Thursday, March 23, 2017



ಐಸಲೇ ಕುಮಾರವ್ಯಾಸ!                           -೮೩-
ಆದಿ ಪ ೧೫-

ದ್ರುಪದ ವ್ಯಾಕುಲಗೊಂಡ.ಸೌಂದರ್ಯದಲ್ಲಿ ಯಾರೂ ದ್ರೌಪದಿಯನ್ನು ಮೆಚ್ಚಿಸಲಿಲ್ಲ. ಬಿಲ್ಲು ಎಲ್ಲಾ ವೀರರನ್ನೂ ಅಪಮಾನಿಸಿ ಕಳಿಸಿತು. ಮಗಳಿಗೆ ಏನು ಗತಿ? ಯಾಕಾದರೂ ಈ ಸ್ವಯಂವರವನ್ನು ಏರ್ಪಡಿಸಿದೆನೋ!

ದ್ರೌಪದಿಯ ಅಣ್ಣ ದೃಷ್ಟದ್ಯುಮ್ನ ಯೋಚಿಸಿದ.ರಾಜರುಗಳು ಪೊಳ್ಳೆನಿಸಿದರು. ಆದರೆದಕ್ಷಿಣೆಯ ಹಾರುವ ಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ’( ಸಮುದ್ರಕ್ಕೆ ಸಾಟಿಯಾಗುವಷ್ಟು ಜನ ಬ್ರಾಹ್ಮಣರಿದ್ದಾರಲ್ಲ ದಕ್ಷಿಣೆಗಾಗಿ ಬಂದವರು!) ಅವರಲ್ಲಿ ಯಾರಾದರೂ ಯತ್ನಿಸಲಿ; ಹಾಗೇ ಘೋಷಿಸಿ ಎಂದ


ಸರಿ ಘೋಷಣೆಯಾಯಿತು! ಬ್ರಾಹ್ಮಣರೂ ಸಹಾ ಪ್ರಯತ್ನಿಸಲು ಅವಕಾಶವಿದೆ! ಯಾಕೆಂದರೆ ಕ್ಷತ್ರಿಯ ಕನ್ಯೆಗೆ ಕ್ಷತ್ರಿಯ ವರ ದೊರಕದ ಪಕ್ಷದಲ್ಲಿ ಬ್ರಾಹ್ಮಣರಿಗೆ ಕೊಡಲು ಧರ್ಮಸಮ್ಮತಿಯಿದೆ.


ನೆರೆದಿದ್ದ ವಿಪ್ರ ಸಮುದಾಯದಲ್ಲಿ ವಿಧವಿಧದ ಪ್ರತಿಕ್ರಿಯೆ. ನಾವೆತ್ತ, ಧನುವೆತ್ತ? ನಮಗೆ ಬಂದ ದಕ್ಷಿಣೆ, ಭೋಜನ ಸಾಕು.ನಮ್ಮನ್ನು ಬೇಕಾದರೆ ಪಾಂಡಿತ್ಯದಲ್ಲಿ, ವೇದದಲ್ಲಿ,ತರ್ಕ, ವ್ಯಾಕರಣಗಳಲ್ಲಿ ಪರೀಕ್ಷಿಸಲಿ
ವೈದ್ಯ, ಕಾವ್ಯ, ಮಂತ್ರ, ತಂತ್ರ ಯಾವುದೂ ಸರಿ. ಆದರೆ ಧನುರ್ವಿದ್ಯೆ ನಮ್ಮ ಕ್ಷೇತ್ರವಲ್ಲವಲ್ಲ…,’


ಆದರೆ ಪೃಥ್ವಿ ಬಂಜೆಯಲ್ಲ! ಈ ಎಲ್ಲಾ ಏರ್ಪಾಡುಗಳೂ ಯಾವ ಧೀರನಿಗಾಗಿ ನಿಶ್ಚಿತವಾಗಿವೆಯೋ ಅವನ ಪ್ರವೇಶಕ್ಕೆ ಇದು ಸೂಕ್ತ ಸಮಯ ತಾನೇ? ರಾಜ ಮಹಾರಾಜರ ದರ್ಪ,ವೈಭವ ಕಡೆಗೆ ಗರ್ವಭಂಗ ಮುಂತಾದ ಎಲ್ಲಾ ವಿದ್ಯಮಾನಗಳಿಗೂ ಸಾಕ್ಷಿಯಾಗಿ ಬ್ರಾಹ್ಮಣರ ಸಾಲಿನಲ್ಲಿ ಕುಳಿತು ನೋಡುತ್ತಿದ್ದ ಧರ್ಮರಾಯನನ್ನು ಕುಮಾರವ್ಯಾಸ ಪರಿಚಯಿಸುತ್ತಾನೆ,

ಹೇಗೆ ಗೊತ್ತೇನು?

