Saturday, September 30, 2017

ಐಸಲೇ ಕುಮಾರವ್ಯಾಸ! -೧೦೦-



ಐಸಲೇ ಕುಮಾರವ್ಯಾಸ!                           -೧೦೦-
ಭೀಷ್ಮ ಪ ೬-೩೧

ಶ್ರೀಕೃಷ್ಣನ ಕೋಪ ಹೆಚ್ಚುತ್ತಾ ಹೋಯಿತು!

ಇಡೀ ಮಹಾಭಾರತದಲ್ಲೇ ಅಪೂರ್ವ ಎನಿಸುವ ಶ್ರೀಹರಿಯ ಕ್ರೋಧದ ಪರಿಣಾಮವನ್ನು ಕುಮಾರವ್ಯಾಸ ಅಷ್ಟೇ ಅತಿಶಯವಾದ ಮಾತುಗಳಲ್ಲಿ ಹೇಳಿದ್ದಾನೆ.

ಇನ್ನೆಲ್ಲಿಯ ಭೂಮಿ? ಎಲ್ಲಿಯ ಪರ್ವತಗಳು?ಎಲ್ಲಿಯ ದೇವತೆಗಳು? ಎಲ್ಲಿಯ ಹರ, ಬ್ರಹ್ಮಾದಿಗಳು? ಲೋಕವನ್ನು ಕಾಪಾಡಬೇಕಾದ ವಿಷ್ಣು ಸಂಹಾರಕಾರ್ಯಕ್ಕಿಳಿದಾಯಿತು, ಅಕಾಲದಲ್ಲಿ ಪ್ರಳಯ ವಾದಂತೆಯೇ ಸರಿ ಎಂದು ದೇವತೆಗಳು ಗಾಬರಿಯಾದರು! ತಾವರೆ ಎಲೆಯ ನೀರಹನಿಯಂತೆ ಬ್ರಹ್ಮಾಂಡ ಅಲುಗಾಡಲಾರಂಭಿಸಿತು! ಸಮುದ್ರದ ನೀರು ಪ್ರಳಯದ ಮುನ್ಸೂಚನೆಯನ್ನು ನೀಡುವಂತೆ ತಗ್ಗಿತು! ಈ ಭೂಮಿಯ ನಾಶ ಸಿದ್ಧವಾಯಿತು, ಯಾರಾದರೂ ಇದನ್ನು ಪರಿಹರಿಸಲಾರರೇ? ಎಂದು ಸೃಷ್ಟಿಕರ್ತನಾದ ಬ್ರಹ್ಮ ಆತಂಕಗೊಂಡ

ಶ್ರೀಹರಿಯ ಇಚ್ಛೆಯಂತೆ ಸುದರ್ಶನ ಚಕ್ರ ಪ್ರತ್ಯಕ್ಷವಾಯಿತು.ಇದು ಮತ್ತಷ್ಟು ನಡುಕ ಹುಟ್ಟಿಸಿತು!

ಮುರಮಥನ ಕೆಲ್ಲೈಸಿ ನೋಡಿದನು
ಉರುಭಯಂಕರ ಚಕ್ರವನು,
ದುರ್ಧರುಷ ಧಾರಾಲೂಯಮಾನ ನಿಶಾತ ಚಕ್ರವನು
ತರಳ ತರಣೀ ಚಕ್ರವನು, ಸಂಗರ ವಿನಿರ್ಜಿತ ಚಕ್ರವನು
ಭಯ ಭರ ವಿವರ್ಜಿತ ಚಕ್ರವನು
ಕಡುಗೋಪ ಕಿಡಿಯಿಡಲು….’

