Monday, June 5, 2017

ಐಸಲೇ ಕುಮಾರವ್ಯಾಸ! -೮೯-



ಐಸಲೇ ಕುಮಾರವ್ಯಾಸ!                           -೮೯-
ಆದಿ ಪ ೧೭-೨೮
ಕವಿಯಲ್ಲಿ ಭಾಷೆಯ ಭಂಡಾರ ,ಸಮೃದ್ಧಿ ಕವಿತ್ವದಷ್ಟೇ ಮುಖ್ಯ.ಬಳಕೆ ಕಡಿಮೆಯಾಗುತ್ತಾ ಶಬ್ದಗಳು ಮರೆಯಾಗುತ್ತವೆ. ಕನ್ನಡ ಅರಸು ಭಾಷೆಯಾಗಿದ್ದ ವಿಜಯ ನಗರದ ಕಾಲದ ಭಾಷಾವೈಭವದ ಝಳಕುಗಳನ್ನು ಕುಮಾರವ್ಯಾಸನಲ್ಲಿ ನೋಡಬಹುದು!
ದ್ರೌಪದಿಯನ್ನು ಮದುವೆಯಾದ ನಂತರ ಪಾಂಡವರು ಪುನಃ ಪ್ರಕಟವಾದದ್ದರಿಂದ ಕರೆದು ರಾಜ್ಯ ನೀಡಬೇಕಾದ ಅನಿವಾರ್ಯ ಸ್ಥಿತಿ ಧೃತರಾಷ್ಟ್ರನಿಗೆ ಬಂತು. ಬೀಗರ ಮನೆ ಪಾಂಚಾಲನಗರದಲ್ಲಿದ್ದ ಪಾಂಡವರನ್ನು ಬಂದು ರಾಜ್ಯ ಸ್ವೀಕರಿಸುವಂತೆ ಮನವಿ ಮಾಡಲು ವಿದುರನನ್ನು ಕಳಿಸಿದ.
ವಿದುರ ನಿವೇದಿಸಿದ.’ಬಂದು ನಿಮ್ಮ ದೊಡ್ಡಪ್ಪನನ್ನು ಕಾಣಿರಿ.ಭೀಷ್ಮ, ದ್ರೋಣರು ನಿಮಗೆ ಹಿತರೇ ಇದ್ದಾರೆ;ಅನ್ಯಾಯವಾಗಲಾರದು.ನಿಮ್ಮ ಹಕ್ಕಾದ ಅರ್ಧ ರಾಜ್ಯ ಪಡೆಯಿರಿ. ಹಿಡಿಸಿತೆ? ಹಸ್ತಿನಾಪುರದಲ್ಲಿರಿ,ಇಲ್ಲವೇ, ನೀವೇ ರಾಜಧಾನಿಯನ್ನು ನಿರ್ಮಿಸಿಕೊಂಡು ಅಲ್ಲಿರಬಹುದಲ್ಲ?’
ಕೇಳಲು ಹಿತವಾಗಿದೆ ಆದರೆ ಆಗಷ್ಟೇ ಅರಗಿನಮನೆಯಲ್ಲಿ ಬೆಂದು ಬದುಕುಳಿದ ಐವರಿಗೂ ಸಂದೇಹದ ಸರಣಿ!ಇನ್ನಾವ ಅನಾಹುತ ಕಾದಿದೆಯೋ? ಪಾಂಡವರನ್ನು ಒಪ್ಪಿಸುವುದು ವಿದುರನಿಗೆ ಸುಲಭವಾಗಲಿಲ್ಲ.ಅಲ್ಲಿದ್ದ ಎಲ್ಲರ ಮನವೊಲಿಸಬೇಕಾಯಿತು ಕವಿಯ ಮಾತು ನೋಡಿ’
ಮುರಹರನನಹುದೆನಿಸಿ,ಭೂಮೀಶ್ವರರ ಮೆಚ್ಚಿಸಿ
