Wednesday, September 27, 2017

ಐಸಲೇ ಕುಮಾರವ್ಯಾಸ! -೯೯-



ಐಸಲೇ ಕುಮಾರವ್ಯಾಸ!                           -೯೯-
ಭೀಷ್ಮ ಪ ೬-೨೭

ಕೆಂಡವಾಗಲಿ ಲೋಕ;
ದಿವಿಜರ ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು; ಮೇದಿನಿ ನಿಲಲಿ ವಿತಳದಲಿ..,
ಗಂಡುಗೆಡಿಸಿದರಿಲ್ಲ ದಾನವ ದಿಂಡೆಯರು ಹಲರೆಮ್ಮೊಡನೆ ಮಾರ್ಕೊಂಡವರು
ಮಾಮಾ ಪ್ರತಿಜ್ಞೆಯ ತೊಡಕು ಬೇಡೆಂದ..,’

(ದಿವಿಜ-ದೇವತೆ; ದಿಂಡುಗೆಡೆ-ಕುಸಿ;ಉರುಳು; ಮೇದಿನಿ-ಭೂಮಿ; ದಿಂಡೆಯರು-ವೀರರು; ಮಾರ್ಕೊಳ್ಳು-ಎದುರಾಗು)
 
ಕೋಪಗೊಂಡ ಶ್ರೀಕೃಷ್ಣನ ಬಾಯಿಂದ ಬರುವ ಬೆಂಕಿಯ ಕಿಡಿಗಳಂಥಾ ಮಾತುಗಳನ್ನು ಕವಿ ಅದ್ಭುತವಾದ ಭಾಷೆಯಲ್ಲಿ ಹಿಡಿದಿಟ್ಟಿರುವುದನ್ನು ಗಮನಿಸಿ.

ಈ ದಿನ ಇಡೀ ಲೋಕ ಉರಿದು ಹೋದರೂ ಚಿಂತೆಯಿಲ್ಲ. ದೇವತೆಗಳ ಹೆಂಡತಿಯರ ಓಲೆಗಳು ಕಳೆದು ಹೋದರೂ ಸರಿಯೆ!( ದೇವತಾ ಸ್ತ್ರೀಯರು ವಿಧವೆಯರಾದರೂ ಸರಿ;ಅಂದರೆ ಈ ದಿನ ನನ್ನನ್ನು ಯಾವ ದೇವತೆ ಎದುರಿಸಿದರೂ  ಅಮರತ್ವ ಅಳಿದು ಸಾಯುವುದು ಖಚಿತ ಎಂಬರ್ಥ!)ಮೇರು ಪರ್ವತ ಉರುಳಿಹೋಗಲಿ; ಭೂಮಿ ಆಧಾರ ತಪ್ಪಿ ವಿತಳದಲ್ಲಿ ಬಿದ್ದರೂ ಸರಿಯೆ! (ನಾನು ಹಿಮ್ಮೆಟ್ಟುವವನಲ್ಲ)
ಹಲವಾರು ಕ್ರೂರರಾಕ್ಷಸರೊಂದಿಗೆ ಕಾದಿದ್ದೇನೆ.ಯಾರೂ ಸಹಾ ನನ್ನನ್ನು ಇಷ್ಟು ಅಪಮಾನಿಸಲಿಲ್ಲ; ಅಯುಧ ಹಿಡಿಯಲಾರೆ ಎಂದು ಪ್ರತಿಜ್ಞೆ ಮಾಡಿದ್ದೇನೆ ನಿಜ ಆದರೆ  ಈಗ ಆ ತೊಡಕು ಬೇಕಿಲ್ಲ(ಭೀಷ್ಮನಿಗೆ ತಕ್ಕ ಪಾಠ ಕಲಿಸುತ್ತೇನೆ)’

ಕೋಪದ ತೀವ್ರತೆ ಆ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

ದೇವರೆಂದೇ ನೀವು ಬಗೆವಿರಿ ದೇವತನ ನಮ್ಮಲ್ಲಿ ಲವವಿಲ್ಲತಾನು ಕೂಡಾ ಎಲ್ಲರಂತೆ ಸಾಮಾನ್ಯನೇ ಎಂದೇ ಹೇಳುವ ಶ್ರೀಕೃಷ್ಣ ರೋಷದಿಂದ ಹೇಳುವ ಮಾತುಗಳಲ್ಲಿ ತನ್ನ ಅತಿಮಾನುಷತೆಯ ರಹಸ್ಯವನ್ನು ಹೊರಗೆಡಹುತ್ತಿದ್ದಾನೆ. ತನಗೆ ಬಂದ ಕೋಪ ಲೋಕವನ್ನು ಸುಡಬಲ್ಲುದು; ಭೂಮಿಯ ಆಧಾರವನ್ನೇ ಪಲ್ಲಟಿಸಬಲ್ಲುದು; ದೇವತೆಗಳ ಹೆಂಡಿರ ಓಲೆಯನ್ನು ಕಳೆಯಬಲ್ಲುದು! ಸಾವಿರಾರು ಬಲಶಾಲಿ ರಾಕ್ಷಸರೊಡನೆ ಕಾದಿದ್ದೇನೆ,ಇಷ್ಟು ಹಿಂಸೆಯನ್ನು ನಾನು ಅನುಭವಿಸಿದ್ದಿಲ್ಲ!

ಶ್ರೀಕೃಷ್ಣನ ಮಾತುಗಳು ಪ್ರಸಂಗದ ಗಾಂಭೀರ್ಯವನ್ನು ಮತ್ತಷ್ಟು ಹಿಗ್ಗಿಸುತ್ತವೆ.ಈ ಕೋಪದ ಪರಿಣಾಮ ಏನಾಗಬಲ್ಲುದು ಎಂಬ ಆತಂಕಕ್ಕೆ ಎಡೆಗೊಡುವುದಲ್ಲದೆ,ಕೃಷ್ಣನನ್ನು ಈ ಮಟ್ಟದ ರೋಷಕ್ಕೆ ಎಡೆಮಾಡಿದ ಭೀಷ್ಮನ ಸಾಮರ್ಥ್ಯದ ಬಗೆಗೂ ಅರಿವು ಮೂಡಿಸುತ್ತವೆ.

ಕನ್ನಡದ ಕಾವ್ಯಮಯ ಆಡುಮಾತುಗಳಲ್ಲಿ ಕವಿ ಪ್ರಕಟಗೊಳಿಸಿರುವ ಶ್ರೀಹರಿಯ ರೋಷಾವೇಷ, ಭಾಷೆಯ ಅಗಾಧ ಶಕ್ತಿಯನ್ನು ಸಹಾ ಪರಿಚಯಿಸುತ್ತದೆ.ಅಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೨೭//೨೦೧೭

No comments:

Post a Comment