Saturday, September 3, 2016

ಐಸಲೇ ಕುಮಾರವ್ಯಾಸ!! -೨೨-

ವಿರಾಟ ಪ ೧೦-೬೫

ವಿರಾಟನ ಅರಮನೆಯಲ್ಲಿ ಪಾಂಡವರ ಒಂದು ಕುಟುಂಬ ಮಿಲನ!

ಕುಮಾರವ್ಯಾಸ ತುಂಬಾ ಮಾನವೀಯವಾಗಿ , ಸಹಜವಾಗಿ ಚಿತ್ರಿಸಿದ್ದಾನೆ.

ಹದಿಮೂರು ವರ್ಷಗಳ ಅವಧಿ ಸವೆದು ಅಭಿಮನ್ಯುವಿನ ಮದುವೆ ನಿಶ್ಚಯವಾಗಿರುವುದರಿಂದ ಎಲ್ಲ ಬಂಧುಗಳೂ ಒಟ್ಟಿಗೆ ಸೇರಿದ್ದಾರೆ. ಪಾಂಚಾಲ ದೇಶದಿಂದ ದ್ರೌಪದಿಯ ತವರಿನವರು, ಮಕ್ಕಳು,ದ್ವಾರಕೆಯಿಂದ ಪತ್ನಿಯರ ಸಹಿತ ಶ್ರೀಕೃಷ್ಣ ,ತಂದೆ ವಾಸುದೇವ, ತಾಯಿ ದೇವಕಿ ಇತರ ಬಂಧುಗಳು, ವಿರಾಟನಗರದ ಭಾವೀ ಬೀಗರು ಅಲ್ಲಿಯೇ ಇದ್ದಾರೆ.ದೀರ್ಘ ಅವಧಿಯ ನಂತರ ಭೇಟಿ ; ಹಾಗಾಗಿ ಮಾತನಾಡಿದಷ್ಟೂ ಸಾಲದು. ಸನ್ನಿವೇಶ ತುಂಬಾ ಹೃದಯಂಗಮ!

ವಸುದೇವ ಅಳಿಯ ಅರ್ಜುನನ ಮೈದಡವಿ ಹೇಳಿದ, 'ಮಗನೆ ವನವಾಸದಲ್ಲಿ ಎಷ್ಟು ನೊಂದಿರೋ ಗೊತ್ತಿಲ್ಲ ; ಅಂತೂ ದ್ರೌಪದಿಯ ಮಾಂಗಲ್ಯ ಗಟ್ಟಿಯಾಗಿರಲಾಗಿ, ನಮ್ಮ ಪುಣ್ಯದಿಂದ ಮರಳಿ ಬಂದಿರಿ'

ಯುಧಿಷ್ಠಿರ ಹೇಳಿದ,'ಮಾವ, ನಮ್ಮೆಲ್ಲ ಯಶಸ್ಸಿಗೆ ನಿಮ್ಮ ಮಗ ಕೃಷ್ಣನೇ ಹೊಣೆ; ಹಾಗಾಗಿ ನಾವು ದೇವತೆಗಳನ್ನೂ ಮೀರಿಸುವಂತಿದ್ದೇವೆ. ನಮಗೇನೂ ಕಡಿಮೆಯಾಗದಂತೆ ಅವನೇ ನೋಡಿಕೊಂಡವ' ಎಂದ.

ವಸುದೇವ ವಯೋವೃದ್ಧ. ಯುಧಿಷ್ಠಿರ ಅಷ್ಟು ಹೇಳಿದ್ದೇ ಸಾಕು ಮುಂದುವರಿಸಿದ.' ಅಯ್ಯೋ, ಅವನ ಸ್ವಭಾವ ಏನು ಹೇಳಲಿ?ಅವನಿಗೆ ಅಪ್ಪ,ಅಮ್ಮ ,ಹೆಂಡತಿಯರು ಯಾರೂ ಬೇಡ; ನನ್ನ ಭಕ್ತರಿದ್ದರೆ ಸಾಕು,ಅವರ ಸುಖವೇ ನನ್ನ ಸುಖ ಅನ್ನುತ್ತಾನೆ,ನೀವು ನಮಗೆ ಹೊರಗಿನವರಲ್ಲ,ನಿಮಗೆ ಕರಗುವ ಮನಸ್ಸು ಅವನದು. ಅದಿರಲಿ, ತನಗಾಗದವರಿಗೂ ತನ್ನನ್ನು ತೆತ್ತುಕೊಳುವ, ಕೊಲುವ ಹಗೆಗೂ ಒಲಿವ, ಇತರರಿಗೋಸ್ಕರ  ನಾನು ಬದುಕುವೆ ಎನ್ನುತ್ತಾನೆ, ಏನು ಹೇಳುವುದು?'

ಅವತಾರ ಪುರುಷನಾದರೂ ತಂದೆಗೆ ಮಗ ತಾನೆ? ಧರ್ಮರಾಯನಿಗೆ ಹೇಳುತ್ತಾನೆ;

'ಬೊಪ್ಪನವರೇ?
ಎಮ್ಮ ದೂರದೆ ಇಪ್ಪವರು ತಾವಲ್ಲ,
ಸಾಕಿನ್ನೊಪ್ಪದಲಿ ಬಾಯೆಂದು 
ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ ತಪ್ಪಿಸಿದುದೆನಾಯ್ತು?
ಪಾರ್ಥನ ದರ್ಪದ ಅನುವೆಂತು?
ಎಂದು ಬೆಸಗೊಂಡನು ಮುರಧ್ವಂಸಿ'

'ಯುಧಿಷ್ಠಿರ, ಅಪ್ಪ ನನ್ನನ್ನು ದೂರಲು ಆರಂಭಿಸಿದರು ತಾನೇ? ಅದು ಅವರಿಗೆ ಅಭ್ಯಾಸವಾಗಿ ಹೋಗಿದೆ! ಬಿಡು, ನೀನು ಬಾ ಇಲ್ಲಿ, ಕೌರವರು ಗೋವುಗಳನ್ನು ಅಪಹರಿಸಿದ್ದರ ಬಗ್ಗೆ ಹೇಳು ಬಾ, ಅರ್ಜುನ ಅವರನ್ನು ಹೇಗೆ ಜಯಿಸಿದ ಹೇಳುಬಾ'

ಹಿರಿಯರಿರುವ ಎಲ್ಲಾ ಮನೆಗಳಲ್ಲೂ ನಡೆಯುವಂತೆಯೇ ಶ್ರೀಕೃಷ್ಣನ ಮನೆಯ ಮಾತುಕತೆಗಳೂ ಸಹಜವಾಗಿದೆಯಲ್ಲವೇ?


ಕುಮಾರವ್ಯಾಸ ಪ್ರತಿಷ್ಠಾನ

೦೨/೦೯/೨೦೧೬
#






No comments:

Post a Comment