Wednesday, January 17, 2018

ಐಸಲೇ ಕುಮಾರವ್ಯಾಸ !! - ೧೧೨ -



ಐಸಲೇ ಕುಮಾರವ್ಯಾಸ !!                  -  ೧೧  -
ಕರ್ಣ ಪ ೧೭-೩೧  
     
ಧರ್ಮರಾಯನನ್ನು ನಿಂದಿಸುತ್ತಲೇ ಅರ್ಜುನ  ಎಂಥ ವೀರನನ್ನು ರಾಜ್ಯಸಿರಿ ವರಿಸುತ್ತಾಳೆ ಎಂಬುದನ್ನು ಹೇಳುತ್ತಾನೆ. ಕುಮಾರವ್ಯಾಸ ತನ್ನ ಪರಮ ಪ್ರೀತಿಯ ರೂಪಕದ ಮೂಲಕ ಅದನ್ನು ವ್ಯಾಖ್ಯಾನಿಸುವ ರೀತಿ ಸುಂದರವಾಗಿದೆ.

ರಾಜ್ಯಸಿರಿ ಒಲಿಯಬೇಕಾದರೆ ಅವನು ಎಂಥ ಸೌಂದರ್ಯ ಹೊಂದಿರಬೇಕು? ಆ ಮದುಮಗನ ಅಲಂಕಾರ ಹೇಗಿರಬೇಕು ಗೊತ್ತೇನು?  

‘ಕರುಳ ಕಂಕಣದಾರ,ಮಿದುಳಿನ ಶಿರದ ಬಾಸಿಗ,
ಭುಜದ ವಕ್ಷದ ಕರದ ಘಾಯದ ತೋಳ ಬಂದಿಯ
ಪದಕ ಸರಪಣಿಯ
ಅರುಣಜಲ ಲುಳಿತಾಂಬರದ
ಸಂಗರ ವಿವಾಹದ ಭೂಷಣದ ಸೌಂದರಿಯವಿಲ್ಲದೆ
ರಾಜ್ಯಸಿರಿ ನಿನಗೊಲಿವಳಲ್ಲೆಂದ.., 
     
‘ಕರುಳಿನಲ್ಲಿ ಹೊಸೆದ ಕಂಕಣ; ಯುದ್ಧದಲ್ಲಿ ಪಡೆದ ಏಟಿನಿಂದ ಹೊಮ್ಮಿದ ಮೆದುಳೇ ಮದುಮಗನ ಬಾಸಿಂಗ; ಭುಜಗಳಲ್ಲಿ, ಎದೆಯಲ್ಲಿ, ಕೈಗಳಲ್ಲಿ ಆದ ಘಾಯಗಳೆ ತೋಳಬಂದಿ ( ತೋಳಿನ ಆಭರಣ), ಪದಕಗಳು ಹಾಗೂ ಸರಪಣಿಗಳು. ಸುರಿದ ರಕ್ತದಿಂದ ಕೆಂಪಾದ ಬಟ್ಟೆ; ಈ ಸೌಂದರ್ಯದಿಂದ ಶೋಭಿಸದ ವೀರನನ್ನು ರಾಜ್ಯಸಿರಿ ಹೇಗೆ ತಾನೇ ಒಲಿದಾಳು? ನೀನೂ ಇದಕ್ಕೆ ಹೊರತಲ್ಲ, ತಿಳಿದುಕೋ’

ರಾಜ್ಯಸಿರಿ ಹೇಡಿಗಳಿಗಲ್ಲ ವೀರರ, ಪರಾಕ್ರಮಿಗಳ ಸ್ವತ್ತು. ವೀರರಿಗೆ ಘಾಯ, ನೋವು ಭೂಷಣ ಎನ್ನುವ ಉದಾತ್ತ ಮೌಲ್ಯಗಳನ್ನು ಕವಿ ಎಷ್ಟು ಶಕ್ತಿಯುತ ಭಾಷೆ ಹಾಗೂ ರೂಪಕದ ಮೂಲಕ ನಿರೂಪಿಸುತ್ತಿದ್ದಾನೆ! ಇಡೀ ಪದ್ಯ ಮದುವೆಗೆ ಸಿದ್ಧನಾಗಿ ನಿಂತಿರುವ ವರನ ಚಿತ್ರವನ್ನು ಕೊಡುತ್ತಿದೆ. ಆದರೆ ಉಡುಗೆ ತೊಡುಗೆಗಳು ಆಭರಣದ ಅಂಗಡಿಯಿಂದ ಕೊಂಡು ತಂದು ಅಲಂಕರಿಸಿದಂಥವಲ್ಲ. ವೀರರಿಗಾಗಿಯೇ ಹೇಳಿಸಿದಂಥವು;ಅಷ್ಟೇ ಅಲ್ಲ ಯುದ್ಧದಲ್ಲಿ ಹೋರಾಡಿ ಗಳಿಸಿದಂಥವು. ಇಂಥ ರೂಪಕಗಳನ್ನು ಸರಣಿ ಸರಣಿಯಾಗಿ ಸೃಷ್ಟಿಸುವುದು ಕುಮಾರವ್ಯಾಸನಿಗೆ ಬಹಳ ಅಚ್ಚು ಮೆಚ್ಚು.

ಘಾಯ ಪಡೆಯದೇ ಶತ್ರುಗಳ ಪಾಲಾಗಿರುವ ರಾಜ್ಯವನ್ನು ಬಯಸುವುದು ಹೇಡಿತನವಲ್ಲವೇ ಎಂಬ ಮಾತು ಯುಧಿಷ್ಠಿರನನ್ನು ಮತ್ತಷ್ಟು ನೋಯಿಸಿತು!

ಕುಮಾರವ್ಯಾಸ ಪ್ರತಿಷ್ಠಾನ
೧೭/೦೧/೨೦೧೮

No comments:

Post a Comment