( ಕೆಲ್ಲೈಸಿ-ದಿಟ್ಟಿಸಿ; ಧಾರಾಲೂಯಮಾನ-ಹರಿತವಾದ ಮೊನೆಗಳಿಂದ ಹೊಳೆಯುತ್ತಿರುವ; ತರಣಿ-ಸೂರ್ಯ;ಸಂಗರ-ಯುದ್ಧ)

ಶ್ರೀಕೃಷ್ಣ ಚಕ್ರವನ್ನು ತೀಕ್ಷ್ಣವಾದ ನೋಟದಿಂದ ನೋಡಿದ. ಅತ್ಯಂತ ಭಯಂಕರವಾಗಿದೆ! ತಡೆಯಲು ಅಸಾಧ್ಯ ಎನಿಸುವ ಹರಿತವಾದ ಮೊನೆಗಳು ಬೆಂಕಿಯನ್ನು ಉಗುಳುತ್ತಿರುವಂತಿದೆ!ಎಳೆಯ ರವಿಯಂತೆ ಹೊಳೆಯುತ್ತಿದೆ! ಈ ಹಿಂದಿನ ಎಲ್ಲಾ ಯುಧ್ಧದಲ್ಲೂ ಹರಿಗೆ ಗೆಲುವನ್ನೇ ತಂದುಕೊಟ್ಟ ವಿಶೇಷ ಆಯುಧ! ಭಯವೆಂಬುದನ್ನೇ ಅರಿಯದ ಚಕ್ರ! ಕೋಪದಿಂದ ಕಿಡಿಕಿಡಿಯಾದ ಹರಿ ಅದರ ಪ್ರಯೋಗಕ್ಕೆ ಅಣಿಯಾಗುತ್ತಿದ್ದಾನೆ!’

ಚಕ್ರಶಬ್ದವನ್ನು ಪುನರಾವರ್ತಿಸುತ್ತಾ , ಕುಮಾರವ್ಯಾಸ ಕನ್ನಡ-ಸಂಸ್ಕೃತದ ಹದವಾದ ಮಿಶ್ರಣದಿಂದ ಕೊಡುವ ವಿಶೇಷಣಗಳ ಸೊಬಗನ್ನು ಓದಿಯೇ ಅನುಭವಿಸಬೇಕು! ಅದೆಂಥಾ ಮಹತ್ವದ ಆಯುಧ? ಹಿಂದಿನ ಯುಧ್ಧಗಳಲ್ಲಿ ಅದರ ಪರಿಣಾಮದ ತೀವ್ರತೆಯೇನು? ಅದಕ್ಕೆಂಥಾ ಅಪೂರ್ವವಾದ ಚರಿತ್ರೆ ಭಾಗವತದಲ್ಲಿ ಇದೆ! ಇದನ್ನೆಲ್ಲಾ ನೆನಪಿಸುವುದರ ಜೊತೆಗೆ ಪ್ರಸಂಗದ ಗಾಂಭೀರ್ಯ,ಕುತೂಹಲವನ್ನು ಪರಾಕಾಷ್ಠೆಗೆ ಒಯ್ಯುತ್ತದೆ

ಕುಮಾರವ್ಯಾಸ ಪ್ರತಿಷ್ಠಾನ
೨೯//೨೦೧೭

Wednesday, September 27, 2017

ಐಸಲೇ ಕುಮಾರವ್ಯಾಸ! -೯೯-



ಐಸಲೇ ಕುಮಾರವ್ಯಾಸ!                           -೯೯-
ಭೀಷ್ಮ ಪ ೬-೨೭

ಕೆಂಡವಾಗಲಿ ಲೋಕ;
ದಿವಿಜರ ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು; ಮೇದಿನಿ ನಿಲಲಿ ವಿತಳದಲಿ..,
ಗಂಡುಗೆಡಿಸಿದರಿಲ್ಲ ದಾನವ ದಿಂಡೆಯರು ಹಲರೆಮ್ಮೊಡನೆ ಮಾರ್ಕೊಂಡವರು
ಮಾಮಾ ಪ್ರತಿಜ್ಞೆಯ ತೊಡಕು ಬೇಡೆಂದ..,’

