Saturday, September 9, 2017

ಐಸಲೇ ಕುಮಾರವ್ಯಾಸ! -೯೬-



ಐಸಲೇ ಕುಮಾರವ್ಯಾಸ!                           -೯೬-
ದ್ರೋಣ ಪ ೩೬-೧೦

ಮೊಗಕೆ ಭಾಣವ ಕಟ್ಟಿ ನೆಳಲಲಿ ಬಿಗಿದು
ಫಲುಗುಣ ಸಹಿತ ಕೊಳನನು ನಗುತ ಹೊಕ್ಕನು
ನೋಡುತಿದ್ದುದು ಕೂಡೆ ಕುರುಸೇನೆ
ಬಿಗಿದ ಕತ್ತಲೆ ದೂರದಲಿ ದೀವಿಗೆಯ ಸುತ್ತಲು ಕಟ್ಟಿ ನಿಂದವೋಲ್
ಅಗಣಿತ ಪ್ರತಿಸುಭಟರಿದ್ದುದು ನರನ ಬಳಸಿನಲಿ..,’
(ಭಾಣ-ಬಾಯಿಗೆ ಕಟ್ಟುವ ಅಹಾರದ ಚೀಲ)
ಕುದುರೆಗಳಿಗೆ ಶ್ರೀಕೃಷ್ಣ ಯುದ್ಧರಂಗದಲ್ಲಿ ನೀರಿತ್ತು ತಣಿಸಿದ್ದನ್ನು ನೋಡಿದೆವು,ಅಷ್ಟೇ ಸಾಲದೆಂಬಂತೆ ಮೈದುನ ಸಹಿತ ನಗುತ್ತಾ ಕೊಳದೊಳಕ್ಕೆ ಇಳಿಯುತ್ತಾನೆ ಸಹಾ.ಕರ ಚರಣವನ್ನು ತೊಳೆದು ನಿರ್ಮಲವಾದ ನೀರನ್ನು ಕುಡಿದು ದಣಿವಾರಿಸಿಕೊಂಡು ಪುನಃ ಯುದ್ಧಕ್ಕೆ ಅಣಿಯಾಗುತ್ತಾರೆ.
ಧಣಿದಿದ್ದ ಕುದುರೆಗಳನ್ನು ನೆಳಲಲ್ಲಿ ಬಿಗಿದು ಕೃಷ್ಣಾರ್ಜುನರು ನೀರಿಗಿಳಿದು ವಿಶ್ರಾಂತಿ ಪಡೆದು ಮರಳುವುದನ್ನು ಕೌರವ ಸೈನ್ಯದ ಸುಭಟರು ಅಸಹಾಯಕರಾಗಿ ನೋಡುತ್ತಿದ್ದರಂತೆ!
ಕವಿ ಅದ್ಭುತವಾಗಿ ಹೋಲಿಸುತ್ತಾನೆ;ಉರಿಯುತ್ತಿರುವ ದೀಪದ ಸುತ್ತಲೂ ಅಗಾಧವಾದ ಕತ್ತಲೆಯಿದ್ದರೂ ಬೆಳಕಿನೆದುರು ಅಸಹಾಯಕವಾಗಿ ನಿಂತಂತೆ, ಕೌರವನ ಬಲ ಅಸಹಾಯಕವಾಗಿ ನಿಂತಿತ್ತು!
ದೂರದಿಂದ ಚಿತ್ರವನ್ನು ಕಲ್ಪಿಸಿಕೊಳ್ಳಿ! ಕತ್ತಲೆಯೇ ಕತ್ತಲೆ. ನಡುವೆ ಒಂದು ಉರಿಯುತ್ತಿರುವ ದೀಪ.ಅದರ ಜ್ವಾಲೆ ಕೃಷ್ಣಾರ್ಜುನರು.ದೀಪವನ್ನು ಹಣಿಯಲು ಬಯಸುತ್ತಿರುವ ಕತ್ತಲ ಕೂಪದಂತಹ ಕೌರವ ಸೇನೆ. ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೇ? ನೆನಪಾಗುತ್ತದೆಯಲ್ಲವೆ?
ಕುಮಾರವ್ಯಾಸ ಪ್ರತಿಷ್ಠಾನ                                     ೯/೯/೨೦೧೭

No comments:

Post a Comment