ರಸದ ಹೊರಲೇಪದಲಿ ಹುದುಗಿದ ಮಿಸುನಿಯಂತಿರೆ,
ಜೀವ ಭಾವ ಪ್ರಸರದೊಳಗವಲಂಬಿಸಿದ
ಪರಮಾತ್ಮನಂದದಲಿ,
ಎಸೆವ ವಿಪ್ರಾಕಾರದಲಿ ರಂಜಿಸುವ ಭೂಪತಿ
ತತ್ಸಭಾಸದ್ವಿಸರ ಮಧ್ಯದೊಳಿದ್ದು
ಕೇಳಿದನೀ ಮಹಾಧ್ವನಿಯ.,’

(ಮಿಸುನಿ- ಚಿನ್ನ; ಸದ್ವಿಸರು- ಬ್ರಾಹ್ಮಣರು)


ಹೊರಗೆ ರಸದ ಲೇಪ ಹಾಕಿದ ಅಪ್ಪಟ ಬಂಗಾರದಂತೆ,ಜೀವಿಗಳ ಶರೀರದಲ್ಲಿ ವ್ಯಾಪಿಸಿಕೊಂಡು ಜೀವನಂತೆಯೇ ತೋರುವ ಪರಮಾತ್ಮನಂತೆ, ಬ್ರಾಹ್ಮಣರ ಗುಂಪಿನಲ್ಲಿ ವಿಪ್ರವೇಶದಲ್ಲಿ ಕುಳಿತಿದ್ದ ಧರ್ಮರಾಯ, ದ್ರುಪದನ ಸೇವಕರು ಮಾಡಿದ ಉದ್ಘೋಷಣೆಯನ್ನು ಕೇಳಿದ..,’


ಸಭೆಯಲ್ಲಿ ಯಾವ ವಿಶೇಷ ಗೌರವವೂ ಇಲ್ಲದೆ ಬ್ರಾಹ್ಮಣರಲ್ಲಿ ಒಬ್ಬನಾಗಿ ಕುಳಿತಿದ್ದ ಯುಧಿಷ್ಠಿರನಿಗೆ ಕುಮಾರವ್ಯಾಸ ಶ್ರೇಷ್ಠವಾದ ಉಪಮಾನಗಳನ್ನು ಬಳಸುತ್ತಾನೆ.ರಸದ ಲೇಪ ಇದ್ದಾಗ ಚಿನ್ನದ ನೈಜ ಹೊಳಪು ತೋರದು. ಜೀವಿಗಳ ಒಡಲಲ್ಲಿ ಇರುವ ಭಗವಂತ ಜೀವಿಯೇ ಆಗಿ ಹೋಗಿರುತ್ತಾನೆ.ಅವನ ದೈವಿಕತೆ ಗೋಚರವಾಗಲು ತಕ್ಕ ಸಂದರ್ಭ,ತಿಳಿವು ಆವಶ್ಯಕ.

ದರ್ಪ, ಅಹಂಕಾರ, ವೈಭವ, ಒಣಜಂಭವೇ ಮೈವೆತ್ತಂತೆ ಇದ್ದ ಅರಸುಗಳ ಮಧ್ಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕುಳಿತಿದ್ದ ಧರ್ಮ,ನೀತಿ ಮೈವೆತ್ತಂತಿದ್ದ ಧರ್ಮರಾಯ ನಿಜಕ್ಕೂ ಅಪ್ಪಟ ಚಿನ್ನವೇ!


ವಿಪ್ರರ ನಡುವೆ ಇದ್ದ ಯುಧಿಷ್ಠಿರ ಘೊಷಣೆಗೆ ಸ್ಪಂದಿಸುವುದರೊಂದಿಗೆ ಪ್ರಸಂಗಕ್ಕೆ ಸ್ವಾರಸ್ಯಕರ ತಿರುವು ಬರುತ್ತದೆ!


ಕುಮಾರವ್ಯಾಸ ಪ್ರತಿಷ್ಠಾನ
೨೩/೩/೨೦೧೭

No comments:

Post a Comment