(ದಿವಿಜ-ದೇವತೆ; ದಿಂಡುಗೆಡೆ-ಕುಸಿ;ಉರುಳು; ಮೇದಿನಿ-ಭೂಮಿ; ದಿಂಡೆಯರು-ವೀರರು; ಮಾರ್ಕೊಳ್ಳು-ಎದುರಾಗು)
 
ಕೋಪಗೊಂಡ ಶ್ರೀಕೃಷ್ಣನ ಬಾಯಿಂದ ಬರುವ ಬೆಂಕಿಯ ಕಿಡಿಗಳಂಥಾ ಮಾತುಗಳನ್ನು ಕವಿ ಅದ್ಭುತವಾದ ಭಾಷೆಯಲ್ಲಿ ಹಿಡಿದಿಟ್ಟಿರುವುದನ್ನು ಗಮನಿಸಿ.

ಈ ದಿನ ಇಡೀ ಲೋಕ ಉರಿದು ಹೋದರೂ ಚಿಂತೆಯಿಲ್ಲ. ದೇವತೆಗಳ ಹೆಂಡತಿಯರ ಓಲೆಗಳು ಕಳೆದು ಹೋದರೂ ಸರಿಯೆ!( ದೇವತಾ ಸ್ತ್ರೀಯರು ವಿಧವೆಯರಾದರೂ ಸರಿ;ಅಂದರೆ ಈ ದಿನ ನನ್ನನ್ನು ಯಾವ ದೇವತೆ ಎದುರಿಸಿದರೂ  ಅಮರತ್ವ ಅಳಿದು ಸಾಯುವುದು ಖಚಿತ ಎಂಬರ್ಥ!)ಮೇರು ಪರ್ವತ ಉರುಳಿಹೋಗಲಿ; ಭೂಮಿ ಆಧಾರ ತಪ್ಪಿ ವಿತಳದಲ್ಲಿ ಬಿದ್ದರೂ ಸರಿಯೆ! (ನಾನು ಹಿಮ್ಮೆಟ್ಟುವವನಲ್ಲ)
ಹಲವಾರು ಕ್ರೂರರಾಕ್ಷಸರೊಂದಿಗೆ ಕಾದಿದ್ದೇನೆ.ಯಾರೂ ಸಹಾ ನನ್ನನ್ನು ಇಷ್ಟು ಅಪಮಾನಿಸಲಿಲ್ಲ; ಅಯುಧ ಹಿಡಿಯಲಾರೆ ಎಂದು ಪ್ರತಿಜ್ಞೆ ಮಾಡಿದ್ದೇನೆ ನಿಜ ಆದರೆ  ಈಗ ಆ ತೊಡಕು ಬೇಕಿಲ್ಲ(ಭೀಷ್ಮನಿಗೆ ತಕ್ಕ ಪಾಠ ಕಲಿಸುತ್ತೇನೆ)’

ಕೋಪದ ತೀವ್ರತೆ ಆ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

ದೇವರೆಂದೇ ನೀವು ಬಗೆವಿರಿ ದೇವತನ ನಮ್ಮಲ್ಲಿ ಲವವಿಲ್ಲತಾನು ಕೂಡಾ ಎಲ್ಲರಂತೆ ಸಾಮಾನ್ಯನೇ ಎಂದೇ ಹೇಳುವ ಶ್ರೀಕೃಷ್ಣ ರೋಷದಿಂದ ಹೇಳುವ ಮಾತುಗಳಲ್ಲಿ ತನ್ನ ಅತಿಮಾನುಷತೆಯ ರಹಸ್ಯವನ್ನು ಹೊರಗೆಡಹುತ್ತಿದ್ದಾನೆ. ತನಗೆ ಬಂದ ಕೋಪ ಲೋಕವನ್ನು ಸುಡಬಲ್ಲುದು; ಭೂಮಿಯ ಆಧಾರವನ್ನೇ ಪಲ್ಲಟಿಸಬಲ್ಲುದು; ದೇವತೆಗಳ ಹೆಂಡಿರ ಓಲೆಯನ್ನು ಕಳೆಯಬಲ್ಲುದು! ಸಾವಿರಾರು ಬಲಶಾಲಿ ರಾಕ್ಷಸರೊಡನೆ ಕಾದಿದ್ದೇನೆ,ಇಷ್ಟು ಹಿಂಸೆಯನ್ನು ನಾನು ಅನುಭವಿಸಿದ್ದಿಲ್ಲ!

