Sunday, January 21, 2018

ಐಸಲೇ ಕುಮಾರವ್ಯಾಸ !! - ೧೧೩ -



ಐಸಲೇ ಕುಮಾರವ್ಯಾಸ !!                  -  ೧೧೩  -
ಕರ್ಣ ೧೭-೩೭

ನಾನಲಾ ದ್ರೌಪದಿಯ ಮದುವೆಯೊಳ್
ನರೇಂದ್ರರ ಗೆಲಿದವನು, ಬಳಿಕಾ
ನಿಳಿಂಪವ್ರಜವ ಮುರಿದುರಿಪಿದೆನು ಖಾಂಡವವ..,
ಏನನೆಂಬೆನು ಸಕಲ ಕೌರವ ಸೇನೆಯನು
ಗೋಗ್ರಹಣದಲಿ ಸಲೆ ನಾನಲೇ  ರಥವೊಂದರಿಂದವೆ
ಗೆಲಿದೆ ದಿಟವೆಂದ..,’

( ನಿಳಿಂಪ-ದೇವತೆ ; ವ್ರಜ-ಸಮೂಹ; ಉರಿಪು-ದಹಿಸು)

ಧರ್ಮದ ರೀತಿ ಅತಿ ವಿಚಿತ್ರ;ಗಹನ. ಅದನ್ನು ಅರಿತವರಿಂದಲೇ ಸೂಕ್ಷ್ಮಗಳನ್ನು ತಿಳಿಯಬೇಕಾಗುತ್ತದೆ. ಇಲ್ಲದಿದ್ದರೆ ಗೊಂದಲಗಳನ್ನು ಸೃಷ್ಟಿಸಿಕೊಂಡು ತೊಳಲಬೇಕಾಗುತ್ತದೆ.
ಧರ್ಮರಾಯನನ್ನು ಅರ್ಜುನ ನಿಂದಿಸಿದನೇನೋ ಸರಿ.ಅದು ಯುಧಿಷ್ಠಿರನನ್ನು ಘಾಸಿ ಮಾಡಿದ್ದಕ್ಕಿಂತಲೂ
ಹೆಚ್ಚು ಅರ್ಜುನನನ್ನೇ ಬಾಧಿಸಿತು ಇಷ್ಟು ಕಟುವಾಗಿ ಅಣ್ಣನಿಗೆ ನುಡಿದ ಮೇಲೆ ತಾನು ಬದುಕಲು ಯೋಗ್ಯನಲ್ಲ.ಅರ್ಜುನನ ಕತ್ತಿ ತನ್ನ ಕುತ್ತಿಗೆಯ ಕಡೆಗೆ ಹೋಯಿತು. ಹೌಹಾರಿದ ಕೃಷ್ಣ ತಡೆದ. ಅರ್ಜುನಾ ಇದೇನು ಮಾಡುತ್ತಿರುವೆ?

ಅರ್ಜುನ ಧೃಢ ಧ್ವನಿಯಲ್ಲಿ ಹೇಳಿದ. ಕೃಷ್ಣಾ,ನಿನ್ನ ಸಲಹೆಯಿಂದಾಗಿ ನಾನು ಇಂಥಾ ಮಾತುಗಳನ್ನು ಆಡಬೇಕಾಯಿತು.ಅಣ್ಣನಿಗೆ ಇಷ್ಟು ಕಠಿಣ ಮಾತುಗಳನ್ನಾಡಿದ ನಾನು ಆತ್ಮಹತ್ಯೆಗೆ ಶರಣಾಗುವುದೇ ಸರಿ!

