Tuesday, March 7, 2017

Aisale kumaravyasa ಐಸಲೇ ಕುಮಾರವ್ಯಾಸ -78



ಐಸಲೇ ಕುಮಾರವ್ಯಾಸ!                           --
ಆದಿ ೪-೫

ದ್ರೌಪದಿಯನ್ನು ಯಾವ ರಾಜನ ರೂಪವೂ ಆಕರ್ಷಿಸಲಿಲ್ಲ. ದ್ರುಪದನಿಗೆ ಚಿಂತೆ;ಇರಲಿ, ರೂಪದಿಂದ ಗೆಲ್ಲದಿದ್ದರೆ ಬೇಡ, ಬಾಹುಬಲದಿಂದ ಗೆದ್ದಾರಲ್ಲವೆ? ಅತಿರಥ ಮಹಾರಥರಿದ್ದಾರೆ! ಸರಿ,ಮತ್ಸ್ಯಯಂತ್ರದ ಸ್ಪರ್ಧೆಗೆ ಆಜ್ಞಾಪಿಸಿದ.

ಇಗೊಳ್ಳಿ, ಬಹು ವಾದ್ಯ ರಭಸದೊಡನೆ ಸೇವಕರು ಬಂದು ಬೃಹದಾಕಾರದ ಧನುಸ್ಸನ್ನು ತಂದು ಧರೆಗಿಟ್ಟರು!ಪಕ್ಕದಲ್ಲಿ ಥರಥರದಿಂದ ಚೂಪಾದ ಬಾಣಗಳನ್ನುನಿಲ್ಲಿಸಿ ಅಕ್ಷತೆಗಳಿಂದ ಅಲಂಕರಿಸಿದರು.
ಕರೆ ನೀಡಿದ್ದೇ ತಡ, ದ್ರೌಪದಿಯನ್ನು ಪಡೆಯುವ ಉತ್ಸಾಹದಿಂದ ನೆರೆದಿದ್ದ ಮಹೀರಮಣರು ತಂತಮ್ಮ ಸಾಹಸ ಮೆರೆದರು. ದ್ರೌಪದಿಯಂಥ ಸುಂದರಿಯನ್ನು ವರಿಸಲು ಮತ್ತೊಂದು ಸದವಕಾಶ! 
ಬಿಟ್ಟಾರೇನು?ಕವಿಯ ಉದ್ಗಾರ ನೋಡಿ;


ನೆರವಿಯಲಿ ನಾನಾ ದಿಗಂತದ ಧರಣಿಪತಿಗಳು
ಹಮ್ಮಿಕೆಯಲಿ ಉಬ್ಬರಿಸಿ ಹೊಕ್ಕರು
ಬೇರೆಬೇರೊಬ್ಬೊಬ್ಬರುರವಣಿಸಿ
ಹರಗಿರಿಗೆ ಹುಲು ರಕ್ಕಸರು ಮತ್ಸರಿಸುವಂತಾಯ್ತು
ಏನನೆಂಬೆನು?
ಧರೆಯ ಬಿಡದೀ ಧನು
ವಿಭಾಡಿಸಿ ಕೆಡಹಿತವನಿಪರ


(ನೆರವಿ- ಗುಂಪು; ಹಮ್ಮಿಕೆ-ಅಹಂಕಾರ;ಉಬ್ಬರಿಸಿ- ಉತ್ಸಾಹಿಸಿ; ಉರವಣಿಸು-ತ್ವರೆಮಾಡು;ಹರಗಿರಿ-ಕೈಲಾಸ ಪರ್ವತ; ವಿಭಾಡಿಸು-ಭಂಗಿಸು)

‘ದಿಗಂತದ ನಾನಾ ದೇಶಗಳಿಂದ ಬಂದಿದ್ದ ಅರಸುಗಳು ಸರದಿಯಲ್ಲಿ ನಿಂತರು.ಒಬ್ಬೊಬ್ಬರಾಗಿ ಉತ್ಸಾಹದಿಂದ,ಗರ್ವಿಕೆಯಿಂದ ಸಡಗರಿಸಿ ನಾ ಮುಂದು ತಾ ಮುಂದು ಎಂದು ನುಗ್ಗಿ ಯತ್ನಿಸಿದರು. ಆದರೇನು? ಕೈಲಾಸ ಪರ್ವತಕ್ಕೆ ಕ್ಷುಲ್ಲಕ ರಾಕ್ಷಸರು ಯತ್ನಿಸಿದಂತಾಯ್ತು (ರಾವಣನಿಗೆ ಮಾತ್ರ ಸಾಧ್ಯವಾಗಿತ್ತಲ್ಲವೆ?) ಏನು ಹೇಳುವುದು?ಮಹಾ ಬಲಶಾಲಿಗಳು ಎನಿಸಿದವರನ್ನೂ ಸಹ ಧನುಸ್ಸು ಭಂಗಿಸಿಬಿಟ್ಟಿತು! ಹೇಗೆ? ಭೂಮಿಯಿಂದ ಮೇಲೆತ್ತಲಿಕ್ಕೇ ಸಾಧ್ಯವಾಗಲಿಲ್ಲ!’

ಕವಿ ಉದ್ಗರಿಸುತ್ತಾನೆ ಒಂದು ಬಿಲ್ಲು ಎಲ್ಲಾ ಮಹಾರಥರನ್ನೂ ಅಪಮಾನಿಸಿ ಕೆಡವಿತು! ಹರಗಿರಿಯೆಲ್ಲಿ? (ಕೈಲಾಸ ಪರ್ವತ) ಹುಲುರಕ್ಕಸರೆಲ್ಲಿ? ಉಪಮಾನ ಸೋತ ಅರಸರಿಗೆ ಅನುಗುಣವಾಗಿದೆಯಲ್ಲ?

ಕುಮಾರವ್ಯಾಸ ಪ್ರತಿಷ್ಥಾನ
೫/೦೩/೨೦೧೭



No comments:

Post a Comment