Tuesday, September 19, 2017

ಐಸಲೇ ಕುಮಾರವ್ಯಾಸ! -೯೭-



ಐಸಲೇ ಕುಮಾರವ್ಯಾಸ!                           -೯೭-
ಭೀಷ್ಮ೬-೨೫

ಭೀಷ್ಮಪರ್ವದ ಅತ್ಯಂತ ಸ್ವಾರಸ್ಯಕರ ಪ್ರಸಂಗವೊಂದರಲ್ಲಿ ಕುಮಾರವ್ಯಾಸನ ಪ್ರತಿಭೆ,ಭಾಷೆ, ಭಕ್ತಿ ಅದ್ಭುತವಾಗಿ ಮೇಳೈಸುತ್ತವೆ. ಅದು ಭೀಷ್ಮ ಶ್ರೀಕೃಷ್ಣನನ್ನು ಕೆಣಕಿದ ಸಂದರ್ಭ.

ಭೀಷ್ಮ-ಅರ್ಜುನರ ಯುದ್ಧ ತಾರಕಕ್ಕೇರಿದ ಸ್ಥಿತಿ! ಪರಸ್ಪರರ ಮೇಲೆ ಬಾಣಗಳಿಂದ ಮಳೆಗರೆಯುತ್ತಿದ್ದಾರೆ.ಒಮ್ಮೆ ಭೀಷ್ಮನ ಕೈ ಮೇಲಾದರೆ ಒಮ್ಮೆ ಅರ್ಜುನನದು. ಭೀಷ್ಮ ಅರ್ಜುನನ ಕಣ್ತಪ್ಪಿಸಿ ಹೋಗದಂತೆ ಕೃಷ್ಣನ ಜಾಣ್ಮೆಯ ಸಾರಥ್ಯ! ಭೀಷ್ಮನ ಸಹನೆ ಕೆಟ್ಟಿತು. ಅರ್ಜುನನನ್ನು ಕಟ್ಟಿ ಹಾಕಬೇಕೆಂದರೆ ಕೃಷ್ಣನಿಗೆ ಕಡಿವಾಣ ಹಾಕುವುದು ಅಗತ್ಯ. ಭೀಷ್ಮ ತನ್ನ ಗುರು ಭಾರ್ಗವನಿಂದ ಕೊಡುಗೆಯಾಗಿ ಬಂದಿದ್ದ ಬಾಣದಿಂದ ನೇರವಾಗಿ ಕೃಷ್ಣನ ಹಣೆಗೆ ಗುರಿಯಿಟ್ಟ.ಬಾಣ ಹರಿಯ ಹಣೆಯಲ್ಲಿ ಆಳವಾಗಿ ಹೊಕ್ಕು ನಿಂತಿತು! ರಣರಂಗ ಒಂದು ಕ್ಷಣ ಸ್ಥಬ್ಧವಾಯಿತು. ಕವಿಯ ಬಾಯಲ್ಲಿಯೇ ಕೇಳಿಃ

‘ಕೆಂಗರಿಯ ಮರಿದುಂಬಿ ತಾವರೆಗಂಘವಿಸುವವೋಲ್
ಅಸುರರಿಪುವಿನ ಮಂಗಳಾನನ ಕಮಲದಲಿ ಶರವಾಳೆ ಗರಿಗಡಿಯೆ,
ತುಂಗ ವಿಕ್ರಮನಂಬ ಕಿತ್ತು
ತದಂಗ ರಕ್ತವಿಷೇಕ ರೌದ್ರಾಲಿಂಗಿತನು
ಬಲುಖತಿಯ ಹಿಡಿದನು ಭೀಷ್ಮನುಪಟಳಕೆ..,’

(ಅಂಘವಿಸು-ಆವರಿಸು;ಎರಗು)

‘ಕೆಂಪಾದ ಗರಿಯುಳ್ಳ ಮರಿದುಂಬಿಯೊಂದು ತಾವರೆಹೂವಿಗೆ ಎರಗಿ ಕುಳಿತ ಹಾಗೆ, ಶ್ರೀಹರಿಯ ಮಂಗಲಕರವಾದ ಮುಖದಲ್ಲಿ ಬಾಣ ನಾಟಿ ನಿಂತಿತು.ಮಹಾ ಪರಾಕ್ರಮಿ ಶ್ರೀಕೃಷ್ಣ ಹಣೆಯಿಂದ ಬಾಣವನ್ನು ಕಿತ್ತ. ರಕ್ತದ ಧಾರೆ ಸುರಿದು ಅಭಿಷೇಕವಾಯ್ತು. ಭೀಷ್ಮನ ಈ ಉಪಟಳದಿಂದ ಶ್ರೀಕೃಷ್ಣನಿಗೆ ಎಲ್ಲಿಲ್ಲದ ಕೋಪವುಂಟಾಯಿತು..’ 

 ಕೇವಲ ಸಾರಥಿಯಾಗಿದ್ದ ಕೃಷ್ಣನಿಗೆ ಈ ರೀತಿಯ ಆಘಾತ ಆಗಿರಲಿಲ್ಲ.ಅವನನ್ನು ನೇರವಾಗಿ ಗುರಿಮಾಡಿ ಘಾತಿಸಿದ ಘಟನೆ ಇರಲಿಲ್ಲ.

ಸಂದರ್ಭ ರೌದ್ರತೆಗೆ ನಾಂದಿ ಹಾಡುವ ಸೂಚನೆಯಿದ್ದರೂ ಭಕ್ತನಾದ ಕುಮಾರವ್ಯಾಸನಿಗೆ ಹರಿಯ ‘ಮಂಗಳಾನನ ಕಮಲ’ ಕಂಡಿದೆ. ಆ ತಾವರೆಯಲ್ಲಿ ದುಂಬಿಯೊಂದು ಹಾರಿ ಕುಳಿತಂತೆ ಹೊಕ್ಕ ಬಾಣ!

 ಯುದ್ಧದ ಬಿರುಸಿನಲ್ಲಿ ಶ್ರೀಹರಿ ನೊಂದರೂ ಅವನ ಉಪಸ್ಥಿತಿಯ ಮಂಗಲಮಯತೆಗೆ ಧಕ್ಕೆಯಿಲ್ಲ.
ಆದರೆ ಯಾವಾಗಲೂ ಸ್ಮಿತವದನನಾಗಿರುವ ಹರಿ ಮೊದಲ ಬಾರಿ ಅತ್ಯಂತ ಕುಪಿತನಾದ.ಸಂದರ್ಭ ಅಷ್ಟು ಸುಲಭವೇ? ಯುದ್ಧ ರಂಗದಲ್ಲಿ ಏನು ಬೇಕಾದರೂ ಆಗಬಹುದು!

ಸಂದರ್ಭ ರೌದ್ರತೆಯ ಕಡೆಗೆ ವಾಲುವುದನ್ನು ಪದ್ಯ ಸೂಚಿಸಿ ಗಂಭೀರವಾಗಿಸುತ್ತದೆ.

ಕುಮಾರವ್ಯಾಸ ಪ್ರತಿಷ್ಠಾನ
೧೯/೯/೨೦೧೭

No comments:

Post a Comment