ಶ್ರೀಕೃಷ್ಣ ಹೇಳಿದ. ಅರ್ಜುನಾ, ನಿನ್ನ ಭಾವನೆ ನನಗರ್ಥವಾಗುತ್ತದೆ. ಆತ್ಮಹತ್ಯೆಯೆಂದರೆ ತನ್ನನ್ನು ಕೊಂದುಕೊಳ್ಳುವುದಷ್ಟೇ ಅಲ್ಲ. ತನ್ನನ್ನು ಹೊಗಳಿಕೊಳ್ಳುವುದೂ ಸಹಾ ಆತ್ಮಹತ್ಯೆಗೆ ಸಮ. ‘ದೇಹವನಳಿವುದೇ ಕೊಲೆಯಲ್ಲ; ನಿನ್ನಗ್ಗಳಿಕೆಗಳನೀಡಾಡಿ ನಿನ್ನನೆ ಕೊಂದುಕೋ!’ ನಿನ್ನನ್ನು ನೀನೇ ಶ್ಲಾಘಿಸಿಕೊಂಡು ಆತ್ಮಹತ್ಯೆಯ ಪ್ರತಿಜ್ಞೆಯನ್ನೂ ಪೂರೈಸಿಕೊಂಡು ಬಿಡು

ಸರಿ ಅರ್ಜುನ ಆತ್ಮಪ್ರಶಂಸೆಯನ್ನೂ ಮಾಡಲಾರಂಭಿಸಿದಃ
ದ್ರೌಪದಿ ಸ್ವಯಂವರದಲ್ಲಿ ದಂಗೆಯೆದ್ದಎಲ್ಲಾ ರಾಜರನ್ನೂ ಸದೆಬಡಿದವನಾರು? ಖಾಂಡವ ದಹನ ಮಾಡುವ ಸಂದರ್ಭದಲ್ಲಿ ಎದುರುಬಿದ್ದ ದೇವತೆಗಳನ್ನು ಸಹಾ ಮಣಿಸಿ ವನವನ್ನು ದಹಿಸಿದ ಸಾಮರ್ಥ್ಯ ಯಾರದು? ವಿರಾಟನಗರದ ಅಜ್ಞಾತವಾಸದ ಅಂತ್ಯದಲ್ಲಿ ಗೋಗ್ರಹಣವಾದಾಗ ಇಡೀ ಕೌರವ ಸೇನೆಯನ್ನು ಏಕಾಂಗಿಯಾಗಿ ಎದುರಿಸಿ ಗೆದ್ದವನು ನಾನಲ್ಲವೇನು? ನನ್ನನ್ನು ಹೀಯಾಳಿಸುವೆಯಾ?’ 

ಆತ್ಮಹತ್ಯೆಗೆ ಪರ್ಯಾಯವಾಗಿ ಅರ್ಜುನ ತನ್ನನ್ನು ಹೊಗಳಿಕೊಂಡ ಪರಿ ಇದು. ಅವನು ಹೇಳಿಕೊಂಡದ್ದೆಲ್ಲವೂ ಸರಿಯೆ. ಆದರೆ ಹೊಗಳಿಕೊಂಡದ್ದು ಅನಿವಾರ್ಯವಾಗಿ ; ಹೆಮ್ಮೆಯಿಂದಲ್ಲ.ಆತ್ಮಪ್ರಶಂಸೆ ಮಾಡಿಕೊಳ್ಳುವುದು ಆತ್ಮಹತ್ಯೆಗೆ ಸಮ ಎಂಬ ನಿಲುವು ಎಷ್ಟು ಉದಾತವಾದದ್ದು ಎನ್ನಿಸುತ್ತದೆಯಲ್ಲವೆ? ತಮ್ಮನ್ನು ತಾವು ಹೊಗಳಿಕೊಳ್ಳದೆ ತಮ್ಮ ಕೆಲಸಗಳನ್ನು ನಿಸ್ಪೃಹತೆಯಿಂದ ಮಾಡಬೇಕೆಂಬ ಪರೋಕ್ಷ ಸಂದೇಶ ಸಹಾ ಇಲ್ಲಿದೆ.

ನಮ್ಮನ್ನು ನಾವು ಹೊಗಳಿಕೊಳ್ಳುವ ಮೊದಲು ತುಸು ಯೋಚಿಸುವಂತೆ ಹರಿಯ ಸೂಚನೆ ಇದೆಯಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೨೦//೨೦೧೮

No comments:

Post a Comment