ಭೀಮನನು ಮನಬರಿಸಿ,ಪಾರ್ಥನನೊಲಿಸಿ
ಮಾದ್ರೀಸುತರನೊಡಬಡಿಸಿ
ಅರಸಿಗಭಿಮತವೆನಿಸಿ,ಪಾಂಚಾಲರಿಗೆ ಕಾರ್ಯವಿದೆನಿಸಿ
ಕುಂತಿಗೆ ಪರಮ ಹರುಷವ ರಚಿಸಿ
ನುಡಿದನು ಸಂಧಿಯನು ವಿದುರ…’
ವಿದುರ ಯಾರುಯಾರಿಗೆ ಒಪ್ಪಿಸಬೇಕಾಯಿತು ಎಂಬ ರಾಜತಾಂತ್ರಿಕತೆಯನ್ನು ಒಂದು ಕಡೆ ಸೂಚಿಸಿದರೆ,. ಅದರೊಂದಿಗೆ ಸಮ್ಮತಿ ಪಡೆಯುವ ಒಂದೇ ಕ್ರಿಯೆಗೆ ಹಲವು ಹತ್ತು ಆಡುಮಾತಿನ ಪದಗಳನ್ನು ಸರಣಿ ಸರಣಿಯಾಗಿ ಬಳಸುತ್ತಾನೆ ಕವಿ. ಮತ್ತೊಮ್ಮೆ ಓದಿ ನೋಡಿ!
‘ಶ್ರೀಕೃಷ್ಣನಿಗೆ ಹೌದು ಎನ್ನಿಸಿ, ಜತೆಯಲ್ಲಿದ್ದ ಪಾಂಡವ ಸ್ನೇಹಿ ಅರಸರುಗಳನ್ನು ಮೆಚ್ಚಿಸಿ,ಭೀಮನ ಮನಕ್ಕೆ ಸರಿ ಎನ್ನಿಸಿ, ಅರ್ಜುನನನ್ನು ಒಲಿಸಿ,ಮಾದ್ರೀ ಸುತರಾದ ನಕುಲ ಸಹದೇವರನ್ನು ಒಪ್ಪುವಂತೆ ಮಾಡಿದ. ಕುಟುಂಬವನ್ನು ಆಗಷ್ಟೇ ಸೇರಿದ್ದ ದ್ರೌಪದಿಯೊಂದಿಗೂ ಚರ್ಚಿಸಿ ಅಭಿಮತ ಪಡೆದ.ಅವಳ ಅಪ್ಪ,ಅಣ್ಣರಿಗೂ ಇದೆ ಸರಿಯಾದ ಕಾರ್ಯ ಅನ್ನಿಸುವ ಹಾಗೆ ವಿವರಿಸಿದ.ತಾಯಿಯಾದ ಕುಂತಿಗೆ ಈ ಅಹ್ವಾನ ಆನಂದವನ್ನೂ ಉಂಟುಮಾಡಿತು’
ಅಹುದೆನಿಸಿ,ಮೆಚ್ಚಿಸಿ,ಮನಬರಿಸಿ,ಒಲಿಸಿ,ಒಡಬಡಿಸಿ,ಅಭಿಮತವೆನಿಸಿ,ಕಾರ್ಯವಿದೆನಿಸಿ..ಒಂದೇ ಕ್ರಿಯೆಗೆ ಕನ್ನಡದಲ್ಲಿ ಅದೆಷ್ಟು ಪದಗಳಿವೆ ಅಲ್ಲವೆ!
ತನ್ನ ಕಾವ್ಯ ‘ಮಂತ್ರೀ ಜನಕೆ ಬುದ್ಧಿಗುಣ’ದ ಭಂಡಾರ ಎನ್ನುತ್ತಾನೆ ಕುಮಾರವ್ಯಾಸ. ಅದರ ಒಂದು ಹೊಳಹೂ ಇಲ್ಲಿದೆ.

ಕುಮಾರವ್ಯಾಸ ಪ್ರತಿಷ್ಠಾನ
೦೫/೦೬/೨೦೧೭

No comments:

Post a Comment