ಶ್ರೀಕೃಷ್ಣನ ಮಾತುಗಳು ಪ್ರಸಂಗದ ಗಾಂಭೀರ್ಯವನ್ನು ಮತ್ತಷ್ಟು ಹಿಗ್ಗಿಸುತ್ತವೆ.ಈ ಕೋಪದ ಪರಿಣಾಮ ಏನಾಗಬಲ್ಲುದು ಎಂಬ ಆತಂಕಕ್ಕೆ ಎಡೆಗೊಡುವುದಲ್ಲದೆ,ಕೃಷ್ಣನನ್ನು ಈ ಮಟ್ಟದ ರೋಷಕ್ಕೆ ಎಡೆಮಾಡಿದ ಭೀಷ್ಮನ ಸಾಮರ್ಥ್ಯದ ಬಗೆಗೂ ಅರಿವು ಮೂಡಿಸುತ್ತವೆ.

ಕನ್ನಡದ ಕಾವ್ಯಮಯ ಆಡುಮಾತುಗಳಲ್ಲಿ ಕವಿ ಪ್ರಕಟಗೊಳಿಸಿರುವ ಶ್ರೀಹರಿಯ ರೋಷಾವೇಷ, ಭಾಷೆಯ ಅಗಾಧ ಶಕ್ತಿಯನ್ನು ಸಹಾ ಪರಿಚಯಿಸುತ್ತದೆ.ಅಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೨೭//೨೦೧೭

Tuesday, September 26, 2017

ಐಸಲೇ ಕುಮಾರವ್ಯಾಸ! -೯೮-



ಐಸಲೇ ಕುಮಾರವ್ಯಾಸ!                           -೯೮-
 ಭೀಷ್ಮಪ ೬-೨೬

ಭೀಷ್ಮನ ಬಾಣ ಶ್ರೀಕೃಷ್ಣನ ಹಣೆಯನ್ನು ಹೊಕ್ಕು ಘಾಸಿ ಮಾಡಿತಷ್ಟೆ? ಬಾಣವನ್ನು ಕಿತ್ತು ಬಿಸುಟ ಹರಿಗೆ ನೋವು, ಆಘಾತಗಳಿಂದ ಸೈರಣೆ ತಪ್ಪಿದ್ದೂ ಹೌದು!

ಆ ಕ್ಷಣದ ಶ್ರೀಕೃಷ್ಣನ ಚಿತ್ರ ಹೇಗಿತ್ತು?

ಕೆಂಪ ಕಾರಿದವಾಲಿಗಳು, ಮೈ ಕಂಪಿಸಿದುದಡಿಗಡಿಗೆ
ರೋಷದ ಬಿಂಪಿನೊಳು ತಗ್ಗಿದನು, ಗಂಟಿಕ್ಕಿದನು ಹುಬ್ಬುಗಳ..
ಸೊಂಪುಗೆಟ್ಟುದು ಸಿರಿವದನ ,ಮನದಿಂಪು ಬೀತುದು,
ಭಕ್ತ ಮೋಹದಲಂಪು ಮಸುಳಿತು,
ಬಿಸುಟು ಕಳೆದನು ರಥದ ವಾಘೆಗಳ..’

