Sunday, January 22, 2017



ಐಸಲೇ ಕುಮಾರವ್ಯಾಸ! 
                          --
ಉದ್ಯೋ ಪ ೧-೩೯

ಅರ್ಜುನ ಸೈನ್ಯವನ್ನು ಕೇಳದೆ ಶ್ರೀಕೃಷ್ಣನನ್ನು ಆಯ್ಕೆ ಮಾಡಿಕೊಂಡದ್ದು ದುರ್ಯೋಧನನಿಗೆ ಸಮಾಧಾನವಾಯಿತು.

ಆದರೂ ಹೇಳಿದ; ಕೃಷ್ಣಾ, ನಿನಗೆ ಹೇಗೂ ಪಾಂಡವರ ಮೇಲೆ ಮಮತೆ, ಅದರಲ್ಲೂ ಅರ್ಜುನನಿಗೆ ತುಂಬಾ ಮರುಗುತ್ತೀಯ. ನಾನು ನಿನಗೆ ಹೊರಗಿನವನೇ! ಇರಲಿ ,ಸೈನ್ಯವನ್ನೇ ಕೊಡು. ಆದರೆ ನೆನಪಿರಲಿ ‘ನೀನು ಹೊಕ್ಕಿರಿಯಲಾಗದು’( ನೀನು ಶಸ್ತ್ರ ಹಿಡಿದು ಪಾಂಡವರ ಪರವಾಗಿ ರಣದಲ್ಲಿ ಇರಿಯುವ (ಕೊಲ್ಲುವ) ಕೆಲಸ ಮಾಡಬಾರದು.)

ಸೈನ್ಯವನ್ನೂ ಪಡೆದುಕೊಂಡು ಕೃಷ್ಣನೂ ಯುದ್ಧದಲ್ಲಿ ಭಾಗವಹಿಸದಿದ್ದಲ್ಲಿ ಪಾಂಡವರನ್ನು ಸೋಲಿಸುತ್ತೇನೆಂಬ ಎಣಿಕೆ ದುರ್ಯೋಧನನಿಗೆ.

ತಾನಾಗಿಯೇ ಆಶ್ವಾಸನೆ ಕೊಟ್ಟಾಗ್ಯೂ ದುರ್ಯೋಧನ ಪದೇ ಪದೇ ಹೇಳುತ್ತಿರುವುದು  ಶ್ರೀಕೃಷ್ಣನಿಗೆ ತುಸು ಮುಜುಗರ ಅನ್ನಿಸಿರಬೇಕು. ಬಹಳ ಮಾರ್ಮಿಕವಾದ ಮಾತುಗಳಲ್ಲಿ ದುರ್ಯೋಧನನಿಗೆ ತಿಳಿಸುತ್ತಾನೆ. ಕುಮಾರವ್ಯಾಸನ ಅತ್ಯಂತ ಮಹತ್ವಪೂರ್ಣ ಪದ್ಯಗಳಲ್ಲೊಂದು ಇದುಃ

ಹಸುಳೆತನ ಮೊದಲಾಗಿ
ಬಲು ರಕ್ಕಸರೊಡನೆ ತಲೆಯೊತ್ತಿ,
ರಣದಾಯಸವ ಸೈರಿಸಿ,
ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು
ಚಕ್ರ ಭಂಡಾರಿಸಿತು,
ಮುನ್ನಿನ ಜವ್ವನದ ಬಲ ಮುಸುಳಿತು,
ಆವುಂಡಾಡಿ ಭಟ್ಟರು ನೃಪತಿ ಕೇಳೆಂದ..’

