ್ಣನ ಕೋಪದ ತೀವ್ರತೆ ಸರ್ವ ವಿದಿತವಾಗಿತ್ತು.ಯಾರ ಎದುರು ಅವನು ಕೋಪಗೊಂಡು ಎರಗಿಹೋಗುತ್ತಾನೋ ಅವರ ಸಮಾಪ್ತಿ!
ಇತ್ತ ಭೀಷ್ಮ?ಯಾರಿಗೂ ಸೋಲದ ಅಜೇಯ ವೀರ! ತನ್ನ ಗುರು, ಆ ಯುಗದ ಮಹಾಪುರುಷ ಪರಶುರಾಮನನ್ನು ಸಹಾ ಗೆದ್ದವನು.ಹಾಗಿದ್ದಲ್ಲಿ ಗತಿ?

ಮಹಾಭಾರತ ಯುದ್ಧ ಭೀಷ್ಮ-ಕೃಷ್ಣರ ಹಣಾಹಣಿಯಾಗುತ್ತೇನು?ಶಿವ ಶಿವ ಏನಾಗುವುದೋ ಎಂಬ ಉದ್ಗಾರ ಇಡೀ ಜಗದಲ್ಲಿ! ಕೌರವರ ಸೈನ್ಯ ಚದುರಲು ಆರಂಭಿಸಿತು! ಪಾಂಡವರು ಸಹಾ ಇದನ್ನು ನಿರೀಕ್ಷಿಸಿರಲಿಲ್ಲ, ಅವರೂ ಸಹಾ ಸಣ್ಣಗೆ ನಡುಗಿದರು.ದಾವಾನಲ ಹತ್ತಿ ಉರಿದರೆ ಅದು ಯಾರನ್ನು ಉಳಿಸುತ್ತದೆ? ಅರ್ಜುನನ ಕಥೆ? ಕವಿ ಹೇಳುತ್ತಾನೆ;’ಪಾರ್ಥ ಬಲುಗರವವಚಿದಂತಿರೆ ಮೂಕನಾದನು,ಬೆರಳ ಮೂಗಿನಲಿ…’ (ದೊಡ್ಡ ಗ್ರಹ ಮೆಟ್ಟಿಕೊಂಡವನಂತೆ ಮೂಕನಾಗಿ ಬೆರಗಾಗಿ ಹೋದ)
ಚಕ್ರ ಹಿಡಿದು ನುಗ್ಗಿದ ಕೃಷ್ಣನ ಆರ್ಭಟಕ್ಕೆ ಇಡೀ ಯುದ್ಧರಂಗ ಸ್ಥಂಭೀಭೂತವಾಯಿತು. ಆ ಬೆರಗನ್ನು ಕವಿ ಸಮರ್ಥವಾಗಿ ನಿರ್ಮಿಸಿದ್ದಾನೆ.
ಕುಮಾರವ್ಯಾಸ ಪ್ರತಿಷ್ಠಾನ
೪/೧೦/೨೧೦೭