Tuesday, June 20, 2017

ಐಸಲೇ ಕುಮಾರವ್ಯಾಸ! -೯೧-



ಐಸಲೇ ಕುಮಾರವ್ಯಾಸ!                           -೯೧-
ಆದಿ ಪ ೨೦-೫೩

ಒಮ್ಮೆ ಕೃಷ್ಣಾರ್ಜುನರು ಅಡವಿಯಲ್ಲಿ ಬೇಟೆಗೆ ಹೋದಾಗ ಬ್ರಾಹ್ಮಣನ ರೂಪದಲ್ಲಿದ್ದ ಅಗ್ನಿ ಅರ್ಜುನನನ್ನು ಬೇಡಿದ; ನನಗೆ ಆಹಾರವನ್ನು ಕೊಡು. ಆರ್ಜುನ ಒಪ್ಪಿಬಿಟ್ಟ. ಸರೋವರದಲ್ಲಿ ಸ್ನಾನ ಮಾಡುತ್ತಿದ್ದ ಶ್ರೀಕೃಷ್ಣ ಬಂದು ಹೇಳಿದ.ಅರ್ಜುನಾ ಇದೇನು ಮಾಡಿಬಿಟ್ಟೆ?ಇವರು ಮುಟ್ಟಿದರೆ ಮುನಿವವರಲೈ (ಮುಟ್ಟಿದ್ದನ್ನು ಸುಡುವವರು!) ಇವರಿಗೆ ಉಣಬಡಿಸುವುದು ಸುಲಭವಲ್ಲ! ಊಟವಾಗಿ ಅವನು ಬೇಡುತ್ತಿರುವುದು ಇಡೀ ಖಾಂಡವ ವನದ ಔತಣ! ಒಪ್ಪಿ ಸಹಕರಿಸಿದರೆ ವನದ ಒಡೆಯ , ನಿನ್ನ ಅಪ್ಪ ದೇವೇಂದ್ರನ ಮುನಿಸು ಕಟ್ಟಿಕೊಳ್ಳಬೇಕಾಗುತ್ತದೆ. ಯೋಚಿಸು!’

ಅರ್ಜುನ ಹೇಳಿದ ‘ಮಾತು ಕೊಟ್ಟಾಗಿದೆ. ನೀನು ಕೃಪೆಮಾಡಿದರೆ ಯಾವುದು ಅಸಾಧ್ಯ?’

ಇಬ್ಬರೂ ಸಿದ್ಧರಾದರು. ಖಾಂಡವ ವನದಿಂದ ಯಾವ ಪ್ರಾಣಿಯೂ ಹೊರಹೋಗದಂತೆ ನೋಡಿಕೊಳ್ಳಬೇಕಾದದ್ದು ಇಬ್ಬರ ಹೊಣೆಗಾರಿಕೆ.ಎಲ್ಲವನ್ನೂ ಅಗ್ನಿ ಆಹುತಿ ಪಡೆದ.
ಸಸ್ಯ,ಪ್ರಾಣಿ ಸಂಕುಲ ಎರಡೂ ಬೆಂಕಿಗೆ ನಲುಗಿದವು.ಒಂದೊಂದಾಗಿ ಅಗ್ನಿಗೆ ಆಹುತಿ!ಪ್ರಾಣಿ,ಪಕ್ಷಿ ಗಿಡಮರಗಳು ಆಹುತಿಯಾಗುವಾಗಿನ ಚಿತ್ರವನ್ನು ಕವಿ ವಿವರವಾಗಿ ಕೊಟ್ಟಿರುವುದು ಸ್ವಾರಸ್ಯಕರ!


‘ಹರಡೆ ಗೀಜಗ ಮರಗೊಡೆಲೆ
ಕಾಬುರುಲೆ ಲಾವುಗೆ ಗೌಜು ಪಾರಿವ
ನಿರಿಲೆ ಸಾಳುವ ಚಿಲಿಮಿಲಿಗ ಚೆಂಬೋತ ಮೀನ್ಬುಲಿಗ
ಮರಕುಟಿಗ ಕಬ್ಬಕ್ಕಿ ಕೊಟ್ಟುಗ
ವರಲೆ ಕೊಂಚೆ ಕಪಿಂಜ ಗಿಂಜಲು
ಗರಿಗ ಮೊದಲಾದಖಿಲ ಖಗಕುಲ ಬಿದ್ದುದುರಿಯೊಳಗೆ..,’

ಶುದ್ಧ ಕನ್ನಡದಲ್ಲಿ ಇಪ್ಪತ್ತು ಹಕ್ಕಿಗಳ ಹೆಸರುಗಳು! ಅದೂ ಸಾಮಾನ್ಯ ಪಕ್ಷಿ ಜಾತಿಯಾದ ಕಾಗೆ,ಕೋಗಿಲೆ, ನವಿಲು ಇತ್ಯಾದಿಗಳ ಹೊರತಾಗಿ. ಪ್ರಕೃತಿಗೆ ಹತ್ತಿರವಾಗಿ ಜೀವಿಸುತ್ತಿದ್ದ ಹಿಂದಿನವರಿಗೆ ಪ್ರಾಣಿಪಕ್ಷಿಗಳು ಪರಿಚಿತವಾಗಿರುತ್ತಿದ್ದವು.ಈ ಇಪ್ಪತ್ತರಲ್ಲಿ ನಾವು ಎಷ್ಟನ್ನು ಗುರುತಿಸಬಲ್ಲೆವು?

ಮೇಲುನೋಟಕ್ಕೆ ಅಗ್ನಿಗೆ ಆಹುತಿಯಾದ ಹಕ್ಕಿಗಳ ಪಟ್ಟಿಯಂತೆ ಕಂಡರೂ ಕುಮಾರವ್ಯಾಸ ನಮೂದಿಸಿರುವ ಹಕ್ಕಿಗಳ ಕನ್ನಡದ ಹೆಸರುಗಳು ನಾವು ಕಳೆದುಕೊಂಡ ಶಬ್ದ ಕೋಶ ಹಾಗೂ ಭಾವಕೋಶದ ಆಸ್ತಿಯಂತೆ ಭಾಸವಾಗುತ್ತದೆ!

ಕುಮಾರವ್ಯಾಸ ಪ್ರತಿಷ್ಠಾನ
೨೦/೬/೨೦೧೭

No comments:

Post a Comment