Wednesday, June 7, 2017

ಐಸಲೇ ಕುಮಾರವ್ಯಾಸ! -೯೦-



ಐಸಲೇ ಕುಮಾರವ್ಯಾಸ!                           -೯೦-
ಆದಿ ಪ ೧೮-

ಪಾಂಡವರನ್ನು ಕರೆಸಿ ಅರ್ಧ ರಾಜ್ಯವನ್ನು ಸಮನಾಗಿ ಹಂಚುವ ತನ್ನ ಇಚ್ಛೆಯನ್ನು ಧೃತರಾಷ್ಟ್ರ ಭೀಷ್ಮಾದಿಗಳನ್ನು ಸಭೆಗೆ ಕರೆಸಿ ವ್ಯಕ್ತಪಡಿಸಿದ.

ವಯೋವೃದ್ಧನೂ ಅನುಭವಿಯೂ ಆದ ಭೀಷ್ಮನಿಗೆ ಈ ಸಲಹೆ ಅತ್ಯಂತ ಉಚಿತವಾಗಿ ಕಂಡಿತು.ಹಿರಿಯನಾಗಿ ಅವನಾಡುವ ಮಾತನ್ನು ಕುಮಾರವ್ಯಾಸ ಅತ್ಯಂತ ಗಂಭೀರವಾದ, ಪರಿಣಾಮಕಾರಿಯಾದ ರೀತಿಯಲ್ಲಿ ಹೇಳಿಸಿದ್ದಾನೆ. ಆ ಮಾತಿನ ಸೊಗಸು ನಮ್ಮನ್ನು ತಲೆದೂಗುವಂತೆ ಮಾಡುತ್ತದೆ

ಅಹುದು ಹೊಲ್ಲೆಹವಲ್ಲ, ಖುಲ್ಲರ ಕುಹಕ ಕೊಳ್ಳದು
ಬೇರೆ ರಾಜ್ಯದೊಳಿಹರೆ ಸೇರುವೆ ಧೃಢವಹುದು
ದಾಯಾದ ಮಾರ್ಗದಲಿ
ಗಹನವೇಕಾಮಿಷ ಸಮುದ್ಭವದಹಿತತನದುತ್ತರಣ
ವತಿ ದುಸ್ಸಹವಲೇ
ನೀ ನೆನೆದ ಹದ ಲೇಸೆಂದನಾ ಭೀಷ್ಮ

(ಹೊಲ್ಲೆಹ-ತಪ್ಪು;ಖುಲ್ಲರ-ಕೀಳು ಜನರ; ಸೇರುವೆ-ಹೊಂದಾಣಿಕೆ;ಏಕಾಮಿಷ-ಒಂದನ್ನೇ ಬಯಸುವಿಕೆ;ಅಹಿತತನ-ವೈಷಮ್ಯ;ಉತ್ತರಣ-ಏರಿಕೆ; ದುಸ್ಸಹ-ತಡೆದುಕೊಳ್ಳಲಾಗದ್ದು)

ಹೌದು ಧೃತರಾಷ್ಟ್ರಾ, ನೀನು ಮಾಡಹೊರಟಿರುವುದರಲ್ಲಿ ತಪ್ಪಿಲ್ಲ. ಕುಹಕದ ಮಾತನಾಡುವವರಿಗೂ ಆಸ್ಪದವಿಲ್ಲ.ಒಂದೇ ಕಡೆ ಇರುವುದಕ್ಕಿಂತ ಇಬ್ಬರೂ ಬೇರೆಬೇರೆಯಾಗಿಯೇ ಇದ್ದರೆ ಸಂಬಂಧ ಹೆಚ್ಚು ಧೃಢವಾಗುತ್ತದೆ.ಸಾಮಾನ್ಯವಾಗಿ ದಾಯಾದಿಗಳಲ್ಲಿ ಆಗುವ ಹಾಗೆ ಒಂದೇ ಆಮಿಷಕ್ಕೆ (ರಾಜ್ಯಕ್ಕೆ) ಕಚ್ಚಾಡುವಲ್ಲಿ ಉಂಟಾಗುವ ಅಹಿತ ಭಾವನೆ ಹೆಚ್ಚಾಗುತ್ತಾ ಹೋದಲ್ಲಿ ಅದು ಅತ್ಯಂತ ಅಸಹನೀಯ ವಾಗುತ್ತದೆ. ಈ ದೃಷ್ಟಿಯಿಂದ ನಿನ್ನ ಉಪಕ್ರಮ ತುಂಬಾ ಉಚಿತವಾಗಿದೆ

ಭೀಷ್ಮನ ಮಾತಿನ ತಾತ್ಪರ್ಯ ದಾಯಾದಿತನದಲ್ಲಿ ಹಗೆತನ ಮೂಡದಿರಲಿ ಎಂದಷ್ಟೆ 
.
ತಾತ್ವಿಕ ಭಾವನೆಯನ್ನು ವ್ಯಕ್ತ ಮಾಡುವಾಗ ಬಳಕೆಯಾದ ಕುಮಾರವ್ಯಾಸನ ಭಾಷೆಯನ್ನೊಮ್ಮೆ ನೋಡಿ. ಕನ್ನಡ-ಸಂಸ್ಕೃತದ ಹಿತವಾದ ಹದ,ಹೆಮ್ಮೆಯಾಗುತ್ತದೆ.

ಏಕಾಮಿಷ ಸಮುದ್ಭವದಹಿತತನದುತ್ತರಣವತಿ ದುಸ್ಸಹವಲೇ?’ ಇಂಥಾ ಪ್ರೌಢ ಅಭಿವ್ಯಕ್ತಿಯನ್ನು ಬೇರೆಲ್ಲಿ  ನೋಡಲು ಸಾಧ್ಯ?

‘ಕುಮಾರವ್ಯಾಸನ ಹೆಸರು ಹೇಳಿದವರಿಗೂ ಶಬ್ದ ದಾರಿದ್ರ್ಯವಿಲ್ಲ ’ಎಂಬ ಕುವೆಂಪು ಅವರ ಮಾತು ನೆನಪಾಗುತ್ತದೆಯೆ?

ಕುಮಾರವ್ಯಾಸ ಪ್ರತಿಷ್ಠಾನ
//೨೦೧೭

No comments:

Post a Comment