Sunday, January 14, 2018

ಐಸಲೇ ಕುಮಾರವ್ಯಾಸ !! - ೧೧೧ -





ಐಸಲೇ ಕುಮಾರವ್ಯಾಸ !!                  -  ೧೧  -


ಎಲೆ ಯುಧಿಷ್ಠಿರ ಜನಿಸಿದೈ,
ಶಶಿ ಕುಲದ ವೀರ ಕ್ಷತ್ರ ಪಂತಿಯೊಳ್
ಎಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ ಬಲುಹ ಕಂಡೇ ಕೌರವರು
ನಿನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ..,’

(ಕಾಳಿಕೆ- ಕಪ್ಪು; ತೊಡಹ-ರೂಪ; ಬಲುಹು-ರೀತಿ;ಬಲ್ಲಿದ- ಉತ್ತಮ)

ಎಲೈ ಯುಧಿಷ್ಠಿರ, ಚಂದ್ರ ವಂಶದ ವೀರ ಕ್ಷತ್ರಿಯರ ವಂಶದಲ್ಲಿ ಕಪ್ಪು ಚುಕ್ಕೆಯಂತೆ ದುರ್ಬಲ ಮನಸ್ಸಿನ ನೀನು ಗಂಡಸಿನ ರೂಪದಲ್ಲಿ ಅದೇನು ಹುಟ್ಟಿದೆಯೋ? ನಿನ್ನ ಮೋರೆಯನ್ನು ನೊಡಿಯೇ ಕೌರವರು ನಿನ್ನಿಂದ ನೆಲವನ್ನು ಕಿತ್ತುಕೊಂಡರು. ನಾನು ನಿನಗಿಂತ ಉತ್ತಮ ಯೋಧ, ನನ್ನನ್ನು ಏಕೆ ಅಪಮಾನಿಸುವೆ?’

ಇಷ್ಟು ಕಟುವಾದ ಮಾತನ್ನು ಯುಧಿಷ್ಠಿರನಿಗೆ ಹೇಳುತ್ತಿರುವವರು ಯಾರು? ಕೌರವನೆ? ಅಥವಾ ಅವನ ಯಾರಾದರೂ ತಮ್ಮಂದಿರೇ? ಅಲ್ಲ. ಬೇರೆ ಯಾರಿಗೆ ಧೈರ್ಯ? ಮಾತನ್ನು ಅರ್ಜುನ ಆಡಿದ ಎಂದರೆ ಆಶ್ಚರ್ಯ ವಾಗುವುದಿಲ್ಲವೇ? ಆದರೆ ಹೌದು.

ಪರಸ್ಪರ ಕೋಪಗೊಂಡು ನಿಂದಿಸಿಕೊಂಡು ಮನಸ್ಸನ್ನು ಕಹಿ ಮಾಡಿಕೊಂಡ ಅರ್ಜುನ ಯುಧಿಷ್ಠಿರರನ್ನು ಹರಿ ಸಮಾಧಾನ ಪಡಿಸಿದನೇನೋ ಸರಿ. ಆದರೆ ಅರ್ಜುನನ ಪ್ರತಿಜ್ಞೆ? ತನ್ನನ್ನು, ಗಾಂಡೀವವನ್ನು ಹಂಗಿಸಿದವರನ್ನು ಉಳಿಸುವುದಿಲ್ಲವೆಂಬ ಶಪಥ?ಅದು ಸುಳ್ಳಾಗಬಾರದು ತಾನೆ? ಆದರೆ ಪ್ರಾಣಪ್ರಿಯನಾದ ಅಣ್ಣನನ್ನು ರಕ್ಷಿಸುವ ಶಪಥ ಮಾಡಿರುವ ಅರ್ಜುನ ಕೊಂದಾನೆ?

 ಶ್ರೀಹರಿ ಸಲಹೆ ನೀಡಿದ.ಯಾರನ್ನಾದರೂ ತೀವ್ರವಾಗಿ ನಿಂದಿಸಿದರೆ ಅದು ಅವರನ್ನು ಕೊಂದಂತೆಯೇ ಎಂದು ಧರ್ಮ ಹೇಳುತ್ತದೆ. ಆದ್ದರಿಂದ ಅವನನ್ನು ನಿಂದಿಸಿಬಿಡು.ನಿನ್ನ ಪ್ರತಿಜ್ಞೆಯೂ ನೆರವೇರಿತು. ಅಣ್ಣನೂ ಕ್ಷೇಮ!

ಅದಕ್ಕೆ ಕಟ್ಟುಬಿದ್ದು ಅರ್ಜುನ ಅಣ್ಣನನ್ನು ನಿಂದಿಸುವ ಮಾತನಾಡಿದ. (ಆದರೆ ಕುಮಾರವ್ಯಾಸನ ಭಾಷೆ ಎಷ್ಟು ಹರಿತ ನೋಡಿ) ನಿಂದನೆಯ ಮಾತುಗಳು ಧರ್ಮರಾಯನಿಗಿರಲಿ, ನಮಗೂ ಬೆರಗು ಹುಟ್ಟಿಸುತ್ತವೆ!

ಅರ್ಜುನನ ಸೋದರನಿಂದೆ ಅವನ ಅಂತರಂಗದ ನೈಜ ಭಾವಗಳನ್ನು ಪ್ರಕಟಪಡಿಸುತ್ತವೆಯೇ? ಗೊತ್ತಿಲ್ಲ. ವ್ಯಕ್ತಿಯ ಅಂತರಂಗದ ಭಾವಗಳನ್ನು ಹೊರಗೆಳೆದು ಅದನ್ನು ಪ್ರಕಟವಾಗುವಂತೆ ಮಾಡಿ ಶುದ್ಧೀಕರಿಸುವ ಕ್ರಿಯೆ ಶ್ರೀಕೃಷ್ಣನಿಗೆ ಹೊಸದೇನಲ್ಲ.ವನವಾಸದ ಜಂಬೂಫಲದ ಮತ್ತೊಂದು ಪ್ರಸಂಗದಲ್ಲಿ ಇಂಥದೇ ಅಂತರಂಗದ ಸತ್ಯ ಹೇಳುವ ಪರಿಸ್ಥಿತಿ ಪಾಂಡವರೊಡನೆ ದ್ರೌಪದಿಗೂ ಬರುತ್ತದೆ ತಾನೆ?

ಅರ್ಜುನನೇನೋ ಹರಿಯ ಸಲಹೆಯಂತೆ ಅಣ್ಣನನ್ನು ನಿಂದಿಸಿಬಿಟ್ಟ. ಆದರೆ ಸ್ವಭಾವತಃ ಮುಗ್ಧನಾದ ಧರ್ಮರಾಯನಿಗೆ? ಆ ಮಾತುಗಳು ಸರಳಿನಂತೆ ನಾಟಿದವು!

ಕುಮಾರವ್ಯಾಸ ಪ್ರತಿಷ್ಠಾನ
೧೪//೨೦೧೮   

No comments:

Post a Comment