(ಹಸುಳೆತನ-ಬಾಲ್ಯ; ಜವ್ವನ-ಯೌವನ; ಮುಸುಳಿತು-ಮಾಸಿತು)

‘ದುರ್ಯೋಧನಾ, ಮಗುವಾಗಿದ್ದಾಗಿನಿಂದಲೂ  ರಾಕ್ಶಸರೊಡನೆ ಹೋರಾಡುವುದೇ ನನ್ನ ಜೀವನವಾಗಿ ಹೋಯಿತು. ಅನೇಕಾನೇಕ  ದಾನವರನ್ನು ಕೊಂದದ್ದಾಗಿದೆ. ಅದೆಲ್ಲಾ ಈಗ ಮುಗಿದ ಅಧ್ಯಾಯ .ನಾನೂ ಸಹ ಆಯಾಸಗೊಂಡಿದ್ದೇನೆ ಅನಿಸುತ್ತಿದೆ. ಈಗ ಮಿಸುಕಾಡಲಾರೆ. ನನ್ನ ಚಕ್ರವೂ ಸಹಾ ಭಂಡಾರ(ಆಯುಧಾಗಾರ)ಸೇರಿ ಹೋಗಿದೆ. ಯೌವನದಲ್ಲಿ ಇದ್ದ ಶಕ್ತಿ ಸಹಾ ಈಗಿಲ್ಲ. ನಾನು ಉಂಡುಂಡು ಕಾಲ ಕಳೆಯುವ ಉಂಡಾಡಿಭಟ್ಟ ನಾಗಿದ್ದೇನೆ’ 


ಶ್ರೀಕೃಷ್ಣ ದ್ವಾಪರ ಕಂಡ ಮಹಾ ಯುದ್ಧವೀರ.ತಂತ್ರಜ್ಞನೂ ಹೌದು. ಪೂತನಿಯಿಂದ ಆರಂಭಿಸಿ ಶಕಟ, ಧೇನುಕ, ವತ್ಸ, ನಗ, ಹಯ, ವೃಷಭ, ಕಾಲಿಯ , ಕಾಲಯವ, ದಂತ ವಕ್ರ, ಮುರ ,ನರಕ, ಕುಂಭ,ಡಿಬಿಕ, ಹಂಸ, ಕೊನೆಗೆ ಬಾಣಾಸುರ ಹೀಗೆ ಅಸಂಖ್ಯಾತ ಬಲಶಾಲಿಗಳನ್ನು ಕೊಂದವ.ಯುದ್ಧಗಳಿಗೆ ಲೆಕ್ಕವೇ ಇಲ್ಲ! ಅದಕ್ಕೇ ದುರ್ಯೋಧನನಿಗೆ ಭಯ! ಎಷ್ಟೇ ವಯಸ್ಸಾದವನಿರಲಿ,ಅನುಭವಿ ವೀರ! ಆಯುಧ ಹಿಡಿದರೆ ಗತಿ ಏನಾದರೂ ಆಗಬಹುದು. ತಾನು ಭೀಷ್ಮರನ್ನು ನಂಬಿಲ್ಲವೆ?

ಆದರೆ ನಿವೃತ್ತ ಚಾಂಪಿಯನ್ನನಂತೆ , ವಯಸ್ಸಾದ ಗತ ಕಾಲದ ವೀರನಂತೆ ಹರಿ ತನ್ನ ಬಗ್ಗೆ ಮಾತಾಡುತ್ತಿರುವುದು ತುಂಬಾ ಸಹಜವಾಗಿದೆ. ಆತ್ಮ ಪ್ರಶಂಸೆಯಾಗಲೀ, ಕಪಟವಾಗಲೀ ಇಲ್ಲದ ಸರಳ ಸುಂದರ ಮಾತುಗಳು! ಯುದ್ಧ ಮಾಡುವ ಶಕ್ತಿಯೇ ಕುಂದಿರುವಾಗ ಹೊಕ್ಕು ಇರಿಯುವುದೇನು ಬಂತು?


ಹಾಗಾದರೆ ಸರಿ ಎಂದು ದುರ್ಯೋಧನ ತೆರಳಿದ.


ಕುಮಾರವ್ಯಾಸ ಪ್ರತಿಷ್ಠಾನ
೨೧/೧/೨೦೧೭

No comments:

Post a Comment