(ಬಿಂಪು-ಬಿಗಿತ; ಅಲಂಪು-ಪ್ರೀತಿ; ಮಸುಳಿತು-ತಗ್ಗಿತು; ವಾಘೆ-ಲಗಾಮು,ಕುದುರೆನಿಯಂತ್ರಿಸುವ ಹಗ್ಗ)

ಕೋಪದಿಂದಾಗಿ ಕೃಷ್ಣನ ಕಣ್ಣುಗಳು ಕಡುಕೆಂಪನ್ನು ಕಾರಿದವು!ಮೈ ಕೂಡಾ ನಡುಗಿತು.ಅತಿಶಯವಾದ ರೋಷದಿಂದ ಹುಬ್ಬುಗಳು ತಾನೇ ತಾನಾಗಿ ಗಂಟಿಕ್ಕಿಕೊಂಡವು. ಪ್ರಸನ್ನವಾಗಿರುತ್ತಿದ್ದಸಿರಿವದನಅಂದಗೆಟ್ಟಿತು! ಮನದ ಉಲ್ಲಾಸ ಮಾಸಿತು.ಭಕುತನ ಬಗೆಗೆ ಯಾವಾಗಲೂ ಇರುತ್ತಿದ್ದ ಪ್ರೇಮ ಸಹಾ ಕ್ಷಣ ಮಸುಕಾಯಿತು.

ಪರಿಣಾಮ; ಕೈಯಲ್ಲಿ ಹಿಡಿದಿದ್ದ ರಥ ನಡೆಸುವ ಹಗ್ಗ(ಲಗಾಮು)ವನ್ನು ಕಿತ್ತೆಸೆದ ಶ್ರೀಕೃಷ್ಣ!

ಅಗಾಧವಾದ ಕೋಪದಿಂದ ಹರಿಯ ದೇಹ, ಮನಸ್ಸಿನಲ್ಲಾದ ಪಲ್ಲಟವನ್ನು ಒಂದೊಂದಾಗಿ ವರ್ಣಿಸುತ್ತಾನೆ ಕವಿ.’ಸೊಂಪುಗೆಟ್ಟುದು ಸಿರಿವದನಪ್ರಯೋಗ ಗಮನಿಸಿ. ಹರಿಯ ಮುಖ ಯಾವಾಗಲೂ ಲಲಿತ; ಸುಂದರ.ಅದರಲ್ಲಿ ಈಗ ಕಾಠಿಣ್ಯತುಂಬಿದೆ! ತನ್ನನ್ನು ನೋಯಿಸಿದ ಭೀಷ್ಮ ಪರಮ ಭಕ್ತ ಎನ್ನುವ ಕಾರುಣ್ಯಭಾವ ಸಹಾ ಮಾಯ!
 
ಮುಂಬರುವ ಅಪಾಯದ ಮುನ್ಸೂಚನೆಯೋ ಎನ್ನುವ ಹಾಗೆ ಕೃಷ್ಣನ ಕೈಯಿಂದ ಹಗ್ಗ ಜಾರಿತು ಎನ್ನುವುದನ್ನು ಕೊನೆಯ ಸಾಲಿನಲ್ಲಿ ಧ್ವನಿಸುತ್ತದೆ ಪದ್ಯ! ವೀರ ರಸದಿಂದ ರೌದ್ರದೆಡೆಗೆ ಜಾರುವ ಪ್ರಸಂಗವನ್ನು ಕವಿಯ ಮಾತುಗಳು ಸಮರ್ಥವಾಗಿ  ಅಭಿವ್ಯಕ್ತಿಸುತ್ತವೆ; ಮುಂದೇನು? ಎಂಬ ಆತಂಕ,ಕುತೂಹಲವನ್ನು ಹಿಡಿದಿಡುತ್ತವೆ.

ಕುಮಾರವ್ಯಾಸ ಪ್ರತಿಷ್ಠಾನ
೨೫//೨೦೧೭