Thursday, January 11, 2018

ಐಸಲೇ ಕುಮಾರವ್ಯಾಸ !! - ೧೧೦ -

ಐಸಲೇ ಕುಮಾರವ್ಯಾಸ !!                  -  ೧೧೦  -
ಕರ್ಣ ಪ ೧೭-

ಹಿಡಿಯದಿರು ಮುರವೈರಿ, ಪಾರ್ಥನ ಬಿಡುಬಿಡು,
ಈತನ ಖಡ್ಗಕಿದೆಯೆನ್ನೊಡಲು,
ತನ್ನನೆ ಧಾರೆಯೆರೆದೆನು ನಯನವಾರಿಯಲಿ,
ತೊಡಗಿದೀತನ ರಾಜಕಾರ್ಯವ ಕೆಡಿಸದಿರು,
ನಿರ್ವಾಹಿಸಲಿ,ನೀ ಬಿಡುಬಿಡೆನೆ
ಜರೆದನು ಮುರಾಂತಕನಿಂದ್ರ ನಂದನನ..,,        

ಅರ್ಜುನನನ್ನು ಹೀಯಾಳಿಸುವ ಭರದಲ್ಲಿ ಯುಧಿಷ್ಠಿರ ಹೆಚ್ಚು ಕಠಿಣವಾದ ಮಾತುಗಳನ್ನೇ ಆಡಿದ. ಯುದ್ಧ ಗೆಲ್ಲುವುದಿದ್ದರೆ ಗಾಂಢಿವವನ್ನು ಹರಿಗೆ ಕೊಡು; ನೀನು ಸಾರಥಿಯಾಗು ಎಂದುಬಿಟ್ಟ. ತನ್ನ ಹಾಗೂ ಗಾಂಢೀವ ಧನುಸ್ಸನ್ನು ಹಗುರವಾಗಿ ಮಾತಾಡಿದವನನ್ನು ಕೊಲ್ಲುವ ಪ್ರತಿಜ್ಞೆ ಪಾರ್ಥನದು!

ಕೋಪ ಮತ್ತು ಪ್ರತಿಜ್ಞೆ ಎರಡರಿಂದಲೂ ಬದ್ಧನಾದ ಅರ್ಜುನ ಎಲ್ಲರೂ ನೊಡುತ್ತಿರುವಂತೆಯೇ ಕತ್ತಿ ಹಿಡಿದು ಅಣ್ಣನ ಮೇಲೇರಿ ಹೋದ. ಎಲ್ಲರಿಗೂ ಬೆರಗು,ಆತಂಕ. ಎಂಥಾ ವಿಚಿತ್ರ ಬೆಳವಣಿಗೆ ಇದು? ಶ್ರೀಕೃಷ್ಣ ಮಧ್ಯೆ ಪ್ರವೇಶಿಸಿ ಅರ್ಜುನನನ್ನು ತಡೆಯಬೇಕಾಯಿತು. ಆಘಾತ ಮತ್ತು ನಿರಾಶೆಯಿಂದ ಬಳಲಿದ್ದ ಯುಧಿಷ್ಠಿರ ಪ್ರತಿಕ್ರಿಯಿಸಿದ್ದು ಹೀಗೆ! (ಈಗ ಪದ್ಯವನ್ನು ಓದಿ)

‘ಕೃಷ್ಣಾ, ಅರ್ಜುನನನ್ನು ತಡೆಯಬೇಡ; ಅರ್ಜುನನ ಕೈ ಬಿಡು, ಅವನ ಖಡ್ಗಕ್ಕೆ ನನ್ನ ಶರೀರ ಆಹುತಿಯಾಗಲು ಸಿದ್ಧವಿದೆ. ಸತತವಾಗಿ ಸುರಿಯುತ್ತಿರುವ ಕಣ್ಣೀರಿನಿಂದ ಅದನ್ನು ನಾನೇ ಧಾರೆಯೆರೆದಾಗಿದೆ. ಅವನು ನನ್ನನ್ನು ಕೊಂದು ಸಾಧಿಸಹೊರಟಿರುವ ರಾಜಕಾರ್ಯವನ್ನು ಸಾಧಿಸಲಿ.ತಡೆಯ ಬೇಡ ಬಿಡು’. ಯುಧಿಷ್ಠಿರ ಈ ಮಾತು ಹೇಳುತ್ತಿರುವಂತೆಯೇ ಶ್ರೀಹರಿ ಅರ್ಜುನನನ್ನು ಗದರಿಸಿದನಂತೆ!

ಎಷ್ಟು ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಆದರ್ಶ ಎನಿಸಿದ್ದ ಪಾಂಡವ ಸಹೋದರರಲ್ಲೂ ಇಂಥಾ ಸಮತೋಲ ತಪ್ಪಿದ ಪ್ರಸಂಗ ಕಾಣಬರುತ್ತದೆ. ಇನ್ನು ಸಾಮಾನ್ಯರ ಪಾಡೇನು? ಒಂದು ವ್ಯತ್ಯಾಸವೆಂದರೆ ಎಲ್ಲವೂ ಧರ್ಮದ ನೆಲೆಯಲ್ಲಿ ಬಗೆಹರಿಯುತ್ತದೆ. ಧರ್ಮ ಅಂತಿಮ. ಅದನ್ನು ಯಾರೂ ಮೀರಲಾರರು.

ಧರ್ಮದ ನಿಧಿಯಾದ ಶ್ರೀಹರಿ ಅಲ್ಲೇ ಇದ್ದು ಈ ಧರ್ಮಸಂಕಟವನ್ನು ಬಗೆಹರಿಸಿದ ಬಗೆ ತುಂಬಾ ಸ್ವಾರಸ್ಯಕರವಾಗಿದೆ.

ಮೇಲಿನ ಪದ್ಯದಲ್ಲಿ ಸಂಭಾಷಣೆಯ ಬಿರುಸಿನ ಸೊಗಸು ಆಕರ್ಷಿಸುತ್ತದೆ!

ಕುಮಾರವ್ಯಾಸ ಪ್ರತಿಷ್ಠಾನ

೧೦/೧/೨೦೧೮

No comments:

Post a Comment